Infosys Layoffs: ಇನ್ಫೋಸಿಸ್ ಟ್ರೈನಿಗಳು ವಜಾ, ಕೇಂದ್ರಕ್ಕೆ ದೂರು, 3 ಬೇಡಿಕೆಗಳು
ಮೈಸೂರು, ಫೆಬ್ರವರಿ 11: ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಿಂದ 300ಕ್ಕೂ ಅಧಿಕ ಟ್ರೈನಿಗಳನ್ನು ವಜಾಗೊಳಿಸಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಕೇಂದ್ರ ಕಾರ್ಮಿಕ ಇಲಾಖೆಗೆ ಐಟಿ ಉದ್ಯೋಗಿಗಳ ಸಂಘಟನೆ ಎನ್‌ಐಟಿಇಎಸ್ ದೂರು ಸಲ್ಲಿಕೆ ಮಾಡಿದೆ. ಉದ್ಯೋಗಿಗಳ ಹಿತ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಮೂರು ಬೇಡಿಕೆಗಳನ್ನು ಸಹ ಸಲ್ಲಿಕೆ ಮಾಡಿದೆ.
ಇನ್ಫೋಸಿಸ್ ವಿರುದ್ಧ ಕೇಂದ್ರ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಕೆ ಮಾಡಲಾಗಿದ್ದು ನಿಯಮಗಳನ್ನು ಮೀರಿ ಟ್ರೈನಿಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದೆ. ಕಾರ್ಮಿಕ ಕಾನೂನುಗಳನ್ನು ಕಂಪನಿ ಪಾಲನೆ ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕೇಂದ್ರ ಕಾರ್ಮಿಕ ಸಚಿವ ಮನ್‌ಸುಖ್ ಮಾಂಡವಿಯಾಗೆ ದೂರು ಸಲ್ಲಿಕೆ ಮಾಡಿರುವ ಎನ್‌ಐಟಿಇಎಸ್ ಟ್ರೈನಿಗಳು ಈಗಾಗಲೇ ಎರಡು ವರ್ಷದ ಅನುಭವ ಹೊಂದಿದ್ದಾರೆ. ಆದರೆ ಅವರು ಕಂಪನಿಗೆ ಸೇರಿಕೊಳ್ಳುವುದು ಎರಡು ವರ್ಷ ವಿಳಂಬ ಮಾಡಲಾಗಿದೆ ಎಂದು ದೂರಿದೆ.
ಕಾರ್ಮಿಕ ಕಾನೂನುಗಳನ್ನು ಪಾಲನೆ ಮಾಡದೇ ಟ್ರೈನಿಗಳನ್ನು ವಜಾಗೊಳಿಸುವ ಮೂಲಕ ಇನ್ಫೋಸಿಸ್ ಅಪಾಯಕಾರಿ ನಡೆಯನ್ನು ಪ್ರದರ್ಶಿಸಿದೆ. ಬೇರೆ ಕಂಪನಿಗಳು ಸಹ ಈ ರೀತಿ ಮಾಡಿದರೆ ಉದ್ಯೋಗಿಗಳ ಪರಿಸ್ಥಿತಿ ಏನು? ಎಂದು ದೂರಿನಲ್ಲಿ ಸಚಿವರ ಗಮನ ಸೆಳೆಯಲಾಗಿದೆ.
ಕಾರ್ಮಿಕ ಇಲಾಖೆಗೆ 3 ಬೇಡಿಕೆಗಳು: ಸಚಿವರಿಗೆ ನೀಡಿರುವ ದೂರಿನಲ್ಲಿ ಮೂರು ಬೇಡಿಕೆಗಳನ್ನು ಇಡಲಾಗಿದೆ. ಮೊದಲನೆಯದಾಗಿ ಕಾರ್ಖನೆ ಕಾರ್ಮಿಕ ಕಾನೂನು 1947 ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಮಿಕ ಇಲಾಖೆ ಕ್ರಮವನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
2ನೇ ಬೇಡಿಕೆಯಾಗಿ ಮುಂದೆ ಇಂತಹ ಉದ್ಯೋಗಿಗಳ ವಜಾ ತಡೆಯಲು ಕೇಂದ್ರ ಕಾರ್ಮಿಕ ಇಲಾಖೆ ಮಧ್ಯ ಪ್ರವೇಶ ಮಾಡಬೇಕು. ವಜಾ ಸಂದರ್ಭದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪಾಲನೆ ಮಾಡಬೇಕು ಎಂದು ಸೂಚನೆ ನೀಡಬೇಕು ಎಂದು ಎನ್‌ಐಟಿಇಎಸ್ ಹೇಳಿದೆ.
3ನೇ ಬೇಡಿಕೆಯಾಗಿ ಎನ್‌ಐಟಿಇಎಸ್ ಇನ್ಫೋಸಿಸ್ ಈಗಾಗಲೇ ವಜಾಗೊಳಿಸಿರುವ ಎಲ್ಲಾ ಟ್ರೈನಿಗಳನ್ನು ತಕ್ಷಣ ಕೆಲಸಕ್ಕೆ ಸೇರಿಸಿಕೊಳ್ಳಲು ಸೂಚನೆ ನೀಡಬೇಕು ಎಂದು ಸಚಿವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದೆ.
ಕಳೆದ ವಾರ ಇನ್ಫೋಸಿಸ್ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿಯಲ್ಲಿದ್ದ 300ಕ್ಕೂ ಅಧಿಕ ಟ್ರೈನಿಗಳನ್ನು ವಜಾಗೊಳಿಸಿದೆ. ಅಲ್ಲದೇ ಬೌನ್ಸರ್‌ಗಳ ಮೂಲಕ ಅವರನ್ನು ಕ್ಯಾಂಪಸ್‌ನಿಂದ ಹೊರ ಹಾಕಲಾಗಿದೆ ಎಂಬ ದೂರುಗಳು ಇವೆ. ಈ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಕಂಪನಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ಸಹ ನಡೆದಿತ್ತು.
ಈ ಕುರಿತು ಸ್ಪಷ್ಟನೆ ನೀಡಿದ್ದ ಇನ್ಫೋಸಿಸ್ ಟ್ರೈನಿಗಳು ತರಬೇತಿ ಬಳಿಕ ಆಂತರಿಕ ಮೌಲ್ಯ ಮಾಪನದಲ್ಲಿ ಉತ್ತೀರ್ಣರಾಗಬೇಕು. ಅಲ್ಲದೇ ಉತ್ತೀರ್ಣರಾಗಲು ಮೂರು ಬಾರಿ ಅವಕಾಶ ನೀಡಲಾಗುತ್ತದೆ. ಅನುತ್ತೀರ್ಣಗೊಂಡ ಟ್ರೈನಿಗಳು ಒಪ್ಪಂದದಂತೆ ಕಂಪನಿಯಲ್ಲಿ ಮುಂದುವರೆಯಲು ಅವಕಾಶವಿಲ್ಲ. ಎರಡು ದಶಕದಿಂದ ಈ ಮಾದರಿ ನೇಮಕಾತಿ ಪದ್ಧತಿ ಕಂಪನಿಯಲ್ಲಿ ಜಾರಿಯಲ್ಲಿದೆ ಎಂದು ಹೇಳಿತ್ತು.
ಇನ್ಫೋಸಿಸ್ ತನ್ನ ಮೈಸೂರು ಕ್ಯಾಂಪಸ್‌ನಿಂದ ಎಷ್ಟು ಟ್ರೈನಿಗಳನ್ನು ವಜಾಗೊಳಿಸಿದೆ ಎಂಬ ಕುರಿತು ಹಲವು ಗೊಂದಲಗಳಿವೆ. ಕೆಲವು ವರದಿಗಳ ಪ್ರಕಾರ 300ಕ್ಕೂ ಅಧಿಕ ಟ್ರೈನಿಗಳನ್ನು ವಜಾಗೊಳಿಸಲಾಗಿದೆ. ಕೆಲವು ವರದಿಗಳು 700ಕ್ಕೂ ಅಧಿಕ ಟ್ರೈನಿಗಳು ವಜಾಗೊಂಡಿದ್ದಾರೆ ಎಂದು ಹೇಳುತ್ತಿವೆ. ಆದರೆ ಈಗ ಕೇಂದ್ರ ಸರ್ಕಾರ ಟ್ರೈನಿಗಳ ಹಿತ ಕಾಪಾಡಲು ಯಾವ ಕ್ರಮ ಕೈಗೊಳ್ಳಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications