ಆ ವಿಡಿಯೋ ಮಾಡಿ ಅಂತಾರೆ: ನಟಿ ಸುಧಾರಾಣಿಗೆ ಸೋಷಿಯಲ್ ಮೀಡಿಯಾದಲ್ಲಿ ಏನೆಲ್ಲ ಕಾಮೆಂಟ್ಸ್ ಮಾಡ್ತಾರೆ?
ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮೆಸೇಜ್, ಕಾಮೆಂಟ್ ಮಾಡಿದ್ದಕ್ಕೆ ನಟಿ ರಮ್ಯಾ ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಸಂಬಂಧ ಹಲವರನ್ನು ಬಂಧಿಸಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಬರುವ ಕಾಮೆಂಟ್ಸ್, ಮೆಸೇಜ್‌ಗಳ ಬಗ್ಗೆ ಮಾತನಾಡಿದ್ದಾರೆ. 'ಕೆಲವರು ಆ ವಿಡಿಯೋ ಮಾಡಿ, ಈ ವಿಡಿಯೋ ಮಾಡಿ ಎಂದೂ ಕಾಮೆಂಟ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಅವರಿಗೆ ಅನಿಸಿದ್ದೆಲ್ಲ ಹೇಳ್ತಾರೆ' ಎಂದು ಸುಧಾರಾಣಿ ಅಚ್ಚರಿ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
'ಕಾಮೆಂಟ್‌ಗಳಲ್ಲಿ ಬರುವ ವಿಚಾರಗಳು ನನ್ನ ಬೆಳವಣಿಗೆಗೆ ಹೆಲ್ಪ್ ಆಗುತ್ತೆ ಅಂದಾಗ ಅದನ್ನ ತೆಗೆದುಕೊಳ್ಳುತ್ತೀನಿ. ಕೆಲವೊಮ್ಮೆ ಅವರಿಗೆ ಅನಿಸಿದ್ದು ಹೇಳ್ತಾರೆ. ಅದಕ್ಕೆಲ್ಲ ಏನ್ ಮಾಡೋದು? ಎಂದಿದ್ದಾರೆ. ಆಗ ನಾನು ಸುಮ್ಮನೇ ಇರುತ್ತೇನೆ. ಆದ್ರೆ ತುಂಬಾ ಬೇಜಾರಾದ್ರೆ ಪ್ರಶ್ನೆ ಮಾಡುತ್ತೇನೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಬಂದಿಲ್ಲ. ಬಂದರೆ ಸುಮ್ಮನೆ ಅಂತೂ ಇರಲ್ಲ' ಎಂದು ನಟಿ ಎಚ್ಚರಿಕೆ ಕೊಟ್ಟಿದ್ದಾರೆ.

'ನಾನು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಇರುತ್ತೇನೆ. ನನಗೆ ಅಲ್ಲಿ ಅಭಿಮಾನಿಗಳು ಬರೆಯುವುದಕ್ಕೆ ರಿಪ್ಲೈ ಮಾಡುವುದು ತುಂಬಾ ಖುಷಿ ಕೊಡುತ್ತೆ. ಅವರು ಎಷ್ಟೆಲ್ಲ ಪ್ರೀತಿ ಅಭಿಮಾನದಿಂದ ಇದ್ದಾರೆ ಎನ್ನುವುದು ಅದರಿಂದಲೇ ತಿಳಿಯುತ್ತೆ. ಕಾಮೆಂಟ್‌ಗಳಲ್ಲಿ ಒಮ್ಮೊಮ್ಮೆ ಒಳ್ಳೆಯ ಸಲಹೆಗಳನ್ನ ಕೊಡ್ತಾರೆ. ಮುಂದೆ ನೀವು ಈ ತರ ವಿಡಿಯೋ ಮಾಡಿ, ಯೂಟ್ಯೂಬ್‌ನಲ್ಲಿ ಹೀಗೆ ಮಾಡಿ ಅಂತಾರೆ. ಅವರು ಅದನ್ನೆಲ್ಲ ಹೇಳಬೇಕು ಅಂತೇನಿಲ್ಲ. ಆದರೆ ನಮ್ಮ ಮೇಲೆ ಅಷ್ಟೆಲ್ಲ ಕಾಳಜಿ ಇದೆ. ಒಳ್ಳೇದು, ಕೆಟ್ಟದ್ದು ಎಲ್ಲ ಕಡೆ ಇರುತ್ತೆ' ಎಂದು ಸುಧಾರಾಣಿ ಹೇಳಿದ್ದಾರೆ.
ಇನ್ನು ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿದ ಇತ್ತೀಚಿನ ಘಟನೆ ಬಗ್ಗೆಯೂ ಸುಧಾರಾಣಿ ಬೇಸರ ಹೊರಹಾಕಿದ್ದಾರೆ. 'ವಿಷ್ಣುವರ್ಧನ್ ಅವರ ಜೊತೆ "ಹಾಲುಂಡ ತವರು" ಸಿನಿಮಾದಲ್ಲಿ ನಟಿಸಲು ನನಗೆ ಆಗಲಿಲ್ಲ. ಆ ಬೇಜಾರು ಈಗಲೂ ಇದೆ. ನನಗೆ ಆ ಸಮಯದಲ್ಲಿ ಸರ್ಜರಿ ಆಗಿದ್ದರಿಂದ ಸಿನಿಮಾ ಕೈಬಿಡಬೇಕಾಯ್ತು. ಇನ್ನು ವಿಷ್ಣುವರ್ಧನ್ ಅವರಂತಹ ಕಲಾವಿದರಿಗೆ ಈ ತರ ಆಯ್ತಲ್ಲ ಅನ್ನೋ ಬೇಸರ ಇದೆ. ಈಗ ಅವರಿಗೆ ಕೊನೆಗೆ ಗೌರವಯುತ ಅಂತ್ಯ ಸಿಗುತ್ತಿರುವುದು ಸಮಾಧಾನ ತಂದಿದೆ' ಎಂದಿದ್ದಾರೆ.

ದರ್ಶನ್ ಬಗ್ಗೆ ಏನಂದ್ರು?
ನಟ ದರ್ಶನ್ ಜೈಲಿನಲ್ಲಿರುವುದು ಕನ್ನಡ ಚಿತ್ರರಂಗಕ್ಕೆ ನಷ್ಟ ಎಂಬ ವಿಚಾರವಾಗಿ ಮಾತನಾಡಿರುವ ಸುಧಾರಾಣಿ, 'ಖಂಡಿತವಾಗಿಯೂ ಹೌದು. ಒಬ್ಬರೇ ಎಲ್ಲ ಸ್ಥಾನ ತುಂಬೋಕಾಗಲ್ಲ. ಎಲ್ಲ ರೀತಿಯ ವಿಭಿನ್ನ ಪಾತ್ರಗಳನ್ನು ಮಾಡುವವರು ಬೇಕು. ಎಲ್ಲ ಕಲಾವಿದರೂ ಬೇಕು. ಫೈಟರ್ಸ್, ಡ್ಯಾನ್ಸರ್, ಪೋಷಕ ಪಾತ್ರ ಮಾಡುವವರು ಸೇರಿ ಚಿತ್ರರಂಗಕ್ಕೆ ಎಲ್ಲರೂ ಇರಬೇಕು. ಆಗಲೇ ಇಂಡಸ್ಟ್ರಿ ಚೆನ್ನಾಗಿ ನಡೆಯುತ್ತೆ' ಎಂದು ಅಭಿಪ್ರಾಯ ತಿಳಿಸಿದ್ದಾರೆ.












Click it and Unblock the Notifications