Life Tips: ಆ ಎರಡು ಅಪೇಕ್ಷೆಗಳು ಮನುಷ್ಯನ ಜೀವಶಕ್ತಿ..ಆದರೆ ಕಡಿವಾಣವಿರಲಿ..!
ಅದೆರಡು ಅಪೇಕ್ಷೆಗಳು ಪ್ರತಿಯೊಬ್ಬ ಮನುಷ್ಯನಲ್ಲೂ ಇದ್ದೇ ಇರುತ್ತದೆ. ಆದರೆ ಆ ಅಪೇಕ್ಷೆಗಳಿಗೆ ಕಡಿವಾಣ ಹಾಕಿಕೊಂಡು ಮುನ್ನಡೆದರೆ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತದೆ. ನಾವ್ಯಾರು ಅಪೇಕ್ಷೆಗಳಿಗೆ ಕಡಿವಾಣ ಹಾಕಲು ತಯಾರಿಲ್ಲ. ಒಂದರ ಮೇಲೊಂದರಂತೆ ನಮ್ಮಲ್ಲಿ ಅಪೇಕ್ಷೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತವೆ. ಯಾವುದು ಕೂಡ ಅತಿಯಾದರೆ ಅದರಿಂದ ಒಳಿತಿಗಿಂತ ಕೆಡುಕೇ ಜಾಸ್ತಿ.
ಇವತ್ತು ಬಹಳಷ್ಟು ಜನರು ಅಪೇಕ್ಷೆಗಳ ಬೆನ್ನತ್ತಿ ಹೋಗಿ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಹೀಗಾಗಿಯೇ ನಾವು ಬೆಳಗಾದರೆ ಒಂದಲ್ಲಾ ಒಂದು ರೀತಿಯ ಅನಾಚಾರದ ಸುದ್ದಿಗಳೇ ಕೇಳುವಂತಾಗಿದೆ. ಅಷ್ಟೇ ಅಲ್ಲದೆ, ದಿನನಿತ್ಯ ಸುತ್ತಮುತ್ತ ನಡೆಯುವ ಹಲವು ಘಟನೆಗಳು ಸಾಕ್ಷಿಯಾಗಿವೆ. ಅಪೇಕ್ಷೆಗಳು ಇಲ್ಲದೆ ಹೋದರೆ ಮನುಷ್ಯ ಏನನ್ನೂ ಸಾಧಿಸಲಾರ. ಆದರೆ ಅಪೇಕ್ಷೆಗಳು ಕೂಡ ಒಳಿತನ್ನು ಮಾಡುವಂತಿದ್ದರೆ ಮಾತ್ರ ಜೀವನ ಸಾರ್ಥಕಗೊಳಿಸಲು ಸಾಧ್ಯವಾಗುತ್ತದೆ.

ಮನುಷ್ಯನಲ್ಲಿ ಸುಖಾಪೇಕ್ಷೆ ಹಾಗೂ ವಿಷಯಾಪೇಕ್ಷೆ ಎಂಬ ಎರಡು ಅಪೇಕ್ಷೆಗಳಿದ್ದು ಅವು ಮನುಷ್ಯನ ಮೂಲಭೂತ ಜೀವಶಕ್ತಿಯಾಗಿದೆಯಂತೆ. ಈ ಅಪೇಕ್ಷೆಗಳ ಪ್ರೇರಣೆಯಿಂದಲೇ ಮನುಷ್ಯ ಬದುಕುತ್ತಿದ್ದಾನೆ ಎನ್ನುವುದು ಕೂಡ ಸತ್ಯವೇ.. ಆದರೆ ಎರಡು ಅಪೇಕ್ಷೆಗಳು ನಿಯಂತ್ರಣದಲ್ಲಿದ್ದು ಅವು ನಿಯಂತ್ರಣ ಮೀರದಂತೆ ನೋಡಿಕೊಂಡರೆ ಬದುಕು ಸುಖವಾಗಿರಲು ಸಾಧ್ಯವಾಗುತ್ತದೆ. ಆದರೆ ಕೆಲವೊಮ್ಮೆ ಮನುಷ್ಯನ ಸಂಕಲ್ಪ ಶಕ್ತಿಯನ್ನು ವಿಷಯಾಪೇಕ್ಷೆಗಳು ಮೊಟಕುಗೊಳಿಸಿಬಿಡುತ್ತವೆ. ಜೊತೆಗೆ ನ್ಯಾಯ ಮಾರ್ಗವನ್ನು ಬಿಟ್ಟು ಅನ್ಯಾಯ ಮಾರ್ಗವನ್ನು ತುಳಿಯುವಂತೆ ಮಾಡಿಬಿಡುತ್ತದೆ.
ನಾವೆಲ್ಲರೂ ಸುಖದ ಭ್ರಮೆಯಲ್ಲಿ ಬದುಕುತ್ತೇವೆ
ಸುಖಾಪೇಕ್ಷೆಯನ್ನು ಪ್ರತಿಯೊಬ್ಬ ಮನುಷ್ಯನು ಬಯಸುತ್ತಿರುತ್ತಾನೆ. ಆತ ಕಾರು, ಬಂಗಲೆ, ಹಣ ಹೀಗೆ ಇಂತಹ ಸಂಪತ್ತಿನಿಂದ ಸುಖ ಸಿಗುತ್ತದೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ. ಹೀಗಾಗಿ ಅದನ್ನು ಪಡೆಯಲು ಸಲುವಾಗಿ ಸದಾ ದುಡಿಯುತ್ತಾನೆ. ಹೋರಾಡುತ್ತಾನೆ. ಕೆಲವೊಮ್ಮೆ ನ್ಯಾಯದ ಹಾದಿ ಬಿಟ್ಟು ಅಡ್ಡ ಮಾರ್ಗಗಳಿಂದ ಸುಲಭವಾಗಿ ಪಡೆಯುವ ಪ್ರಯತ್ನ ಮಾಡುತ್ತಾನೆ. ಹೀಗೆ ಸುಖಾಪೇಕ್ಷೆಗಾಗಿ ತನ್ನ ಮಾರ್ಗವನ್ನು ಬದಲಿಸಿದಾಗ ಅದರಿಂದ ಸುಖವೆನ್ನುವುದು ಮರೀಚಿಕೆಯಾಗುತ್ತದೆ.
ವಿಷಯಾಪೇಕ್ಷೆಯಲ್ಲಿಯೂ ಹೆಚ್ಚಿನ ಒಳಿತನ್ನು ಕಾಣಲು ಸಾಧ್ಯವಿಲ್ಲ. ಯಾವುದಾದರೂ ವಿಷಯದ ಬಗ್ಗೆ ಅಪೇಕ್ಷೆ ಪಡುವುದು ತಪ್ಪಲ್ಲ. ಆದರೆ ಯಾವ ವಿಷಯದ ಮೇಲೆ ಅಪೇಕ್ಷೆ ಪಡುತ್ತಿದ್ದೇವೆ ಎನ್ನುವುದು ಬಹು ಮುಖ್ಯವಾಗುತ್ತದೆ. ಇನ್ನು ಈ ವಿಷಯಾಪೇಕ್ಷೆ ಎನ್ನುವುದು ಮನುಷ್ಯನ ರಕ್ತ ಮಾಂಸ ಮಜ್ಜೆಯಲ್ಲಿ ಬೇರು ಬಿಟ್ಟಿದೆ. ಹೀಗಾಗಿ ಮನುಷ್ಯ ಸದಾ ವಿಷಯಾಪೇಕ್ಷೆಯಲ್ಲಿರುತ್ತಾನೆ. ಹಾಗೆಂದು ವಿಷಯಾಪೇಕ್ಷೆಗೆ ಒಳಗಾಗುವುದು ಕೆಟ್ಟದಲ್ಲ. ಬದಲಿಗೆ ನಾವು ಯಾವ ವಿಷಯಗಳಲ್ಲಿ ಅಪೇಕ್ಷೆಗೆ ಒಳಗಾಗುತ್ತೇವೆ ಎಂಬುದು ಮುಖ್ಯವಾಗುತ್ತದೆ.

ಬದುಕಿಗೆ ನೈತಿಕ ನಿಯಮ ಅಳವಡಿಸಿಕೊಳ್ಳಿ
ವಿಷಯಾಪೇಕ್ಷೆ ಹೊಂದಿದವರು ಸಾಮಾನ್ಯವಾಗಿ ಲೌಕಿಕ ಸುಖಗಳ ಹಿಂದೆ ಹೋಗುತ್ತಾರೆ. ಅಂತಹವರಿಗೆ ಅದರ ಹಿಂದೆ ಹೋಗಬೇಡಿ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಆತ್ಮಜ್ಞಾನಿಗಳು, ಮನುಷ್ಯನ ಮನೋಮಟ್ಟವನ್ನು ಅರಿತವರಾದ ಆಧ್ಯಾತ್ಮಿಕ ಚಿಂತಕರು ಹೇಳುವುದಿಷ್ಟೆ. ಸುಖಾನ್ವೇಷಿಯಾಗು, ಆದರೆ ಆ ನಿನ್ನ ಸುಖಾಪೇಕ್ಷೆ ನಿನ್ನ ಮಾನಸಿಕ ಮತ್ತು ಶಾರೀರಿಕ ಸೌಖ್ಯವನ್ನು ಹಾಳುಮಾಡುವಂತಿರಬಾರದು ಅಥವಾ ಊರ್ಧ್ವ ಗಮನಾಭಿಲಾಷೆಯನ್ನು ಕುಂಠಿತಗೊಳಿಸುವಂತಿರಬಾರದು ಎಂಬ ಸಲಹೆಯನ್ನು ನೀಡುತ್ತಾರೆ.
ನಿಜ ಹೇಳಬೇಕೆಂದರೆ ಮಾನಸಿಕವಾದ ಸಂತೋಷಗಳ ಅನ್ವೇಷಣೆಯ ಮೂಲಕ ಆತ್ಮಾನಂದವನ್ನು ಪಡೆದುಕೊಳ್ಳಲು ಬೇಕಾದ ಶಕ್ತಿ, ಸಾಮರ್ಥ್ಯವನ್ನು ಮನುಷ್ಯ ಬೆಳೆಸಿಕೊಳ್ಳಬೇಕು. ಸುಖಾಪೇಕ್ಷೆಯು ಆತ್ಮ ಹಾನಿಗೆ ದಾರಿಯಾಗಬಾರದು. ಇದು ಸುಖಾಪೇಕ್ಷೆ ಹೊಂದಿರುವವರು ಮೂಡಬೇಕಾದ ಎಚ್ಚರಿಕೆಯಾಗಿದೆ. ನೈತಿಕ ನಿಯಮಗಳಾಗಲೀ, ಇನ್ನಿತರ ನಿಯಮಗಳಾಗಲೀ ಇವುಗಳೆಲ್ಲವೂ ಅಡ್ಡದಾರಿ ಹಿಡಿದು ಸುಖಾಪೇಕ್ಷೆಯ ಬೆನ್ನತ್ತಿ ಹೋಗುವ ಮನುಷ್ಯನನ್ನು ಕಾಪಾಡುವ ಸಲುವಾಗಿಯೇ ಮಾಡಲ್ಪಟ್ಟವುಗಳಾಗಿವೆ.
ವಿಷಯಜನ್ಯ ಸುಖ ದುಃಖಕ್ಕೆ ಕಾರಣ
ನಮ್ಮಲ್ಲಿ ಮೂಡುವಂತಹ ವಿಷಯಾಪೇಕ್ಷೆಯಾಗಲೀ, ಸೆಳೆಯುವಂತಹ ಸುಖಾಪೇಕ್ಷೆಯಾಗಲೀ ಇವುಗಳನ್ನು ಅನುಕೂಲವಾಗುವಂತಹ ಚೌಕಟ್ಟಿನಲ್ಲಿ ಪಳಗಿಸಿ ಬೇರೊಂದು ಸ್ಥಿತಿಗೆ ಸಿದ್ಧಗೊಳಿಸುವ ತಂತ್ರ ನಮ್ಮಲ್ಲಿಯೇ ಇದೆ ಎಂಬುದನ್ನು ಮರೆಯಬಾರದು. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ವಿಷಯಜನ್ಯ ಭೋಗಗಳು ಖಂಡಿತವಾಗಿಯೂ ದುಃಖಕ್ಕೆ ಕಾರಣವಾಗುತ್ತವೆ. ವಿಷಯಸುಖಗಳನ್ನು ಅನುಭವಿಸುವಾಗ ಕೂಡ ಈ ವಿಚಾರವನ್ನು ನೆನಪಿನಲ್ಲಿರಿಸಿಕೊಂಡಿದ್ದೇ ಆದರೆ ವಿವೇಚನೆಗೆ ಅನುಕೂಲವಾಗುತ್ತದೆ.
ಆಗ ವಿಷಯಾಸಕ್ತನಾದವನು ಕೂಡಾ ನೈತಿಕ ನಿರ್ದಿಷ್ಟ ನೈತಿಕ ಕಟ್ಟುಪಾಡುಗಳ ಒಳಗೇ ವಿಷಯಾನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಇದರ ಜತೆಗೆ ಭಜನಾಂದವನ್ನೂ ಪಡೆದುಕೊಳ್ಳಲು ಅಗತ್ಯವಾದ ಆಧ್ಯಾತ್ಮಿಕ ಸಾಧನೆಗಳನ್ನು ಕೈಗೊಂಡರೆ, ಮನಸ್ಸು ಅನುಕ್ರಮವಾಗಿ ಪರಿಶುದ್ಧವಾಗುತ್ತಾ ವಿಷಯಾನಂದದ ಬಗೆಗಿನ ಆಸಕ್ತಿ ಕಡಿಮೆಯಾಗಿ ಭಜನಾನಂದದ ಕಡೆಗೆ ಮನಸ್ಸು ಗಮನಾರ್ಹವಾಗಿ ವಾಲುತ್ತದೆ.
ಮನಸ್ಸನ್ನು ಒಳ್ಳೆಯ ಅಪೇಕ್ಷೆಗಳತ್ತ ತಿರುಗಿಸಿ
ಶ್ರೀರಾಮಕೃಷ್ಣರು ಹೇಳುವಂತೆ ನಮ್ಮ ಮನಸ್ಸಿನ ಭಾವ-ರಾಗಗಳನ್ನು ನಾವು ವಿನಾಶಗೊಳಿಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಶುದ್ಧಗೊಳಿಸಿ ಒಂದು ನಿರ್ದಿಷ್ಟ ಗುರಿಯ ಕಡೆಗೆ ನೇರಗೊಳಿಸಬಹುದು. ನಮ್ಮ ರಾಗ-ಭಾವಗಳು ಕೀಳು ವಿಷಯಗಳ ಕಡೆ ತಿರುಗಿದರೆ ನಾವೂ ಕೀಳಾಗುತ್ತೇವೆ. ಅವುಗಳನ್ನು ಮೇಲ್ಮುಖವಾಗಿ ತಿರುಗಿಸಿದರೆ ನಾವು ಮೇಲಾದವರಾಗುತ್ತೇವೆ. ಅವುಗಳನ್ನು ಪರಬ್ರಹ್ಮಾಭಿಮುಖವಾಗಿ ನಿರ್ದೇಶಿಸಿದರೆ ಅವುಗಳ ಜತೆಗೆ ನಾವೂ ಆ ಹಂತಕ್ಕೆ ಏರುತ್ತೇವೆ. ಆಗ ಈ ಲೋಕದ ವಿಷಯ ಪ್ರವೃತ್ತಿಗಳು ಸುಶಿಕ್ಷಿತವಾಗಿ ಪರಿಣತವಾಗಿ ತಮ್ಮ ಮೊದಲಿನ ಗುಣ ಲಕ್ಷಣಗಳನ್ನು ಕಳೆದುಕೊಂಡು ಅಸಾಧಾರಣವಾಗುತ್ತವೆ.
ಯಾವಾಗ ಒಬ್ಬ ಮನುಷ್ಯ ತಾನು ಕೇವಲ ಮನೋಬುದ್ದಿ ಅಹಂಕಾರಗಳಿಂದ ಕೂಡಿದ ದೇಹವಲ್ಲ. ನಾನು ನಿತ್ಯ ಶುದ್ಧವಾದ ಆತ್ಮಸ್ವರೂಪನೇ ಎಂದು ಅನುಭವಿಸಿ ತಿಳಿಯುತ್ತಾನೆಯೋ ಆಗ ಅವನ ಭಾವ-ರಾಗಗಳು ಸ್ತಬ್ಧವಾಗುತ್ತವೆ. ಏಕೆಂದರೆ ಈ ಭಾವ-ರಾಗಗಳು ವಾಸ್ತವವಾಗಿ ನೋಡಿದರೆ ತಪ್ಪುದಾರಿಗೆ ಬಿದ್ದ ನಮ್ಮ ಅಪೇಕ್ಷೆಗಳಲ್ಲದೆ ಬೇರೆ ಯೂವುದೂ ಅಲ್ಲ. ನಿಜ ಹೇಳಬೇಕೆಂದರೆ ಆಸೆಗಳು ನಮ್ಮ ಉದ್ದೇಶಕ್ಕೆ ಅನುಸಾರವಾಗಿ ಶತ್ರುಗಳೂ ಆಗಬಹುದು. ಮಿತ್ರರೂ ಆಗಬಹುದು.
ನಮ್ಮ ಅಪೇಕ್ಷೆಗಳು ಸತ್ಯದೆಡೆಗೆ ಇರಲಿ
ಯಾವಾಗ ನಮ್ಮ ಅಪೇಕ್ಷೆಗಳು ಸತ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ನಮ್ಮ ಬಿಡುಗಡೆಯ ಹಾಗೂ ಆನಂದದ ಸಾಧನಗಳಾಗುತ್ತವೆ. ಯಾವಾಗ ಅವು ಮಿಥ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ಬಂಧನದ ಹಾಗೂ ದುಃಖದ ಸಾಧನಗಳಾಗುತ್ತವೆ. ಆನಂದ ಎನ್ನುವುದು ಕೇವಲ ಸುಖ ಅಲ್ಲ. ಅದು ಸುಖ, ದುಃಖಗಳಾಚೆಯದು ಮತ್ತು ಎಂದೂ ದೈಹಿಕ, ಮಾನಸಿಕ ಸ್ತರಗಳಲ್ಲಿ ಪ್ರತ್ಯೇಕಿಸಲಾರದಂತಹದ್ದಾಗಿದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ನಮ್ಮಲ್ಲಿ ಅಪೇಕ್ಷೆಗಳಿರಬೇಕು. ಅವು ಸದಾ ಒಳಿತಿನ ಕಡೆಗೆ ಮುಖ ಮಾಡಿರಬೇಕು. ಆಗ ನಮ್ಮ ಅಪೇಕ್ಷೆಗಳಿಗೆ ಶಕ್ತಿ ಬರುತ್ತದೆ. ಮತ್ತು ಅದು ನೆಮ್ಮದಿಯನ್ನು ಕೊಡುತ್ತದೆ. ಮನಸ್ಸಿನಲ್ಲಿ ಸದಾ ಉಲ್ಲಾಸವನ್ನು ತುಂಬುತ್ತಿರುತ್ತದೆ. ಹೀಗಾಗಿ ಅಪೇಕ್ಷೆಗಳು ದಾರಿ ತಪ್ಪದಂತೆ ನೋಡಿಕೊಳ್ಳುವ ಮನೋಬಲವನ್ನು ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿದೆ.












Click it and Unblock the Notifications