Life Lesson: ಬದುಕಿನಲ್ಲಿ ಕೃತಜ್ಞತಾಭಾವ ಯಾಕೆ ಮುಖ್ಯ ಗೊತ್ತಾ?
ಅವಲಂಬನೆ ಎನ್ನುವುದು ಪ್ರಕೃತಿಯ ನಿಯಮವಾಗಿದೆ. ಪ್ರತಿಯೊಂದು ಜೀವಿಯೂ ಮತ್ತೊಂದು ಜೀವಿಯನ್ನು, ಪರಿಸರವನ್ನು ಅವಲಂಸಿಯೇ ಜೀವನ ಕಟ್ಟಿಕೊಂಡಿರುವಂತಹದ್ದು. ಮನುಷ್ಯನೂ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಇದಕ್ಕೆ ಪ್ರತಿಯಾಗಿ ನಾವು ಪರಿಸರಕ್ಕೆ ಏನು ಕೊಟ್ಟಿದ್ದೇವೆಂದು ನೋಡುವುದಾದರೆ ಏನೇನು ಇಲ್ಲ. ಹೀಗಾಗಿ ನಾವು ಪರಿಸರಕ್ಕೆ ಹಾಗೂ ನಮಗೆ ಸಹಾಯ ಮಾಡಿದವರಿಗೆ ಕನಿಷ್ಟಪಕ್ಷ ಕೃತಜ್ಞತಾಭಾವ ವ್ಯಕ್ತಪಡಿಸುವಂತಹ ಮನಃಸ್ಥಿತಿಯನ್ನಾದರು ಹೊಂದಬೇಕು. ಇದರಿಂದಾಗುವ ಪ್ರಯೋಜನವಾದರು ಏನು ಎಂಬುದನ್ನು ತಿಳಿಯಬೇಕೆ. ಈ ಸ್ಟೋರಿ ಓದಿ.
ಸಕಾರಾತ್ಮಕ ಚಿಂತನೆಗಳಿಗೆ ಪ್ರೇರಣೆ
ದುಡ್ಡನ್ನು ಸಂಪಾದನೆ ಮಾಡಬಹುದು. ಆದರೆ, ದುಡ್ಡಿದ್ದ ಮಾತ್ರಕ್ಕೆ ಎಲ್ಲವೂ ಸಿಗುವುದಿಲ್ಲ ಎಂಬುದು ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಮನದಟ್ಟಾಗಿದೆ. ಹೀಗಾಗಿ ನಾವು ತಿನ್ನುವ ಆಹಾರ ಪದಾರ್ಥಗಳನ್ನು ಬೆಳೆದವರಿಗೆ, ನಾವು ಓಡಾಡುವ ವಾಹನಗಳನ್ನು ತಯಾರಿಸಿದವರಿಗೆ, ಹೀಗೆ ನಾವು ಉಪಯೋಗಿಸುವ ಪ್ರತಿಯೊಂದು ವಸ್ತುಗಳ ಹಿಂದಿರುವ ಶ್ರಮಿಕರನ್ನು ಒಂದು ಕ್ಷಣ ಕಣ್ಮಚ್ಚಿ ನೆನೆದು ಕೃತಜ್ಞತಾಭಾವದಿಂದ ನೆನೆಯಬೇಕು. ಈ ರೀತಿ ಮಾಡುವುದರಿಂದ ನಮ್ಮೊಳಗೆ ಯಾರು ಮೇಲೂ ಅಲ್ಲ, ಯಾರು ಕೀಳು ಅಲ್ಲ, ಎಲ್ಲರೂ, ಎಲ್ಲ ಕೆಲಸಗಳು ಗ್ರೇಟ್ ಎಂಬ ಭಾವ ಮೂಡುತ್ತದೆ. ಎಲ್ಲರನ್ನು ಸಮಾನವಾಗಿ ಕಾಣುವಂತಹ ಸಕಾತ್ಮಕ ಚಿಂತನೆಗಳು ನಮ್ಮೊಳಗೆ ಮೂಡಲು ಸಹಾಯಕವಾಗುತ್ತದೆ.

ಪಾಸಿಟಿವ್ ಎನರ್ಜಿ
ಬೆಳಕನ್ನು ನೀಡುವ ಸೂರ್ಯನನ್ನು, ಆಮ್ಲಜನಕ ನೀಡುವ ಮರಗಿಡಗಳನ್ನು, ದಾಹ ನೀಗಿಸುವ ನೀರನ್ನು ಸೇರಿದಂತೆ ನಮಗೆ ಸಕಲ ಸೌಲಭ್ಯವನ್ನೆ ನೀಡಿರುವ ಪ್ರಕೃತಿಯನ್ನು ಕೃತಜ್ಞತಾ ಭಾವದಿಂದ ನೆನೆದರೆ ನಮ್ಮೊಳಗೆ ಪಾಸಿಟಿವ್ ಎನರ್ಜಿ ತುಂಬಿಕೊಳ್ಳುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಯಾಕೆಂದರೆ, ಇಡೀ ಭೂ ಮಂಡಲವೇ ಪಾಸಿಟಿವ್ ಎನರ್ಜಿಯಿಂದ ಕೂಡಿರುವಂತಹದ್ದಾಗಿರುತ್ತದೆ. ಇಂತಹ ಪ್ರಕೃತಿಗೆ ಕೃತಜ್ಞತೆಯಿಂದ ವಿನಿತರಾಗಿ ನಮಿಸಿದರೆ, ಧ್ಯಾನಿಸಿದರೆ ನಮ್ಮ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ಅದು ನಾವು ಮಾಡುವ ಕೆಲಸಗಳಲ್ಲೂ ಕಾಣುತ್ತದೆ.
ಸಮಚಿತ್ತದಿಂದ ಜೀವನ ನಡೆಸಲು ಪ್ರೇರಣೆ
ಇನ್ನು ಕೃತಜ್ಞತಾಭಾವನೆ ನಮ್ಮನ್ನು ಯಾವ ಹಮ್ಮು-ಬಿಮ್ಮು ಇಲ್ಲದೆ ಸಮಚಿತ್ತವಾದ ಭಾವನೆಯಿಂದ ಜೀವನ ನಡೆಸಲು ಪ್ರೇರಣೆ ನೀಡುತ್ತದೆ. ಯಾವುದೇ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧಕರಾಗಿರಬಹುದು. ಆದರೆ, ಆ ಸಾಧನೆಯ ಹಿಂದೆ ನಮ್ಮ ಪರಿಸರ ಸೇರಿದಂತೆ ನೂರಾರು ಜನರ ಸಹಾಯಹಸ್ತ ಇದೆ ಎಂಬುದನ್ನು ಅರಿತವನಿಗೆ, ಯಾವತ್ತೂ ನಾನೊಬ್ಬನೆ ಸರ್ವಶ್ರೇಷ್ಟನೂ ಎಂಬ ಭಾವನೆ ಮೂಡುವುದಿಲ್ಲ. ಎಲ್ಲರ ಸಹಕಾರದಿಂದ ಮಾತ್ರ ತನ್ನ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು. ಹೀಗಾಗಿ ತನಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತಾಭಾವನೆ ಸಲ್ಲಿಸುತ್ತಾನೆ. ಈ ಗುಣವು ಆತನನ್ನು ಕುಟುಂಬದ ಜೊತೆಗೆ, ಸಮಾಜದ ಪ್ರತಿಯೊಬ್ಬರ ಜೊತೆಗೆ ಸಮತೋಲನ ಭಾವದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ.
ಮಾನವೀಯ ಮೌಲ್ಯಗಳ ಬುನಾದಿ
ಪ್ರತಿಯೊಬ್ಬರ ಸಹಕಾರದಿಂದ ಮಾತ್ರ ಸಹಬಾಳ್ವೆ, ಸೌಹಾರ್ದ ಸಮಾಜದ ನಿರ್ಮಾಣ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಕೇವಲ ಒಂದು ಕೈಯಲ್ಲಿ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ. ಹಾಗೆಯೇ ಸಮಾಜದ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಹೊಂದುವುದು ಅಗತ್ಯವಿರುತ್ತದೆ. ಇದಕ್ಕೆ ನಮ್ಮೊಳಗಿರುವ ಕೃತಜ್ಞತಾಭಾವ ಬುನಾದಿಯಾಗಿ ಕಾರ್ಯನಿರ್ವಹಿಸಲಿದೆ. ನಮ್ಮ ಎದುರಿಗಿರುವವರು ಯಾವುದೇ ಜಾತಿ, ಧರ್ಮ, ವರ್ಗದ ವ್ಯಕ್ತಿಯಾಗಿದ್ದರೂ ಆತನೊಂದಿಗೆ ಕೃತಜ್ಞತಾಭಾವ ವ್ಯಕ್ತಪಡಿಸಿದರೆ, ಆ ಕಡೆಯಿಂದಲೂ ಅದೇ ರೀತಿಯ ಭಾವ ವ್ಯಕ್ತವಾಗುತ್ತದೆ. ಸುಂದರ ಸಮಾಜ ನಿರ್ಮಾಣಕ್ಕೆ ಪರಸ್ಪರದೊಂದಿಗೆ ಕೃತಜ್ಞತಾಭಾವ ವ್ಯಕ್ತಪಡಿಸುವುದರಿಂದ ಕಳೆದುಕೊಳ್ಳುದೇನು ಇಲ್ಲ ಅಲ್ವಾ?












Click it and Unblock the Notifications