Karnataka Budget 2023: ಉದ್ಯೋಗ ಕ್ಷೇತ್ರದ ಘೋಷಣೆಗಳು
ಬೆಂಗಳೂರು, ಜುಲೈ 07; ಕರ್ನಾಟಕ ಮುಖ್ಯಮಂತ್ರಿ, ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಶುಕ್ರವರ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿಯ ಬಜೆಟ್ ಗಾತ್ರ 3,27,747 ಕೋಟಿ ರೂ.ಗಳು. ಬಜೆಟ್‌ನಲ್ಲಿ ಉದ್ಯೋಗ ಕ್ಷೇತ್ರಕ್ಕೆ ಹಲವಾರು ಘೋಷಣೆಗಳನ್ನು ಮಾಡಲಾಗಿದೆ.
ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ, "ಶಿಕ್ಷಣ ಪಡೆದು ಉದ್ಯೋಗ ಹಿಡಿದು ಜೀವನದಲ್ಲಿ ಉನ್ನತಿಯನ್ನು ಸಾಧಿಸುವ ಕನಸುಹೊಂದಿರುವ ಯುವಜನರು, ನಿರೀಕ್ಷೆಯಂತೆ ಉದ್ಯೋಗ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲುವ ಆಶಯದೊಂದಿಗೆ ನಮ್ಮ ಪ್ರಣಾಳಿಕೆಯ ಐದನೇ ಗ್ಯಾರಂಟಿ ಯೋಜನೆಯಾದ ಪದವೀಧರರು ಮತ್ತು ಡಿಪ್ಲೊಮಾ ಹೊಂದಿರುವವರಿಗೆ ನಿರುದ್ಯೋಗ ಭತ್ಯೆ ನೀಡುವ ʻಯುವನಿಧಿʼ ಯೋಜನೆಯನ್ನು ಜಾರಿಗೊಳಿಸಲಾಗುವುದು" ಎಂದರು.

"ಈ ನಾಡಿನ ಯುವಜನರು ಅಡ್ಡದಾರಿ ಹಿಡಿಯದಂತೆ, ಅತ್ಮಸ್ತೈರ್ಯದಿಂದ ತಮ್ಮ ಬದುಕಿನಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಮಯಾವಕಾಶ, ಆರ್ಥಿಕ ನೆರವನ್ನು ನೀಡುವುದು, ಆತ್ಮವಿಶ್ವಾಸವನ್ನು ತುಂಬುವುದು ಈ ಯೋಜನೆಯ ಉದ್ದೇಶವಾಗಿದೆ" ಎಂದು ಘೋಷಣೆ ಮಾಡಿದರು.
"ಡಬಲ್ ಎಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರಗಳ ಜನವಿರೋಧಿ ನೀತಿಯಿಂದ ಆರ್ಥಿಕತೆ ಕುಸಿದಿದ್ದು, ನಿರುದ್ಯೋಗ ಸಮಸ್ಯೆ ರಾಜ್ಯದೆಲ್ಲೆಡೆ ತಾಂಡವವಾಡುತ್ತಿದೆ. 2023ರಲ್ಲಿ ಪದವಿ ಪಡೆದು ಆರು ತಿಂಗಳವರೆಗೂ ಉದ್ಯೋಗ ಲಭಿಸದ ಯುವಜನರಿಗೆ ಎರಡು ವರ್ಷದವರೆಗೆ ಅಥವಾ ಉದ್ಯೋಗ ಸಿಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ, ಪದವೀಧರರಿಗೆ ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಅನುಕ್ರಮವಾಗಿ ಮಾಸಿಕ 3,000 ರೂ. ಮತ್ತು 1,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು" ಎಂದರು.
"ರಾಜ್ಯದಲ್ಲಿ 50 ವರ್ಷಗಳನ್ನು ಪೂರೈಸಿದ 12 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಪಾರಂಪರಿಕ ಸಂಸ್ಥೆಗಳೆಂದು ಘೋಷಿಸಿ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ನಿರ್ಮಾಣ ಕಾರ್ಯ ಹಾಗೂ ಹೊಸ ಉಪಕರಣಗಳು ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 100 ಕೋಟಿ ರೂ.ಗಳನ್ನು ವಿನಿಯೋಗಿಸಲು ಉದ್ದೇಶಿಸಲಾಗಿದೆ" ಎಂದು ಹೇಳಿದರು.
"ಕೌಶಲ್ಯಾಭಿವೃದ್ಧಿ ಇಲಾಖೆಯಡಿಯಲ್ಲಿ ಇದುವರೆಗೂ ಖಾಸಗಿ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಎಲ್ಲಾ ಕೌಶಲ್ಯ ತರಬೇತಿಯನ್ನು ನಮ್ಮ ITI, GTTC, Polytechnic ಸಂಸ್ಥೆಗಳ ಮೂಲಕವೇ ನೀಡಿ, Industry ಮತ್ತು Academy ಯನ್ನು ಸಮನ್ವಯಗೊಳಿಸಿ ಕೌಶಲ್ಯ ತರಬೇತಿಯನ್ನು ಹೆಚ್ಚಿನ ಸಾಂಸ್ಥೀಕರಣ ಹಾಗೂ ವ್ಯವಸ್ಥೀಕರಣಗೊಳಿಸಲಾಗುವುದು" ಎಂದು ಸಿದ್ದರಾಮಯ್ಯ ತಿಳಿಸಿದರು.
ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಅವರು, "ನಿರುದ್ಯೋಗವೆನ್ನುವುದು ದೇಶದ ಯುವಜನತೆಯ ಆತ್ಮಸ್ಥೈರ್ಯವನ್ನೇ ಕುಂದಿಸುತ್ತಿದೆ. ಇದನ್ನು ನಿವಾರಿಸಲು ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕೆಲಸ ಒಂದೆಡೆ ನಡೆಯಬೇಕು, ಮತ್ತೊಂದೆಡೆ ದೇಶದ ಯುವಜನರ ಔದ್ಯೋಗಿಕ ಕೌಶಲ್ಯವನ್ನು ವೃದ್ಧಿಪಡಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೈಗಾರಿಕೋದ್ಯಮವನ್ನು ಉತ್ತೇಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಿದ್ಧವಾಗಿದೆ" ಎಂದರು.
ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಕರ್ನಾಟಕದ ಅಗ್ರಸ್ಥಾನವನ್ನು ಮುಂದುವರೆಸಲು ಪೂರಕವಾಗಿ ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡಲು ಬೆಂಗಳೂರಿನ ಕಾಡುಗೋಡಿಯಲ್ಲಿ 100 ಎಕರೆ ಪ್ರದೇಶದಲ್ಲಿ Technology Innovation Park ಅನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ತಾಂತ್ರಿಕ ಸಂಶೋಧನಾ ಸಂಸ್ಥೆ ಸ್ಥಾಪನೆ ಜೊತೆಗೆ ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷೆ, ವಿನ್ಯಾಸ ಇತ್ಯಾದಿಗಳಿಗೆ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಯಾವುದೇ ಒಂದು ಉದ್ಯಮ ಪ್ರಾರಂಭಿಸಲು ಒಂದೇ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಬೇಕಾಗುವ ಎಲ್ಲಾ ಪರವಾನಗಿಗಳನ್ನು ಅದೇ ಪೋರ್ಟಲ್‌ನಲ್ಲಿ ಸಕಾಲದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಉದ್ಯಮಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.












Click it and Unblock the Notifications