Get Updates
Get notified of breaking news, exclusive insights, and must-see stories!

ಶ್ರೀರಂಗಪಟ್ಟಣದಲ್ಲಿ ಅಕ್ಟೋಬರ್‌ 4-7ರವರೆಗೆ ದಸರಾ ಆಚರಣೆ: ಇತಿಹಾಸ ಹೇಳುವುದೇನು?

ಮಂಡ್ಯ, ಸೆಪ್ಟೆಂಬರ್‌ 20: ಈಗ ಎಲ್ಲೆಡೆ ದಸರಾ ಆಚರಣೆಗೆ ಸಿದ್ಧತೆಗಳು ನಡೆಯಲಾರಂಭಿಸಿದ್ದು, ಕೆಲವೇ ದಿನಗಳಲ್ಲಿ ದಸರಾ ಸಂಬಂಧ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ. ಅದರಂತೆ ಮೈಸೂರು ದಸರಾ ಆರಂಭದ ಮೂಲವಾಗಿರುವ ಶ್ರೀರಂಗಪಟ್ಟಣದಲ್ಲಿಯೂ ದಸರಾ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಈ ಬಾರಿ ಅಕ್ಟೋಬರ್ 4 ರಿಂದ 7 ವರೆಗೆ ವಿಜೃಂಭಣೆಯಿಂದ ದಸರಾ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ ದಸರೆಗೆ ಸಂಬಂಧಿಸಿದ ಲೋಗೋ ಬಿಡುಗಡೆ ಮಾಡಲಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅದ್ಧೂರಿಯಾಗಿ ಜಂಬೂಸವಾರಿ ನಡೆಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ. ಈ ಬಾರಿಯ ದಸರಾದಲ್ಲಿ ಹೊಸದೊಂದು ಕಾರ್ಯಕ್ರಮವನ್ನು ಸೇರಿಸಲಾಗಿದ್ದು, ಹರಿದ್ವಾರ ಮತ್ತು ವಾರಣಾಸಿಯಲ್ಲಿ ನಡೆಯವ ಗಂಗಾರತಿಯಂತೆ ಕಾವೇರಿ ಆರತಿಯನ್ನು ಕೆ.ಆರ್.ಎಸ್ ನಲ್ಲಿ ಆರಂಭಿಸಲು ಚಿಂತನೆ ಮಾಡಲಾಗಿದೆ.

What Are The Speciality Of Srirangapatna Dasara Here Is The Interesting Information

ಇನ್ನು ಶ್ರೀರಂಗಪಟ್ಟಣದ ದಸರಾದ ಬಗ್ಗೆ ಹೇಳಬೇಕೆಂದರೆ, ಇಲ್ಲಿನ ದಸರಾಕ್ಕೆ ಸುಮಾರು 414 ವರ್ಷಗಳ ಇತಿಹಾಸವಿದೆ. ಇವತ್ತು ವಿಶ್ವವಿಖ್ಯಾತವಾಗಿರುವ ಮೈಸೂರು ದಸರಾ ಆರಂಭವಾಗಿದ್ದೇ ಶ್ರೀರಂಗಪಟ್ಟಣದಲ್ಲಿ ಎನ್ನುವುದೇ ಹೆಮ್ಮೆಯಾಗಿದೆ. ಮೈಸೂರು ದಸರಾದ ವೈಭವದಲ್ಲಿ ಕೆಲವು ವರ್ಷಗಳ ಕಾಲ ಶ್ರೀರಂಗಪಟ್ಟಣ ದಸರಾ ಕಳೆಗುಂದಿತ್ತಾದರೂ ಇತ್ತೀಚೆಗಿನ ವರ್ಷಗಳಲ್ಲಿ ವಿಜ್ರಂಭಣೆಯಿಂದ ನಡೆಸುತ್ತಾ ಬರಲಾಗುತ್ತಿದೆ. ಮಂಡ್ಯ ಜಿಲ್ಲಾಡಳಿತ ದಸರಾಕ್ಕೆ ಹೊಸ ಮೆರಗು ನೀಡಿದ್ದು ಎಲ್ಲರ ಗಮನಸೆಳೆಯುವಂತೆ ಆಚರಣೆ ಮಾಡಲಾಗುತ್ತಿದೆ.

ದಸರೆಗೆ ನಾಲ್ಕು ಶತಮಾನಗಳ ಇತಿಹಾಸ

ಇತಿಹಾಸದ ಪುಟಗಳನ್ನು ತಿರುವಿದರೆ ಶ್ರೀರಂಗಪಟ್ಟಣದ ದಸರಾ ಕುರಿತಂತೆ ಮಾಹಿತಿಗಳು ನಮಗೆ ಲಭ್ಯವಾಗುತ್ತವೆ. ಸುಮಾರು ನಾಲ್ಕು ಶತಮಾನಗಳ ಹಿಂದೆಯೇ ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರಂತೆ. ಆದರೆ ಅವರ ಸಾಮ್ರಾಜ್ಯ ಪತನಗೊಂಡ ಬಳಿಕ ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದ ಶ್ರೀರಂಗರಾಯರು ಶ್ರೀರಂಗಪಟ್ಟಣದಲ್ಲಿ ನವರಾತ್ರಿ ಉತ್ಸವವನ್ನು ಆಚರಿಸುತ್ತಿದ್ದರಲ್ಲದೆ, ಇವರು ಶ್ರೀರಂಗನಾಥಸ್ವಾಮಿ ದೇಗುಲದ ಪೂರ್ವ ದಿಕ್ಕಿನಲ್ಲಿ ಮಹಾನವಮಿ ದಿಬ್ಬವನ್ನು ನಿರ್ಮಿಸಿದ್ದರು ಎನ್ನಲಾಗಿದೆ.

What Are The Speciality Of Srirangapatna Dasara Here Is The Interesting Information

ಅವತ್ತಿನ ಕಾಲಘಟ್ಟದಲ್ಲಿ ಶ್ರೀರಂಗರಾಯರ ರಾಜ್ಯದ ಮೇಲೆ ದಂಡೆತ್ತಿ ಹೋದ ಮೈಸೂರು ರಾಜರಾದ ಯದುವಂಶದ ರಾಜಒಡೆಯರ್ ಶ್ರೀರಂಗಪಟ್ಟಣವನ್ನು ಯುದ್ಧದಲ್ಲಿ ಗೆದ್ದು ವಶಕ್ಕೆ ಪಡೆದುಕೊಂಡರು. ಆ ನಂತರ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ಇವರು ಮಹಾಯೋಧರೂ ಅದ್ಭುತ ಆಡಳಿತಗಾರರು, ಅಲ್ಲದೆ ಧರ್ಮನಿಷ್ಠೆಯುಳ್ಳವರೂ, ವಿದ್ಯಾತತ್ಪರರೂ, ಕಲಾಪೋಷಕರೂ ಆಗಿದ್ದರು. ಹೀಗಾಗಿ ಇವರು ಶ್ರೀರಂಗಪಟ್ಟಣವನ್ನು ಅಭಿವೃದ್ಧಿಪಡಿಸಿದ್ದಲ್ಲದೆ, ವಿಜಯನಗರ ಅರಸರಂತೆ ತಮ್ಮ ಅರಮನೆಯಲ್ಲಿಯೂ ದಸರಾ ಆಚರಣೆ ಮಾಡಲು ಮುಂದಾದರು.

1610ರಲ್ಲಿ ಮೊದಲ ದಸರಾ ಆಚರಣೆ

ರಾಜಒಡೆಯರ್ ಅವರು 1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸುವ ಮೂಲಕ ದಸರಾ ಆಚರಣೆಗೆ ಮುನ್ನುಡಿ ಬರೆದರು. ಆ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಲಾಯಿಸಿದರಲ್ಲದೆ ಆ ನಂತರದಲ್ಲಿ ಮೈಸೂರಿನಲ್ಲಿ ದಸರವನ್ನು ಆಚರಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಮೈಸೂರು ಮಹಾರಾಜರ ಆಡಳಿತದಲ್ಲಿ ಪ್ರಮುಖ ರಾಜಾಡಳಿತ ಪ್ರದೇಶವಾಗಿದ್ದ ಶ್ರೀರಂಗಪಟ್ಟಣ ಆಗ ಮೈಸೂರಿಗೆ ಸೇರಿತ್ತು.

ಸ್ವಾತಂತ್ರ್ಯ ನಂತರ ಜಿಲ್ಲಾ ವಿಂಗಡಣೆ ವೇಳೆ ಮೈಸೂರಿನೊಂದಿಗಿದ್ದ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಗೆ ಸೇರುವಂತಾಯಿತು. ಆದರೆ ದಸರಾ ಆಚರಣೆಯ ಮೂಲ ಸ್ಥಾನವಾದ ಶ್ರೀರಂಗಪಟ್ಟಣದಲ್ಲಿ ಪ್ರತಿವರ್ಷವೂ ಸಂಪ್ರದಾಯಬದ್ಧವಾಗಿ ದಸರಾವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಅದರಂತೆ ನಾಲ್ಕು ದಿನಗಳ ಕಾಲ ದಸರಾ ಆಚರಣೆ ನಡೆಯುತ್ತದೆ. ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಅಂಬಾರಿ ಹೊರುವ ಮಹೇಂದ್ರ ಆನೆ

ಆ ನಂತರ ವೈದಿಕರ ತಂಡ ಪ್ರಥಮವಾಗಿ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ, ಹಲವು ಪೂಜಾಕೈಂಕರ್ಯಗಳು ನಡೆಯುವ ಮೂಲಕ ದಸರಾ ವಿಧ್ಯುಕ್ತವಾಗಿ ಆರಂಭವಾಗುತ್ತದೆ. ಇದೇ ವೇಳೆ ಗಣಪತಿ ಹೋಮ, ನವಗ್ರಹ ಪೂಜೆ, ಪುಣ್ಯಾಹ, ಶಮಿಪೂಜೆ, ಚಾಮುಂಡಿ ಪೂಜೆ ಹಾಗೂ ಬನ್ನಿಮಂಟಪಕ್ಕೆ ಬನ್ನಿಪೂಜೆ ಕೂಷ್ಮಾಂಡ ಚೇಧನ, ಮಹಾಭಿಷೇಕ, ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ. ಈ ವೇಳೆ ಶ್ರೀ ಚಾಮುಂಡೇಶ್ವರಿ ಮೂರ್ತಿ ಹೊತ್ತ ರಥದೊಂದಿಗೆ ಆರಂಭಗೊಂಡ ದಸರಾ ಉತ್ಸವದಲ್ಲಿ ಕಳಶಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯುತ್ತದೆ.

ಈ ಮೆರವಣಿಗೆ ಕಿರಂಗೂರು ಗ್ರಾಮದ ಮಾರ್ಗವಾಗಿ ಬಾಬುರಾಯನಕೊಪ್ಪಲು, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ಪಟ್ಟಣದ ಕೋಟೆಯ ದ್ವಾರದ ಮೂಲಕ ರಾಜಬೀದಿಗಳಲ್ಲಿ ಮುಂದುವರೆಯುತ್ತಾ ಸಾಗಿ ರಂಗನಾಥ ಸನ್ನಿಧಿಯನ್ನು ತಲುಪುತ್ತದೆ. ಕಳೆದ ಕೆಲ ವರ್ಷಗಳಿಂದ ಆನೆ ಮೇಲೆ ಅಂಬಾರಿಯ ಮೆರವಣಿಗೆಯನ್ನು ನಡೆಸುತ್ತಾ ಬರಲಾಗುತ್ತಿದೆ. ಮೈಸೂರು ದಸರಾಕ್ಕೆ ಬಂದಿರುವ ಮಹೇಂದ್ರ ಎಂಬ ಸಾಕಾನೆ ಅಂಬಾರಿ ಹೊರುವ ಜವಬ್ದಾರಿ ಹೊತ್ತಿದ್ದಾನೆ. ಒಟ್ಟಾರೆ ಹೇಳುವುದಾದರೆ, ಶ್ರೀರಂಗಪಟ್ಟಣ ದಸರಾ ಅಂದಿನ ರಾಜವೈಭವತೆಗೆ ಸಾಕ್ಷಿಯಾಗಿದ್ದು, ಇವತ್ತಿನ ಐತಿಹಾಸಿಕ ಮೈಸೂರು ದಸರಾದ ತಾಯಿಬೇರು ಎಂದರೂ ತಪ್ಪಾಗಲಾರದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+