ಕರ್ನಾಟಕದಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಶ್ರಾವಣ ಮಾಸದಲ್ಲಿ ಕರ್ನಾಟಕದಲ್ಲಿ ಮಹಾ ಮಳೆ ಆರ್ಭಟ ಮುಂದುವರೆದಿದೆ. ಸತತ ಮಳೆಯಿಂದಾಗಿ ಉತ್ತರ ಕರ್ನಾಟಕದ ಜಲಾಶಯಗಳು ತುಂಬಿ ತುಳುಕತೊಡಗಿವೆ. ಬೆಳಗಾವಿ-ಪುಣೆ ರಾಷ್ಟ್ರೀಯ ಹೆದ್ದಾರಿ ಬಿರುಕು ಉಂಟಾಗಿದೆ. ಇತ್ತ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಬಿರುಸುಗೊಂಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಾಡಿನ ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು, ಜಲಾಶಯಗಳು ಭರ್ತಿಯಾಗಿವೆ. ಅನೇಕ ಕಡೆ ನದಿ ನೀರು ನಗರ ಪ್ರದೇಶಗಳಿಗೆ ನುಗ್ಗಿದ್ದು ಪ್ರವಾಹ ಭೀತಿ ಎದುರಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡ ಸತತವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಈ ನಡುವೆ ಕರ್ನಾಟಕದಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಲ್ಲಿ ತಿಳಿಯಿರಿ...
ಆಲಮಟ್ಟಿಯ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಿದ್ದು, ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಬಾಗಲಕೋಟೆ ಜಮಖಂಡಿ ತಾಲುಕಿನ ಮುತ್ತೂರು ಗ್ರಾಮ ನಡುಗಡ್ಡೆಯಾಗಿದೆ. ಜಮಖಂಡಿ ತಾಲೂಕಿನ ತುಬಚಿ, ಶೂರ್ಪಾಲಿ ಗ್ರಾಮಗಳ ಸಂಚಾರ ಮಾರ್ಗ ಬಂದ್ ಮಾಡಲಾಗಿದೆ. ನಾರಾಯಣಪುರ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ರಾಯಚೂರು ತಾಲೂಕಿನ ಆತ್ಕೂರು ಹಾಗೂ ಕುರ್ವಾಕುಲ ನಡುಗಡ್ಡೆ ನಡುವಿನ ಸೇತುವೆ ಮುಳುಗಡೆಯಾಗಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಹಾಗೂ ರಾಯಬಾಗ ತಾಲೂಕಿನ ಎರಡು ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ, ಅಥಣಿ, ರಾಯಭಾಗ ತಾಲೂಕಿನ ನದಿ ತೀರದ ಪ್ರವಾಹ ಭೀತಿ ಆವರಿಸಿದೆ.
ಆಗಸ್ಟ್ 05ರಂತೆ ಜಲಾಶಯಗಳ ನೀರಿನ ಮಟ್ಟ
ಕೆಆರ್‌ಎಸ್(ಪೂರ್ಣಮಟ್ಟ 124.80 ಅಡಿ): 45.05 ಟಿಎಂಸಿ ಸಾಮರ್ಥ್ಯವಿರುವ ಕೃಷ್ಣರಾಜಸಾಗರದಲ್ಲಿ ಇದುವರೆಗೆ 8.3ರಷ್ಟು ನೀರು ಮಾತ್ರ ಶೇಖರಣೆಯಾಗಿದೆ. ಕಳೆದ ವರ್ಷ 42.42 ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಒಳಹರಿವು 6511 ಕ್ಯೂಸೆಕ್ಸ್, ಹೊರಹರಿವು 9972 ಕ್ಯೂಸೆಕ್ಸ್‌ನಷ್ಟಿದೆ. 83.10 ಅಡಿಯಷ್ಟು ನೀರಿದೆ.
ಆಲಮಟ್ಟಿ (1704.81 ಅಡಿ): 1699.13 ಅಡಿ ನೀರು ಸಂಗ್ರಹ, 119.26 ಟಿಎಂಸಿ ಸಾಮರ್ಥ್ಯವಿದ್ದು 102.05 ಟಿಎಂಸಿ ನೀರು ಇದೆ. 150409 ಕ್ಯೂಸೆಕ್ಸ್ ಒಳ ಹರಿವು, 213453 ಕ್ಯೂಸೆಕ್ಸ್ ನೀರು ಹೊರ ಹರಿವಿದೆ.
ನಾರಾಯಣಪುರ(1615 ಅಡಿ): 1607.30 ಅಡಿ ನೀರು ಸಂಗ್ರಹ, 26.14 ಟಿಎಂಸಿ ಸಾಮರ್ಥ್ಯವಿದ್ದು 20.40 ಟಿಎಂಸಿ ನೀರು ಇದೆ. 196221 ಕ್ಯೂಸೆಕ್ಸ್ ಒಳ ಹರಿವು, 197936 ಕ್ಯೂಸೆಕ್ಸ್ ನೀರು ಹೊರ ಹರಿವಿದೆ.













Click it and Unblock the Notifications