ಕೈಗಾ ಸ್ಥಾವರ : ವಿಧ್ವಂಸಕ ಕೃತ್ಯಕ್ಕೆ ಸಂಚು?

ಕೈಗಾ ಸ್ಥಾವರದಲ್ಲಿರುವ ಕುಡಿಯುವ ನೀರಿನ ವಾಟರ್ ಕೂಲರ್ ರೊಳಗೆ ವಿಕಿರಣ ಹೊಂದಿದ ನೀರು ಬೆರತಿರುವುದು ಹೇಗೆ ಎನ್ನುವುದು ಬಿಡಿಸಲಾರದ ಕಗ್ಗಂಟಾಗಿದೆ. ವಿಕಿರಣ ಸಂಸ್ಕೃರಿತ ನೀರು ಮನುಷ್ಯನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ವಿಕಿರಣ ಹೊಂದಿದ ನೀರಿನ ಸರಬರಾಜಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಇಂತಹ ವ್ಯವಸ್ಥೆ ಕೈಗಾ ಸ್ಥಾವರದಲ್ಲಿಯೂ ಇದೆ. ಹೀಗಿದ್ದಾಗ್ಯೂ ವಿಕಿರಣ ಕುಡಿಯುವ ನೀರಿನೊಳಗೆ ಹೇಗೆ ಬಂದಿತು ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.
ಇದೊಂದು ಅಘಾತಕಾರಿ ಸಂಗತಿ ಎಂದು ಭಾರತೀಯ ಅಣು ಸ್ಥಾವರ ಆಯೋಗದ ಮುಖ್ಯಸ್ಥ ಅನಿಲ್ ಕಾಕೋಡ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನೊಳಗೆ ರೇಡಿಯೋ ಆಕ್ಟಿವ್ ಟ್ರೇಶಿಯಂ ಪ್ರವೇಶ ಹೇಗೆ ಸಾಧ್ಯ ? ಕೈಗಾ ಸ್ಥಾವರಕ್ಕೆ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಹೀಗಿದ್ದರೂ ಇಂತಹ ಅವಾಂತರವಾಗಿರುವುದು ಹೇಗೆ ? ಕೈಗಾ ಅಧಿಕಾರಿಗಳು ಬೇಜಾಬ್ದಾರಿತನ ಕ್ಷಮಿಸಲು ಅಸಾಧ್ಯ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡಿಯುವ ನೀರಿನೊಳಗೆ ಟ್ರೇಶಿಯಂ ಅಂಶ ಹೇಗೆ ಬಂದಿತು. ಇದೊಂದು ಉದ್ದೇಶಪೂರ್ವಕ ಕೃತ್ಯ. ಇದರ ಹಿಂದೆ ಏನಾದರೂ ಕೈವಾಡ ಇದೆಯೇ ಎನ್ನುವ ಸಮಗ್ರ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ಕಾಕೋಡ್ಕರ್ ಹೇಳಿದ್ದಾರೆ. ಕೈಗಾ ಅಣು ಸ್ಥಾವರದ ಕುಡಿಯುವ ನೀರಿನೊಳಗೆ ವಿಕಿರಣ ಬೆರಸಿರುವ ಹಿಂದೆ ವಿಧ್ವಂಸಕ ಅಡಗಿರುವ ಬಗ್ಗೆ ತನಿಖೆ ನಡೆಸಲಾಗಿದೆ ಎಂದು ಕೇಂದ್ರದ ಇಂಧನ ಸಚಿವ ಪೃಥ್ವಿರಾಜ ಚೌಹಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೈಗಾ ಸ್ಥಾವರದ ಕುಡಿಯುವ ನೀರಿನ ವಾಟರ್ ಕೂಲರ್ ರೊಳಗೆ ಟ್ರೇಶಿಯಂ ಅಂಶ ಹೇಗೆ ಬಂದಿತು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ. ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಅತಂಕ ವ್ಯಕ್ತಪಡಿಸಿದ್ದಾರೆ. ಟ್ರೇಶಿಯಂ ಮಿಶ್ರಿತ ನೀರು ಕುಡಿದು ಆಸ್ಪತ್ರೆ ಸೇರಿರುವ 55 ಮಂದಿ ಗುಣಮುಖರಾಗಿದ್ದಾರೆ ಎಂದು ಅವರು ಹೇಳಿದರು. (ಟ್ರೇಶಿಯಂ ಅಂದರೆ-Tritium, a radioactive isotope of hydrogen, is used in research, fusion reactors and neutron
generators).
ಕೈಗಾ ಅಣು ಸ್ಥಾವರದ ನಿರ್ದೇಶಕ ಜೆ ಪಿ ಗುಪ್ತಾ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕೈಗಾ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣವಾಗಿದೆ. ಕೈಗಾಗೆ ಮೂರು ಲೇಯರ್ ಗಳ ಭದ್ರತೆ ಇದೆ. ಹೊರಗಿನ ವ್ಯಕ್ತಿಗಳು ಈ ಕೃತ್ಯ ಎಸಗಲು ಸಾಧ್ಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಮೂಲಗಳು ಪ್ರಕಾರ, ಕೈಗಾದಲ್ಲಿ ಕೆಲಸ ಮಾಡುತ್ತಿರುವ 13 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿವೆ. ಟ್ರೇಶಿಯಂ ಅತ್ಯಂತ ವಿಷಯುಕ್ತ ಪದಾರ್ಥವಾಗಿದ್ದು, ಮನುಷ್ಯ ದೇಹದಲ್ಲಿ ಸೇರಿಕೊಂಡರೆ ಸಾವು ಸಂಭವಿಸುವ ಅವಕಾಶಗಳು ಹೆಚ್ಚಾಗಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications