Darshan Thoogudeepa: ಜಾಮೀನು ಸಿಗುವ ಮುನ್ನವೇ ನಟ ದರ್ಶನ್‌ಗೆ ಮತ್ತೊಂದು ಕೇಸ್‌ನಿಂದ ಕಂಟಕ!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಅವರು ಜಾಮೀನಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದಾರೆ. ಹೈಕೋರ್ಟ್ ಕೂಡ ಜಾಮೀನು ಅರ್ಜಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿರುವ ಹಿನ್ನೆಲೆ, ಅಲ್ಲಿಯಾದರೂ ಜಾಮೀನು ಸಿಗಬಹುದು ಎನ್ನುವ ತುಸು ನಿರಾಳವಂತೂ ಮೂಡಿತ್ತು. ಆದರೆ, ದರ್ಶನ್‌ಗೆ ಈಗ ಮತ್ತೊಂದು ಕಂಟಕ ಎದುರಾಗುವ ಸೂಚನೆ ಸಿಕ್ಕಿದೆ.
ಕೊಲೆ ಕೇಸ್ ಸುರುಳಿಯಿಂದ ಇನ್ನೂ ರಿಲೀಫ್ ಪಡೆದುಕೊಳ್ಳಲಾಗದ ದರ್ಶನ್ ಅವರಿಗೆ ದೊಡ್ಡ ಆಪತ್ತು ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ದರ್ಶನ್ ಸಿನಿಮಾ ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪವಿತ್ತು. ಆದರೆ, ಇದು ಸ್ವಲ್ಪ ದಿನ ಸದ್ದು ಮಾಡಿ ತಣ್ಣಗಾಗಿತ್ತು.

ಈಗ ಇದೇ ಕೇಸ್ ಮರುಜೀವ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದ ಹಳೇ ಕೇಸ್ ದರ್ಶನ್ ಅವರಿಗೆ ಮತ್ತೆ ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ.
ಏನಿದು ಪ್ರಕರಣ?: 2020ರಲ್ಲಿ ನಿರ್ಮಾಪಕ ಭರತ್ ಎನ್ನುವವರು ಭಗವಾನ್ ಶ್ರೀ ಕೃಷ್ಣಾ ಎನ್ನುವ ಸಿನಿಮಾ ಪ್ರೊಡ್ಯೂಸ್ ಮಾಡುತ್ತಿದ್ದರು. ಈ ಸಿನಿಮಾದಲ್ಲಿ ಧೃವನ್ ಎಂಬುವವರು ನಾಯಕ ನಟರಾಗಿ ನಟಸುತ್ತಿದ್ದರು. ಮೊದಲಿಗೆ ಸಿನಿಮಾ ಶೂಟಿಂಗ್ ಶುರುವಾಗಿ ಕೋವಿಡ್‌ನಿಂದಾಗಿ ಅರ್ಧಕ್ಕೆ ಸ್ಟಾಪ್ ಆಗಿತ್ತು. ಇದೇ ವಿಚಾರವಾಗಿ ಧೃವನ್ ಅವರು ನಟ ದರ್ಶನ್ ಬಳಿಗೆ ಹೋಗಿ ಶೂಟಿಂಗ್ ವಿಚಾರವಾಗಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಬಳಿಕ ದರ್ಶನ್ ಅವರು ನಿರ್ಮಾಪಕರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದರು ಎನ್ನಲಾಗಿದೆ.

ಪ್ರೊಡ್ಯೂಸರ್ ಭರತ್‌ಗೆ ಕರೆ ಮಾಡಿದ್ದ ನಟ ದರ್ಶನ್, ನೀನೇ ಇರೋದಿಲ್ಲ ಹುಷಾರು! ಎಂದು ಬೆದರಿಕೆ ಹಾಕಿದ್ದರು ಎನ್ನುವ ಆರೋಪವಿತ್ತು. ಇದೇ ವಿಚಾರವಾಗಿ ನಿರ್ಮಾಪಕ ಭರತ್ ಅವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಧೃವನ್ ದರ್ಶನ್ ಅವರಿಂದ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದರು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಎನ್‌ಸಿಆರ್ ದಾಖಲಿಸಿ ಸುಮ್ಮನಾಗಿದ್ದರು. ಈ ವಿಚಾರದಲ್ಲಿ ದರ್ಶನ್ ಅವರ ಹೆಸರು ದೊಡ್ಡದಾಗಿ ಕೇಳಿಬಂದಿತ್ತು.
ಎನ್‌ಸಿಆರ್ ದಾಖಲಾದ ಕಾರಣ ದರ್ಶನ್ ಮತ್ತು ಧೃವನ್ ಮೇಲೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈಗ ಮತ್ತೆ ಇದೇ ಕೇಸ್‌ಗೆ ಮರುಜೀವ ಸಿಕ್ಕಿದ್ದು, ಬೆದರಿಕೆ ಕೇಸ್‌ನಡಿ ಧೃವನ್, ನಟ ದರ್ಶನ್ ಹಾಗೂ ಅವರ ಮ್ಯಾನೇಜರ್ ಎನ್ನಲಾದ ನಾಗರಾಜ್ ವಿರುದ್ಧ ಮತ್ತೆ ಎನ್‌ಸಿಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಒಂದು ಕೇಸ್‌ನಲ್ಲೇ ಹಲವು ತಿಂಗಳುಗಳಿಂದ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್‌ಗೆ ಈಗ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಜೈಲುವಾಸದಲ್ಲಿದ್ದಾರೆ. ಅಕ್ಟೋಬರ್ 14ರಂದು ದರ್ಶನ್ ಜಾಮೀನು ಅರ್ಜಿಯನ್ನು ಬೆಂಗಳೂರಿನ 57ಮೇ ಸಿಸಿಎಚ್ ಕೋರ್ಟ್ ವಜಾ ಮಾಡಿತ್ತು. ಬಳಿಕ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಅಕ್ಟೋಬರ್ 22ರಂದು ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಇದರ ನಡುವೆಯೇ ದರ್ಶನ್ ಅವರಿಗೆ ಮತ್ತೊಂದು ಕೇಸ್ ಸುತ್ತಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications