Year Ender 2024: 2024ನೇ ವರ್ಷದ ಸೈಕೋ ಕಿಲ್ಲರ್‌ಗಳು, ಇವರ ಕಥೆಗಳು ಆತ್ಮ ನಡುಗಿಸುತ್ತೆ
2024ರಲ್ಲಿ ನೆನಪಿನಲ್ಲಿ ಉಳಿಯುವಂತಹ ಅನೇಕ ಘಟನೆಗಳು ನಡೆದಿವೆ. ಅವುಗಳಲ್ಲಿ ಕೆಲ ಖುಷಿ ಕೊಡುವ ಘಟನೆಗಳು ಆದರೆ ಇನ್ನೂ ಕೆಲ ಘಟನೆಗಳು ಭಯ ಹುಟ್ಟಿಸುವ ಘಟನೆಗಳಾಗಿವೆ. ಅಂತಹ 6 ಅಪರಾಧ ಪ್ರಕರಣಗಳು 2024ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಾಗಾದರೆ ಆ ಪ್ರಕರಣಗಳು ಯಾವುವು? ಇದರಲ್ಲಿ ಭಾಗಿಯಾದ ಸೈಕೋ ಕಿಲ್ಲರ್‌ಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಪತಿ ಮೇಲಿನ ಕೋಪಕ್ಕೆ 4 ವರ್ಷದ ಮಗುವನ್ನು ಕೊಂದ ಸುಚನಾ ಸೇಠ್
ಮೈಂಡ್‌ಫುಲ್ ಎಐ ಲ್ಯಾಬ್‌ನ ಸ್ಥಾಪಕಿ ಸುಚನಾ ಸೇಠ್ (39) ಎಂಬಾಕೆ ತನ್ನ ಮಗುವನ್ನು ಹತ್ಯೆ ಮಾಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದಳು. ಈಕೆ ಪತಿಯ ಮೇಲಿನ ಕೋಪಕ್ಕೆ ಗೋವಾದ ಹೋಟೆಲ್‌ವೊಂದರಲ್ಲಿ ತನ್ನ ನಾಲ್ಕು ವರ್ಷದ ಮುಗ್ಧ ಮಗನನ್ನು ಕೊಂದು ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಬೆಂಗಳೂರಿಗೆ ಕೊಂಡೊಯುತ್ತಿರುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು.

ಈಕೆ ಬೆಂಗಳೂರಿನಿಂದ ಗೋವಾಕ್ಕೆ ಪ್ರವಾಸಕ್ಕಾಗಿ ಹೋದಾಗ ಜನವರಿ 6ರಂದು ರಾತ್ರಿ ಮಗುವನ್ನು ಹೋಟೆಲ್‌ನಲ್ಲಿ ಕೊಂದಿದ್ದಳು. ಘಟನೆಯ ಬಳಿಕ ಸುಚನಾ ತನ್ನ ಪತಿಯಿಂದ ವಿಚ್ಛೇದನ ಬಯಸಿದ್ದಳು ಎನ್ನುವ ವಿಚಾರ ಗೊತ್ತಾಗಿದೆ. ಪತಿ ತನ್ನ ಮಗನನ್ನು ವಾರಕ್ಕೊಮ್ಮೆ ಭೇಟಿಯಾಗಬಹುದು ಎಂದು ನ್ಯಾಯಾಲಯ ಆದೇಶಿಸಿತ್ತು. ಆದರೆ ಸುಚನಾಗೆ ಇದು ಸ್ವಲ್ಪವೂ ಇಷ್ಟವಿರಲಿಲ್ಲ. ಹೀಗಾಗಿ ಮಗುವನ್ನೇ ಕೊಂದು ಬಿಟ್ಟಿದ್ದಾಳೆ ಈ ಪಾಪಿ ತಾಯಿ. ಪ್ರಸ್ತುತ ಸುಚನಾ ಜೈಲು ಸೇರಿದ್ದಾಳೆ. ಆಕೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ಬುಲಂದ್‌ಶಹರ್ ಪ್ರಕರಣ
ಎರಡನೇ ಪ್ರಕರಣ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿತ್ತು. ಇಲ್ಲಿ ಜೂನ್ ತಿಂಗಳಲ್ಲಿ ಸಂಜಯ್ ದತ್ ಅವರ ಅಭಿಮಾನಿ ಎಂದು ಕರೆದುಕೊಳ್ಳುವ ಸೈಕೋ ಕಿಲ್ಲರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದರು. ಹೆಸರು ಅದ್ನಾನ್ ಅಲಿಯಾಸ್ ಬಲ್ಲು. ಮದುವೆಯಾಗಿದ್ದರೂ ಬಲ್ಲು ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಆದರೆ ಆ ಮಹಿಳೆಗೂ ವಿವಾಹವಾಗಿತ್ತು. ಇಬ್ಬರಿಗೂ ಅನೈತಿಕ ಸಂಬಂಧವಿತ್ತು. ಆದರೆ ಅಷ್ಟರಲ್ಲಿ ಆತನ ಪ್ರೇಯಸಿ ಬೇರೆ ಗಂಡಸರ ಜೊತೆ ಮಾತನಾಡುತ್ತಾಳೆ ಎಂದು ತಿಳಿದ ಬಲ್ಲು ಕಂಗಾಲಾದ. ತನ್ನ ಗೆಳತಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಅವನಿಗೆ ಅನಿಸಿತ್ತು.

ಇದರಿಂದ ಕೋಪಗೊಂಡ ಬಲ್ಲು ತನ್ನ ಗೆಳತಿಯನ್ನು ಸ್ಮಶಾನದಲ್ಲಿ ಭೇಟಿಯಾಗಲು ಕರೆದಿದ್ದನು. ನಂತರ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಪೊಲೀಸರು ಆತನನ್ನು ಬಂಧಿಸಿದಾಗ ವಿಚಿತ್ರವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. 'ನಾನು ಸಂಜಯ್ ದತ್ ಅವರ ಅಭಿಮಾನಿ. ನನಗೆ ಮೋಸ ಇಷ್ಟವಿಲ್ಲ' ಎಂದು ಹೇಳಿದ್ದನು. ಪ್ರಸ್ತುತ ಬಲ್ಲು ಜೈಲಿನಲ್ಲಿದ್ದಾನೆ.
ಬರೇಲಿ ಪ್ರಕರಣ
ಮೂರನೇ ಪ್ರಕರಣ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿತ್ತು. ಇಲ್ಲಿ 11 ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರ ಪ್ರಕಾರ ಆರೋಪಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿ, ನಂತರ ಕತ್ತು ಹಿಸುಕಿ ಸಾಯಿಸುತ್ತಿದ್ದ. ಮೃತ ಮಹಿಳೆಯರ ಆಭರಣಗಳಲ್ಲಿ ಒಂದನ್ನು ನೆನಪಿಗಾಗಿ ತೆಗೆದುಕೊಳ್ಳುತ್ತಿದ್ದ.
ಬರೇಲಿ ಪೊಲೀಸರ ಪ್ರಕಾರ ಆರೋಪಿಯ ಹೆಸರು ಕುಲದೀಪ್ ಗಂಗ್ವಾರ್. ಅವರು ಬರೇಲಿಯ ನವಾಬ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಕರ್‌ಗಂಜ್ ಸಮುವಾ ಗ್ರಾಮದ ನಿವಾಸಿಯಾಗಿದ್ದನು. ಈತ ಮಾನಸಿಕವಾಗಿ ಚೆನ್ನಾಗಿರಲಿಲ್ಲ. ಕುಲದೀಪ್ ಭಾನ್‌ಪುರ ಗ್ರಾಮದ ನಿವಾಸಿ ಲಾಂಗ್‌ಶ್ರೀ ಅವರನ್ನು ವಿವಾಹವಾಗಿದ್ದರು. ಲಾಂಗ್‌ಶ್ರೀ ಎರಡನೇ ವಿವಾಹವಾಗಿ ಕುಲದೀಪ್ ಅವರನ್ನು ಬಿಟ್ಟು ಹೋದಳು. ಇದರಿಂದ ಕೋಪಗೊಂಡು ಮಾನಸಿಕ ಅಸ್ವಸ್ಥನಾದ ಕುಲದೀಪ್ ಮಹಿಳೆಯರನ್ನು ದ್ವೇಷಿಸಲು ಪ್ರಾರಂಭಿಸಿದ್ದನು. ಹೀಗಾಗಿ ಒಂಟಿಯಾಗಿ ಸಿಕ್ಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ನಂತರ ಅವರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದ. ಹೀಗೆ ಈತ 11 ಮಹಿಳೆಯರನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ.
ಕೋಲ್ಕತ್ತಾ ಪ್ರಕರಣ
ನಾಲ್ಕನೇ ಪ್ರಕರಣ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿತ್ತು. ಕೋಲ್ಕತ್ತಾ ಪೊಲೀಸರು ಆಗಸ್ಟ್ 10 ರಂದು ಸಂಜಯ್ ರಾಯ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಈತ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆರ್‌ಜಿ ಕರ್ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಬರ್ಬರವಾಗಿ ಕೊಂದಿದ್ದನು. ಸಂಜಯ್ ಪೊಲೀಸರ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಅಲ್ಲದೆ ಆತ 5 ಮದುವೆಗಳನ್ನು ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಆದರೆ ಆತ ಮದುವೆಯಾದ ಯಾವ ಹುಡುಗಿ ಕೂಡ ಆತನೊಂದಿಗೆ ಇರಲಿಲ್ಲ. ಎಲ್ಲ ಪತ್ನಿಯರಿಗೂ ಚಿತ್ರಹಿಂಸೆ ನೀಡುತ್ತಿದ್ದ ಎಂಬ ಆರೋಪ ಆತನ ಮೇಲಿದೆ. ಆತ ಅಪರಾಧ ಪ್ರವೃತ್ತಿ ಹೊಂದಿರುವ ವ್ಯಕ್ತಿ ಆದ್ದರಿಂದಲೇ ಯಾವ ಹೆಂಡತಿಯೂ ಅವನೊಂದಿಗೆ ಬಾಳಲು ಬಯಸಲಿಲ್ಲ. ಪ್ರಸ್ತುತ ಆತ ಕೋಲ್ಕತ್ತಾದ ವೈದ್ಯ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ. ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಕರ್ನಾಟಕ ಪ್ರಕರಣ
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸೆ.2ರಂದು ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮಹಾಲಕ್ಷ್ಮಿಗೆ ಮದುವೆಯಾಗಿತ್ತು. ಅವರಿಗೆ ಒಬ್ಬ ಮಗಳು ಇದ್ದಾಳೆ. ಆದರೆ ಆಕೆ ತನ್ನ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಮಹಾಲಕ್ಷ್ಮಿಗೆ ಒಬ್ಬ ಗೆಳೆಯ ಸಿಕ್ಕಿದ್ದ. ಆತನ ಹೆಸರು ರಂಜನ್ ರಾಯ್, ಒಡಿಶಾ ನಿವಾಸಿ. ಈತ ಮಹಾಲಕ್ಷ್ಮಿಯನ್ನು ಕೊಲೆ ಮಾಡಿ ನಂತರ ಶವವನ್ನು 59 ತುಂಡು ಮಾಡಿ ಫ್ರಿಡ್ಜ್ ನಲ್ಲಿಟ್ಟು ಓಡಿ ಹೋಗಿದ್ದನು. ಕೆಲ ದಿನಗಳ ನಂತರ ಫ್ಲಾಟ್‌ನಿಂದ ದುರ್ವಾಸನೆ ಬರಲಾರಂಭಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ರಂಜನ್ ರಾಯ್ ಅವರನ್ನು ಬಂಧಿಸಲು ಪೊಲೀಸರು ಒಡಿಶಾ ತಲುಪಿದಾಗ ರಂಜನ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆತ ಡೆತ್‌ನೋಟ್ ಬರೆದಿಟ್ಟು ಘಟನೆಯ ಬಗ್ಗೆ ವಿವರಿಸಿದ್ದನು. ಅದರಲ್ಲಿ ಮಹಾಲಕ್ಷ್ಮಿ ನನಗೆ ಚಿತ್ರಹಿಂಸೆ ನೀಡುತ್ತಿದ್ದರು. ನನಗೆ ಅದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಅದಕ್ಕಾಗಿಯೇ ಆಕೆಯನ್ನು ನಾನು ಕೊಂದೆ ಎಂದು ಉಲ್ಲೇಖಿಸಿದ್ದನು.
ಗುಜರಾತ್ ಪ್ರಕರಣ
ಆರನೇ ಪ್ರಕರಣ ಗುಜರಾತ್‌ನಲ್ಲಿ ನಡೆದಿತ್ತು. ಇಲ್ಲಿ ಗುಜರಾತ್ ಪೊಲೀಸರು ಸೈಕೋ ಕಿಲ್ಲರ್ ಅನ್ನು ಬಂಧಿಸಿದ್ದರು. ಕ್ರೌರ್ಯದ ಎಲ್ಲಾ ಮಿತಿಗಳನ್ನು ದಾಟಿದ ವ್ಯಕ್ತಿಯೊಬ್ಬ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಯಾರನ್ನೂ ಬಿಡದೆ ಕೊಲ್ಲುತ್ತಿದ್ದನು. ಬಾಲಕಿಯೊಬ್ಬಳನ್ನು ಕೊಲೆ ಮಾಡಿ ನಂತರ ಆಕೆಯ ಶವದ ಮೇಲೆ ಗಂಟೆಗಳ ಕಾಲ ಅತ್ಯಾಚಾರವೆಸಗಿದ್ದ.
ಕೊಲೆಗಾರ ಯಾವುದೇ ಒಂದು ರಾಜ್ಯದಲ್ಲಿ ಅಪರಾಧ ಮಾಡಿಲ್ಲ. ಬದಲಿಗೆ ಅವರು 5 ರಾಜ್ಯಗಳಲ್ಲಿ ಅಪರಾಧಗಳನ್ನು ಮಾಡಿರುವುದು ಕಂಡು ಬಂದಿದೆ. ಹಂತಕ ರಾಹುಲ್ ಸಿಂಗ್ ಜಾಟ್ (29) ಹರಿಯಾಣದ ರೋಹ್ಟಕ್ ನಿವಾಸಿಯಾಗಿದ್ದು, ಅಂಗವಿಕಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ರೈಲಿನಲ್ಲಿ ಕೊಲೆ ಮಾಡಿದ್ದೇನೆ ಮತ್ತು ರೈಲಿನಲ್ಲಿ ಅತ್ಯಾಚಾರ ಎಸಗಿದ್ದೇನೆ ಎಂದು ಹಂತಕ ಪೊಲೀಸರಿಗೆ ತಿಳಿಸಿದ್ದಾನೆ. ಇಷ್ಟು ಮಾತ್ರವಲ್ಲದೆ, ಆತನ ಬಂಧನಕ್ಕೆ ಕೇವಲ ಎರಡು ದಿನಗಳ ಮೊದಲು ತೆಲಂಗಾಣದಲ್ಲಿ ಮಹಿಳೆಯನ್ನು ಕೊಂದಿದ್ದ. 11 ದಿನಗಳಲ್ಲಿ ಒಟ್ಟು 5 ಕೊಲೆಗಳನ್ನು ಮಾಡಿ, ಸದ್ಯ ಅವರು ಜೈಲಿನಲ್ಲಿದ್ದಾರೆ.












Click it and Unblock the Notifications