ಕುದುರೆ ರೇಸಿಂಗ್ ವಿಶ್ಲೇಷಕ ಮೈಸೂರು ಹರೀಶ್ ಇನ್ನಿಲ್ಲ
ಮೈಸೂರು : ಕುದುರೆ ರೇಸಿಂಗ್ ಕಾಮೆಂಟರಿ ನೀಡುವಲ್ಲಿ ಖ್ಯಾತರಾಗಿದ್ದ ಎಸ್.ಎನ್. ಹರೀಶ್ ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ಕೊನೆಯುಸಿರೆಳೆದರು.
ಕುದುರೆ ರೇಸಿಂಗಿನಷ್ಟೇ ರೋಮಾಂಚಕಾರಿಯಾಗಿ ಅವರು ನೀಡುತ್ತಿದ್ದ ಕಾಮೆಂಟರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಗೆಲ್ಲುವ ಮತ್ತು ಸೋಲುವ ಬಗ್ಗೆ ಅತ್ಯಂತ ನಿಖರವಾಗಿ ಅವರು ಮಾಹಿತಿ ನೀಡುತ್ತಿದ್ದರು. ಮುಂಬೈ, ಕೊಲ್ಕತ, ಹೈದರಾಬಾದ್, ಊಟಿ ಮುಂತಾದೆಡೆ ಅವರು ಕಾಮೆಂಟರಿ ನೀಡಿದ್ದರು.
ಇಂಗ್ಲಿಷ್ ನಿಯತಕಾಲಿಕದಲ್ಲಿ ರೇಸಿಂಗ್ ಕುರಿತು ಲೇಖನಗಳನ್ನು ಅವರು ಬರೆಯುತ್ತಿದ್ದರು. 52ರ ಹರೆಯದ ಹರೀಶ್ ಅವರು ಇತ್ತೀಚೆಗೆ ಬೈಪಾಸ್ ಸರ್ಜರಿ ಕೂಡ ಮಾಡಿಸಿಕೊಂಡಿದ್ದರೂ ಕಾಮೆಂಟರಿ ನೀಡುವುದನ್ನು ಬಿಟ್ಟಿರಲಿಲ್ಲ. ಅವರ ವೃತ್ತಿ ಮಮತೆಯೇ ಅವರ ಜೀವಕ್ಕೆ ಮುಳುವಾಗಿ ಕುದುರೆ ರೇಸಿನಷ್ಟೇ ವೇಗವಾಗಿ ಜವರಾಯ ಅವರನ್ನು ತನ್ನೆಡೆ ಸೆಳೆದುಕೊಂಡಿದ್ದಾನೆ.
(ಯುಎ ನ್ಐ)












Click it and Unblock the Notifications