ಮಾಣಿಕ್ಯ ಸಿನಿಮಾದ ನಿರ್ಮಾಪಕರ ಬಂಧನ: ಕಾರಣವೇನು?
ಕಿಚ್ಚ ಸುದೀಪ್ ಅಭಿನಯದ ಮಾಣಿಕ್ಯ, ಕಾಶಿ ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಿಗೆ ಬಂಡವಾಳ ಹಾಕಿದ್ದ ಕನ್ನಡದ ಖ್ಯಾತ ನಿರ್ಮಾಪಕ ಎಮ್.ಎನ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಉಪ್ಪಾರಪೇಟೆ ಪೊಲೀಸರು ನಿರ್ಮಾಪಕ ಎಮ್.ಎನ್ ಕುಮಾರ್ ಅವರನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಗ್ಗೇಶ್ ಎನ್ನುವವರಿಂದ 1.25 ಕೋಟಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿದ್ದು, ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದೇ ಗೈರಾದ ಹಿನ್ನೆಲೆಯಲ್ಲಿ ಸದ್ಯ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ಶನಿವಾರ ಅಂದರೆ ಮಾರ್ಚ್ 29ರಂದು ಎಮ್.ಎನ್ ಕುಮಾರ್ ಅವರನ್ನು ಬಂಧಿಸಲಾಗಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಎಮ್.ಎನ್ ಕುಮಾರ್ ಮಾಣಿಕ್ಯ, ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರಗುರು, ಕಾಶಿ ಸೇರಿದಂತೆ ಕನ್ನಡದ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ಇನ್ನು ಈ ಹಿಂದೆ ನಿರ್ಮಾಪಕ ಎಂ.ಎನ್ ಕುಮಾರ್ ಕಿಚ್ಚ ಸುದೀಪ್ ವಿರುದ್ಧ ಆರೋಪ ಮಾಡಿ ಸುದ್ದಿಯಲ್ಲಿದ್ದರು. ಸುದೀಪ್ ತಮ್ಮ ಕಡೆಯಿಂದ ಮುಂಗಡ ಹಣ ಪಡೆದು ಸಿನಿಮಾಗೆ ದಿನಾಂಕ ನೀಡದೇ ಸತಾಯಿಸುತ್ತಿದ್ದಾರೆ. ಸಿನಿಮಾ ಮಾಡದೇ ಇದ್ದ ಮೇಲೆ ಕೊಟ್ಟಿರುವ ಹಣವನ್ನೂ ಕೂಡ ವಾಪಸ್ ಕೊಡುತ್ತಿಲ್ಲ ಎಂದು ಆರೋಪಿಸಿದ್ದರು. ಇವರ ಜೊತೆಗೆ ಇತರ ನಿರ್ಮಾಪಕರು ಕೂಡ ಸುದೀಪ್ ವಿರುದ್ಧ ಆರೋಪಿಸಿದ್ದರು. ಎಂ.ಎನ್ ಕುಮಾರ್ ಅವರ ಆರೋಪ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ್ದ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ಸಹ ನೀಡಿದ್ದರು.
ಇನ್ನು ಕೆಲವು ದಿನಗಳ ಹಿಂದೆ ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಮಾಣಿಕ್ಯ ಸಿನಿಮಾದ ನಟಿ ರನ್ಯಾ ರಾವ್ ಅವರನ್ನು ಕೂಡ ಬಂಧಿಸಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದೀಗ ಚಿತ್ರದ ನಿರ್ಮಾಪಕರು ಕೂಡ ಜೈಲು ಸೇರಿದ್ದಾರೆ.












Click it and Unblock the Notifications