'ಪಾರು' ಧಾರಾವಾಹಿ ಖ್ಯಾತಿಯ ನಟ ಶ್ರೀಧರ್ ನಾಯಕ್ ಇನ್ನಿಲ್ಲ
ಬೆಂಗಳೂರು, ಮೇ 27: ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಕಿರುತೆರೆ, ಸಿನಿಮಾ ನಟ ಶ್ರೀಧರ್ ನಾಯಕ್ (47) ವಿಧಿವಶರಾಗಿದ್ದಾರೆ. 'ಪಾರು' ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದ್ದರು. 'ಮ್ಯಾಕ್ಸ್' ಕನ್ನಡ ಸಿನಿಮಾದಲ್ಲಿ ಕೂಡ ಅವರು ನಟಿಸಿದ್ದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಧರ್ ನಾಯಕ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಶ್ರೀಧರ್ ನಾಯಕ್ 'ಪಾರು' ಮತ್ತು 'ವಧು' ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು, ಕಿಚ್ಚ ಸುದೀಪ ಅಭಿನಯದ 'ಮ್ಯಾಕ್ಸ್' ಸಿನಿಮಾದಲ್ಲಿಯೂ ನಟಿಸಿದ್ದರು. ನಟನ ಅಕಾಲಿಕ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ನಟ ಶ್ರೀಧರ್ ನಾಯಕ್ ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪಾರ್ಥೀವ ಶರೀರ ಅಲ್ಲಿಯೇ ಇದ್ದು, ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಕುಟುಂಬದವರು ಹೇಳಿದ್ದಾರೆ.
ಹಿರಿಯ ನಟ ನಾಗೇಂದ್ರ ಶಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ನಮ್ಮ ನಡುವಿದ್ದ ಕಲಾವಿದ ಶ್ರೀಧರ ನಾಯಕ್ ಬಹಳ ದಿನಗಳ ಅನಾರೋಗ್ಯದಿಂದ ಮುಕ್ತರಾಗಿ ರಾತ್ರಿ 10 ಗಂಟೆಗೆ ದೇವಸನ್ನಿಧಿ ಸೇರಿದ್ದಾರೆ. ಅವರ ಪಾರ್ಥೀವ ಶರೀರವು ಹೆಬ್ಬಾಳದಲ್ಲಿರುವ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಇದ್ದು, ಬೆಳಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿರುತ್ತಾರೆ' ಎಂದು ಮಾಹಿತಿ ನೀಡಿದ್ದಾರೆ.
ಗುರುತು ಸಿಗದಷ್ಟು ಬದಲಾಗಿದ್ದರು: ಕಳೆದ ಏಪ್ರಿಲ್‌ನಲ್ಲಿ ನಟ ಶ್ರೀಧರ್ ನಾಯಕ್ ಅನಾರೋಗ್ಯದ ಕುರಿತು ಮಾಹಿತಿ ಬಹಿರಂಗವಾಗಿತ್ತು. ಅವರು ಗುರುತು ಸಿಗದಷ್ಟು ಬದಲಾಗಿದ್ದರು. ಆಸ್ಪತ್ರೆಯ ಬೆಡ್ ಮೇಲೆ ಅವರು ಇರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅವರ ಚಿಕಿತ್ಸೆಗಾಗಿ ಹಲವಾರು ಜನರು ಹಣದ ಸಹಾಯವನ್ನು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
ನಟ ಶ್ರೀಧರ್ ನಾಯಕ್ 'ಪಾರು', 'ವಧು' ಧಾರಾವಾಹಿಗಳಲ್ಲಿ ನಟಿಸಿದ್ದರು. ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದಲ್ಲಿಯೂ ಅವರು ನಟಿಸಿದ್ದರು. ನಟನ ಸಾವಿಗೆ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಏಪ್ರಿಲ್‌ನಲ್ಲಿ 'ಶ್ರೀಧರ್ ನಾಯಕ್ ಅನಾರೋಗ್ಯ ಬೇಕಿದೆ ಸಹಾಯ ಹಸ್ತ. ನಟ ಶ್ರೀಧರ್‌ಗೆ ಅನಾರೋಗ್ಯ ಬೆಂಗಳೂರಿನ ಆಸ್ಪತ್ರೆಗೆ ದಾಖಲು. 'ಪಾರು' ಹಾಗೂ 'ವಧು' ಧಾರಾವಾಹಿಗಳ ಮೂಲಕ ಮನೆಮಾತಾದ ಶ್ರೀಧರ್' ಎಂಬ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು.
ಸುಮಾರು ಮೂರು ತಿಂಗಳಿನಿಂದ ಅವರು ಹಾಸಿಗೆ ಹಿಡಿದಿದ್ದಾರೆ. ಪ್ರತಿ ದಿನದ ಚಿಕಿತ್ಸೆಗೆ 15 ರಿಂದ 20 ಸಾವಿರ ಖರ್ಚಾಗುತ್ತಿದೆ. ಸಾಧ್ಯವಾದವರು ಅವರ ಚಿಕಿತ್ಸೆಗೆ ಧನ ಸಹಾಯ ಮಾಡಿ ಎಂದು ವಿವರಗಳನ್ನು ಪೋಸ್ಟ್ ಮಾಡಲಾಗಿತ್ತು.
ಕೋವಿಡ್ ಸಂದರ್ಭದಿಂದ ಹಣದ ಸಮಸ್ಯೆ ಪ್ರಾರಂಭವಾಯಿತು. ಸರಿಯಾಗಿ ಕೆಲಸ ಸಿಗಲಿಲ್ಲ. ಸಿಕ್ಕ ಕೆಲಸದಲ್ಲಿ ದೊಡ್ಡ ಮಟ್ಟದ ಸಂಭಾವನೆ ಇರಲಿಲ್ಲ. ಸರಿಯಾಗಿ ಊಟವನ್ನೂ ಮಾಡದ ಕಾರಣ ಅದು ಆರೋಗ್ಯದ ಮೇಲೆ ಪರಿಣಾಮ ಬೀರಿತು. ವಿಟಮಿನ್, ಪ್ರೋಟಿನ್ ಕಡಿಮೆಯಾಗಿ ಮೊದಲು ಜ್ವರ ಬಂತು ಎಂದು ಶ್ರೀಧರ್ ಆಪ್ತರ ಬಳಿ ಹೇಳಿಕೊಂಡಿದ್ದರು ಎಂಬ ಮಾಹಿತಿ ಇದೆ.












Click it and Unblock the Notifications