Hindu: ಕರ್ನಾಟಕದ ಸಚಿವರ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್!
ಸನಾತನ ಧರ್ಮದ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಕಮೆಂಟ್ ಮಾಡಿದ್ದೇ ಮಾಡಿದ್ದು, ವಿವಾದದ ಕಿಚ್ಚು ದೇಶಾದ್ಯಂತ ಹೊತ್ತಿಕೊಂಡಿದೆ. ಹಾಗೇ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆಗೆ ಕೂಡ ಈಗ ಸಮಸ್ಯೆ ಎದುರಾಗಿದೆ. ಉದಯನಿಧಿ ಸ್ಟಾಲಿನ್ & ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್ ದಾಖಲಾಗಿದೆ.
ಹೌದು, ಸನಾತನ ಧರ್ಮ ನಿರ್ಮೂಲನೆ ಮಾಡಲು ಸ್ಟಾಲಿನ್ ಕರೆ ನೀಡಿದ್ದ ಆರೋಪ ಹಿನ್ನೆಲೆ ಎಫ್‌ಐಆರ್ ದಾಖಲಾಗಿದೆ. ಹಾಗೇ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಬೆಂಬಲಿಸಿದ್ದಕ್ಕೆ ಪ್ರಿಯಾಂಕ್ ಖರ್ಗೆ ಅವರ ವಿರುದ್ಧವು ಉತ್ತರ ಪ್ರದೇಶದಲ್ಲಿ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದು ಮತ್ತೊಂದು ಸುತ್ತು ಈ ವಿವಾದದ ಕಿಚ್ಚು ಧಗಧಗಿಸುವ ಮುನ್ಸೂಚನೆ ಸಿಕ್ಕಿದೆ. ಈ ಘಟನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಕರ್ನಾಟಕದ ಸಚಿವರ ವಿರುದ್ಧ ಎಫ್‌ಐಆರ್
ಅಂದಹಾಗೆ ಉತ್ತರ ಪ್ರದೇಶದ ರಾಂಪುರ ಎಂಬಲ್ಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ನಾಯಕರ ಮೇಲೆ ಕೇಸ್ ದಾಖಲಾಗಿದೆ. ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ & ಪ್ರಿಯಾಂಕ್ ಖರ್ಗೆ ವಿರುದ್ಧ ಐಪಿಸಿ ಸೆಕ್ಷನ್ 295 ಎ ಅಂದ್ರೆ ಧಾರ್ಮಿಕ ಭಾವನೆ ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳ ಅಡಿ, ಮತ್ತು 153 ಎ ಅಂದ್ರೆ ವಿವಿಧ ಧಾರ್ಮಿಕ ಗುಂಪುಗಳ ಮಧ್ಯೆ ದ್ವೇಷ ಉತ್ತೇಜನೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ. ಹಾಗಾದರೆ ದೂರು ನೀಡಿದ್ದು ಯಾರು? ಬನ್ನಿ ತಿಳಿಯೋಣ.
ಉದಯನಿಧಿ ಸ್ಟಾಲಿನ್ ಹೇಳಿದ್ದು ಏನು?
ಇನ್ನು ಈ ಇಬ್ಬರು ದಕ್ಷಿಣ ಭಾರತದ ರಾಜಕೀಯ ನಾಯಕರ ವಿರುದ್ಧ ದೂರು ದಾಖಲು ಮಾಡಲು ಕಾರಣ ವಕೀಲರು ನೀಡಿದ ದೂರು ಎನ್ನಲಾಗಿದೆ. ವಕೀಲ ಹರ್ಷಗುಪ್ತಾ ಹಾಗೂ ರಾಮ್ ಸಿಂಗ್ ಲೋಧಿ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಇನ್ನು ಸನಾತನ ಧರ್ಮ ಸಮಾನತೆ & ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಸನಾತನ ಧರ್ಮವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು ಎಂದು ತಮಿಳುನಾಡು ಯುವ ಕಲ್ಯಾಣ ಸಚಿವ ಉದಯನಿಧಿ ಸ್ಟಾಲಿನ್ ಸೆಪ್ಟಂಬರ್ 2ರಂದು ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ಕೆಲ ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಘಿ, ಮಲೇರಿಯಾ ಅಥವಾ ಕೊರೊನಾವೈರಸ್ ವಿರೋಧಿಸಲು ಸಾಧ್ಯವಿಲ್ಲ. ಅದರ ಬದಲಿಗೆ ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಕಾರಣಕ್ಕೆ ವಿವಾದದ ಕಿಚ್ಚು ಹೊತ್ತಿತ್ತು. ಅಲ್ಲದೆ ಪ್ರಿಯಾಂಕ್ ಖರ್ಗೆ ಹೇಳಿಕೆ ವಿರುದ್ಧವೂ ಇದೀಗ ಎಫ್‌ಐಆರ್ ದಾಖಲಾಗಿ ಸದ್ದು ಮಾಡುತ್ತಿದೆ.












Click it and Unblock the Notifications