Su From So: ಸು ಫ್ರಮ್ ಸೋ ಹಿಟ್ ಸಂಭ್ರಮದ ನಡುವೆ ಕನ್ನಡ vs ತುಳು, ಕರ್ನಾಟಕ vs ತುಳುನಾಡು ವಿವಾದ!
Su From So: ಸು ಫ್ರಮ್ ಸೋ... ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ತೆರೆಕಂಡ ಅತ್ಯುತ್ತಮ ಸಿನಿಮಾ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಸ್ಯ ಹಾಗೂ ಸಣ್ಣ ಹಾರರ್ ಅದರೊಂದಿಗೆ ಕರಾವಳಿಯ ಸೊಬಗು ಸೇರಿದ ಈ ಸಿನಿಮಾದ ಬಗ್ಗೆ ಅನವಶ್ಯಕ ವಿವಾದಗಳು ಹಾಗೂ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಹಲವು ವರ್ಷಗಳ ನಂತರ ಕುಟುಂಬ ಕುಳಿತ ಹಾಗೂ ನಕ್ಕು ಸುಸ್ತಾಗುವ ಸಿನಿಮಾ ಸು ಫ್ರಮ್ ಸೋ... ಈ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಆಗಿ, ಇದೀಗ ತಮಿಳು ಹಾಗೂ ಮಲಯಾಳಂ ಭಾಷೆಗೆ ಹೋಗುತ್ತಿದೆ. ಈಗಾಗಲೇ ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ರೀತಿ ಇರುವಾಗಲೇ ಕನ್ನಡ vs ತುಳು, ಕರ್ನಾಟಕ vs ತುಳುನಾಡು ಮತ್ತು ತುಳು & ಮಲಯಾಳಂ ಎನ್ನುವ ಚರ್ಚೆ ಹಾಗೂ ಅನವಶ್ಯಕ ವಿವಾದ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದು ನಿಜವಾದ ಸಿನಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ. ಅಲ್ಲದೇ ಇದೆಲ್ಲಾ ಬೇಕಾ ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಕನ್ನಡದಲ್ಲಿ ಬಿಡುಗಡೆಯಾಗಿರುವ ಹಾಸ್ಯ ಸಿನಿಮಾ ಸು ಫ್ರಮ್ ಸೋ ಯಾವುದೇ ಅಬ್ಬರದ ಪ್ರಚಾರ ಹಾಗೂ ಸ್ಟಾರ್ ನಟರು ಇಲ್ಲದೆ ಹಿಟ್ ಆಗಿದೆ. ಈ ಸಿನಿಮಾ ಬಂದಾಗ ಯಾರೂ ಇದು ಇಷ್ಟೊಂದು ದೊಡ್ಡ ಹಿಟ್ ಆಗಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಈ ಸಿನಿಮಾ ಇದೀಗ ಕರ್ನಾಟಕ ಮಾತ್ರವಲ್ಲ ನೆರೆಯ ರಾಜ್ಯಗಳಲ್ಲೂ ಹವಾ ಸೃಷ್ಟಿ ಮಾಡಿದೆ. ತಮಾಷೆ, ಕರಾವಳಿ ಸೊಗಡು ಹಾಗೂ ಭಾವನಾತ್ಮಕ ವಿಚಾರಗಳಿಂದ ಈ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತಿದೆ. ಈ ಸಂಭ್ರಮದಲ್ಲಿ ಕನ್ನಡಿಗರು ಮುಳುಗಿರುವಾಗಲೇ ಅನವಶ್ಯಕ ವಿವಾದವೊಂದು ಶುರುವಾಗಿದೆ.

ತುಳು vs ಕನ್ನಡ: ಇನ್ನು ಈ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅನವಶ್ಯಕ ಬರಹ ಹಂಚಿಕೊಂಡು ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಮೊದಲನೆಯದು ತುಳು vs ಕನ್ನಡ. ಕನ್ನಡ ಚಿತ್ರರಂಗ ಯಾವೆಗೆಲ್ಲಾ ಕೆಳಗೆ ಬೀಳುತ್ತದೆಯೋ ಆಗ ತುಳು ತಂಡ ಅಥವಾ ಕರಾವಳಿ ಭಾಗದವರು ಬಂದು ಕನ್ನಡ ಸಿನಿಮಾರಂಗವನ್ನು ಮೇಲಕ್ಕೆ ಎತ್ತಿ ಬಿಡುತ್ತಾರೆ ಅಂತಲೂ... ಜೈ ತುಳುನಾಡು ಇದು ತುಳುನಾಡಿಗೆ ಇರುವ ಶಕ್ತಿ ಅಂತಲೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದು ಕನ್ನಡಿಗರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡ ಹಾಗೂ ತುಳು ಸಹೋದರ ಭಾಷೆಗಳು. ತುಳು ಸಹ ಕನ್ನಡ ನೆಲದ ಭಾಷೆ. ಆದರೆ ಕೆಲವರ ಅತಿರೇಖದ ಪೋಸ್ಟ್‌ಗಳು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಕರಾವಳಿಯವರು ಕನ್ನಡ ಸಿನಿಮಾ ರಕ್ಷಿಸುತ್ತಿದ್ದಾರೆ ಎನ್ನುವುದು ತಪ್ಪು. ಎಕ್ಕ ಹಾಗೂ ಜೂನಿಯರ್ ಸಿನಿಮಾಗಳು ಸಹ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿವೆ. ಕನ್ನಡಕ್ಕೆ ಒಳ್ಳೆಯ ಸಿನಿಮಾ ಬಂದಿದೆ. ಆದರೆ, ಈ ರೀತಿಯ ಮಾತುಗಳು ಸರಿಯಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಇದರ ನಡುವೆ ಭಾಷಾ ವಿವಾದವೂ ಶುರುವಾಗಿದೆ. ಇನ್ನೂ ಕೆಲವರು ಈ ಸಿನಿಮಾದಲ್ಲಿ ಕರಾವಳಿಯ ಸೊಬಗು ತೋರಿಸಲಾಗಿದೆ. ಮುಸ್ಲಿಮರನ್ನೇ ತೋರಿಸಿಲ್ಲ ಅಂತಲೂ ಕ್ಯಾತೆ ತೆಗೆದಿದ್ದಾರೆ. ಒಟ್ಟಾರೆ ಕನ್ನಡಕ್ಕೆ ತುಂಬಾ ದಿನಗಳ ನಂತರ ಒಳ್ಳೆ ಸಿನಿಮಾ ಬಂತು ಸಂಭ್ರಮಿಸೋಣ ಎನ್ನುವುದಕ್ಕೆ ಕೆಲವರು ಉದ್ದೇಶ ಪೂರ್ವಕವಾಗಿ ಕಲ್ಲು ಹಾಕುತ್ತಿದ್ದಾರೆ.












Click it and Unblock the Notifications