Get Updates
Get notified of breaking news, exclusive insights, and must-see stories!

Karnataka Graduate Teachers Recruitment: ನೇಮಕಾತಿಗೆ ಮತ್ತೆ ತಡೆ; ಸರ್ಕಾರಿ ಶಾಲೆಗಳಿಗೆ ಈಗಲೇ ಬರುವುದಿಲ್ಲ ಹೊಸ ಶಿಕ್ಷಕರು!

ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಉದ್ಯೋಗ ಸೃಷ್ಟಿ ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಿಮ್ಮ ಸಾಧನೆ ಸೊನ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮಾರ್ಚ್. 21: ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಮಾರ್ಚ್ 08ರ ಬುಧವಾರ ಅಂತಿಮ ಪಟ್ಟಿ ಪ್ರಕಟಿಸಿತ್ತು. ಅಂತಿಮ ಪಟ್ಟಿಯಲ್ಲಿ 6 ರಿಂದ 8 ನೇ ತರಗತಿಗಳಿಗೆ 13,351 ಪದವೀಧರ ಶಿಕ್ಷಕರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಈ ಶಿಕ್ಷಕರ ಸೇವೆ ಸರ್ಕಾರಿ ಮಕ್ಕಳಿಗೆ ಸಿಗುವುದು ಇನ್ನೂ ವಿಳಂಬವಾಗಲಿದೆ.

ಈಗಾಗಲೇ ಹಲವು ಬಾರಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ತಡೆಯಾಜ್ಞೆಗಳು, ಮತ್ತೆ ಪಟ್ಟಿ ಪರಿಷ್ಕರಣೆ ಸೇರಿದಂತೆ ವಿಳಂಬ ನಡೆದಿದೆ. ಅಂತಿಮ ಪಟ್ಟಿ ಪ್ರಕಟಿಸಿದಕ್ಕೆ ಅಭ್ಯರ್ಥಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ ಹತ್ತು ದಿನಗಳ ಅಂತರದಲ್ಲೇ ಮತ್ತೆ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಕೆಲಸಕ್ಕಾಗಿ ಕಾದು ಕುಳಿತಿದ್ದ ಶಿಕ್ಷಕರು ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.

Karnataka Graduate Teachers Recruitment : Govt schools unlikely to get new teachers soon

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಹೈಕೋರ್ಟ್‌ನಿಂದ ತಡೆ ಪಡೆದಿರುವುದರಿಂದ ಸರ್ಕಾರಿ ಶಾಲೆಗಳಿಗೆ 13,000 ಶಿಕ್ಷಕರ ನೇಮಕಾತಿ ವಿಳಂಬವಾಗುವ ಸಾಧ್ಯತೆಯಿದೆ. "ಇತ್ತೀಚೆಗೆ ಪರಿಷ್ಕೃತ ಪಟ್ಟಿಯೊಂದಿಗೆ, 15,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿಗೆ ನಾವು ಸುಮಾರು 13,000 ಶಿಕ್ಷಕರನ್ನು ಆಯ್ಕೆ ಮಾಡಿದ್ದೇವು. ಆದರೆ, ಮತ್ತೆ ಅದಕ್ಕೆ ತಡೆ ನೀಡಲಾಗಿದ್ದು, ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ" ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹಿಂದೆ ತಮ್ಮ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿದ ವಿವಾಹಿತ ಅಭ್ಯರ್ಥಿಗಳನ್ನು ಪರಿಗಣಿಸುವಂತೆ ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇತ್ತೀಚೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿತ್ತು. ಇದು ಆಯ್ಕೆ ಪಟ್ಟಿಯಲ್ಲಿ ವ್ಯತ್ಯಯಕ್ಕೆ ಕಾರಣವಾಯಿತು. ಕಲ್ಯಾಣ ಕರ್ನಾಟಕ ಪ್ರದೇಶದ ಕೆಲವು ಅಭ್ಯರ್ಥಿಗಳನ್ನು ಹೊರಹಾಕಲಾಯಿದೆ. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ವಿಷಯವನ್ನು ಇನ್ನಷ್ಟು ಎಳೆದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಇಲಾಖೆ ಅತಿಥಿ ಶಿಕ್ಷಕರನ್ನೇ ಅವಲಂಬಿಸಬೇಕಾಗಿದೆ. "ಮೊದಲು ವರ್ಗಾವಣೆಯನ್ನು ಪೂರ್ಣಗೊಳಿಸುವುದು. ವರ್ಗಾವಣೆಯಿಂದಾಗಿ ಖಾಲಿಯಾದ ಹುದ್ದೆಗಳಿಗೆ ಹೊಸ ಶಿಕ್ಷಕರನ್ನು ನಿಯೋಜಿಸುವುದು ನಮ್ಮ ಯೋಜನೆಯಾಗಿದೆ. ಈಗ, ವರ್ಗಾವಣೆಗೆ ಸಂಬಂಧಿಸಿದ ಕಡತವು ಇನ್ನೂ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿರುವುದರಿಂದ ಎಲ್ಲವೂ ವಿಳಂಬವಾಗುತ್ತದೆ" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Karnataka Graduate Teachers Recruitment : Govt schools unlikely to get new teachers soon

ಇದರ ಜೊತೆಗೆ, ಮುಂಬರುವ ದಾವಣಗೆರೆ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲವು ಆಯ್ದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶಗಳನ್ನು ಹಸ್ತಾಂತರಿಸುವ ಸರ್ಕಾರದ ಕಾರ್ಯಕ್ರಮವನ್ನು ಮುಂದೂಡಲಾಗಿದೆ. "ಇದು ಶಿಕ್ಷಕರ ದೊಡ್ಡ ನೇಮಕಾತಿಯಾಗಿರುವುದರಿಂದ, ನಾವು ಪ್ರಧಾನಿ ಮೂಲಕ ನೇಮಕಾತಿ ಆದೇಶಗಳನ್ನು ನೀಡಲು ಯೋಜಿಸಿದ್ದೇವು. ಆದರೆ, ಈಗ ಈ ವಿಷಯ ಮತ್ತೆ ನ್ಯಾಯಾಲಯದಲ್ಲಿ ಇರುವುದರಿಂದ ಯಾವುದೇ ಭರವಸೆ ಇಲ್ಲ ಎಂದು ಸಚಿವ ಬಿ ಸಿ ನಾಗೇಶ್ ಅವರ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು, ಈ ಬಗ್ಗೆ ಕಿಡಿ ಕಾರಿರುವ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಉದ್ಯೋಗ ಸೃಷ್ಟಿ ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಿಮ್ಮ ಸಾಧನೆ ಸೊನ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ 500ಕ್ಕೂ ಅಭ್ಯರ್ಥಿಗಳ ಬದುಕಿಗೆ ಕೊಳ್ಳಿ ಇಟ್ಟಿರಿ. ಈಗ 13,300 ಕ್ಕು ಹೆಚ್ಚು ಅಭ್ಯರ್ಥಿಗಳ ಬದುಕಿನೊಂದಿಗೆ ನಿಮ್ಮ ಸರ್ಕಾರ ರಾಜಕೀಯದ ಆಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.

*ಪತ್ರದಲ್ಲೇನಿದೆ...?*

ಸನ್ಮಾನ್ಯ ಮುಖ್ಯಮಂತ್ರಿಗಳೆ ನಿಮ್ಮ ಸರ್ಕಾರ ಅಧಿಕಾರವಧಿಗೆ ಬಂದು ಬರೊಬ್ಬರಿ ನಾಲ್ಕು ವರ್ಷಗಳು ಕಳೆದವು. ಉದ್ಯೋಗ ಸೃಷ್ಟಿ ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಿಮ್ಮ ಸಾಧನೆ ಈ ನಾಲ್ಕು ವರ್ಷಗಳಲ್ಲಿ ಸೊನ್ನೆ.

Karnataka Graduate Teachers Recruitment : Govt schools unlikely to get new teachers soon

ಪಿಎಸ್‌ಐ ನೇಮಕಾತಿಯನ್ನು ಮಾಡುವ ಸಲುವಾಗಿ ಅರ್ಜಿ ಕರೆದು ಪರೀಕ್ಷೆ ನಡೆಸಿ ಕೊನೆಗೆ ನಿಮ್ಮದೆ ಪಕ್ಷದ ಕೆಲವರು ಭ್ರಷ್ಟಾಚಾರ ಎಸಗಿದ್ದನ್ನು ಕಂಡು ನೇಮಕಾತಿಯನ್ನೆ ರದ್ದು ಮಾಡಿದಿರಿ. ನಿಮ್ಮ ಪಕ್ಷದ ಕೆಲವು ಭ್ರಷ್ಟಾಚಾರಿಗಳು ಮಾಡಿದ ಅನ್ಯಾಯಕ್ಕೆ ಸುಮಾರು 500ಕ್ಕೂ ಹೆಚ್ಚು ಅಭ್ಯರ್ಥಿಗಳು ರಾತ್ರಿ ಹಗಲೆನ್ನದೆ ಕಷ್ಟ ಪಟ್ಟು ಓದಿ ನ್ಯಾಯಯುತವಾಗಿ ಪರೀಕ್ಷೆ ಬರೆದು ಆಯ್ಕೆಯಾದ್ದರು ಆ ಅಭ್ಯರ್ಥಿಗಳ ಬದುಕಿಗೆ ಕೊಳ್ಳಿ ಇಟ್ಟಿರಿ...

Assistant Professor ನೇಮಕಾತಿಗೆ ಅರ್ಜಿ ಕರೆದದ್ದು 2021 ರ ಡಿಸೆಂಬರ್ ನಲ್ಲಿ ಪರೀಕ್ಷೆ ಆಗಿದ್ದು ಅದೇ 2022 ಮಾರ್ಚ್ ನಲ್ಲಿ ಆದರೆ 2023 ಮಾರ್ಚ್ ಕಳೆದರು ನೇಮಕಾತಿ ಪೂರ್ಣವಾಗಿಲ್ಲ. 1:1 ಪೈನಲ್ ಲಿಸ್ಟ್ ಪ್ರಕಟಿಸಿದ ಮೇಲೆ 371J ಯ ಹೊಸ ಮೀಸಲಾತಿ ನಿಯಮವನ್ನ ದಿಢೀರನೆ ಅಳವಡಿಸಿ ಹಲವು ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದೀರಿ. ಯಾವುದೆ ತಪ್ಪುಗಳಿಲ್ಲದೆ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಮ್ಮ ತುಘಲಕ್ ನೀತಿಯ ಬಿಸಿ ತಾಗುವಂತೆ ಮಾಡಿ ಈ ನೇಮಕಾತಿಯನ್ನು ಅಪೂರ್ಣಗೊಳಿಸಿದ್ದೀರಿ.

GPSTR 15,000 ಶಿಕ್ಷಕರನ್ನು ತೆಗೆದುಕೊಳ್ಳುತ್ತೇವೆಂದು ಒಂದು ವರ್ಷದಿಂದ ಮಾಧ್ಯಮಗಳೆದುರು ಕೊಚ್ಚಿಕೊಳ್ಳುತ್ತ ಕೊನೆಗೆ 2022 ಮೇ ಯಲ್ಲಿ ನೇರ ನೇಮಕಾತಿ ಪರೀಕ್ಷೆ ನಡೆಸಿದ್ದಿರಿ. ಅದೇ ವರ್ಷ ಡಿಸಂಬರ್‌ನಲ್ಲಿಯೆ ಶಿಕ್ಷಕರ ನೇಮಕಾತಿ ಮಾಡುತ್ತೇವೆಂದು ಆಶ್ವಾಸನೆ ಇಟ್ಟು ಕೊನೆಗೆ ಪೋಷಕರ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಒದಗಿಸಿದ ವಿವಾಹಿತ ಮಹಿಳೆಯರ ವಿಷಯಕ್ಕೆ ಕೋರ್ಟ್ ಮೆಟ್ಟಿಲೇರಿತು.

ಅದೇನೋ ತೀರ್ಮಾನವಾಗಿ ನೇಮಕಾತಿ ಪೂರ್ಣಗೊಳ್ಳುತ್ತದೆ ಎನ್ನುವಷ್ಟರಲ್ಲಿ ನೇಮಕಾತಿಗೆ ಅರ್ಜಿ ಕರೆವಾಗ ಇಲ್ಲದ ಹೈದರಾಬಾದ್ ಕರ್ನಾಟಕದ ವಿಶೇಷ ಮೀಸಲಾತಿಯೊಂದಿಗೆ ಹೊಸ ಆಯ್ಕೆ ಪಟ್ಟಿಯನ್ನು ಬಿಟ್ಟು ಪುನಃ ಕೆಲವು ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದೀರಿ. ಇಲ್ಲೂ ಆಯ್ಕೆಯಾದ 13, 300 ಕ್ಕೂ ಹೆಚ್ಚು ಅಭ್ಯರ್ಥಿಗಳ ಬದುಕಿನೊಂದಿಗೆ ನಿಮ್ಮ ಸರ್ಕಾರ ರಾಜಕೀಯದ ಆಟವಾಡುತ್ತಿದೆ.

ಈ ಮೇಲಿನ ಯಾವ ನೇಮಕಾತಿಯನ್ನು ಸಮರ್ಥವಾಗಿ ಪೂರ್ಣಗೊಳಿಸದೆ ಚುನಾವಣೆ ಹೊಸ್ತಿಲ್ಲಿ ನಿಂತಿರುವ ನೀವು ಪ್ರೌಢ ಶಾಲೆ ಶಿಕ್ಷರ ನೇಮಕಾತಿ ಮತ್ತು ಪಿಯುಸಿ ಉಪನ್ಯಾಸಕರ ನೇಮಕಾತಿ ಮಾಡಿಕೊಂಡಿಲ್ಲ. ಪೋಲಿಸ್ ಹುದ್ದೆಗಳ ನೇಮಕಾತಿ ಕೂಡ ಹಾಗೆ ಬಾಕಿ ಉಳಿಸಿ ಹೋಗುತ್ತಿದ್ದೀರ. ವರ್ಷಗಟ್ಟಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗುತ್ತಿರುವ ಅದೆಷ್ಟೊ ಅಭ್ಯರ್ಥಿಗಳ‌ ಕನಸಿಗಳಿಗೆ ನೀರುಣಿಸುವ ಕೆಲಸವನ್ನು ನಿಮ್ಮ ಸರ್ಕಾರ ಮಾಡಲೆ ಇಲ್ಲ.

ನೇಮಕಾತಿ ವಿಷಯದಲ್ಲಿ ನಿಮ್ಮದು ಸಂಪೂರ್ಣ ವಿಫಲ ಸರ್ಕಾರ ಎನ್ನುವ ಅಭಿಪ್ರಾಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ಅಭ್ಯರ್ಥಿಗಳಲ್ಲಿ ಮೂಡಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಂಡು ಚುನಾವಣೆಗೆ ಬರುತ್ತೀರೊ ಅಥವ ಹೀಗೆ ಅಸಮರ್ಥವಾಗೆ ನಮ್ಮಲ್ಲಿಗೆ ಮತಯಾಚಿಸಲು ಬರುತ್ತಿರೊ ನಿಮಗೆ ಮತ್ತು ನಿಮ್ಮ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+