Upendra: ಸ್ಯಾಂಡಲ್ ವುಡ್ ನಲ್ಲಿ ಗಂಡಸರ ಮೇಲೂ ಶೋಷಣೆ: ಸ್ಪೋಟಕ ಹೇಳಿಕೆ ನೀಡಿದ ಉಪೇಂದ್ರ
ಬೆಂಗಳೂರು, ಸೆಪ್ಟೆಂಬರ್ 17: ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ ಮೀಟೂ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಬೇರೆ ಬೇರೆ ಭಾಷೆಯ ಚಿತ್ರರಂಗದ ಹಲವು ನಟಿಯರು ತಮಗೆ ಆಗಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾತನಾಡಿದ್ದು, ಇದೀಗ ಕನ್ನಡ ಚಿತ್ರರಂಗದಲ್ಲೂ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇದಕ್ಕೊಂದು ಕಮಿಟಿ ರಚನೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕೇರಳದ 'ಹೇಮಾ ಸಮಿತಿ ವರದಿ' ಪ್ರಕಟವಾದ ಬಳಿಕ ತೆಲುಗು, ಕನ್ನಡ ಮುಂತಾದ ಚಿತ್ರರಂಗದಲ್ಲೂ ತನಿಖೆಗೆ ಒತ್ತಾಯ ಕೇಳಿಬಂದಿದೆ. ಫೈರ್ (ಫಿಲ್ಮ್ ಇಂಡಸ್ಟ್ರೀ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಡಿ) ಸಂಸ್ಥೆಯ ಮೂಲಕ 153 ಜನರು ಕನ್ನಡ ಚಿತ್ರರಂಗದಲ್ಲಿಯೂ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಲೈಂಗಿಕ ದೌರ್ಜನ್ಯದ ಕುರಿತು ನಿನ್ನೆ(ಸೋಮವಾರ) ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದೀರ್ಘವಾಗಿ ಈ ಬಗ್ಗೆ ಚರ್ಚೆ ನಡೆಸಿದ್ದು, ಇದೀಗ ನಟ ಉಪೇಂದ್ರ ಅವರು ಶಾಂಕಿಂಗ್ ಹೇಳಿಕೆಯನ್ನ ನೀಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾಧ್ಯಮಗಳ ಜೊತೆಗೆ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಮಾತನಾಡಿ, ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರು ಮಾತ್ರವಲ್ಲ ಗಂಡಸರ ಮೇಲೂ ಶೋಷಣೆ ಆಗಿದೆ ಎಂದು ನಟ ಉಪೇಂದ್ರ ಹೇಳಿಕೆ ನೀಡಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಮಹಿಳೆಯರು ಮಾತ್ರವಲ್ಲ ಗಂಡಸರ ಮೇಲೂ ಶೋಷಣೆ ಆಗಿದೆ. ಒಂದು ವೇಳೆ ನಾನು ಹುಡುಗಿಯಾಗಿದ್ದರೆ ಇದೆಲ್ಲಾ ಗೊತ್ತಾಗುತ್ತಿತ್ತೇನೋ. ಇದಕ್ಕೆಲ್ಲಾ ಒಂದು ವೇದಿಕೆ ರೆಡಿ ಆಗಬೇಕು..ಇಂತಹ ವಿಚಾರಗಳನ್ನು ಪ್ರಸ್ತಾಪ ಮಾಡಲು ಒಂದು ವೇದಿಕೆ ಇರಬೇಕು. ಕೆಲವರಿಗೆ ಚಿತ್ರರಂಗದಲ್ಲಿ ಶೋಷಣೆ ಆಗಿದೆ, ಇದು ಎಲ್ಲಾ ಚಿತ್ರರಂಗದಲ್ಲೂ ನಡೆಯುತ್ತದೆ. ಇಂತಹ ಸಮಸ್ಯೆ ಇದ್ದಾಗ ಅದನ್ನು ಹೇಳಲು ಒಂದು ವೇದಿಕೆ ಇರಬೇಕು ಎಂದು ನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಹೇಳಿದ್ದಾರೆ.











Click it and Unblock the Notifications