Explained: ಮಹಾರಾಷ್ಟ್ರದಲ್ಲಿ ಆ 40 ಶಾಸಕರ ಸಹಿ ಸರ್ಕಾರಕ್ಕೆ ಆಗುತ್ತಾ ಕಹಿ!?
ಮುಂಬೈ, ಜೂನ್ 22: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಸಿಡಿದೆದ್ದ ಸಚಿವ ಏಕನಾಥ್ ಶಿಂಧೆ ಪರವಾಗಿ ಶಿವಸೇನೆಯ 33 ಶಾಸಕರು ಸೇರಿದಂತೆ 7 ಮಂದಿ ಪಕ್ಷೇತರ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ನಡೆಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಬಂಡಾಯ ಶಾಸಕರು ಒಟ್ಟಾಗಿ ಪತ್ರ ಬರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟಗಳೇನು?, ಏಕನಾಥ್ ಶಿಂಧೆ ಮುನಿಸಿನ ಹಿಂದಿನ ಅಸಲಿ ಕಾರಣವೇನು?, ಶಿವಸೇನೆಯಲ್ಲಿ ಹೊತ್ತಿಕೊಂಡ ಅಸಮಾಧಾನದ ಹಿಂದೆ ಬಿಜೆಪಿಯ ಪಾತ್ರವೇನು?, ಏಕನಾಥ್ ಶಿಂಧೆಯ ಕುರಿತು ಕೇಸರಿ ನಾಯಕರು ಹೇಳುವುದೇನು? ಹೀಗೆ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಜಿದ್ದಾಜಿದ್ದಿನ ಕುರಿತು ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
|
ಸೂರತ್‌ನಲ್ಲಿ ಬಂಡಾಯ ಶಾಸಕರ ದಂಡು ಹೇಗಿದೆ?
ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮುನಿಸಿಕೊಂಡ ನಂತರದಲ್ಲಿ ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆ ಆರಂಭದಲ್ಲಿ 10 ರಿಂದ 12 ಶಾಸಕರನ್ನು ಕರೆದುಕೊಂಡು ಗುಜರಾತಿನ ಸೂರತ್ ರೆಸಾರ್ಟಿಗೆ ತಲುಪಿದರು. ಅಲ್ಲಿಂದ ರಾಜಕೀಯ ಬಿಕ್ಕಟ್ಟು ಶುರುವಾಯಿತು. ಮಹಾ ವಿಕಾಸ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಶಾಸಕರನ್ನು ಕ್ರೂಢೀಕರಿಸುವ ಕೆಲಸ ಮಾಡಿದರು. ಬಿಜೆಪಿಯ ಜೊತೆಗೆ ಕೈ ಜೋಡಿಸುವಂತೆ ಸಿಎಂ ಉದ್ಧವ್ ಠಾಕ್ರೆಗೆ ಸಂದೇಶ ರವಾನಿಸಲಾಯಿತು. ಸೂರತ್ ರೆಸಾರ್ಟ್ ನಲ್ಲಿ ಒಟ್ಟಾಗಿ 40 ಶಾಸಕರನ್ನು ಸೇರಿಸಿರುವ ವಿಡಿಯೋವೊಂದು ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿತು.

ಬಂಡಾಯ ನಾಯಕ ಏಕನಾಥ್ ಶಿಂಧೆ ಪರ ಸಹಿ ಸಂಗ್ರಹ
ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಪರವಾಗಿ 7 ಮಂದಿ ಪಕ್ಷೇತರ ಶಾಸಕರು ಹಾಗೂ 33 ಶಿವಸೇನೆ ಶಾಸಕರು ಸಹಿ ಸಂಗ್ರಹಿಸುವ ಕೆಲಸ ಮಾಡಿದರು. ಆ ಮೂಲಕ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಬೆಂಬಲವಿಲ್ಲ ಎನ್ನುವ ಸಂದೇಶ ಸಾರಿದರು. ಇದರ ಜೊತೆಗೆ ವಿಶ್ವಾಸ ಮತಯಾಚನೆಗಾಗಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿಗೆ ಪತ್ರ ಬರೆಯುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಶಿವಸೇನೆ ಶಾಸಕರನ್ನು ಸ್ವಾಗತಿಸಿದ ಬಿಜೆಪಿ ಶಾಸಕ ಸುಶಾಂತ್
ಏಕನಾಥ್ ಶಿಂಧೆ ತಮ್ಮ ಶಿವಸೇನೆ ಬೆಂಬಲಿತ ಶಾಸಕರು ಹಾಗೂ ಪಕ್ಷೇತರ ಶಾಸಕರೊಂದಿಗೆ ಗುವಾಹಟಿಗೆ ತೆರಳಿದರು. ಸಮ್ಮಿಶ್ರ ಸರ್ಕಾರದ ವಿರುದ್ಧ ಮುನಿಸಿಕೊಂಡು ಸೂರತ್ ನಿಂದ ಗುವಾಹಟಿಗೆ ತೆರಳಿದ ಶಿವಸೇನೆ ಶಾಸಕರನ್ನು ಬಿಜೆಪಿ ಶಾಸಕ ಸುಶಾಂತ್ ಬೊರ್ಗೊಹೆನ್ ಮತ್ತು ಸಂಸದ ಪಲ್ಲಾಬ್ ಲೋಚನ್ ದಾಸ್ ಸ್ವಾಗತಿಸಿದರು. ಗುವಾಹಟಿ ತಲುಪುವುದಕ್ಕೂ ಮುನ್ನ ಶಾಸಕರ ಸಹಿ ಸಂಗ್ರಹದ ವಿಡಿಯೋವನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲಿಯವರೆಗೂ ಏಕನಾಥ್ ಜೊತೆಗೆ 10 ರಿಂದ 15 ಶಾಸಕರು ಇರಬಹುದು ಎಂದು ಹೇಳುತ್ತಿದ್ದ ಶಿವಸೇನೆಯೇ ಕಕ್ಕಾಬಿಕ್ಕಿ ಆಯಿತು.

ಶಿವಸೇನೆ ಬಿಕ್ಕಟ್ಟಿನ ಕುರಿತು ಶರದ್ ಪವಾರ್ ಹೇಳಿದ್ದೇನು?
ಮಹಾರಾಷ್ಟ್ರದ ಆಡಳಿತ ಮೈತ್ರಿಕೂಟದ ಭಾಗವಾಗಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯಲ್ಲಿನ ಬಿಕ್ಕಟ್ಟು ಅವರ ಆಂತರಿಕ ವಿಷಯ ಎಂದು ಹೇಳಿದರು. ಶಿವಸೇನೆ ಎದ್ದಿರುವ ಬಿರುಗಾಳಿಯ ಹಿಂದೆ ಇದೇ ಶರದ್ ಪವಾರ್ ಪಾತ್ರವಿರುವ ಬಗ್ಗೆ ಊಹಾಪೋಹಗಳು ಸೃಷ್ಟಿಯಾದ ಹಿನ್ನೆಲೆ ಸ್ಪಷ್ಟನೆ ನೀಡಿದ ಅವರು, ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುವುದಕ್ಕೆ ಮೂರು ಪಕ್ಷಗಳು ಸಂಪೂರ್ಣ ಬದ್ಧವಾಗಿವೆ ಎನ್ನುವ ಹೇಳಿಕೆ ನೀಡಿದರು.

ರಾಜ್ಯ ಮೇಲ್ಮನೆ ಚುನಾವಣೆಯಲ್ಲಿ ಅಡ್ಡ ಮತದಾನ
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದಿಂದ ಈ ರಾಜಕೀಯ ಜಿದ್ದಾಜಿದ್ದು ಪ್ರಾರಂಭವಾಯಿತು. ರಾಜ್ಯದ 10 ಪರಿಷತ್ ಸ್ಥಾನಗಳಿಗೆ ಕಳೆದ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯು 5 ಸ್ಥಾನಗಳನ್ನು ಬಾಚಿಕೊಂಡಿತು. ಶಿವಸೇನೆ ಎರಡು ಸ್ಥಾನಗಳನ್ನು ಗೆದ್ದುಕೊಂಡರೆ, ಎನ್ ಸಿಪಿ ಎರಡು ಹಾಗೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತು. ಈ ಪರಿಷತ್ ಚುನಾವಣೆ ಮುಗಿಯುತ್ತಿದ್ದಂತೆ ಶಿವಸೇನೆ ವಿರುದ್ಧ ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆ ತಮ್ಮ ಬೆಂಬಲಿತ ಶಾಸಕರೊಂದಿಗೆ ಸೂರತ್ ರೆಸಾರ್ಟ್ ಕಡೆಗೆ ಮುಖ ಮಾಡಿದರು. ಶಾಸಕರ ಮುನಿಸು ಮರೆಸಲು ಉದ್ಧವ್ ಠಾಕ್ರೆ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಿಲ್ಲಿಂದ್ ನರ್ವೇಕರ್ ಮತ್ತು ರವೀಂದ್ರ ಪಾಠಕ್ ಸೂರತ್ ರೆಸಾರ್ಟ್ ತಲುಪಿ, ಶಿಂಧೆ ಜೊತೆಗೆ ಸಂಧಾನ ಸಭೆ ನಡೆಸಿದರು.

ಏಕನಾಥ್ ಶಿಂಧೆ ಬಂಡಾಯದ ಕುರಿತು ಹೇಳಿದ ಮಾತು
ರಾಜ್ಯದಲ್ಲಿ ಸರ್ಕಾರ ರಚಿಸುವುದಕ್ಕಾಗಿ ಶಿವಸೇನೆಯು ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆಗೆ ಕೈ ಜೋಡಿಸಿದೆ. "ನಾವು ಬಾಳಾ ಸಾಹೇಬ್ ಸಂಘದ ನಿಷ್ಠಾವಂತ ಶಿವ ಸೈನಿಕರು, ಬಾಳಾ ಸಾಹೇಬ್ ನಮಗೆ ಹಿಂದುತ್ವದ ಪಾಠ ಮಾಡಿದ್ದಾರೆ. ಅಧಿಕಾರಕ್ಕಾಗಿ ನಾವು ಬಾಳಾ ಸಾಹೇಬ್ ಅವರ ತತ್ವ ಸಿದ್ಧಾಂತ ಮತ್ತು ಆಲೋಚನೆಗಳನ್ನು ಎಂದಿಗೂ ಮುರಿಯುವುದಿಲ್ಲ. ಆನಂದ್ ದಿಘೆ ಸಾಹೇಬ್ ನೀತಿಗಳಿಗೆ ವಂಚಿಸುವುದಿಲ್ಲ," ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.
ಈ ಎಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿದ್ದ ಶಿವಸೇನೆ ಎಂಬ ಪಕ್ಷದ ಹೆಸರನ್ನೇ ಏಕನಾಥ್ ಶಿಂಧೆ ತೆಗೆದಿದ್ದಾರೆ. 2014ರಲ್ಲಿ ಮೊದಲು ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿದ್ದ ಶಿಂಧೆ, ಮಹಾ ವಿಕಾಸ ಅಘಾಡಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆ ಆದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಏಕನಾಥ್ ಶಿಂಧೆಯನ್ನು ಸೈಡ್ ಲೈನ್ ಮಾಡಲಾಯಿತು. ಶಿಂಧೆ ಮಾತುಗಳಿಗೆ ಸರ್ಕಾರದಲ್ಲಿ ಕಿಮ್ಮತ್ತು ಇಲ್ಲದಂತಾಗಿದ್ದು, ಸರ್ಕಾರದ ವಿರುದ್ಧ ಸಿಡಿದು ಏಳುವುದಕ್ಕೆ ಕಾರಣವಾಗಿತ್ತು.

ರಾಜ್ಯದಲ್ಲಿ ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಬಿಜೆಪಿ
ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಹಾಗೂ ಬೆಂಬಲಿತ ಶಾಸಕರು ಬಿಜೆಪಿಯ ಜೊತೆಗೆ ಕೈ ಜೋಡಿಸುವುದಾದರೆ ಅವರನ್ನು ಸ್ವಾಗತಿಸಲು ನಾವು ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಶಿವಸೇನೆಯಲ್ಲಿ ನಡೆಯುತ್ತಿರುವ ತಿಕ್ಕಾಟದ ಮಧ್ಯ ಬಿಜೆಪಿಯು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಈ ಹಂತದಲ್ಲಿ ಶಿಂಧೆ ಹಾಗೂ ಬೆಂಬಲಿತ ಶಾಸಕರಿಗೆ ಬಿಜೆಪಿಯಿಂದ ಯಾವುದೇ ಆಫರ್ ಕೊಟ್ಟಿಲ್ಲ. ರಾಜ್ಯದಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಸಣ್ಣ ಪಕ್ಷಗಳು ಮತ್ತು ಪಕ್ಷೇತರ ಶಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
"ರಾಜ್ಯದಲ್ಲಿ ಈಗ ಶಿಂಧೆ ಬೆಂಬಲಿತ 35 ಶಾಸಕರು ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಅರ್ಥ ಸರ್ಕಾರವು ತಾಂತ್ರಿಕವಾಗಿ ಅಲ್ಪಮತಕ್ಕೆ ಕುಸಿದಿದೆ, ಆದರೆ ಈ ಕುರಿತು ಸ್ಪಷ್ಟನೆಯಿಲ್ಲ. ಮುಂದೆ ಏನಾಗುತ್ತದೆ ಎಂಬುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಬಿಜೆಪಿಯು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದು, ಇದುವರೆಗೂ ಬಿಜೆಪಿಯ ಎದುರಿಗೆ ಯಾವುದೇ ಪ್ರಸ್ತಾಪಗಳು ಬಂದಿಲ್ಲ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

ಸರ್ಕಾರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳಿವೆ?
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಒಟ್ಟು 288 ಸ್ಥಾನಗಳಿದ್ದು, ಒಬ್ಬ ಶಾಸಕರು ವಿಧಿವಶವಾದ ಹಿನ್ನೆಲೆ ಈ ಸಂಖ್ಯೆಯು 287ಕ್ಕೆ ತಗ್ಗಿದೆ. ಹೀಗಾಗಿ ಸರ್ಕಾರದ ಬಹುಮತಕ್ಕೆ ಕನಿಷ್ಠ 144 ಸ್ಥಾನಗಳು ಬೇಕಾಗುತ್ತದೆ. ಬಿಜೆಪಿಯು 106 ಶಾಸಕರನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಆದರೆ 55 ಶಾಸಕರನ್ನು ಹೊಂದಿರುವ ಶಿವಸೇನೆ, 53 ಶಾಸಕರನ್ನು ಹೊಂದಿರುವ ಎನ್ ಸಿಪಿ ಮತ್ತು 44 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಜೊತೆ ಮೂವರು ಶಾಸಕರನ್ನು ಹೊಂದಿರುವ ಬಹುಜನ ವಿಕಾಸ ಅಘಾಡಿ ಪಕ್ಷಗಳು ಒಟ್ಟಾಗಿ ಸೇರಿಕೊಂಡು ಮಹಾ ವಿಕಾಸ ಅಘಾಡಿ ಎಂದ ಸಮ್ಮಿಶ್ರ ಸರ್ಕಾರವನ್ನು ರಚಿಸಿವೆ.
ಮಹಾ ವಿಕಾಸ ಅಘಾಡಿ ಒಕ್ಕೂಟವು 169 ಶಾಸಕರ ಬೆಂಬಲವನ್ನು ಹೊಂದಿದೆ. ಇನ್ನೊಂದು ಮಗ್ಗಲಿನಲ್ಲಿ ಬಿಜೆಪಿಯು 106 ಸ್ಥಾನಗಳ ಜೊತೆಗೆ ಮಿತ್ರಪಕ್ಷಗಳು ಹಾಗೂ ಐದು ಇತರೆ ಶಾಸಕರು ಸೇರಿದಂತೆ ಒಟ್ಟು 113 ಶಾಸಕರ ಬೆಂಬಲವನ್ನು ಹೊಂದಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications