Darshan Thoogudeepa: ದರ್ಶನ್ ವಿರುದ್ಧ ಸಿಕ್ಕಿದೆ ಮತ್ತೊಂದು ಪ್ರಬಲ ಸಾಕ್ಷಿ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಸಾಕ್ಷಿಗಳು ಕಲೆಹಾಕುತ್ತಿದ್ದಾರೆ. ದರ್ಶನ್ ಮನೆ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯುವಲ್ಲಿ ಯಶಸ್ವಿಯಾದ ಬಳಿಕ, ಮತ್ತೊಂದು ಮಹತ್ವದ ಸಾಕ್ಷಿಯನ್ನು ಕಲೆಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆಯಾದ ಸಂದರ್ಭದಲ್ಲಿ ನಟ ದರ್ಶನ್ ತೂಗುದೀಪ ಬಳಸಿದ್ದ ಸಿಮ್ ಕಾರ್ಡ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ದರ್ಶನ್ ಬಳಸುತ್ತಿದ್ದ ಸಿಮ್ ಕಾರ್ಡ್ ದರ್ಶನ್ ಅವರ ಹೆಸರಿನಲ್ಲಿಇರಲಿಲ್ಲ, ಬೇರೆಯವರ ಸಿಮ್ ಕಾರ್ಡ್ ಬಳಸುತ್ತಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿದೆ.

ನಟ ದರ್ಶನ್‌ಗೆ ಬೇರೆಯವರ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ಬಳಸುವ ಅಗತ್ಯವೇನಿತ್ತು ಎನ್ನುವುದರ ಬಗ್ಗೆ ಪೊಲೀಸರು ಈಗ ತನಿಖೆ ಮಾಡುತ್ತಿದ್ದಾರೆ. ಸಿಮ್ ಕಾರ್ಡ್ ಯಾರ ಹೆಸರಿನಲ್ಲಿತ್ತು ಎನ್ನುವುದನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಆತನನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 164 ರ ಪೊಲೀಸರು ಈಗಾಗಲೇ ದರ್ಶನ್ ಬಳಸುತ್ತಿದ್ದ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿತ್ತೋ ಆತನ ಹೇಳಿಕೆಯನ್ನು ದಾಖಲಿಸಿದ್ದಾರೆ. ಇದು ಕೂಡ ದರ್ಶನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದೆ. ಸಿಮ್ ಕಾರ್ಡ್ ಬಳಸುತ್ತಿದ್ದ ವ್ಯಕ್ತಿಯನ್ನು ಆತನ ಮತ್ತೊಂದು ನಂಬರ್ ಮೂಲಕ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಸಿಸಿಟಿವಿ ದೃಶ್ಯಗಳು ಪರೀಕ್ಷೆಗೆ ರವಾನೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಟಿವಿ ದೃಶ್ಯಾವಳಿಗಳು ಕೂಡ ಪ್ರಮುಖ ಸಾಕ್ಷಿಯಾಗಲಿವೆ. ಪಟ್ಟಣಗೆರೆ ಶೆಡ್ ಬಳಿ ರೇಣುಕಾಸ್ವಾಮಿ ಕೊಲೆಯಾದ ದಿನ ಹಲವು ವಾನಹಗಳ ಓಡಾಟವನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಇದೀಗ ದರ್ಶನ್ ಮನೆಯಲ್ಲಿ ಡಿಲೀಟ್ ಆಗಿದ್ದ ಸಿಸಿಟಿವಿ ದೃಶ್ಯಗಳನ್ನು ಕೂಡ ಪೊಲೀಸರು ರಿಟ್ರೈವ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಸಿಸಿಟಿವಿ ದೃಶ್ಯಾವಳಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳಿಸಲಾಗಿದ್ದು, ಶಂಕಿತರ ಜೊತೆಗೆ ದೃಶ್ಯಗಳ ಹೋಲಿಕೆ ಬಗ್ಗೆ ಸ್ಪಷ್ಟನೆ ಸಿಗಲಿದೆ. ಇದು ಕೂಡ ಪ್ರಕರಣದಲ್ಲಿ ಮತ್ತೊಂದು ಪ್ರಬಲ ಸಾಕ್ಷಿಯಾಗಲಿದೆ.
ದರ್ಶನ್‌ಗೆ ಆಗಸ್ಟ್ 1ರಂದು ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಆಗಸ್ಟ್ 14ರವರೆಗೆ ದರ್ಶನ್ ಮತ್ತು ತಂಡ ಜೈಲಿನಲ್ಲೇ ಇರಬೇಕಾಗುತ್ತದೆ. ಮನೆ ಊಟಕ್ಕಾಗಿ ದರ್ಶನ್ ಸಲ್ಲಿಸಿದ್ದ ಅರ್ಜಿ ಕೂಡ ವಜಾ ಆಗಿದ್ದು, ಜೈಲೂಟಕ್ಕೆ ಹೊಂದಿಕೊಳ್ಳುವುದು ಮತ್ತೊಂದು ಸಮಸ್ಯೆಯಾಗಿದೆ.












Click it and Unblock the Notifications