Annapoorani: ಬಿರಿಯಾನಿ ಮಾಡಿ ಸಂಕಷ್ಟಕ್ಕೆ ಸಿಲುಕಿದ 'ಅನ್ನಪೂರಣಿ' ನಯನತಾರ! ಎಫ್‌ಐಆರ್ ದಾಖಲು
ನಯನತಾರಾ ಅಭಿನಯದ ಅನ್ನಪೂರಣಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಭಾರಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಹಲವು ದೃಶ್ಯಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು. ನಯನತಾರಾ ಮುಸ್ಲಿಂ ಹೆಣ್ಣುಮಗಳ ವೇಷಧರಿಸಿ, ಪ್ರಾರ್ಥನೆ ಮಾಡಿ ಬಿರಿಯಾನಿ ಮಾಡುವ ದೃಶ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಸಿನಿಮಾ ಮೇಲೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಟಿ ನಯನತಾರಾ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ. ನಟಿ ನಯನತಾರಾ, ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು ಹಾಗೂ ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ವಿರುದ್ಧ ಪ್ರಕರಣ ದಾಖಲಾಗಿದೆ.

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಬಲಪಂಥೀಯ ಸಂಘಟನೆಯೊಂದು ದೂರು ನೀಡಿದ್ದು ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ, ರಾಮನನ್ನು ಮಾಂಸಹಾರಿ ಎಂದು ಕರೆದಿದ್ದಾರೆ ಮತ್ತು ಸಿನಿಮಾದ ಮೂಲಕ ಲವ್ ಜಿಹಾದ್ ಅನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಏಳು ಜನರ ವಿರುದ್ಧ ಆರೋಪ
ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ನಯನತಾರಾ, ನಿರ್ದೇಶಕ ನೀಲೇಶ್ ಕೃಷ್ಣ, ನಿರ್ಮಾಪಕರಾದ ಜತಿನ್ ಸೇಥಿ ಮತ್ತು ಆರ್ ರವೀಂದ್ರನ್ ಮತ್ತು ನೆಟ್‌ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ಮೋನಿಕಾ ಶೆರ್ಗಿಲ್ ಸೇರಿದಂತೆ ಏಳು ಆರೋಪಿಗಳನ್ನು ಹೆಸರಿಸಲಾಗಿದೆ.
ಡಿಸೆಂಬರ್ 1 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಚಲನಚಿತ್ರವು ಡಿಸೆಂಬರ್ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿತ್ತು. ವ್ಯಾಪಕ ಆಕ್ರೋಶ ಮತ್ತು ಹಲವು ಪೊಲೀಸ್ ದೂರುಗಳ ನಂತರ, ಈಗ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ.
ನಯನತಾರಾ ಮತ್ತು ಇತರರ ವಿರುದ್ಧ ಬಲಪಂಥೀಯ ಸಂಘಟನೆಗಳಾದ ಬಜರಂಗದಳ ಮತ್ತು ಹಿಂದೂ ಐಟಿ ಸೆಲ್‌ನಿಂದ ಮುಂಬೈನಲ್ಲಿ ಎರಡು ದೂರುಗಳು ದಾಖಲಾಗಿವೆ.
ಹಿಂದೂ ಸಂಘಟನೆಗಳ ಆರೋಪವೇನು?
'ಅನ್ನಪೂರಣಿ' ಸಿನಿಮಾದಲ್ಲಿ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ, ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಮತ್ತು ಭಗವಾನ್ ರಾಮನ ವಿರುದ್ಧ ಆಧಾರರಹಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಹಿಂದೂ ಸೇವಾ ಪರಿಷತ್ತು ಆರೋಪಿಸಿದೆ.
ದೇವಸ್ಥಾನದ ಅರ್ಚಕರ ಮಗಳಾಗಿ ನಟಿಸಿರುವ ನಯನತಾರಾ ಬಿರಿಯಾನಿ ಮಾಡುವ ಮುನ್ನ ಹಿಜಾಬ್ ಧರಿಸಿ ನಮಾಜ್ ಮಾಡುವ ದೃಶ್ಯ ಸೇರಿದಂತೆ ಹಲವು ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ನಯನತಾರಾ ಸ್ನೇಹಿತನ ಪಾತ್ರವೊಂದು ಮಾಂಸವನ್ನು ತಿನ್ನುವಂತೆ ಹೇಳುವುದು, ರಾಮ ಮತ್ತು ಸೀತೆ ಕೂಡ ಮಾಂಸ ತಿನ್ನುತ್ತಿದ್ದರು ಎಂದು ಹೇಳಿರುವುದರ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.
ಈ ಚಲನಚಿತ್ರವು 'ಲವ್ ಜಿಹಾದ್' ಅನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಲಾಗಿದೆ. ಇದನ್ನು ಕೆಲವು ಬಲಪಂಥೀಯ ಸಂಘಟನೆಗಳು ಮುಸ್ಲಿಂ ಪುರುಷರು ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು ಮತಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲು ಬಳಸಿದ್ದಾರೆ.












Click it and Unblock the Notifications