Allu Arjun: ಪುಷ್ಪ 2 ನಾಯಕ ಅಲ್ಲು ಅರ್ಜುನ್ ಮನೆ ಮುಂದೆ ಪ್ರತಿಭಟನೆ; ಟೊಮೊಟೊ, ಕಲ್ಲೆಸೆದು ದಾಂಧಲೆ
ಪುಷ್ಪ 2 ಸಿನಿಮಾ ನಟ ಅಲ್ಲು ಅರ್ಜುನ್ ಮನೆ ಮುಂದೆ ವಿದ್ಯಾರ್ಥಿಗಳು ಎಂದು ಹೇಳಿಕೊಂಡಿರುವ ಹಲವು ಪ್ರತಿಭಟನಾಕಾರರು ದಾಂಧಲೆ ನಡೆಸಿದ್ದಾರೆ. ಮನೆ ಮೇಲೆ ಕಲ್ಲು, ಟೊಮೊಟೊ ಎಸೆದಿರುವ ದುಷ್ಕರ್ಮಿಗಳು, ಮನೆ ಮುಂದಿದ್ದ ಹೂವಿನ ಕುಂಡಗಳನ್ನು ಒಡೆದುಹಾಕಿದ್ದಾರೆ. ಡಿಸೆಂಬರ್ 4ರಂದು ಪುಷ್ಪ 2 ಸಿನಿಮಾ ಪ್ರೀಮಿಯರ್ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ ಪ್ರಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರು ತಾವು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂದು ಹೇಳಿಕೊಂಡಿದ್ದಾರೆ. ಹೈದರಾಬಾದ್‌ನ ಪ್ರತಿಷ್ಠಿತ ಜುಬಿಲಿ ಹಿಲ್ಸ್‌ನಲ್ಲಿರುವ ಅಲ್ಲು ಅರ್ಜುನ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದು ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಭಾನುವಾರ ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಅಲ್ಲು ಅರ್ಜುನ್ ವಿರುದ್ಧ ಘೋಷಣೆಗಳಿರುವ ಫಲಕಗಳನ್ನು ಹಿಡಿದಿದ್ದ ಗುಂಪೊಂದು ಅಲ್ಲು ಅರ್ಜುನ್ ಮನೆಗೆ ನುಗ್ಗಿದ್ದು ಪ್ರವೇಶದ್ವಾರದಲ್ಲಿ ಇಟ್ಟಿದ್ದ ಹೂವಿನ ಕುಂಡಗಳನ್ನು ಒಡೆದುಹಾಕಿದೆ.
ಘಟನೆಗೆ ಅಲ್ಲು ಅರ್ಜುನ್ ಕಾರಣ ಎಂದು ಆಕ್ರೋಶ
ಸಂಧ್ಯಾ ಚಿತ್ರಮಂದಿರ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ರೇವತಿ ಸಾವಿಗೆ ಮತ್ತು ಆತನ ಮಗ ಸಾಯಿ ತೇಜಾ ಅಸ್ವಸ್ಥನಾಗಲು ಅಲ್ಲು ಅರ್ಜುನ್ ನೇರ ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪ್ರತಿಭಟನಾಕಾರರು ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಅಲ್ಲು ಅರ್ಜುನ್ ಮನೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಭಿಮಾನಿಗಳಿಗೆ ಅಲ್ಲು ಅರ್ಜುನ್ ಮನವಿ
ಈ ಘಟನೆಗೆ ಮುಂಚೆ ಅಲ್ಲು ಅರ್ಜುನ್ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದರು. "ನನ್ನ ಅಭಿಮಾನಿಗಳು ಅವರ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು, ಯಾವುದೇ ವ್ಯಕ್ತಿಗತ ನಿಂದನೆ ಮಾಡಬಾರದು ಎಂದು ಮನವಿ ಮಾಡುತ್ತಿದ್ದೇನೆ. ಅಭಿಮಾನಿಗಳ ಹೆಸರಿನಲ್ಲಿ ಕೆಲವರು ನಕಲಿ ಖಾತೆ, ನಖಲಿ ಪ್ರೊಫೈಲ್ಸ್ ಬಳಸಿಕೊಂಡು ಕೆಟ್ಟ ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನೆಗೆಟಿವ್ ಪೋಸ್ಟ್ ಮಾಡುತ್ತಿರುವವರಿಂದ ಅಂತರ ಕಾಯ್ದುಕೊಳ್ಳುವಂತೆ ನಮ್ಮ ಅಭಿಮಾನಿಗಳಿಗೆ ಮನವಿ ಮಾಡುತ್ತಿದ್ದೇನೆ" ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.
ರೇವಂತ್ ರೆಡ್ಡಿ vs ಅಲ್ಲು ಅರ್ಜುನ್
ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಶನಿವಾರ ವಿಧಾನಸಭೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಕಿಡಿ ಕಾರಿದ್ದರು. ಸಂಧ್ಯಾ ಚಿತ್ರಮಂದಿರದಲ್ಲಿ ಮಹಿಳೆಯ ಸಾವಿಗೆ ಕಾರಣವಾದ ಕಾಲ್ತುಳಿತ ಉಂಟಾಗಲು ಅಲ್ಲು ಅರ್ಜುನ್ ಕಾರಣ ಎಂದು ಆರೋಪಿಸಿದ್ದರು. ಜನಸಂದಣಿ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ಅಲ್ಲು ಅರ್ಜುನ್ ಭೇಟಿಗೆ ಅನುಮತಿ ನಿರಾಕರಿಸಿದ್ದರೂ ಅವರು ಚಿತ್ರಮಂದಿರಕ್ಕೆ ಬಂದಿದ್ದ, ಅವರ ಭದ್ರತಾ ಸಿಬ್ಬಂದಿ ಜನರನ್ನು ತಳ್ಳಿದ್ದು ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಲ್ಲು ಅರ್ಜುನ್ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಚಿತ್ರಮಂದಿರಕ್ಕೆ ಹೋದಾಗ ಪೊಲೀಸರು ಕೂಡ ಅಲ್ಲಿದ್ದರು, ಅನುಮತಿ ಇಲ್ಲ ಎಂದರೆ ನನ್ನನ್ನು ಚಿತ್ರಮಂದಿರ ಒಳಗೆ ಏಕೆ ಬಿಡುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications