ವಿನಾಯಕನಿಗೆ ವಿಶೇಷ ಅಲಂಕಾರ ಹೀಗಿರಲಿ

ಗಣೇಶನ ಹಬ್ಬಕ್ಕೆ ಅಲಂಕಾರ ಹೀಗಿರಲಿ:
1. ಈಶಾನ್ಯ ದಿಕ್ಕು: ಮನೆಯ ಈಶಾನ್ಯ ದಿಕ್ಕು ಏಳಿಗೆ ಮತ್ತು ಸಂತಸದ ಸಂಕೇತ. ಆದ್ದರಿಂದ ಈಶಾನ್ಯದ ಜಾಗದಲ್ಲಿ ಗಣೇಶನನ್ನು ಇಡಲು ಸಿದ್ಧತೆ ಮಾಡಿಕೊಳ್ಳಿ.
2. ಮಂಟಪ: ಮಂಟಪವಿದ್ದರೆ ಅದರಲ್ಲಿ ಕೂರಿಸಬಹುದು, ಇಲ್ಲವೆಂದರೆ ಸ್ಟೂಲ್ ಮೇಲೆ ಕೆಂಪು ಬಟ್ಟೆ ಹೊದಿಸಿ ಕೂಡ ಗಣೇಶನನ್ನು ಕೂರಿಸಬಹುದು.
3. ಬಣ್ಣದ ಪೇಪರ್: ಗಣೇಶನ ಹಿಂಭಾಗದ ಗೋಡೆಯನ್ನು ಬಿಳಿ ಕರ್ಟೇನ್ ಅಥವಾ ಬಟ್ಟೆಯಿಂದ ಮುಚ್ಚಿ ಅದಕ್ಕೆ ಹಸಿರು, ಕೆಂಪು, ಹಳದಿ ಬಣ್ಣದ ಅಲಂಕೃತ ಪೇಪರ್ ಗಳನ್ನು ಅಲಂಕಾರಕ್ಕೆ ಬಳಸಬಹುದು. ಇಲ್ಲವೆಂದರೆ ವಿವಿಧ ರೀತಿಯ ಹೂವುಗಳನ್ನು ತೂಗುಹಾಕಬಹುದು.
4. ಹಸಿರು ತೋರಣ: ಗಣೇಶನ ಅಲಂಕಾರಕ್ಕೆ ಹಸಿರು ಪೂರಕ. ಆದ್ದರಿಂದ ಪೂಜಾ ಕೋಣೆಗೆ, ಮನೆ ಬಾಗಿಲಿಗೆ ಹಸಿರು ತೋರಣ ಹಾಕುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.
5. ಹೂವಿನ ಅಲಂಕಾರ: ಗಣೇಶನ ಮುಂದೆ ರಂಗವಲ್ಲಿ ಬಿಡಿಸಿ ಹೂವಿನ ದಳಗಳಿಂದ ಅಲಂಕಾರ ಮಾಡಿ ಮಧ್ಯೆ ಪುಟ್ಟ ಹಣತೆಯನ್ನು ಇಡಬಹುದು.
6. ದೀಪಗಳು: ಪುಟ್ಟ ಪುಟ್ಟ ದೀಪಗಳನ್ನು ಗಣೇಶನ ಮುಂದೆ ವಿನ್ಯಾಸವಾಗಿ ಇಟ್ಟರೆ ನೋಡಲು ತುಂಬಾ ಚೆನ್ನಾಗಿರುತ್ತದೆ.
7. ಹಣ್ಣು ಮತ್ತು ಸಿಹಿ ತಿಂಡಿ: ಐದು ಬಗೆಯ ಹಣ್ಣುಗಳು, ತಯಾರಾಗಿರುವ ವಿವಿಧ ತಿಂಡಿಗಳನ್ನು ಪ್ರತ್ಯೇಕ ತಟ್ಟೆಗಳಲ್ಲಿ ಗಣೇಶನ ಮುಂದೆ ಇಡಬಹುದು.
8. ಅಕ್ಷತೆ ಮತ್ತು ನೈವೇದ್ಯ: ಗಣೇಶನ ಎರಡೂ ಬದಿಗಳಲ್ಲಿ ದೊಡ್ಡ ದೀಪಗಳನ್ನು ಇಟ್ಟು, ಅರಿಶಿನ ಕುಂಕುಮ, ಅಕ್ಷತೆ, ಹೂವು, ನೈವೇದ್ಯಕ್ಕೆ ಕಡಲೆ ಉಸುಳಿ ಮತ್ತು ಮೋದಕವನ್ನು ಇಡಬೇಕು.
9. ಐದು ಅಥವಾ ಒಂಭತ್ತು ಬಗೆ ಹೂವು ಮತ್ತು ಗರಿಕೆ, ಎಕ್ಕದ ಹೂವು: ಗಣೇಶನ ಅಲಂಕಾರಕ್ಕೆ ಐದು ಅಥವಾ ಒಂಭತ್ತು ಬಗೆಯ ಹೂವನ್ನು ಬಳಸಬಹುದು. ಗಣೇಶನ ಪೂಜೆಗೆ ಅತಿ ಅವಶ್ಯಕವಾದ ಗರಿಕೆ, ಜನಿವಾರ, ಎಕ್ಕದ ಹೂವಿನ ಹಾರ, ಅಕ್ಷತೆಯನ್ನು ಮರೆಯಬೇಡಿ.
ಈ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡ ಮೇಲೆ ಗಣಪನನ್ನು ಭಕ್ತಿಯಿಂದ ನಿರ್ಮಲ ಮನಸ್ಸಿನಿಂದ ಪೂಜಿಸಿ ಒಲಿಸಿಕೊಳ್ಳಿ.












Click it and Unblock the Notifications