Summer Days: ಬೇಸಿಗೆಯಲ್ಲಿ ಯಾವ ಪಾನೀಯ ಸೇವಿಸಿದರೆ ಒಳ್ಳೆಯದು?
ಬೇಸಿಗೆಯ ಆರಂಭವೇ ಈ ಬಾರಿ ಭಯಂಕರವಾಗಿದೆ. ಬಿಸಿಲು ನೇರವಾಗಿ ನೆತ್ತಿಸುಡುತ್ತದೆ. ಜತೆಗೆ ದಾಹವೂ ಹೆಚ್ಚುತ್ತಿದ್ದು ತಂಪಾದ ಪಾನೀಯ ಆಗಾಗ್ಗೆ ಕುಡಿಯಬೇಕೆನೆಸುತ್ತದೆ. ಹಾಗೆಂದು ತಣ್ಣಗಿರುವ ಪಾನೀಯವನ್ನೆಲ್ಲ ಕುಡಿಯುತ್ತಾ ಹೋದರೆ ಆರೋಗ್ಯವನ್ನು ಕೆಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ನಾವು ಯಾವ ತಂಪು ಪಾನೀಯ ಸೇವಿಸಬೇಕು ಎಂಬುದರ ಬಗ್ಗೆ ಅರಿತುಕೊಂಡು ಸೇವನೆ ಮಾಡುವುದು ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
ಬೇಸಿಗೆಯ ದಿನಗಳಲ್ಲಿ ತಂಪು ಪಾನೀಯಗಳನ್ನು ಆದಷ್ಟು ಮನೆಯಲ್ಲಿಯೇ ತಯಾರಿಸಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ಇನ್ನು ಒಳ್ಳೆಯದು. ಆದರೆ ಎಲ್ಲ ಸಂದರ್ಭಗಳಲ್ಲಿ ಅದು ಅಸಾಧ್ಯ. ಆದರೆ ಹೊರಗಿದ್ದಾಗ ಕಾರ್ಬನ್ ಡೈಆಕ್ಸೈಡ್ ಅಂಶವಿರುವ ಮಾರುಕಟ್ಟೆಯಲ್ಲಿ ದೊರೆಯುವ ಪಾನೀಯಗಳನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ ಹಣ್ಣಿನ ರಸದ ಪಾನೀಯಗಳನ್ನು ಸೇವಿಸುವುದನ್ನು ರೂಢಿಸಿ ಕೊಂಡರೆ ಉತ್ತಮ.

ಇವತ್ತಿನ ರಣಬಿಸಿಲು ದಾಹವನ್ನು ಹೆಚ್ಚಿಸುವುದರೊಂದಿಗೆ ದೇಹವನ್ನು ಬಳಲುವಂತೆ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮೈಬಗ್ಗಿಸಿ ಕೆಲಸ ಮಾಡುವುದಿರಲಿ ನಾಲ್ಕು ಹೆಜ್ಜೆ ಹಾಕುವುದೇ ಕಷ್ಟವಾಗುತ್ತಿದೆ. ಹೀಗಾಗಿ ನಾವು ಬೇಸಿಗೆಯಲ್ಲಿ ನಮ್ಮ ಲೈಫ್ ಸ್ಟೈಲ್ ಗಳನ್ನು ಬದಲಾಯಿಸಿಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಅದರಲ್ಲೂ ಮಳೆಗಾಲ, ಚಳಿಗಾಲದಲ್ಲಿ ಕಾಫಿ, ಟೀ ಕುಡಿಯುತ್ತಿದ್ದವರು ಅದನ್ನು ಕಡಿಮೆ ಮಾಡಿಕೊಂಡರೆ ಒಳ್ಳೆಯದು.
ದೇಹದಲ್ಲಿ ನಿರ್ಜಲೀಕರಣವಾಗುವ ಸಾಧ್ಯತೆ
ನಾವು ಬಿಸಿಲಿಗೆ ಎಷ್ಟು ನೀರನ್ನು ಕುಡಿದರೂ ತೃಪ್ತಿಯಾಗುವುದಿಲ್ಲ. ಬಾಯಾರಿಕೆ ತೀರುವುದೇ ಇಲ್ಲ. ಇದಕ್ಕೆ ಕಾರಣ ನೀರು ಬೆವರಿನ ರೂಪದಲ್ಲಿ ದೇಹದಿಂದ ಹರಿದು ಹೋಗುತ್ತಿರುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ನೀರಿನಾಂಶ ಹೆಚ್ಚಿನ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಇದನ್ನು ತಡೆಯಲು ಹಣ್ಣಿನ ರಸದ ಪಾನೀಯಗಳನ್ನು ಸೇವಿಸಬೇಕಾಗುತ್ತದೆ.
ಬಾಯಾರಿಕೆ ತೀರಿಸಿಕೊಳ್ಳಲು ಪಾನೀಯ ಸೇವಿಸುವ ಮುನ್ನ ಅದು ದೇಹಕ್ಕೆ ಒಳಿತಾಗುತ್ತದೆಯಾ? ಆರೋಗ್ಯಕಾರಿಯಾ? ಎಂಬುದನ್ನೆಲ್ಲ ಗಮನಿಸ ಬೇಕಾಗುತ್ತದೆ. ಈ ಸಮಯದಲ್ಲಿ ಕಲ್ಲಂಗಡಿ, ಕರ್ಬೂಜ, ಸೊಗದೆಬೇರು, ಜೀರಿಗೆ, ನಿಂಬೆ, ಮೂಸಂಬಿ, ಪುನರ್ಪುಳಿ ಹೀಗೆ ವಿವಿಧ ಹಣ್ಣಿನ ರಸದಿಂದ ಮಾಡಲಾದ ಪಾನೀಯಗಳನ್ನು ಸೇವಿಸಿದಷ್ಟು ಹೆಚ್ಚಿನ ಪ್ರಯೋಜನವಾಗುತ್ತದೆ.

ನಿಂಬೆ ಪಾನೀಯ ಆರೋಗ್ಯಕಾರಿ
ಕಲ್ಲಂಗಡಿಯ ರಸವನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ. ಈ ಹಣ್ಣಿನಲ್ಲಿ ಪೊಟಾಷಿಯಂ, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ ಹೇರಳವಾಗಿ ಇರುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ. ಬಿಸಿಲಲ್ಲಿ ಓಡಾಡಿ ಬಂದವರು ನಿಂಬೆ ರಸವನ್ನು ಸೇವಿಸಿದರೆ ವಿಟಮಿನ್ 'ಸಿ' ಅಂಶ ಇರುವುದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುವುದಿಲ್ಲ.
ಇನ್ನು ಆರೋಗ್ಯದ ದೃಷ್ಟಿಯಿಂದ ಎಳನೀರು ಹಿತವಾಗಿದ್ದು, ಇದು ನೈಸರ್ಗಿಕ ಪಾನೀಯವಾಗಿದ್ದು, ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇಸಿಗೆ ದಿನದಲ್ಲಿ ದೇಹದ ಉಷ್ಣಾಂಶವನ್ನು ತಂಪುಗೊಳಿಸುವಲ್ಲಿ ಎಳನೀರಿನ ಪಾತ್ರ ಬಹಳಷ್ಟಿದೆ. ಇದು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ಅತಿ ಉತ್ತಮ ಎಂದು ವೈಜ್ಞಾನಿಕವಾಗಿಯೂ ತಿಳಿದು ಬಂದಿದೆ.

ಎಳನೀರು ಸೇವಿಸಿದರೆ ಹೆಚ್ಚು ಅನುಕೂಲ
ಎಳನೀರು ನೂರು ರೋಗಗಳಿಗೆ ಒಂದೇ ಔಷಧಿ ಎಂಬುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಎಳನೀರಿನಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವನ್ನು ಒಳಗೊಂಡಿದೆ. ಇದರ ಸೇವನೆಯಿಂದ ದೇಹಕ್ಕೆ ಆರೋಗ್ಯ ನೀಡುವುದಲ್ಲದೇ, ಫಿಟ್ನೆಸ್ ಗೂ ಇದು ಉಪಯೋಗಕರವಾಗಿದೆ. ವಿಟಮಿನ್, ಪೊಟಾಶಿಯಂ, ಫೈಬರ್, ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಖನಿಜ ಗುಣವನ್ನು ಹೊಂದಿದೆ.
ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಅಂಶವಿಲ್ಲ, ಹಾಗಾಗಿ ಬೊಜ್ಜು ಕರಗಲು ಸಹಾಯಮಾಡುತ್ತದೆ. ಬೇಸಿಗೆಯಲ್ಲಿ ಎಳನೀರು ಸೇವವಿಸುವುದರಿಂದ ಬಾಯಾರಿಕೆ ತಣೀಸುವುದಲ್ಲದೆ, ದೇಹವನ್ನು ಲವಲವಿಕೆಯಿಂದಲೂ ಇಡಲಿದೆ. ಜತೆಗೆ ಮುಖದ ತ್ವಚೆಯನ್ನು ಕಾಪಾಡುತ್ತದೆ.
ಪಾನೀಯ ಸೇವನೆ ಮುನ್ನ ಎಚ್ಚರವಹಿಸಿ
ಶಕ್ತಿ ನೀಡುವ ಗುಣ ಹೊಂದಿರುವ ಎಳನೀರನ್ನು ವ್ಯಾಯಾಮದ ನಂತರ ಸೇವನೆ ಮಾಡುವುದರಿಂದ ದೇಹಕ್ಕೆ ಹಲವು ರೀತಿಯ ಉಪಯೋಗವಾಗಲಿದೆ. ಎಲ್ಲ ರೀತಿಯಿಂದಲೂ ಅತಿ ಹೆಚ್ಚು ವಿಟಮಿನ್ ಹೊಂದಿರುವ ಎಳನೀರು ಸೇವನೆ ದೇಹಕ್ಕೆ ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ.
ಒಟ್ಟಾರೆಯಾಗಿ ಹೇಳಬೇಕೆಂದರೆ ಬೇಸಿಗೆಯ ದಿನಗಳಲ್ಲಿ ಕೇವಲ ದಾಹ ತೀರಿಸಿಕೊಳ್ಳುವ ಸಲುವಾಗಿ ಯಾವುದೋ ಒಂದು ತಂಪಾದ ಪಾನೀಯ ಸೇವಿಸಿ ಮೈಮನ ತಣ್ಣಗೆ ಮಾಡಿಕೊಳ್ಳುವ ಬದಲು ಅದು ಆರೋಗ್ಯಕಾರಿಯಾ ಎಂಬುದನ್ನು ತಿಳಿದುಕೊಂಡು ಅದನ್ನು ಸೇವಿಸುವುದು ಒಳ್ಳೆಯದು ಎಂಬುದನ್ನು ಮರೆಯಬಾರದು.












Click it and Unblock the Notifications