2021 ಫೆಬ್ರವರಿ ವಿಶೇಷ: ವೈರಲ್ ಫೋಟೋಗಳ ಹಿಂದಿನ ಕಥೆ
ನವದೆಹಲಿ, ಡಿಸೆಂಬರ್ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲೂ ರೈತರ ದಿಟ್ಟತನಕ್ಕೆ 2021ರ ವರ್ಷ ಸಾಕ್ಷಿ ಆಯಿತು. ಕೇಂದ್ರ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಅನ್ನದಾತರು ಮಳೆ, ಗಾಳಿ, ಚಳಿಗೆ ಅಂಜದೇ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗೆ ಕುಳಿತರು. ಮೈ ಕೊರೆಯುವ ಚಳಿಯಲ್ಲೂ ರೈತರ ಹೋರಾಟದ ಬಗ್ಗೆ ಹಲವು ಚಿತ್ರಗಳು ಸಾರಿ ಹೇಳುತ್ತಿದ್ದವು.
ಫೆಬ್ರವರಿ ತಿಂಗಳಿನಲ್ಲಿ ರೈತರ ಹೋರಾಟ, ಬೆಳೆ ಏರಿಕೆಯಿಂದ ಹೈರಾಣಾದ ಜನರ ಪ್ರತಿಭಟನೆ ಕೂಗು, ತಮಿಳುನಾಡು, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ನಾಯಕರ ಪ್ರಚಾರದ ಭರಾಟೆ ಹೀಗೆ ಸಾಕಷ್ಟು ಪ್ರಮುಖ ಘಟನೆಗಳು ನಡೆದು ಹೋಗಿವೆ.
2021ರ ವರ್ಷ ಹಲವು ಸಿಹಿ-ಕಹಿ ಘಟನೆಗಳಿಗೆ ಸಾಕ್ಷಿ ಆಗಿದೆ. ಫೆಬ್ರವರಿ ತಿಂಗಳಿನಲ್ಲಿ ನಡೆದ ಪ್ರಮುಖ ಘಟನೆಗಳನ್ನು ಸಾರಿ ಹೇಳುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದವು. ಇಂಥ ಪ್ರಮುಖ ಚಿತ್ರಗಳನ್ನು ಗುರುತಿಸುವುದು ಹಾಗೂ ಅವುಗಳ ಹಿಂದಿನ ಕಥೆಯನ್ನು ನಾವು ಇಲ್ಲಿ ಹೇಳುತ್ತೇವೆ.

ಮಳೆ, ಚಳಿ, ಗಾಳಿಗೆ ಅಂಜದೇ ರೈತರ ಹೋರಾಟ
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ನಿರಂತರವಾಗಿತ್ತು. 2020ರ ನವೆಂಬರ್ 26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಡೆಸಿದ ನಿರಂತರ ಪ್ರತಿಭಟನೆ ಯಾವ ಯುದ್ಧಕ್ಕೂ ಕಡಿಮೆಯಿರಲಿಲ್ಲ. ಮಳೆ, ಚಳಿ ಮತ್ತು ಬಿಸಿಲಿಗೂ ಅಂಜದೆ ದಿಟ್ಟತನ ಪ್ರದರ್ಶಿಸಿದ ರೈತರ ಹೋರಾಟದ ಹಾದಿ ಮುಳ್ಳಿನ ಹಾಸಿಗೆ ಆಗಿತ್ತು. ಸರ್ಕಾರದ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ ರೈತರು ಟ್ರಕ್ ವೊಂದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಈ ಫೋಟೋ ರೈತರ ದೃಢ ಸಂಕಲ್ಪಕ್ಕೆ ಸಾಕ್ಷಿ ಎನ್ನುವಂತಿದೆ.

ಕಾಂಗ್ರೆಸ್ ಮಹಿಳಾ ಕಾರ್ಯಕರ್ತರಿಂದ ಸಿಲಿಂಡರ್ ಹೊತ್ತು ಹೋರಾಟ
ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿರುವುದು ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿತು. ಬೆಲೆ ಏರಿಕೆ ಬಿಸಿಯಿಂದ ಹೈರಾಣಾದ ಜನರು ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆಗೆ ಮುಂದಾದರು. ಉತ್ತರಾಖಂಡದ ರಾಂಚಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಗ್ಯಾಸ್ ಸಿಲಿಂಡರ್ ಅನ್ನು ತೆಲೆ ಮೇಲೆ ಹೊತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ರಾಹುಲ್ ಗಾಂಧಿ
ಕಳೆದ 2021ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆ ಸಾಕಷ್ಟು ಕದನ ಕೌತುಕಕ್ಕೆ ಸಾಕ್ಷಿಯಾಗಿತ್ತು. ಪ್ರಾದೇಶಿಕ ಪಕ್ಷಗಳೇ ಪ್ರಾಬಲ್ಯವನ್ನು ಹೊಂದಿರುವ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸಿತು. ಫೆಬ್ರವರಿ 28ರಂದು ಪವೂರ್ ಚತ್ರಂನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭರ್ಜರಿ ಪ್ರಚಾರ ನಡೆಸಿದರು. ತೆರೆದ ವಾಹನದಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ರಾಹುಲ್ ಗಾಂಧಿ ಕೈ ಬೀಸುತ್ತಿರುವ ಚಿತ್ರ ಸಾಕಷ್ಟು ವೈರಲ್ ಆಗಿತ್ತು. ಅಂದು ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೆರೆದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಭವಿಷ್ಯವನ್ನು ಹೊಂದಿದೆ ಎನ್ನುವ ನಿಟ್ಟಿನಲ್ಲಿ ಬಿಂಬಿಸಲಾಗಿತ್ತು.

ಎಡಪಕ್ಷ ಮತ್ತು ಕಾಂಗ್ರೆಸ್ ಜಂಟಿ ಚುನಾವಣಾ ಮೆರವಣಿಗೆ
ಫೆಬ್ರವರಿ ತಿಂಗಳಿನಲ್ಲೇ ಪಶ್ಚಿಮ ಬಂಗಾಳದಲ್ಲೂ ವಿಧಾನಸಭೆ ಚುನಾವಣೆ ಕಾವು ಪಡೆದುಕೊಂಡಿತ್ತು. ಕೋಲ್ಕತ್ತಾದಲ್ಲಿ ಫೆಬ್ರವರಿ 28ರಂದು ಎಡರಂಗ ಮತ್ತು ಕಾಂಗ್ರೆಸ್ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಭಾನುವಾರ ಸಿಪಿಐ(ಎಂ), ಎಡರಂಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬ್ರಿಗೇಡ್ ಪರೇಡ್ ಮೈದಾನದ ಕಡೆಗೆ ಪ್ರಚಾರದ ಮೆರವಣಿಗೆ ನಡೆಸಿದರು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರು.

ಶ್ರೀಹರಿಕೋಟಾದಲ್ಲಿ ಹಾರಿದ PSLV-C51
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬ್ರೆಜಿಲ್‌ನ ಅಮೆಜೋನಿಯಾ-1 ಉಪಗ್ರಹವನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ PSLV-C51 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಕಾಶಕ್ಕೆ ಹಾರಿತು.












Click it and Unblock the Notifications