ಉಳಿಯೇಟು ತಿಂದ ಕಲ್ಲು ದೇವರ ಮೂರ್ತಿ: ಉಗಿತ, ಏಟು ತಿಂದು ಬೆಳೆದವರು ಮನುಷ್ಯರಾಗುತ್ತಾರೆ
ಜಾಗತೀಕರಣ, ಉದಾರೀಕರಣ, ನಗರೀಕರಣ, ಆ ಕರಣ ಈ ಕರಣಗಳು ಮಾಡಿರುವ ದಾಳಿಯಿಂದ ಬೆಂಗಳೂರಿಗೆ ಮಾತ್ರವಲ್ಲ ನಮ್ಮ ಬೈಗಳೂರಿಗೂ ಭಾರಿ ನಷ್ಟವುಂಟಾಗಿದೆ. ದಾಳಿಯ ಎದುರಿಸಲು ಅಸ್ತ್ರವಿರಲಿ ಕೈ ಕೂಡ ಎತ್ತುವ ಹಾಗಿಲ್ಲ. ಇಲ್ಲೇನಿದ್ದರು ಬಾಯಿಗೆ, ಬಾಯಿಗೆ ಮಾತ್ರ ಸಂಬಂಧಪಟ್ಟಿದ್ದು. ಕೆಲವೊಮ್ಮೆ ಕೈ, ಕಣ್ಣು, ಮೂತಿಯ ಆಡಿಸಿ ಜಾಡಿಸಲು ನೆರವನ್ನು ಪಡೆಯಬಹುದು, ಅಷ್ಟೆ.
ಅನ್ನದಾನವ ಮಾಡುವವರಾಗಿ ಅನ್ನಛತ್ರವನಿಟ್ಟವರಾಗಿ
ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಬಿಡದಲೆ ಬೈಯುವರಾಗಿ
ಬೈಗಳಿಲ್ಲದ ಭಾಷೆಯಿದೆಯೆ? ಇದ್ದರೂ ಅದೂ ಒಂದು ಭಾಷೆಯೆ? ಬೈದು ಬಿಸಾಕಿ ಆ ಕಡೆಗೆ. ನಡೆದಾಡುವ ಬೈ-ಕೋಶದಂತಿದ್ದ ನನ್ನ ತಾಯಿಯೂ ಸೇರಿದಂತೆ ಹಲವಾರು ಬೈ-ಕೋವಿದರನ್ನು ನೋಡಿದ್ದೇನೆ, ಕೇಳಿದ್ದೇನೆ. ಹುಟ್ಟಿದಾಗಿನಿಂದ ಇತ್ತೀಚಿನವರೆಗೂ ನಿರಂತರವಾಗಿ ಅಷ್ಟೇ ನಿರರ್ಗಳವಾಗಿ ನನ್ಮಮ್ಮನಿಂದ ಬೈಸಿಕೊಂಡಿದ್ದೇನೆ. ಬೈಗುಳದ ತಾಪಕ್ಕೆ ಬೆಂದರೂ ಅದರ ಸೊಬಗಿಗೆ, ಸೊಗಡಿಗೆ ಬೆರಗಾಗಿದ್ದೇನೆ; ಭಂಡಾರಕ್ಕೆ ಶರಣಾಗಿದ್ದೇನೆ.

ಇತ್ತೀಚಿನ ದಿನಗಳಲ್ಲಿ ತಪ್ಪು ಮಾಡಿದವರೂ ಮಕ್ಕಳೂ ಇಂಗ್ಲೀಷಿನಲ್ಲಿ ಬೈಸಿಕೊಂಡು ಪುರಸ್ಕೃತ'ರಾಗುತ್ತಿದ್ದಾರೆ. ಕನ್ನಡದ ಬಾಯಿಂದ ಕನ್ನಡದಲ್ಲೇ ಉಗಿದರೆ ಎಷ್ಟು ಚೆಂದ! ಈ ಮೂಲಕ ಮುಂದಿನವರು ನಮಗೆ ಬೈಯಲು ಅವಕಾಶ ಮಾಡಿಕೊಡದಂತೆ ಭಾಷೆಯ ಉಳಿಸೋಣ, ಬೆಳೆಸುವುದು ಆಮೇಲಿನ ಮಾತು.
ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಪರೀಕ್ಷೆ ಫಲಿತಾಂಶದ ವೇಳೆ 'ಪ್ರತಿವರ್ಷದಂತೆ ಈ ವರ್ಷವೂ ಬಾಲಕಿಯರದೇ ಮೇಲುಗೈ' ಎಂಬ ತಲೆಬರಹದ ಪ್ರಕಟಣೆಯಂತೆ ಬೈಯುವಿಕೆಯಲ್ಲೂ ಹೆಣ್ಣುಮಕ್ಕಳದೇ ಎತ್ತಿದ ಕೈ ಎನ್ನುವುದು ನನ್ನ ಅನುಭವದ ಪ್ರಕಟಣೆ. ಗಂಡಸರಿಗೆ ಬಾಯಿಗಿಂತ ಕೈ ಮುಂದು; ಹೆಂಗಸರಿಗೆ vice-versa.
ಬೈಯ್ಯುವಿಕೆ ಯಾವಾಗಲೂ ಬಾಯಿಂದ ಕಿವಿಗೆ ಹರಿದರೆ ಆರೋಗ್ಯಕರ. ಬೈದ ನೆಮ್ಮದಿ ನಮ್ಮದಾಗಬೇಕೆ ಹೊರತು ಅಲ್ಲಿ ವೈಮನಸ್ಸು ಹುಟ್ಟಬಾರದು. ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ' ಎಂಬ ವಾಣಿಯ ಕೇಳಿಯೂ ಕೆಲವರಿಗೆ ಬೈಯ್ಯುತಲಿರುವುದೇ ಸ್ವಭಾವ. ಭಾವುಕರಿಗೆ ಬೈಯ್ಯುವ ಬೈಗಳದೆ ಅಭಾವ. ಸಿಟ್ಟು-ಸೆಡವುಗಳ ಮನಸ್ಸಿಗೆ ಹಚ್ಚಿಕೊಂಡಷ್ಟು ಜೀವನದ ಮೋಜು ಮರೆಯಾಗುತ್ತದೆ. ಅದಕ್ಕೆ ಹೇಳುವುದು ವೈಮನಸ್ಸನ್ನು ಮೈನಸ್ಸು ಮಾಡಿಕೊಂಡರೆ ಮೈ-ಮನಸ್ಸು ಸುಖವಾಗಿರುತ್ತದೆ.
ಉಗಿಸಿಕೊಂಡವರು ಒರೆಸಿಕೊಂಡು ಮುಂದಕ್ಕೆ ಹೋದರೆ ನಮ್ಮಲ್ಲೆ ಏನೋ ತಪ್ಪಿದೆಯೆಂದು ಭಾವಿಸಬೇಕು. ನಮ್ಮ ಬೈಗುಳದಲ್ಲಿ ದಮ್ಮಿಲ್ಲ ಎಂದರ್ಥ. ಸುಖಾಸುಮ್ಮನೆ ಬೈದರೆ ತಕ್ಕುದಾದ ಪರಿಣಾಮವಾಗದು. ಸಪ್ಪೆಯಾದ, ಕೊಂಚವೂ ಅಭಿನಯವಿರದ ಬೈಗುಳ ಪ್ರಯೋಜನಕ್ಕೆ ಬಾರದು. ಬೈದರೆ ಎದುರಿನವರಿಗೆ ಭಯವಲ್ಲದಿದ್ದರೂ ಕೊನೆಪಕ್ಷ ಏನಾದರೊಂದು ಹುಟ್ಟಬೇಕು. ಈಗ ಆಡಿದ್ದು ಬರಿಯ ಮಾತಲ್ಲ ಅಂತಾದರೂ ಗೊತ್ತಾಗಬೇಕು.

ಹಾಗಂತ ನಮ್ಮ ಬಾಯಿಯೂ ಸೇರಿದಂತೆ ಮೈಕೈ ಹತೋಟಿ ತಪ್ಪದಂತೆ ನಿಗಾ ವಹಿಸಬೇಕು. ಆ ಹಂತಕ್ಕೆ ಹೋದಾಗಾಗುವ ಕ್ರಿಯೆ ಮತ್ತು ಪ್ರತಿಕ್ರಿಯೆಗಳೆರಡೂ ಅಪಾಯಕಾರಿ. ಕಣ್ಣರಳಿಸಿ, ಧ್ವನಿಯೇರಿಸಿ, ನಾನೀಗ ಸಾಮಾನ್ಯನಲ್ಲ/ಳಲ್ಲ ಎಂಬ ಬೆದರಿಕೆ ಎದುರಿನವರಿಗೆ ಮನವರಿಕೆಯಾಗಬೇಕು. ನಮಗೆ ತಿಳಿದಿರುವ ನಟನಾ ಕಲೆಯಿಂದ ಮುಖಚೇಷ್ಟೆ, ಅಂಗಚೇಷ್ಟೆಗಳನ್ನು ಮಾಡಬೇಕು.
ಕಡೇಪಕ್ಷ ಇಷ್ಟೂ ಮಾಡದೆ ಬೈದ ಬೈಗುಳ ದಂಡ. ಹೊತ್ತಾದರೂ ಕಣ್ಮುಚ್ಚಿ ಮಲಗದ ಕಂದ ಜೋಗುಳಕ್ಕಲ್ಲದಿದ್ದರೂ ಬೋಗುಳಕ್ಕಾದರೂ ಮಲಗಬೇಕು. ಇಷ್ಟು ಮಾಡದ ಬೋಗುಳ ಬೋಗುಳವೇ ಅಲ್ಲ. ಬಾಯಿಗೆ ಬಂದ ಹಾಗೆ ಬೈಯುವುದಕ್ಕಿಂತ ಬಾಯಿ ತುಂಬಾ, ಮನಸ್ಪೂರ್ತಿಯಾಗಿ ಬೈಯುವುದು ಉತ್ತಮ. ಬೈದ ನಂತರ ಅದರ ಪ್ರತಿಕ್ರಿಯೆ ಎಣಿಸದಂತಿರುವುದಿಲ್ಲ ಯಾವಾಗಲೂ; ವ್ಯತಿರಿಕ್ತಕ್ಕೂ ಸಿದ್ಧರಾಗಿರಬೇಕು.
ಈಗೆಲ್ಲಾ ಬೈ-back offerಗಳ ಜಮಾನ. ಬೈದಮೇಲೆ ಯಾವ ಆಫರ್ ಬ್ಯಾಕ್ ಬರುತ್ತೋ ಯಾರಿಗೆ ಗೊತ್ತು. ನಮ್ಮ ಹುಷಾರಿ ನಮ್ಮ ಕೈಯಲ್ಲಿರಲಿ; ಮುನ್ನೆಚರಿಕೆಯಾಗಿ.'ಬಯಸಿ ಬಯಸಿ ಬಾಳು ಹೊಕ್ಕರೆ ಬೈಯ್ಯೋ ಗಂಡ ಸಿಕ್ಕಿದ' ಎನ್ನುವ ಹಾಗೆ ಸದಾ ಎದುರಿಗೆ ಸಿಕ್ಕವರನ್ನು ಹರಿಹಾಯುವುದು ಬಾಯಿತೀಟೆ. ಸದಾ ಬೈಯ್ಯುತಲಿದ್ದರೆ ಅದರ ಮೊನಚು ಕಳೆದು ಮೊಂಡಾಗುವುದು. ಹಾಗೆ ಕೇಳಿಸಿಕೊಳ್ಳುವವರು ಕೂಡ.
ಬೈಗುಳ ಜಡಿಮಳೆಯಂತಿರದೆ ಗುಡುಗು-ಸಿಡಿಲಾಗಿರಲಿ. ಮಾತಿಗೆ ಮುಂಚೆ ಬೈಯುವುವುದು 'ಮುಂಬೈ'. ಬೈಗುಳದಲ್ಲಿ ನಿಷ್ಕಷ್ಪತೆಯಿಲ್ಲದಿದ್ದಲ್ಲಿ ಅವು ಕೇವಲ ಶಬ್ದಗಳಾಗಿ ನೆಗೆದುಬೀಳುತ್ತವೆ. ಕೆಲವೊಮ್ಮೆ ಮನಸ್ಸಿಗೆ ಬಂದ ಬೈಗುಳ ಬಾಯಿಗೆ ಬರಲ್ಲ. ತೊಂದರೆಯಿಲ್ಲ ಅಂತಹ ಸಮಯದಲ್ಲಿ ಏನೇನೋ ಅಂದು ಆಡುವ ಬದಲ್ಲು ನಿಶ್ಯಬ್ದವಾಗಿದ್ದು ಬೈಗುಳಕ್ಕಿರುವ ಘನತೆ, ಮರ್ಯಾದೆಯನ್ನು ಉಳಿಸಬೇಕು.
ತಪ್ಪು ಮಾಡಿ ಸಿಗದೆ ತಪ್ಪಿಸಿಕೊಳ್ಳುವ ಚಾಣಾಕ್ಷರಿದ್ದಾರೆ. ಸಿಕ್ಕ ನಂತರವೂ ಹೇಗೋ ಮನವೊಲಿಸಿ ಗೆಲ್ಲುವ ಭೂಪರಿರುತ್ತಾರೆ. ಈ ರೀತಿ ಬೈಗುಳನ್ನು ಬೈಪಾಸು ಮಾಡುವವರನ್ನು ಹಿಡಿದು ನಿಲ್ಲಿಸಿ ಬೈಯ್ಯಲೇಬೇಕು. ಯಾರೊಂದಿಗೂ ರಾಜಿ ಬೇಡ, ದೇವರಿಗೂ ಮುಲಾಜು ಬೇಡ. ಯಾರನ್ನಾದರೂ ಯಾಕೆ ಬಿಡಬೇಕು? ಕಾರಣವಿಲ್ಲದ ಯಾರೂ ಅನ್ನೋಕೆ ಆಡೋಕೆ ಹೋಗಲ್ಲ. ಇಲ್ಲಿಲ್ಲದ ದೇವರನ್ನು ಪರದೇಸಿ ಎಂದು ದಾಸರು ಕರೆದದ್ದು ಬೈಗುಳವೇ?
ಮುಖದ ಮೇಲೆ ಬಾಯೊಂದು, ಮೂಗೊಂದು, ಒಂದು ಜೊತೆ ಕಣ್ಣಿದ್ದರೆ ಲಕ್ಷಣ. ಅದು ಬಿಟ್ಟು ಇರುವ ಕಣ್ಣುಗಳ ಜೊತೆಗೆ ಇನ್ನೊಂದಿದ್ದರೆ ಅದೇನು ಅಂದವ, ಚಂದವ? ಇರುವ ರೂಪವನ್ನು ಹೀಗೆ ವಿರೂಪಗೊಳಿಸಿಕೊಂಡವನನ್ನು ವಿರೂಪಾಕ್ಷನಲ್ಲದೆ ಬೇರೆ ಯಾವ ಹೆಸರು ಸರಿ ಹೊಂದುವುದು? ದೇವರಲ್ಲಿ ಭಯ, ಭಕ್ತಿಯಿಟ್ಟುಗೊಂಡು ಪೂಜೆ ಪುನಸ್ಕಾರ ಮತ್ತೊಂದು ಮಗದೊಂದು ತಪ್ಪದೆ ಮಾಡ್ತೀವಿ. ಯಾಕೆ ಮಾಡ್ತೀವಿ? ನಮ್ಮನ್ನು ಚೆನ್ನಾಗಿಟ್ಟು ಯಾವುದೇ ಕಷ್ಟ ಬರದಂತೆ ನೋಡಿಕೊಳ್ಳಲೆಂದು.
ಇಷ್ಟಾಗಿಯೂ ಎರಗಿದ ಸಂಕಟಗಳಿಗೆ ಯಾರು ಹೊಣೆ? ಸಂಕಟದಲ್ಲಿ ದೇವರನ್ನು ನೆನಯದೇ ಇರಲು ಅಸಾಧ್ಯ. ಸರ್ವಶಕ್ತನೆಂದು ಕರೆಸಿಕೊಳ್ಳುವ ಅವನು ನಮ್ಮ ತಾಪತ್ರಯಗಳನ್ನು ಪರಿಹರಿಸುವ ಶಕ್ತಿ ಹೊಂದಿರಬೇಕು. ನಮ್ಮ ಮಾತನ್ನೂ ಅವನು ಆಲಿಸಬೇಕು. ಇಲ್ಲದಿದ್ದರೆ ಭಕ್ತರಾಧೀನ ಎಂಬ ಮಾತಿಗೆಲ್ಲಿಯ ಅರ್ಥ. ಕಷ್ಟ ಕಾಲಕ್ಕಾಗದಿದ್ದಾಗಲೇ ನಾವು ಬೈಯ್ಯೋಕೆ ಶುರು ಮಾಡಿದ್ದು. ನಿಂದನಾ ಸ್ತುತಿಗಳಿಗೆ ನಾಂದಿಯಾಗಿದ್ದು.
ನೂರಾರು ಉಳಿಯೇಟು ತಿಂದ ಕಲ್ಲು ರೂಪ ತಳೆದು ಮೂರ್ತಿಯಾಗುತ್ತದೆ. ಹಾಗೆಯೆ, ಉಗೆತ, ಏಟು ತಿಂದು ಬೆಳೆದವರು ಮನುಷ್ಯರಾಗುತ್ತಾರೆ. ಕೀರ್ತಿವಂತರಾಗುತ್ತಾರೆ. ಕಾರಣ ಅವರು ಹೆಜ್ಜೆಹೆಜ್ಜೆಗೂ ಬೈಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿ ತನಗೆ ಗೊತ್ತಿಲ್ಲದೆಯೂ ಸರಿಯಾದ ಕೆಲಸಗಳನ್ನು ಮಾಡುತ್ತಾರೆ. ಕ್ರಮೇಣ ಅದೇ ರೂಢಿಯಾಗುತ್ತದೆ. ಸರಿಯಾದ ದಾರಿಯಲ್ಲಿ ನಡೆಸಲು ಇರುವ ಉಪಾಯ ಒಂದೇ "ಉಗಿದು ಉಪ್ಪು ಹಾಕುವುದು".
ಯಾವುದೇ ಪ್ರತೀಕಾರದ ಭಯವಿಲ್ಲದೆ ಬೈಯ್ಯುವ ಅವಕಾಶಗಳು ಜೀವನದಲ್ಲಿ ವಿಫುಲವಾಗಿ ಸಿಗುತ್ತವೆ. ಉದಾಹರಣೆಗೆ ದೇವರು, ಅಧಿಕಾರಸ್ಥರು, ರಾಜಕಾರಣಿಗಳು, ಸುತ್ತಲಿನ ಸಮಾಜ, ಸಮಾಜದ ರೀತಿ-ರಿವಾಜುಗಳು, ಮನೆಯಲ್ಲದ್ದಾಗ ಆಫೀಸಿನ ಬಾಸು, ಆಫೀಸಿನಲ್ಲಿದ್ದಾಗ ಮನೆಯಲ್ಲಿನ ಬಾಸು, ಸೋತ ಕ್ರಿಕೆಟ್ ಟೀಮು ಹೀಗೆ ಹತ್ತು ಹಲವು. ಇಂಥವುಗಳ ಸದುಪಯೋಗಪಡೆದು ನಾವು ಬೈ-ವರ್ಕ್ ಮಾಡಿ ನಮ್ಮ ಬೈಯ್ಯುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಬೆಳೆಸಿಕೊಂಡು ಬೈ ಭೀಮರಾಗಬೇಕು.
'ಬೈತ ಬೈತ ಹೇಳೋರು ಬದ್ಕಕ್ಕೆ ಹೇಳಿದ್ರು' ಎನ್ನುವ ಗಾದೆ ಮಾತಿನಂತೆ ಬೈಗುಳ ಬೆಳವಣಿಗೆಗೆ ಪೂರಕವಾಗಿರಬೇಕು. ಬೈಯ್ಯಲು ಪ್ರಜ್ಞೆ' ಮತ್ತು 'ಪ್ರತಿಭೆ' ಎರಡೂ ಬೇಕು. ಬೈದ ಬೈಗುಳ ಹೆಚ್ಚುಕಡಿಮೆಯಾಗದಂತೆ ನೇರ ಮತ್ತು ನಿರ್ದಿಷ್ಟವಾಗಿರಬೇಕು. ಬರಿಯ ಬೈಗುಳಕ್ಕೆ ಪ್ರತಿಯಾಗಿ Bobbitize ಆಗಬಾರದು.
ಬೈಗುಳ ಯಾವತ್ತೂ ಚಿಕಿತ್ಸಾಕಾರಿಯಾಗಿರಬೇಕು. ರೋಗಕ್ಕೆ ಮದ್ದಿನಂತಿರಬೇಕೆ ವಿನಃ ಹೊಸ ರೋಗಕ್ಕೆ ಮೂಲವಾಗಬಾರದು. ಮನೋವಿಜ್ಞಾನದಲ್ಲಿ ಪ್ರತಿಯೊಂದು ತಪ್ಪಿಗೂ ಒಂದೊಂದು ಸಮಜಾಯಿಷಿಯಿದೆ.
ಆದ್ದರಿಂದ ತಪ್ಪಿತಸ್ಥರನ್ನು ಬೈಯ್ಯುವುದು ಕೂಡ ತಪ್ಪಂತೆ. ಬೈಗುಳದ ದುಷ್ಪರಿಣಾಮ ದೊಡ್ಡದಂತೆ. ಈ ಪ್ರಪಂಚದಲ್ಲಿ ಬೈಸಿಕೊಳ್ಳದವರು ಯಾರಿದ್ದಾರೆ? ಬೈಯದ 'ಬೈ'ರವರಾರಿದ್ದಾರೆ? ಸರಿಯಾದ 'ಬೈ'ಲಾಗಳನ್ನು ಪಾಲಿಸಿದರೆ ಏನೂ ಆಗಲ್ಲ. ತಟ್ಟೋರಿಗಿಂತ ತಿಟ್ಟೋರೆ ವಾಸಿ ಎನ್ನುವುದು ಅಕ್ಷರಶಃ ಸತ್ಯ. ಬೈಯ್ಯೋದು ಅಹಿಂಸಾ ಮಾರ್ಗ. ಮಾಡಿದ ತಪ್ಪನ್ನು ಅರಿತು ತಿದ್ದಿಕೊಳ್ಳುವಂತೆ ಬೈಯ್ಯಲು ಬರಬೇಕಷ್ಟೆ. ಬೈಗುಳವನ್ನು 'ಸಂಸ್ಕೃತ'ವೆಂದು ಕರೆಯುವ ಮಾತುಂಟು, ಅದರಂತೆ ನಾವು 'ಸುಸಂಸ್ಕೃತ'ರಾಗೋಣ. ಬನ್ನಿ ಪಣ ತೊಡುವ ನಾವಿಂದು "ನಾನು ಉಗಿದರೆ ನೆಕ್ಕಿಕೊಳ್ಳುವ ಹಾಗಿರುತ್ತದ್ದೆಂದು".
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು












Click it and Unblock the Notifications