ಬರಪೀಡಿತ ತಾಲೂಕುಗಳಲ್ಲಿ ನರೇಗಾ ಅಡಿ 50 ದಿನದ ಹೆಚ್ಚುವರಿ ಕೆಲಸ

ಉಡುಪಿ, ಅಕ್ಟೋಬರ್ 04; ಕರ್ನಾಟಕ ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆ ಕೈ ಕೊಟ್ಟಿದೆ. ಮುಂಗಾರು ಹಂಗಾಮು ಸೆಪ್ಟೆಂಬರ್ 30ಕ್ಕೆ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಮಳೆ ಕೊರತೆಯ ಕಾರಣ ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲಾಗಿದೆ.

ಬರಪೀಡಿತ ತಾಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿಯಾಗಿ ಕಾಮಗಾರಿ ನಿರ್ವಹಿಸಲು ಅವಕಾಶವನ್ನು ನೀಡಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಕುಟುಂಬಕ್ಕೆ ಹೆಚ್ಚುವರಿಯಾಗಿ 50 ದಿನಗಳ ಅಂದರೆ ಒಟ್ಟು 150 ದಿನಗಳ ಉದ್ಯೋಗ ಒದಗಿಸಲು ಅವಕಾಶವಿದೆ.

Additional 50 Days Work Under NREGA At Drought Hit Taluks

ಉಡುಪಿ ಜಿಲ್ಲೆಯಲ್ಲಿ ಕಾರ್ಕಳ ಮತ್ತು ಬ್ರಹ್ಮಾವರ ತಾಲೂಕುಗಳನ್ನು ಸರ್ಕಾರದ ಆದೇಶದಂತೆ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಈ ತಾಲೂಕುಗಳಲ್ಲಿ 150 ದಿನಗಳ ಉದ್ಯೋಗ ಒದಗಿಸಲು ಅವಕಾಶವಿದ್ದು, ಇದರ ಸದುಪಯೋಗ ಪಡೆಯುವಂತೆ ಕರೆ ನೀಡಲಾಗಿದೆ.

ಯಾವ, ಯಾವ ಕಾಮಗಾರಿಗಳು; ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಆಧಿನಿಯಮದ ವಿಧಿ 3(4) ರಡಿ ನೀಡಿದ ಅಧಿಕಾರದನ್ವಯ 2022-2023ರ ಮಾಸ್ಟರ್ ಸುತ್ತೋಲೆಯ ಅಧ್ಯಾಯ 4.2.3ರ ಅನ್ವಯ ಬರಪೀಡಿತ ತಾಲೂಕುಗಳಲ್ಲಿ ನರೇಗಾ ಅಡಿ ಒಂದು ಕುಟುಂಬಕ್ಕೆ ಹೆಚ್ಚುವರಿಯಾಗಿ 50 ದಿನಗಳ ಅಂದರೆ ಒಟ್ಟು 150 ದಿನಗಳ ಉದ್ಯೋಗ ಒದಗಿಸಲು ಅವಕಾಶವನ್ನು ನೀಡಲಾಗಿದೆ.

ಯೋಜನೆಯಡಿ ಅನುಮತಿಸಿದ ಸಾರ್ವಜನಿಕ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶವಿದೆ. ವೈಯಕ್ತಿಕ ಕಾಮಗಾರಿಗಳಲ್ಲಿ ಉದಾಹರಣೆಗೆ ಮುಖ್ಯವಾಗಿ ದನದ ಕೊಟ್ಟಿಗೆ, ಕುರಿ, ಕೋಳಿ, ಹಂದಿ ಶೆಡ್‌ಗಳು, ಎರೆಹುಳು ತೊಟ್ಟಿ, ವಸತಿ ಯೋಜನೆಯಡಿ ಮಂಜೂರಾದ ಮನೆಗಳ ನಿರ್ಮಾಣ, ಮೀನು ಒಣಗಿಸುವ ಕಣ, ಕೃಷಿ ಹೊಂಡ, ಕೃಷಿ ಬಾವಿ ಮತ್ತು ಕೃಷಿ ಜಮೀನಿಗೆ ಸಂಬಂಧಿಸಿದ ಇತರೆ ಕಾಮಾಗಾರಿಗಳು, ಇಂಗು ಗುಂಡಿ ನಿರ್ಮಾಣ ಹಾಗೂ ತೋಟಗಾರಿಕಾ ಕಾಮಗಾರಿಗಳಾದ ಅಡಿಕೆ ತೋಟ ನಿರ್ಮಾಣ, ಪೌ‍ಷ್ಠಿಕ ತೋಟ ಮತ್ತು ಮುಂತಾದ ಕಾಮಗಾರಿ ನಿರ್ವಹಿಸಲು ಅವಕಾಶವಿರುತ್ತದೆ.

ಇನ್ನು ಸಾರ್ವಜನಿಕರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಯೋಜನೆಯಡಿ ಕೆಲಸ ಪಡೆಯಲು ಸಮೀಪದ ಗ್ರಾಮ ಪಂಚಾಯತಿ ಕಚೇರಿಯನ್ನು ಸಂಪರ್ಕಿಸಿ, ರೈತರು ಹಾಗೂ ಸಾರ್ವಜನಿಕರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಲಾಗಿದೆ.

ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳಹಾನಿ ಸಮೀಕ್ಷೆಯ (Ground Truthing)ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡು ಬಂದಿದೆ ಎಂದು ಹೇಳಿದೆ.

ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕು ಹಾಗೂ 34 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ತಾಲ್ಲೂಕು ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಘೋಷಿಸಿ ಆದೇಶಿಸಲಾಗಿದೆ.

2023ನೇ ಸಾಲಿನ ನೈಋತ್ಯ ಮುಂಗಾರು ರಾಜ್ಯ ಪ್ರವೇಶ ಮತ್ತು ವ್ಯಾಪಿಸಲು ಸಾಮಾನ್ಯ ದಿನಾಂಕಕ್ಕಿಂತ ಒಂದು ವಾರ ತಡವಾಗಿದೆ. ಜೂನ್ ಮಾಹೆಯಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ. 56 ಮಳೆ ಕೊರತೆ ಉಂಟಾಯಿತು. ಜುಲೈ ಮಾಹೆಯಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ.29 ಹೆಚ್ಚು ಮಳೆಯಾಗಿದ್ದು, ಈ ಮಳೆಯು ಕೇವಲ ಒಂದು ವಾರ ಮಾತ್ರ ಕೇಂದ್ರೀಕೃತವಾಗಿತ್ತು. ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂತ ಶೇ.73 ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿರುವುದು ಕಂಡು ಬಂದಿರುತ್ತದೆ ಎಂದು ಸರ್ಕಾರ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+