Success Story: ಬಡತನದಲ್ಲೇ ಬೆಂದರೂ ಶಾಲೆ ಕಟ್ಟಿ ಬೆಳೆಸಿದ ಸಾಧಕಿ
ಗ್ರಾಮೀಣ ಬದುಕು, ಹಸಿವು, ಸರ್ಕಾರಿ ಶಾಲೆ ಕಲಿಸುವ ಬದುಕಿನ ಪಾಠಗಳನ್ನು ಯಾವ ಕಾಲೇಜು, ವಿಶ್ವವಿದ್ಯಾಲಯಗಳು ಕಲಿಸಲಾರವು ಎಂಬುದನ್ನು ಹಿರಿಯರು ಹೇಳುತ್ತಿರುತ್ತಾರೆ. ಅದರ ಜೊತೆಗೆ ಸಾಧಿಸಬೇಕೆಂಬ ಛಲ, ಶ್ರದ್ಧೆ, ನಿರಂತರ ಪ್ರಯತ್ನ ಹಾಕಿದರೆ ಯಾವುದು ಕಷ್ಟ ಆಗಲಾರದು ಎಂಬುದಕ್ಕೆ ಬೇಗೂರಿನ ವಿಶ್ವಪ್ರಿಯಾ ಲೇಔಟ್‌ನಲ್ಲಿರುವ ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್ ಸಂಸ್ಥಾಪಕಿ ನೇತ್ರಾವತಿ ಹರಿಕತೆ ಅವರ ಬದುಕು ಮಾದರಿಯಾಗಿದೆ.
ಶಾಲಾ ಕಾಲೇಜುಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು, ರ್‍ಯಾಂಕ್ ಪಟ್ಟಿಯಲ್ಲಿ ಅಲಂಕೃತಗೊಂಡವರು ಮಾತ್ರ ಪ್ರತಿಭಾವಂತರು. ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮನಃಸ್ಥಿತಿ ನಮ್ಮ ಸಮಾಜದಲ್ಲಿ ಈಗಲೂ ಇದೆ. ಇಂತಹ ಮನಃಸ್ಥಿತಿಗಳ ನಡುವೆ ಮನೆಯವರಿಂದಲೇ ದಡ್ಡ ವಿದ್ಯಾರ್ಥಿನಿಯೆಂದು ಕರೆಸಿಕೊಳ್ಳುತ್ತಿದ್ದ ನೇತ್ರಾವತಿ ಅವರು, ರ್‍ಯಾಂಕ್ ಪಡೆದ ಮಾತ್ರಕ್ಕೆ ಸಾಧಕರಾಗುವುದಿಲ್ಲ. ಸ್ಪಷ್ಟವಾದ ಗುರಿಯನಿಟ್ಟುಕೊಳ್ಳಬೇಕು ಹಾಗೂ ತಮ್ಮಲ್ಲಿ ಸೂಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡರೆ ಯಾರು ಬೇಕಾದರೂ ಹಂತ ಹಂತವಾಗಿ ಸಾಧನೆಯ ಮೆಟ್ಟಿಲುಗಳನ್ನು ಹತ್ತಬಹುದೆಂಬುದನ್ನು ತಮ್ಮ ಅನುಭವಗಳ ಮೂಲಕ ಹಂಚಿಕೊಂಡಿದ್ದು ಹೀಗೆ....

ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್ ಸ್ಥಾಪನೆಗೆ ಪ್ರೇರಣೆ
ಮೂರು ಮಕ್ಕಳನ್ನು ಹುಟ್ಟಿಸಿದ್ದೆ ಅಪ್ಪನ ಹೆಚ್ಚುಗಾರಿಕೆ. ಉಳಿದಂತೆ ಅಪ್ಪ ಮತ್ತೊಂದು ಮದುವೆ ಮಾಡಿಕೊಂಡು ಅಮ್ಮನನ್ನು, ಮೂರು ಮಕ್ಕಳನ್ನು ನಡುನೀರಿನಲ್ಲಿ ಕೈ ಬಿಟ್ಟು ಹೋದರು. ಈ ಸಂದರ್ಭದಲ್ಲಿ ಅಮ್ಮ ಗಾರ್ಮೆಂಟ್ಸ್ ನಲ್ಲಿ ದುಡಿದು ನಮ್ಮನ್ನು ಸಾಕಿದಳು. ಚಿಕ್ಕದೊಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು. ಅದು ಎಷ್ಟು ಚಿಕ್ಕದಿತ್ತೆಂದರೆ, ನಾವು ಸ್ನಾನ ಮಾಡಲು ನಮ್ಮ ಮನೆ ಮಾಲೀಕರ ಮನೆಗೆ ಹೋಗಬೇಕಾಗಿತ್ತು. ಪ್ರತಿ ದಿನ ಸ್ನಾನ ಮಾಡುವಾಗಲೂ ಭಯ, ಆತಂಕ ನನ್ನನ್ನು ಆವರಿಸಿಕೊಳ್ಳುತ್ತಿತ್ತು.
ವಿದ್ಯಾರ್ಥಿ ಜೀವನದಲ್ಲಿ ಹೊಟ್ಟೆಯಲ್ಲಿ ಹಸಿವು ಬೆಂಕಿಯಂತೆ ಬೇಯುತ್ತಿತ್ತು. ಬೆಂಕಿಯಂತಹ ಹಸಿವಿಗೆ ಎಷ್ಟು ನೀರುಣಿಸಿದರೂ ನೀಗುತ್ತಿರಲಿಲ್ಲ. ನನ್ನ ಸ್ನೇಹಿತರೆಲ್ಲ ಮಧ್ಯಾಹ್ನದ ಊಟ ಮಾಡುತ್ತಿದ್ದರೆ, ನಾನು, ನನ್ನಕ್ಕ ಶಾಲೆಯ ಪಕ್ಕದಲ್ಲೇ ಇದ್ದ ದೇವಸ್ಥಾನದಲ್ಲಿ ಕೂತು ಬರುತ್ತಿದ್ದೆವು. ತಿನ್ನಬೇಕಾದ ವಯಸ್ಸಿನಲ್ಲಿ ಹಸಿದುಕೊಂಡೆ ಬದುಕಿದೆವು. ಒಳ್ಳೆಯ ಬಟ್ಟೆಗಳಿರುತ್ತಿರಲಿಲ್ಲ. ಹೀಗಾಗಿ ಸಂಬಂಧಿಕರ ಮದುವೆಗೆ ಹೋಗಲು ಹಿಂಜರಿಯುತ್ತಿದ್ದೆವು. ಬಾಡಿಗೆ ಕಟ್ಟಿಲ್ಲವೆಂದು ಮನೆ ಮಾಲೀಕರು ಅಮ್ಮನ ಜುಟ್ಟು ಹಿಡಿದು ಮನೆಯಿಂದ ಹೊರಗೆ ತಳ್ಳಿದ್ದಾರೆ. ಹೀಗೆ ಹತ್ತು ಹಲವು ಕಷ್ಟಗಳನ್ನು ಅನುಭವಿಸುತ್ತಾ ಬೆಳೆದ ನಮಗೆ, ಬೆಳೆಯುತ್ತಾ, ಬೆಳೆಯುತ್ತಾ ಕಷ್ಟಗಳನ್ನು ನಿಭಾಯಿಸಲು ಕಲಿತೆ. ಯಾವ ಮಟ್ಟಕ್ಕೆ ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ದೇನೆಂದರೆ, ಬ್ಲೂಮಿಂಗ್ ಬಡ್ಸ್ ಪ್ರಿ ಸ್ಕೂಲ್ ಪ್ರಾರಂಭಿಸುವಾಗ ಎದುರಾದ ಸಮಸ್ಯೆಗಳು ಸಮಸ್ಯೆಗಳೆ ಅಲ್ಲದ ರೀತಿಯಲ್ಲಿ ಮನಃಸ್ಥಿತಿಯನ್ನು ರೂಪಿಸಿಕೊಂಡಿದ್ದೆ.

ಮಕ್ಕಳ ಮೇಲಿದ್ದ ಪ್ರೀತಿಯೊಂದೆ ಅರ್ಹತೆ
ನನ್ನ ಅಕ್ಕ ಹಾಗೂ ತಮ್ಮ ಓದಿನಲ್ಲಿ ಮುಂದಿದ್ದರು. ನಾನು ಸಾಧಾರಣ ವಿದ್ಯಾರ್ಥಿಯಾಗಿದ್ದೆ. ಹೀಗಾಗಿ ಅಮ್ಮ, ಸಂಬಂಧಿಕರು ಎಲ್ಲರು ನನ್ನನ್ನು ದಡ್ಡ ವಿದ್ಯಾರ್ಥಿಯೆಂದೆ ಮೂದಿಲಿಸುತ್ತಿದ್ದರು. ಹೀಗಾಗಿ ನಾನು ಹತ್ತನೆ ತರಗತಿಯ ನಂತರ ಓದಲು ಹೋಗಿಲ್ಲ. ಅಮ್ಮ ಗಾರ್ಮೆಂಟ್ಸ್ ಗೆ ಹೋಗು ಅಂದರು. ಹಸಿವಿನಿಂದ ಸತ್ತರೂ ಗಾರ್ಮೆಂಟ್ಸ್ ಗೆ ಹೋಗಲ್ಲ ಅಂತ ಹೇಳಿದೆ. ಇನ್ನೇನು ಮಾಡೋದು ಅಂತ ಯೋಚಿಸುತ್ತಿರುವಾಗ, ನಮ್ಮ ಮನೆಯ ಸ್ವಲ್ಪ ದೂರದಲ್ಲೆ ದಿ ಸಲೋನಿ ಶಾಲೆ ಇತ್ತು.
ನನಗೆ ಮಕ್ಕಳೆಂದರೆ ಇಷ್ಟ. ಅವರೊಂದಿಗೆ ಕಾಲ ಕಳೆಯೋದನ್ನು ಎಂಜಾಯ್ ಮಾಡ್ತೀನಿ. ಹೀಗಾಗಿ ದಿ ಸಲೋನಿ ಶಾಲೆಗೆ ಶಿಕ್ಷಕಿಯಾಗಿ ಸೇರಿದೆ. ಆದರೆ, ನನಗೆ ಇಂಗ್ಲಿಷ್ ಓದುವುದಕ್ಕೂ ಬರುತ್ತಿರಲಿಲ್ಲ. ಈ ಸಮಸ್ಯೆಯನ್ನು ನಿಭಾಯಿಸುವ ಮಾರ್ಗೋಪಾಯಗಳನ್ನು ಹುಡುಕಲು ಪ್ರಾರಂಭಿಸಿದೆ. ನಮ್ಮ ಮನೆ ಪಕ್ಕದ ಮಗುವೊಂದು ಎಲ್ ಕೆಜಿ ಓದುತ್ತಿದ್ದಳು. ಅವಳನ್ನೆ ಗುರುವಾಗಿ ಸ್ವೀಕರಿಸಿದೆ. ಅವಳು ಕಲಿತಿದ್ದ ರೈಮ್ಸ್ ಗಳನ್ನು ಹೇಳಿಸಿಕೊಂಡು ಕಂಠಪಾಠ ಮಾಡಿಕೊಂಡು ನಮ್ಮ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದೆ. ಹಾಗೂ ನಮ್ಮ ಸಹದ್ಯೋಗಿ ಟೀಚರ್ ಗಳು ಪಾಠ ಮಾಡುವಾಗ ಗಮನವಿಟ್ಟು ಕೇಳಿಸಿಕೊಂಡು ಅದನ್ನು ಅನುಸರಿಸಲು ಪ್ರಾರಂಭಿಸಿದೆ. ಹೀಗೆ ನಿರಂತರವಾಗಿ ಕೇಳುತ್ತಾ, ಗ್ರಹಿಸುತ್ತಾ, ಮನನ ಮಾಡುತ್ತಾ, ಅವುಗಳನ್ನು ಪ್ರಾಕ್ಟಿಸ್ ಮಾಡುತ್ತಾ ಇಂಗ್ಲಿಷ್ ನ್ನು ಕರಗತ ಮಾಡಿಕೊಂಡೆ. ಜೊತೆಗೆ ಬೆಸ್ಟ್ ಟೀಚರ್ ಬಿರುದನ್ನು ಪಡೆದೆ.
ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್ ನನ್ನ ಅಸ್ಮಿತೆ
ದಿ ಸೆಲೂನಿ ಶಾಲೆಯಲ್ಲಿ ಪಾಠ ಮಾಡುತ್ತಾ ಹೊಸ ಹೊಸದನ್ನು ಕಲಿಯುತ್ತಿದ್ದ ನನಗೆ, ಸಹದ್ಯೋಗಿ ಶಿಕ್ಷಕಿ ಬಿಂದು ಅವರು, ಒಮ್ಮೆ ಬಿಡದಿಯಲ್ಲಿರುವ ಇನೋವೇಟಿವ್ ಸಿಟಿಗೆ ಭೇಟಿಕೊಟ್ಟು, ಅಲ್ಲಿ ವಿನ್ಯಾಸ ಮಾಡಿದ್ದ ಪ್ರಿಸ್ಕೂಲ್ ಕಲ್ಪನೆಯನ್ನು ನೋಡಿ ಬಂದಿದ್ದರು. ಅದರ ಬಗ್ಗೆ ನಾವು ಚರ್ಚೆ ಮಾಡಿ ಅದೇ ರೀತಿ ಇಲ್ಲಿಯೂ ಪ್ರಾರಂಭಿಸೋಣವೆಂದು ನಿರ್ಧರಿಸಿದೆವು.
ಹತ್ತು ಸಾವಿರ ಮೊದಲ ಬಂಡವಾಳದೊಂದಿಗೆ ಒಂದು ಚಿಕ್ಕಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಬ್ಲೂಮಿಂಗ್ ಬಡ್ಸ್ ಪ್ರಿಸ್ಕೂಲ್ ಪ್ರಾರಂಭಿಸಿದೆವು. ನಂತರ ಬಿಂದು ಅವರು ಹತ್ತು ತಿಂಗಳ ನಂತರ ಬಿಟ್ಟರು. ಪ್ರಿಸ್ಕೂಲ್ ನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡೆ. ಹಂತ ಹಂತವಾಗಿ ಬ್ಲೂಮಿಂಗ್ ಬಡ್ಸ್ ಪ್ರಿ ಸ್ಕೂಲ್ ವಿಶ್ವಪ್ರಿಯ ನಗರದಲ್ಲಿ ಜನಪ್ರಿಯ ಆಯಿತು. ಕೆಲವೇ ವರ್ಷಗಳಲ್ಲಿ ದೊಡ್ಡ ಕಟ್ಟಡವನ್ನು ಬಾಡಿಗೆ ಪಡೆಯುವಷ್ಟು ಮಕ್ಕಳ ಸಂಖ್ಯೆ ಹೆಚ್ಚಾಯಿತು.
ಈಗ ವಿಶ್ವಪ್ರಿಯ ನಗರ ಹಾಗೂ ಅಕ್ಷಯನಗರದಲ್ಲಿ ಬ್ಲೂಮಿಂಗ್ ಬಡ್ಸ್ ಶಾಖೆಗಳು ಇವೆ. ಪ್ರತಿ ಬ್ರಾಂಚ್ ನಲ್ಲೂ 200 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿ 15 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕಿಯನ್ನು ನೇಮಿಸಿದ್ದೇನೆ. ಕಾಳಜಿ ಹಾಗೂ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಎನ್ನುತ್ತಾರೆ.
ಮಕ್ಕಳ ಮಾನಸಿಕ, ದೈಹಿಕ ಸದೃಢತೆ ಏನೆಲ್ಲ ಅಗತ್ಯವಿದೆಯೋ ಅದೆಲ್ಲವನ್ನು ಬ್ಲೂಮಿಂಗ್ ಬಡ್ಸ್ ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಿರಿಯರಾದ ನಾವು ಬಾಲ್ಯದ ಶಾಲಾ ವ್ಯವಸ್ಥೆಯಲ್ಲಿ ಏನೆಲ್ಲ ಇದ್ದಿದ್ದರೆ ಚೆನ್ನಾಗಿತ್ತು ಎಂದು ಆಗಾಗ ನೆನಪಿಸಿಕೊಂಡು ಬೇಸರ ವ್ಯಕ್ತಪಡಿಸುತ್ತೇವೆಯೋ ಆ ಬೇಸರ ನನ್ನ ಬ್ಲೂಮಿಂಗ್ ಬಡ್ಸ್ ಪ್ರಿ ಸ್ಕೂಲ್ ನ ಮಕ್ಕಳಿಗೆ ಆಗಬಾರದು. ಅವರ ದೈಹಿಕ ಹಾಗೂ ಮಾನಸಿಕ ಸದೃಢತೆ ಅಗತ್ಯವಾದ ಉತ್ತಮವಾದ ಆಟದ ಮೈದಾನ, ಸೃಜನಶೀಲತೆಯನ್ನು ಹೆಚ್ಚಿಸುವ ಆಟಿಕೆಗಳು, ಕಣ್ಣಿಗೆ ಹಬ್ಬವನ್ನು ಉಂಟು ಮಾಡುವಂತಹ ಬಣ್ಣಗಳ ಕಲರವ ಸೇರಿದಂತೆ ತರಗತಿಯ ಕೊಠಡಿಗಳನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.
ಬಡ ಮಕ್ಕಳಿಗೆ ಉಚಿತ ಪ್ರವೇಶ
ಬಡತನವನ್ನು ಕಂಡುಂಡ ನನಗೆ, ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕೊಡುವುದು ನನಗೆ ಆದ್ಯತೆ, ಖುಷಿ ಹಾಗೂ ಪ್ರೀತಿಯ ವಿಷಯವಾಗಿದೆ. ಹಾಗೂ ಶಾಲೆಗೆ ಬರುವ ಪ್ರತಿ ಮಗುವು ವಿಶೇಷವೇ. ಪ್ರತಿ ಮಗುವಿನ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆಯನ್ನು ವಿನ್ಯಾಸ ಮಾಡಲಾಗಿದೆ. ಒಟ್ಟಾರೆ, ವರ್ಷದ ಕೊನೆಯಲ್ಲಿ ಎಲ್ಲ ವಿದ್ಯಾರ್ಥಿಯು ಕಲಿಕೆಯಲ್ಲಿ ಪ್ರಾವಿಣ್ಯತೆ ಪಡೆದಿರಬೇಕು. ಆ ರೀತಿ ಆಟ-ಪಾಠಗಳನ್ನು ವಿನ್ಯಾಸ ಮಾಡಲಾಗಿದೆ. ಆಟದ ಮೂಲಕವೇ ಅಕ್ಷರಾಭ್ಯಾಸ, ಡ್ಯಾನ್ಸ್, ರೈಮ್ಸ್ ಗಳನ್ನು ಹೇಳಿಕೊಡುವುದಕ್ಕೆ ಆದ್ಯತೆ ನೀಡಲಾಗಿದೆ.
ಮನಸು ಹೂನಷ್ಟೆ ಮೃದು. ನಮ್ಮ ಬ್ಲೂಮಿಂಗ್ ಬಡ್ಸ್ ಶಾಲೆಗೆ ಮೊಗ್ಗಿನಂತೆ ಬರುವ ಮಕ್ಕಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿಕೊಡುವ ಮೂಲಕ ಹೂವಾಗಿ ಹರಳುವಂತೆ ಏನೆಲ್ಲ ಅಗತ್ಯವಿದೆಯೋ ಅದೆಲ್ಲವನ್ನು ನಮ್ಮ ಶಾಲೆಯಲ್ಲಿ ಮಾಡಲಾಗುತ್ತಿದೆ. ಎಲ್ಲರಿಂದ ಕಲಿಯುತ್ತಾ ಕಲಿಸುತ್ತಾ ಸಾಗುತ್ತಿದ್ದೇನೆಂಬ ತೃಪ್ತಿ ಇದೆ.












Click it and Unblock the Notifications