ಬಿಬಿಎಂಪಿ ಚುನಾವಣೆ ವೇಳಾಪಟ್ಟಿ ರದ್ದು

ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಂತೆ ರಾಜ್ಯ ಸರಕಾರ ವಾರ್ಡ್ ಮೀಸಲು ಪಟ್ಟಿ ಪರಿಷ್ಕರಿಸಲು ಸುಪ್ರೀಂ ಕೋರ್ಟ್ ನಲ್ಲಿ ಒಪ್ಪಿಕೊಂಡಿದೆ. ಮೀಸಲಾತಿ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಬೇಕಾಗಿರುವುದರಿಂದ ಫೆ.21ರಂದು ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿದೆ.
ರಾಜ್ಯ ಸರಕಾರ ಮೀಸಲು ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸಿದ ನಂತರ ಹೊಸ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಚುನಾವಣೆ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ 1976ರ ಪ್ರಕರಣ 24ರಂತೆ 2009ರ ಡಿ.17ರಂದು ಹೊರಡಿಸಿದ್ದ ಬಿಬಿಎಂಪಿ ಚುನಾವಣೆ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ರದ್ದು ಪಡಿಸಿದೆ.
ಮೀಸಲು ಪರಿಷ್ಕರಿಸಲು ಸರ್ಕಾರ ಎರಡು ತಿಂಗಳ ಕಾಲಾವಕಾಶವನ್ನು ಕೇಳಲಿದೆ. ಅದಾದ ನಂತರ ಅಧಿಸೂಚನೆ, ನೀತಿ ಸಂಹಿತೆ ಪ್ರಾರಂಭವಾಗಬೇಕು. ಇದಕ್ಕೆ ಎರಡು ತಿಂಗಳ ಸಮಯ ಬೇಕು. ಆಗ ಶಾಲಾ, ಕಾಲೇಜುಗಳಿಗೆ ಪರೀಕ್ಷೆ ಸಮಯ. ಮತ್ತೆರಡು ತಿಂಗಳು ಮುಂದಕ್ಕೆ ಹೋಗುತ್ತದೆ. ಜೂನ್, ಜುಲೈನಲ್ಲಿ ಮಳೆಗಾಲ ಚುನಾವಣೆ ಪ್ರಕ್ರಿಯೆಗೆ ಅಡ್ಡಿಯಾಗಲಿದೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಬೇಕು. ಹಾಗಾಗಿ ಮುಂದಿನ ವರ್ಷ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.












Click it and Unblock the Notifications