ನಾಯಕ-ಪರಿವಾರ ಜನಾಂಗದ ಸಮಸ್ಯೆ,ಲಾಠಿ ಚಾರ್ಜ್
ಮೈಸೂರು, ಫೆ. 17 : ಬಿಜೆಪಿ ಸರ್ಕಾರ ಅಧಿಕಾರಕ್ಕೂ ಪೊಲೀಸರ ಲಾಠಿ ಚಾರ್ಜ್ ಪ್ರಕರಣಕ್ಕೂ ಅವಿನಾಭಾವ ಸಂಬಂಧವಿರುವ ಹಾಗೆ ಕಾಣುತ್ತಿದೆ. ಅಧಿಕಾರಕ್ಕೆ ಬಂದು ತಿಂಗಳು ಕಳೆದಿರಲಿಲ್ಲ. ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಪ್ರಕರಣ ನಡೆಯಿತು. ನಂತರ ಕಳೆದ ಸೋಮವಾರ ಬಳ್ಳಾರಿಯಲ್ಲಿ ಮತ್ತೆ ರೈತರಿಗೆ ಲಾಠಿ ಏಟು, ಗಾಳಿಯಲ್ಲಿ ಗುಂಡು ಪ್ರಕರಣಗಳು ಇನ್ನೂ ಮರೆಯಾಗಿಲ್ಲ.
ಈ ಮಧ್ಯೆ ನಾಯಕ ಜನಾಂಗದ ಮನವಿ ಪತ್ರ ಸ್ವೀಕರಿಸಲು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಿಂದ ಉದ್ರಿಕ್ತಗೊಂಡ ಪ್ರತಿಭಟನಾಕಾರರ ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಮಂಗಳವಾರ ನಡೆದಿದೆ.
ನಾಯಕ ಹಾಗೂ ಪರಿವಾರಗಳ ನಡುವೆ ಸಾಕಷ್ಟು ಗೊಂದಲ ಉಂಟಾಗಿವೆ.ಪ್ರತಿಭಟನಾಕಾರರ ಹೇಳುವ ಪ್ರಕಾರ ಈ ಎರಡೂ ಜನಾಂಗಗಳು ಒಂದೇ. ಈ ಎರಡೂ ಜನಾಂಗವನ್ನು ಒಂದುಗೂಡಿಸಿ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಿ ಎಂದು ಎಚ್ ಡಿ ಕೋಟೆ ಶಾಸಕ ಚಿಕ್ಕಣ್ಣ ಹಾಗೂ ಮಾಜಿ ಶಾಸಕ ಚಿಕ್ಕಮಾದು ನೇತೃತ್ವದಲ್ಲಿ ಇಂದು ಭಾರಿ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮಣಿವಣ್ಣನ್ ಅವರಿಗೆ ಮನವಿ ಪತ್ರ ನೀಡಲು ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಆಗಮಿಸಿತು. ಆದರೆ, ಜಿಲ್ಲಾಧಿಕಾರಿ ಮಣಿವಣ್ಣನ್ ಇಂದು ರಜೆಯಲ್ಲಿದ್ದರು. ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರು ಮನವಿ ತೆಗೆದುಕೊಳ್ಳಲು ಮುಂದಾದರು. ಆದರೆ, ಪ್ರತಿಭನಾಕಾರರು ಮಣಿವಣ್ಣನ್ ಅವರೇ ಬರಬೇಕು ಎಂದು ಪಟ್ಟುಹಿಡಿದರು. ಜಿಲ್ಲಾಧಿಕಾರಿಗಳು ಇಂದು ರಜೆ ಎಂದು ಹೇಳಿದರೂ ಪ್ರತಿಭಟನಾಕಾರರು ಅವರು ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ನಾಯಕ ಹಾಗೂ ಪರಿವಾರ ಜನಾಂಗ ಬೇರೆ ಬೇರೆ ಎಂದು ವಿವಾದ ಸೃಷ್ಟಿಸಿರುವುದು ಮಣಿವಣ್ಣನ್ ಎನ್ನುವುದು ಪ್ರತಿಭಟನಾಕಾರರ ಆರೋಪವಾಗಿದೆ. ಇದರಿಂದಾಗಿ ಎಚ್ ಡಿ ಕೋಟೆ ಶಾಸಕ ಚಿಕ್ಕಣ್ಣ, ಚಿಕ್ಕಮಾದು ಹಾಗೂ ಮೈಸೂರಿನಲ್ಲಿ ಡಿಸಿಪಿಯಾಗಿದ್ದ ಚೆಲುವರಾಯಸ್ವಾಮಿ ಅವರು ಕೊಟ್ಟಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಮೀಸಲಿನಲ್ಲಿ ಎಲ್ಲ ಸವಲತ್ತು ಪಡೆಯುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು.
ಪರಿವಾರ ಜನಾಂಗಕ್ಕೆ ಸೇರಿದ ಇವರು ನಾಯಕ ಜನಾಂಗದವರಲ್ಲ ಎನ್ನುವುದು ಜಿಲ್ಲಾಧಿಕಾರಿ ಮಣಿವಣ್ಣನ್ ಅವರ ವಾದವಾಗಿದೆ. ಇದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಪರಿವಾರ ಜನಾಂಗಕ್ಕೆ ಸಾಕಷ್ಟು ತೊಂದರೆಯಾಗಿದೆ ಎನ್ನುವುದು ಪ್ರತಿಭಟನಾಕಾರರ ಅಳಲಾಗಿದೆ. ಪರಿವಾರ ಜನಾಂಗಕ್ಕೆ ನಾಯಕ ಪ್ರಮಾಣಪತ್ರ ನೀಡಬಾರದು ಎಂದು ಜಿಲ್ಲಾಧಿಕಾರಿ ಮಣಿವಣ್ಣನ್ ಆದೇಶ ಹೊರಡಿಸಿರುವುದು ಪ್ರತಿಭಟನಾಕಾರರು ಪಿತ್ತ ನೆತ್ತಗೇರುವಂತಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಮೈಸೂರು ಜಿಲ್ಲಾ ಪಂಚಾಯತ್ ಬಜೆಟ್ ಮಂಡನೆ












Click it and Unblock the Notifications