Success Tips: ಯಶಸ್ಸು ಪಡೆಯಬೇಕಾ? ಇಷ್ಟಪಟ್ಟು ಕೆಲಸ ಮಾಡಿ!
ನಾವೆಲ್ಲರೂ ಏನಾದರೊಂದು ಕೆಲಸ ಮಾಡಲೇ ಬೇಕು. ಕೆಲವರಿಗೆ ಮಾಡುವ ಕೆಲಸ ಹೆಸರು, ಹಣ, ಅಂತಸ್ತು ಎಲ್ಲವನ್ನೂ ತಂದುಕೊಟ್ಟಿರುತ್ತದೆ. ಮತ್ತೆ ಕೆಲವರಿಗೆ ಹೊಟ್ಟೆಪಾಡು ಮಾತ್ರ ಕಳೆದಿರುತ್ತದೆ. ನಮ್ಮ ನಡುವೆ ಎಲ್ಲರೂ ಕೆಲಸ ಮಾಡುತ್ತಾರೆಯಾದರೂ ಇಷ್ಟಪಟ್ಟು ಮಾಡುವವರ ಸಂಖ್ಯೆ ಕಡಿಮೆ ಇದೆ. ಏಕೆಂದರೆ ಅನಿವಾರ್ಯ ಕಾರಣಗಳಿಂದ ಯಾವುದೋ ಒಂದು ಕೆಲಸ ಮಾಡುತ್ತಿರುತ್ತಾರೆ. ಅದು ಅವರಿಗೆ ಸರಿ ಹೊಂದುವ ಕೆಲಸವಲ್ಲ ಜೊತೆಗೆ ಓದಿಗೆ ತಕ್ಕ ಕೆಲಸವೂ ಆಗಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಕೈತುಂಬಾ ಸಂಬಳವೂ ಬರುತ್ತಿರುವುದಿಲ್ಲ. ಹೀಗಾಗಿ ಒಳ್ಳೆಯ ಕೆಲಸದ ನಿರೀಕ್ಷೆಯಲ್ಲಿ ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಲಾಗದೆ ಒದ್ದಾಡುತ್ತಿರುತ್ತಾರೆ.
ಇವತ್ತು ಜಗತ್ತು ವಿಶಾಲವಾಗಿ ಬೆಳೆದಿದೆ. ಕಷ್ಟಪಟ್ಟು ದುಡಿಯುತ್ತೇನೆ, ಯಾವ ಕೆಲಸವಾಗಲಿ ಮಾಡುತ್ತೇನೆ ಎಂದು ಹೊರಡುವವರಿಗೆ ಉದ್ಯೋಗಕ್ಕೆ ಬರವಿಲ್ಲ. ಆದರೆ ನಾನು ಆ ಕೆಲಸ ಮಾಡಬೇಕಾ ಎಂದು ರಾಗ ಎಳೆಯುವವರು ಮಾತ್ರ ಇನ್ನೂ ನಿರುದ್ಯೋಗಿಯಾಗಿಯೇ ಇದ್ದಾರೆ. ಕೆಲಸಕ್ಕಾಗಿ ಅಲೆಯುತ್ತಾ ತಮ್ಮ ದುಡಿಯುವ ವಯಸ್ಸನ್ನು ಕಳೆದುಕೊಳ್ಳುತ್ತಿದ್ದಾರೆ.

ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಕಾಲವಿತ್ತು. ಈಗ ಅದು ಸರ್ವರ ಲಕ್ಷಣಂ ಆಗಿದೆ. ಏಕೆಂದರೆ ಒಬ್ಬರ ದುಡಿಮೆಯಲ್ಲಿ ಜೀವನ ಸಾಗಿಸುವ ಕಾಲ ಸರಿಯುತ್ತಿದೆ. ಬೆಲೆ ಗಗನಕ್ಕೇರುತ್ತಿರುವ ಕಾಲ ಘಟ್ಟದಲ್ಲಿ ಗಂಡ ಹೆಂಡತಿ ಇಬ್ಬರು ದುಡಿದರೂ ಸಂಸಾರ ನಿಭಾಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಏನಾದರೊಂದು ಕೆಲಸ ಮಾಡಬೇಕು. ಅದರಲ್ಲೊಂದಿಷ್ಟು ಆದಾಯ ಬರಬೇಕು ಎಂಬುದು ಪ್ರತಿಯೊಬ್ಬರ ಆಲೋಚನೆಯಾಗಿದೆ.
ನಾವೆಲ್ಲರೂ ದುಡಿದು ಬದುಕಬೇಕು. ಆ ದುಡಿಮೆಯಲ್ಲಿ ಜೀವನ ಸಾಗಿಸಬೇಕು. ಇದು ಹಿಂದಿನಿಂದಲೂ ನಡೆದು ಬಂದ ರೂಢಿ. ದುಡಿಮೆ ಎಂದರೆ ಹಣ ಸಂಪಾದಿಸುವುದು ಎಂದರ್ಥ. ಆದರೆ ಇತ್ತೀಚಿಗಿನ ದಿನಗಳಲ್ಲಿ ದುಡಿದೇ ಹಣ ಸಂಪಾದಿಸಬೇಕು ಎಂಬ ಮನೋಸ್ಥಿತಿ ಬದಲಾಗಿದೆ. ಪರಿಣಾಮ ಸುಲಭ ಮಾರ್ಗದಲ್ಲಿ, ವಾಮಮಾರ್ಗದಲ್ಲಿ ಸಂಪಾದಿಸುವತ್ತ ಕಾರ್ಯ ಮಗ್ನರಾಗುತ್ತಿದ್ದು, ತಾವು ಹಿಡಿಯುತ್ತಿರುವ ದಾರಿ ನೈತಿಕವಲ್ಲ ಎಂಬ ಅರಿವಿದ್ದರೂ ಮೋಸ ವಂಚನೆಯ ಮೂಲಕ ಹಣ ಸಂಪಾದಿಸಿ ಶೀಘ್ರ ಶ್ರೀಮಂತರಾಗುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ತಂತ್ರ, ಕುತಂತ್ರ ಮಾಡುತ್ತಾ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಯಾರು ಹಾಳಾದರೇನು ನಾವು ಚೆನ್ನಾಗಿರಬೇಕೆಂದು ಬಯಸುವ ಇಂಥವರ ನಡುವೆ ಪ್ರಾಮಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ.

ಕೆಲಸ ಹೇಗೆ ಮಾಡುತ್ತಿದ್ದೇವೆ ಎನ್ನುವುದೇ ಮುಖ್ಯ
ನಾವು ಕೆಲಸದಲ್ಲಿ ಫಲಾಫೇಕ್ಷೆ ಬಯಸುವುದು ತಪ್ಪಲ್ಲ. ಆದರೆ ಮಾಡುವ ಕೆಲಸಕ್ಕೆಲ್ಲಾ ಫಲವನ್ನು ಅಪೇಕ್ಷಿಸುವುದು ತಪ್ಪು. ಒಂದಷ್ಟು ಉದಾರತೆ ನಮ್ಮಲ್ಲಿರಬೇಕು. ನಾವು ಮಾಡುವ ಕೆಲಸಗಳ ಮೂಲಕ ತಮಗಿಂತ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಯಾವ ಸಮಾಜದ ಮಧ್ಯೆ ಹುಟ್ಟಿದೇವೆಯೋ ಅದರ ಚಟುವಟಿಕೆಗಳಿಗೆ ಮತ್ತು ಆದರ್ಶಗಳಿಗೆ ಅನುಗುಣವಾಗಿ ಒಳ್ಳೆಯದಾಗುವಂತಹ ಕೆಲಸಗಳನ್ನು ಯಾವಾಗಲೂ ಮಾಡುತ್ತಿರಬೇಕು.
ಯಾವ ಕೆಲಸ ಮಾಡುತ್ತಿದ್ದೇವೆ ಎಂಬುದು ಮುಖ್ಯವಲ್ಲ ಹೇಗೆ ಮಾಡುತ್ತಿದ್ದೇವೆ ಎಂಬುದು ಮುಖ್ಯ. ಪ್ರತಿಯೊಂದು ಕೆಲಸವೂ ಬರೀ ಹಣವೊಂದನ್ನೇ ತಂದು ಕೊಡುವುದಿಲ್ಲ. ಅದು ಅದರದ್ದೇ ಆದ ಘನತೆ, ಗೌರವ, ನೆಮ್ಮದಿ, ಯಶಸ್ಸನ್ನೂ ತಂದುಕೊಡುತ್ತದೆ. ಹೀಗಾಗಿ ಮಾಡುವ ಕೆಲಸದಲ್ಲಿ ಯಶಸ್ಸಿನತ್ತ ನಮ್ಮ ಗುರಿ ಇರಬೇಕು. ಜತೆಗೆ ಏನು ಮಾಡುತ್ತಿದ್ದೇವೆಯೋ ಅದನ್ನು ಕಷ್ಟಪಟ್ಟು ಮಾಡುವ ಬದಲಿಗೆ ಇಷ್ಟಪಟ್ಟು ಮಾಡುವ ಜಾಣತನ ಬೆಳೆಸಿಕೊಳ್ಳಬೇಕು. ಆಗ ಯಾವುದೇ ಕೆಲಸವಾಗಲೀ ಅದು ನಮಗೆ ಕಷ್ಟ ಅಂಥ ಅನಿಸುವುದಿಲ್ಲ. ಒಂದೆಡೆ ತಿಳಿದವರು ಹೇಳುತ್ತಾರೆ ಕೆಳಮಟ್ಟದ ಕೆಲಸ ಮಾಡುವುದರಿಂದ ವ್ಯಕ್ತಿ ಕೀಳಾಗುವುದಿಲ್ಲ.
ಮಾಡುವ ಕೆಲಸ ನಮಗಿಷ್ಟವಾದರೆ ಸಾಕು
ವ್ಯಕ್ತಿಯು ಮಾಡುವ ಕರ್ತವ್ಯದ ಸ್ವಭಾವದ ದೃಷ್ಟಿಯಿಂದ ಅವನ ಯೋಗ್ಯತೆಯನ್ನು ನಿರ್ಣಯಿಸದೆ ಕೆಲಸವನ್ನು ಆತ ಮಾಡುವ ರೀತಿಯಿಂದಲೂ, ಯಾವ ಮನೋಭಾವದಿಂದ ಮಾಡುತ್ತಾನೆ ಎಂಬುವುದರಿಂದಲೂ ನಿರ್ಣಯಿಸಬೇಕು. ಈ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ. ನಿಜ ಹೇಳಬೇಕೆಂದರೆ ಕೆಲಸವು ಜ್ಞಾನದ ಮೂಲಕ ಮಾಡಿದ ಉಪಾಸನೆಯಂತೆ, ಪೂಜೆಯಂತೆ ನೈತಿಕ ರೂಪದಲಿದ್ದರೆ ಖಂಡಿತಾ ಕೈಬಿಡುವುದಿಲ್ಲ. ಅಭಿವೃದ್ಧಿ ಹೊಂದಲು ನಮಗೆ ಎಟುಕುವ ಕೆಲಸವನ್ನು ಮಾಡುವುದೊಂದೇ ನಮಗಿರುವ ಮಾರ್ಗ.
ಕೆಲಸ ಯಾವುದೇ ರೀತಿಯದ್ದಾಗಲಿ ಅದನ್ನು ನಾವು ಅಸಡ್ಡೆ ಮಾಡದೆ ಮನಪೂರ್ವಕವಾಗಿ ಚೆನ್ನಾಗಿ ಮಾಡುವುದರಿಂದ ಅದು ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡುವುದಲ್ಲದೆ, ಬದುಕನ್ನು ಕಟ್ಟಿಕೊಡುತ್ತದೆ. ಇದು ಸಾಧ್ಯವಾಗಬೇಕಾದರೆ ಸದಾ ಒಳ್ಳೆಯ ಮನಸ್ಸಿನಿಂದಲೇ ಕೆಲಸ ಆರಂಭಿಸಬೇಕು. ನಾವು ಮಾಡುವ ಕೆಲಸ ನಮಗಿಷ್ಟವಾದರೆ ಸಾಕು. ಅದಕ್ಕಿಂತ ಸಂತೋಷ ಇನ್ನೇನಿದೆ?.












Click it and Unblock the Notifications