Gram Panchayat; ನೇಮಕಾತಿ ಕುರಿತು ಸರ್ಕಾರದ ಮಹತ್ವದ ಆದೇಶ
ಬೆಂಗಳೂರು, ಆಗಸ್ಟ್ 03; ಕರ್ನಾಟಕ ಸರ್ಕಾರ ಈಗಾಗಲೇ ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಖೆ ಮತ್ತು ಸ್ಥಳೀಯ ಸರ್ಕಾರ ಶಾಖೆ), ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕಾತಿ (ವಿಶೇಷ) ನಿಯಮಗಳು 2019 ಅನ್ನು ಹಿಂಪಡೆದಿದೆ.
ಇನ್ನು ಮುಂದೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ ನೇರ ನೇಮಕಾತಿ ಕೋಟಾದ ಖಾಲಿ ಹುದ್ದೆಗಳನ್ನು ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಮೂಲಕ ಭರ್ತಿ ಮಾಡಲು ಆದೇಶಿಸಿದೆ.

ಈಗ ಕರ್ನಾಟಕ ರಾಜ್ಯ ಪತ್ರದ ವಿಶೇಷ ಪತ್ರಿಕೆ ಮೂಲಕ ಈ ಮಾಹಿತಿಯನ್ನು ಪ್ರಕಟಿಸಿ, ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸಿ ಪರಿಗಣಿಸಿ ಈ ಕೆಳಗಿನ ನೇಮಕಾತಿ ನಿಯಮಗಳನ್ನು ರಚಿಸಿ ಆದೇಶ ಹೊರಡಿಸಿದೆ. ಹೊಸ ನಿಯಮಗಳ ಅಡಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ -2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ತುಂಬಲು ರಾಜ್ಯ ಮಟ್ಟದಲ್ಲಿ ಈ ಕೆಳಕಂಡ ಸದಸ್ಯರನ್ನು ಹೊಂದಿರುವ ಒಂದು ವಿಶೇಷ ಆಯ್ಕೆ ಸಮಿತಿಯನ್ನು ರಚಿಸತಕ್ಕದ್ದು ಎಂದು ಹೇಳಿದೆ.
ಸಮಿತಿಯ ವಿವರಗಳು; ಈ ಸಮಿತಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಂ. ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧ್ಯಕ್ಷರು. ಆಯುಕ್ತರು/ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಅಥವ ಜಂಟಿ ನಿರ್ದೇಶಕರ ಹುದ್ದೆಗೆ ಕಡಿಮೆ ಇಲ್ಲದ ಅವರ ನಾಮ ನಿರ್ದೇಶಿತರು ಸದಸ್ಯರು. ಆಯುಕ್ತರು/ ನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಥವ ಜಂಟಿ ನಿರ್ದೇಶಕರ ಹುದ್ದೆಗೆ ಕಡಿಮೆ ಇಲ್ಲ ಅವರ ನಾಮ ನಿರ್ದೇಶಿತರು ಸದಸ್ಯರು.
ವಿಶೇಷ/ ಅಪರ/ ಜಂಟಿ ಕಾರ್ಯದರ್ಶಿ (ಸೇವಾ ನಿಯಮಗಳು) ಸಿಬ್ಭಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸದಸ್ಯರು. ನಿರ್ದೇಶಕರು, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಥವಾ ಜಂಟಿ ನಿರ್ದೇಶಕರ ಹುದ್ದೆಗೆ ಕಡಿಮೆ ಇಲ್ಲದ ಅವರ ನಾಮನಿರ್ದೇಶಿತರು ಸದಸ್ಯರು. ನಿರ್ದೇಶಕರು, ಗಿರಿಜನ ಕಲ್ಯಾಣ ಇಲಾಖೆ ಅಥವಾ ಜಂಟಿ ನಿರ್ದೇಶಕರ ಹುದ್ದೆಗೆ ಕಡಿಮೆ ಇಲ್ಲದ ಅವರ ನಾಮನಿರ್ದೇಶಿತರು ಸದಸ್ಯರು. ನಿರ್ದೇಶಕರು, (ಪಂಚಾಯತ್ ರಾಜ್-1) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸದಸ್ಯ ಕಾರ್ಯದರ್ಶಿಗಳು.
ಈ ಹುದ್ದೆಗಳಿಗೆ ನಿಯಮಗಳಡಿ ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಅನುಸಾರ ಕನಿಷ್ಠ ಮತ್ತು ಗರಿಷ್ಠ ವಯೋಮಿತಿಯು ಕ್ರಮವಾಗಿ 18 ವರ್ಷಗಳು ಮತ್ತು 40 ವರ್ಷಗಳು ಇರತಕ್ಕದ್ದು. ವಿಶೇಷ ಆಯ್ಕೆ ಸಮಿತಿಯು ಸಂಬಂಧಪಟ್ಟ ಪ್ರತಿಯೊಂದು ಜಿಲ್ಲಾ ಪಂಚಾಯತಿಯಿಂದ ಪ್ರತಿ ಜಿಲ್ಲೆಯಲ್ಲಿ ಭರ್ತಿ ಮಾಡಬೇಕಾದ ಹುದ್ದೆಗಳ ವರ್ಗ ಮತ್ತು ಖಾಲಿ ಹುದ್ದೆಗಳ ಸಂಖ್ಯೆ ಇವುಗಳ ಬಗ್ಗೆ ಮಾಹಿತಿ ಪಡೆದು, ವಿದ್ಯಾರ್ಹತೆ, ವಯಸ್ಸು, ಆಯ್ಕೆ ಸ್ವರೂಪ, ಚಾಲ್ತಿಯಲ್ಲಿರುವ ಯಾವುದೇ ಕಾನೂನು ಅಥವಾ ಅದೇಶಾನುಸಾರ ಕಲ್ಪಿಸಿರುವ ಮೀಸಲಾತಿಯನ್ವಯ ಹುದ್ದೆಗಳ ವರ್ಗೀಕರಣ ನಿರ್ದಿಷ್ಟಪಡಿಸಿ ಆನ್‌ಲೈನ್ ಮುಖಾಂತರ ಇಚ್ಛೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು ಎಂದು ನಿಯಮ ಹೇಳಿದೆ.
ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಒಬ್ಬ ಅಭ್ಯರ್ಥಿಯು ತನ್ನ ಅರ್ಜಿಯಲ್ಲಿ ಅವನ/ಳ ಆಯ್ಕೆಯ ಯಾವುದಾದರೂ ಒಂದು ಜಿಲ್ಲೆಯನ್ನು ನೇಮಕಾತಿಗಾಗಿ ನಮೂದಿಸತಕ್ಕದ್ದು ಮತ್ತು ಆಯ್ಕೆಯು ಆ ಜಿಲ್ಲೆಗೆ ಮಾತ್ರ ಸೀಮಿತಗೊಂಡಿರತಕ್ಕದ್ದು, ಅಭ್ಯರ್ಥಿಯು ತನ್ನನ್ನು ಯಾವ ಹುದ್ದೆಗೆ ಪರಿಗಣಿಸಬೇಕು ಎಂಬ ಬಗ್ಗೆ ಆದ್ಯತೆಯನ್ನು ನಮೂದಿಸತಕ್ಕದ್ದು.
ವಿಶೇಷ ಆಯ್ಕೆ ಸಮಿತಿಯು ಪರೀಕ್ಷಾ ಪ್ರಾಧಿಕಾರದ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸತಕ್ಕದ್ದು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಮ್ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೋಸ್ಕರ ವಸ್ತುನಿಷ್ಟ ಬಹು ಆಯ್ಕೆ ಮಾದರಿಯನ್ವಯ ತಲಾ 100 ಅಂಕಗಳನ್ನೊಳಗೊಂಡ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ.
ಪತ್ರಿಕೆ-I- ಸಾಮಾನ್ಯ ಪತ್ರಿಕೆ:- ನಿಗದಿಪಡಿಸಿದ ವಿದ್ಯಾರ್ಹತೆ ತೇರ್ಗಡೆ ಹೊಂದಿರುವ ವ್ಯಕ್ತಿಯಿಂದ ಅಪೇಕ್ಷಿಸಬಹುದಾದ ಹಾಲಿ ಘಟನಾವಳಿಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೂಗೋಳ ಶಾಸ್ತ್ರ, ಸಮಾಜ ವಿಜ್ಞಾನ, ದಿನನಿತ್ಯ ಗಮನಿಸುವ ಆಗು-ಹೋಗುಗಳ ವಿಚಾರ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಸಾಮಾನ್ಯ ಮನೋಸಾಮರ್ಥ್ಯ ಮತ್ತು ಕಂಪ್ಯೂಟರ್ ಜ್ಞಾನ.
ಪತ್ರಿಕೆ-II ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಬಗ್ಗೆ ನಿರ್ದಿಷ್ಟ ಪತ್ರಿಕೆ. ಕರ್ನಾಟಕ ಮತ್ತು ಭಾರತದ ಗ್ರಾಮಗಳ ಜನರ ಸ್ಥಿತಿ-ಗತಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (1990 ರ ಕರ್ನಾಟಕ ಅಧಿನಿಯಮ 14) ಹಾಗೂ ಅದರ ಅಡಿ ಮಾಡಲಾದ ನಿಯಮಗಳು, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಕಾರ್ಯಕ್ರಮಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್.
ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸತಕ್ಕದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರೀಕ್ಷಾ ಪ್ರಾಧಿಕಾರವು ಪ್ರಕಟಿಸತಕ್ಕದ್ದು. 150 ಅಂಕಗಳನ್ನೊಳಗೊಂಡ ಒಂದು ಪತ್ರಿಕೆ ಇರುವ ಕನ್ನಡ ಭಾಷಾ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದು ಕನ್ನಡ ಭಾಷಾ ಜ್ಞಾನದ ಪರೀಕ್ಷೆಯಲ್ಲಿ ಅರ್ಹತೆಗಳಿಸದ ಯಾವುದೇ ಅಭ್ಯರ್ಥಿಯು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಂ ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ -2 ಮತ್ತು ದ್ವೀತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಯ ಆಯ್ಕೆಪಟ್ಟಿಯಲ್ಲಿ ಸೇರಲು ಅರ್ಹನಾಗಿರತಕ್ಕದ್ದಲ್ಲ. ಈ ಪತ್ರಿಕೆಯ ಮಟ್ಟವು ಎಸ್.ಎಸ್.ಎಲ್.ಸಿ ಹಂತದ ಕನ್ನಡ ಪ್ರಥಮ ಭಾಷಾ ಮಟ್ಟದ್ದಾಗಿರತಕ್ಕದ್ದು.
ಒಬ್ಬ ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆ ಅಥವಾ ಯಾವುದೇ ಸಮಾನಾಂತರ ಪರೀಕ್ಷೆ ಅಥವಾ ಎಸ್.ಎಸ್.ಎಲ್.ಸಿ ಗಿಂತ ಮೇಲ್ಮಟ್ಟದ ಯಾವುದೇ ಪರೀಕ್ಷೆಯಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಅಥವಾ ಎರಡನೇ ಭಾಷೆಯನ್ನಾಗಿ ಅಥವಾ ಐಚ್ಛಿಕ ವಿಷಯವಾಗಿ (ಆದರೆ ಸಂಯುಕ್ತ ಪತ್ರಿಕೆಯಲ್ಲಿನ ಒಂದು ವಿಷಯವಲ್ಲ). ಅಥವಾ ಕನ್ನಡ ಮಾಧ್ಯಮದಲ್ಲಿ ತೇರ್ಗಡೆಹೊಂದಿರಬೇಕು ಅಥವಾ ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಕನ್ನಡ ಭಾಷಾ ಪರೀಕ್ಷೆಯಲ್ಲಿ ತೇರ್ಗಡೆಹೊಂದಿರಬೇಕು. ಕನ್ನಡ ಭಾಷಾ ಪರೀಕ್ಷೆಯನ್ನು ವಿಶೇಷ ಆಯ್ಕೆ ಸಮಿತಿಯು ಪರೀಕ್ಷಾ ಪ್ರಾಧಿಕಾರದ ಮುಖಾಂತರ ನಡೆಸತಕ್ಕದ್ದು.












Click it and Unblock the Notifications