ನಗರಗಳಲ್ಲಿ ಹೆಚ್ಚಿದ ಹೃದಯಾಘಾತ: ಪಾರಾಗುವುದು ಹೇಗೆ?
ಮಧುಮೇಹದಿಂದ ಬಳಲುವವರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿ, ವೈದ್ಯರು ಹೇಳಿದಂತೆ ಆಹಾರಕ್ರಮ ಮತ್ತು ಔಷಧೋಪಚಾರದ ಮೂಲಕ ಮಧುಮೇಹವನ್ನು ನಿಯಂತ್ರಿಸಿಕೊಂಡು ಮುನ್ನಡೆಯುವುದು ಬಲು ಅಗತ್ಯವಾಗಿದೆ. ಇಲ್ಲದೆ ಹೋದರೆ ಅದು ಹೃದಯಾಘಾತಕ್ಕೂ ಅವಕಾಶ ಮಾಡಿಕೊಡಬಹುದಾಗಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಪ್ರಮಾಣ ಹೆಚ್ಚಾಗುತ್ತಿದ್ದು, ಇವೆರಡು ಒಂದು ನಾಣ್ಯದ ಎರಡು ಮುಖ ಎಂಬಾಂತಾಗಿವೆ.
ನಮ್ಮ ಜೀವನಶೈಲಿ ಬದಲಾಗಿದೆ. ಹೀಗಾಗಿ ಕೆಲವೊಂದು ಕಾಯಿಲೆಗಳು ಬಹುಬೇಗ ನಮ್ಮನ್ನು ಅಡರಿಕೊಳ್ಳುತ್ತಿದೆ. ಮೊದಲೆಲ್ಲ 50ವರ್ಷದ ನಂತರ ಕಾಣಿಸಿಕೊಳ್ಳುತ್ತಿದ್ದ ಹೃದ್ರೋಗ ಇದೀಗ ಯುವಕ, ಯುವತಿಯರನ್ನು ಕಾಡಿಸುವಂತಾಗಿದೆ. ಹೀಗಾಗಿ ಒತ್ತಡ, ವ್ಯಾಯಾಮ ಕೊರತೆ, ವಾಯು ಮಾಲಿನ್ಯ ಇನ್ನಿತರ ಕಾರಣಗಳಿಂದ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಬಹುಮುಖ್ಯವಾಗಿದೆ.

ಇವತ್ತು ಹೃದಯದ ಸಮಸ್ಯೆಗಳು ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಕೆಲವು ಸಂದರ್ಭಗಳಲ್ಲಿ ಚಿಕಿತ್ಸೆಗೂ ಅವಕಾಶ ನೀಡದೆ ಸಾವಿಗೆ ದಾರಿ ಮಾಡಿಕೊಡುತ್ತಿದೆ. ಏಕೆ ಹೀಗಾಗುತ್ತಿದೆ ಎನ್ನುವುದು ಕಳವಳಕಾರಿಯಾಗಿದೆ. ಮೂಲಗಳ ಪ್ರಕಾರ ದೇಶದಲ್ಲಿ ಸಂಭವಿಸುವ ಸಾವಿನಲ್ಲಿ ಶೇ.50ರಷ್ಟು ಮಂದಿ ಸಾಂಕ್ರಾಮಿಕವಲ್ಲದ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಹೃದಯಘಾತ ಮತ್ತು ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ರೋಗಕ್ಕೆ ಶೇ.50ರಷ್ಟು ಮಂದಿ ಬಲಿಯಾಗುತ್ತಿದ್ದಾರೆ.
ನಗರಗಳಲ್ಲಿ ಹೃದಯಾಘಾತ ಜಾಸ್ತಿ
ಮಧುಮೇಹದಿಂದ ಬಳಲುತ್ತಿರುವವರಲ್ಲಿ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಶೇ.5ರಷ್ಟು ಹೆಚ್ಚು ಇರುತ್ತದೆ. ಹಿಂದೆಲ್ಲಾ ಮಕ್ಕಳು ತಂದೆ- ತಾಯಿಯನ್ನು ಚಿಕಿತ್ಸೆಗೆ ಕರೆ ತರುತ್ತಿದ್ದರು. ಆದರೆ ಇಂದು ತಂದೆ-ತಾಯಿಗಳು ಮಕ್ಕಳನ್ನು ಆಸ್ಪತ್ರೆಗೆ ಕರೆತರುತ್ತಿದ್ದು, ಶೇ.25ರಷ್ಟು ಸಾವುಗಳು ಹೃದಯ ಸಂಬಂಧಿ ಸಮಸ್ಯೆಗಳಿಂದ ಉಂಟಾಗುತ್ತಿದೆ. ಅಷ್ಟೇ ಅಲ್ಲದೆ ಸುಮಾರು 30-40ರ ವಯೋಮಾನದವರಲ್ಲಿ ಕಂಡು ಬರುತ್ತಿರುವುದು ಆತಂಕಕಾರಿಯಾಗಿದೆ.

ಹೃದಯದ ಆರೋಗ್ಯ ಕಾಪಾಡಬೇಕಾದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆ ಈ ಐದು ಅಂಶಗಳನ್ನು ಕಡಿಮೆಯಿಟ್ಟುಕೊಂಡರೆ ಒಳಿತು. ಜತೆಗೆ ವ್ಯಾಯಾಮ, ದೇಹದಂಡನೆ ಮುಖ್ಯ ಎನ್ನುತ್ತಾರೆ ಹೃದ್ರೋಗಗಳ ತಜ್ಞರು. ಗ್ರಾಮೀಣ ಪ್ರದೇಶದಲ್ಲಿ ಹೃದಯಾಘಾತ ಪ್ರಮಾಣ ಶೇ.6ರಷ್ಟು ನಗರ ಪ್ರದೇಶದಲ್ಲಿ ಶೇ.8ರಿಂದ ಶೇ.10ರಷ್ಟು ಹೆಚ್ಚಳವಾಗುತ್ತಿದೆ. ಹಿಂದೆಲ್ಲಾ ಹೆಂಗಸರಲ್ಲಿ ೫೦ ವರ್ಷದೊಳಗೆ ಹೃದಯಾಘಾತ ಇತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ.
ಹೃದಯ ಸಂಬಂಧಿತ ಪರೀಕ್ಷೆ ಮಾಡಿಸಿ
ಸಂಸಾರದ ಒತ್ತಡ, ವೃತ್ತಿಯ ಒತ್ತಡ, ಮಕ್ಕಳನ್ನು ನೋಡಿಕೊಳ್ಳುವ ಒತ್ತಡ, ಹಾರ್ಮೋನ್ ಅಸಮತೋಲನದಿಂದ ಒತ್ತಡ ಹೆಚ್ಚುತ್ತಿದೆ. 40ವರ್ಷ ಮೀರಿದ ಬಳಿಕ ಗಂಡಸರು 45ವರ್ಷ ಮೀರಿದ ಬಳಿಕ ಮಹಿಳೆಯರು ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ ಪರೀಕ್ಷೆ, ಥ್ರೆಡ್ಮಿಲ್ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ, ಪ್ರತಿ ಬಾರಿ ಸಾಮಾನ್ಯ ಸ್ಥಿತಿಯಲ್ಲಿದ್ದರೆ ಎರಡು ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬಹುದು.
ಹೃದಯಘಾತವಾದಾಗ ಸಾಮಾನ್ಯವಾಗಿ ಎದೆಯ ಎಡಭಾಗ, ಮಧ್ಯಭಾಗದಲ್ಲಿ ನೋವು, ಉರಿ ಕಾಣಿಸಿಕೊಳುತ್ತದೆ. ಶೇ.30ರಿಂದ 40ರಷ್ಟು ಮಂದಿಗೆ ಹೃದಯಘಾತವಾದಾಗ ಎದೆಭಾಗದಲ್ಲಿ ನೋವು ಕಾಣಿಸಿಕೊಳುವುದಿಲ್ಲ. ಬದಲಿಗೆ ಗಂಟಲು, ದವಡೆ ನೋವು ಕಾಣಿಸಿಕೊಳ್ಳಬಹುದು, ಬೆನ್ನಿನ ಮೇಲ್ಭಾಗ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿಯಾಗಬಹುದು, ಅತಿಯಾಗಿ ಬೆವರು ಬರಬಹುದು, ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಸಾವಿನ ಅಪಾಯವಿರುತ್ತದೆ.
ಹೃದಯದ ಆರೋಗ್ಯ ಕಾಪಾಡಿಕೊಳ್ಳಿ
ಹೃದಯಘಾತವಾದ ತಕ್ಷಣ ರೋಗಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಇದಕ್ಕೆ ಎರಡು ರೀತಿಯ ಚಿಕಿತ್ಸೆ ಇದೆ. ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಮೆಡಿಸಿನ್ ನೀಡಬೇಕು. ನಂತರ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಬೇಕಾಗುತ್ತದೆ. ಗುಣಮುಖರಾದ ಬಳಿಕವೂ ರೋಗಿಗಳು ವೈದ್ಯರು ಹೇಳಿದ ಆಹಾರಕ್ರಮ ಮತ್ತು ಔಷಧೋಪಚಾರ ಮುಂದುವರೆಸಿದರೆ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಅದು ಏನೇ ಇರಲಿ ಮೊದಲಿಗೆ ವ್ಯಾಯಾಮ, ವಾಕಿಂಗ್, ನಿಯಮಿತ ಆಹಾರ ಮೊದಲಾದ ಕ್ರಮಗಳ ಮೂಲಕ ಹೃದಯವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಜಾಣತನವಾಗಿದೆ.












Click it and Unblock the Notifications