Actor Darshan Bail: ದರ್ಶನ್ ಮಾಡಿದ ಈ ಕೆಲಸದಿಂದ ಜಾಮೀನು ಸಿಗೋದು ಅನುಮಾನ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎ2 ಆರೋಪಿ ನಟ ದರ್ಶನ್‌ರ ಜಾಮೀನು ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ಸೋಮವಾರ 57ನೇ ಸಿಸಿಎಚ್ ನ್ಯಾಯಾಲಯ ಆದೇಶ ಪ್ರಕಟಿಸಲಿದೆ. ದರ್ಶನ್ ಪರ ವಕೀಲರು ಚಾರ್ಜ್‌ಶೀಟ್‌ನಲ್ಲಿನ ಲೋಪದೋಷಗಳನ್ನು ಪಟ್ಟಿ ಮಾಡಿ, ದರ್ಶನ್‌ಗೆ ಜಾಮೀನು ಕೊಡಬೇಕು ಎಂದು ವಾದಿಸಿದರೆ, ಎಸ್‌ಪಿಪಿ ದರ್ಶನ್‌ಗೆ ಜಾಮೀನು ಕೊಡಬಾರದು ಎಂದು ಬಲವಾಗಿಯೇ ವಾದ ಮಂಡಿಸಿದ್ದಾರೆ. ಈಗ ದರ್ಶನ್ ನೀಡಿರುವ ಹೇಳಿಕೆಗಳೇ ಅವರಿಗೆ ಜಾಮೀನು ಸಿಗದೇ ಇರಲು ಕಾರಣವಾಗಬಹುದು ಎನ್ನುವ ಆತಂಕ ಕೂಡ ಎದುರಾಗಿದೆ.
ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್ ಅವರು, ದರ್ಶನ್ ಅವರನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸಲು ತಂತ್ರ ಮಾಡಲಾಗಿದೆ. ಪೊಲೀಸರು ಸಾಕ್ಷಿಗಳನ್ನು ತಿರುಚಿದ್ದಾರೆ. ಟವರ್ ಲೊಕೇಷನ್ ಆಧರಿಸಿ ರೇಣುಕಾಸ್ವಾಮಿ ಕೊಲೆಯಾದ ಸಮಯದಲ್ಲಿ ನಟ ದರ್ಶನ್ ಪಟ್ಟಣಗೆರೆ ಶೆಡ್‌ನಲ್ಲಿ ಇದ್ದರು ಎನ್ನಲಾಗದು ಎಂದು ವಾದಿಸಿದ್ದಾರೆ. ರೇಣುಕಾಸ್ವಾಮಿ ಅಪಹರಣದ ಬಗ್ಗೆ ದರ್ಶನ್‌ಗೆ ಮಾಹಿತಿಯೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ದರ್ಶನ್ ಶೂನಲ್ಲಿ ರಕ್ತದ ಕಲೆ ಇದೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ, ಆದರೆ ದರ್ಶನ್ ನೀಡಿರುವ ಹೇಳಿಕೆಯಲ್ಲಿ ಚಪ್ಪಲಿ ಧರಿಸಿದ್ದೆ ಎಂದಿದ್ದಾರೆ. ಚಪ್ಪಲಿ ಧರಿಸಿದ್ದರು ಎಂದಾದರೆ ಶೂನಲ್ಲಿ ರಕ್ತದ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ. ಸರ್ಫ್ ಹಾಕಿ ಒಗೆದಿರುವ ಬಟ್ಟೆಯಲ್ಲಿ ರಕ್ತದ ಕಲೆ ಬಂದಿದ್ದು ಹೇಗೆ ಎಂದು ಕೂಡ ಪ್ರಶ್ನೆ ಮಾಡಿದರು.
ಎಸ್‌ಪಿಪಿ ವಾದವೇನು?
ಸಿ.ವಿ. ನಾಗೇಶ್ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್ ಮತ್ತು ತಂಡ ನಡೆಸಿದ ಕ್ರೌರ್ಯವನ್ನು ನ್ಯಾಯಾಲಯಕ್ಕೆ ಬಿಚ್ಚಿಟ್ಟರು. ದರ್ಶನ್ ಮನೆಯಿಂದ ವಶಪಡಿಸಿಕೊಂಡ ವಸ್ತುಗಳು, ಶೂ, ಬಟ್ಟೆ ಮೇಲಿದ್ದ ರಕ್ತದ ಕಲೆ ಬಗ್ಗೆ ಇದ್ದ ಅನುಮಾನಗಳಿಗೆ ಉತ್ತರ ಕೊಟ್ಟರು.
ಪವಿತ್ರಾ ಗೌಡ ಮತ್ತು ದರ್ಶನ್ ಕೊಲೆಯಲ್ಲಿ ಶಾಮೀಲಾಗಿದ್ದು ಅವರಿಗೆ ಜಾಮೀನು ಕೊಡಬಾರದು, 8ನೇ ಆರೋಪಿ ಚಾಲಕ ರವಿಶಂಕರ್ ಬಟ್ಟೆ ಮೇಲೆ ರಕ್ತದ ಕಲೆ ಪತ್ತೆಯಾಗಿದ್ದು ಅವರಿಗೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದಾರೆ.
ದರ್ಶನ್‌ಗೆ ಇರುವ ಆತಂಕವೇನು?
ಕೃತ್ಯ ನಡೆದ ದಿನ ದರ್ಶನ್ ಧರಿಸಿದ್ದ ಶೂ ಮತ್ತು ಬಟ್ಟೆಗಳ ಬಗ್ಗೆ ವಾದಿಸಿದ ಎಸ್‌ಪಿಪಿ, ಮೊದಲು ದರ್ಶನ್ ತಾವು ಚಪ್ಪಲಿ ಧರಿಸಿದ್ದಾಗಿ ಹೇಳಿದ್ದರು, ಬಳಿಕ ಅವರೇ ಶೂ ಧರಿಸಿದ್ದೆ ಎಂದಿದ್ದಾರೆ. ಆರೋಪಿ ಹೇಳಿಕೆಯನ್ನು ದಾಖಲಿಸವುದು ನಿಯಮ, ದರ್ಶನ್ ಚಪ್ಪಲಿ ಧರಿಸಿದ್ದೆ ಎಂದಾಗ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಹೇಳಿದರು.
ಕೃತ್ಯ ನಡೆದ ಸ್ಥಳದಲ್ಲಿ 96 ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಒಂದೆರಡು ವಸ್ತುಗಳಲ್ಲಿ ರಕ್ತದ ಕಲೆ ಇಲ್ಲವೆಂದ ಮಾತ್ರಕ್ಕೆ ಕೃತ್ಯ ನಡೆದಿಲ್ಲ ಎಂದು ಅರ್ಥವಲ್ಲ. ಸಾಕ್ಷಿದಾರರ ಮೊಬೈಲ್ ಟವರ್ ಲೊಕೇಷನ್ ಪಟ್ಟಣಗೆರೆ ಶೆಡ್ ಬಳಿ ಸಿಕ್ಕಿದೆ. ಕೃತ್ಯ ನಡೆದಾಗ ದರ್ಶನ್ ಅಲ್ಲೇ ಇದ್ದರು ಎನ್ನುವುದಕ್ಕೆ ಇದೇ ಸಾಕ್ಷಿ, ದರ್ಶನ್ ಅವರೇ ತಮ್ಮ ಹೇಳಿಕೆಯಲ್ಲಿ ರೇಣುಕಾಸ್ವಾಮಿ ಮತ್ತು ಮರ್ಮಾಂಗಕ್ಕೆ ಒದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿಪಿ ವಿವರಿಸಿದ್ದಾರೆ.
ದರ್ಶನ್ ನೀಡಿರುವ ಹೇಳಿಕೆಗಳೇ ಈಗ ಅವರಿಗೆ ಜಾಮೀನು ಸಿಗದೇ ಇರಲು ಕೂಡ ಕಾರಣವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೂ ನಾಗೇಶ್ ಅವರ ವಾದವನ್ನು ಕೇಳಿರುವ ಅಭಿಮಾನಿಗಳು ದರ್ಶನ್‌ಗೆ ಜಾಮೀನು ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆಯಲ್ಲಿ ಕಾಯುತ್ತಿದ್ದಾರೆ.












Click it and Unblock the Notifications