ದರ್ಶನ್ ಸಿನಿ ಜೀವನ ಅಂತ್ಯ? ಫಿಲ್ಮ್ ಚೇಂಬರ್ ಅಧ್ಯಕ್ಷ ಹೇಳಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪದೇ ಪದೇ ಹಲವು ವಿವಾದ ಮಾಡಿಕೊಂಡಿದ್ದ ದರ್ಶನ್ ಈಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಕನ್ನಡ ಚಿತ್ರರಂಗದಿಂದಲೇ ಅವರನ್ನು ಬ್ಯಾನ್ ಮಾಡಬೇಕು ಎನ್ನುವ ಕೂಗು ಜೋರಾಗಿದೆ.
ಇಂದು ತುರ್ತಾಗಿ ಸಭೆ ನಡೆಸಿದ ಫಿಲಂ ಚೇಂಬರ್ ಅಧ್ಯಕ್ಷರು, ಪದಾಧಿಕಾರಿಗಳು ದರ್ಶನ್ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ಈ ಪ್ರಕರಣದಲ್ಲಿ ದರ್ಶನ್ ಅವರನ್ನು ರಕ್ಷಣೆ ಮಾಡಲು ಪ್ರಯತ್ನಿಸುವ ಪ್ರಶ್ನೇಯೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ನಾಳೆ ಫಿಲಂ ಚೇಂಬರ್ ಸದಸದ್ಯರ ಜೊತೆ ಚಿತ್ರದುರ್ಗಕ್ಕೆ ಹೋಗಿ ರೇಣುಕಾಸ್ವಾಮಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತೇವೆ. ನಾವೆಲ್ಲಾ ಆ ಕುಟುಂಬದ ಪರ ನಿಲ್ಲುತ್ತೇವೆ ಎಂದರು.
ಇದು ಕೊಲೆ ಪ್ರಕರಣವಾಗಿದ್ದು ಫಿಲಂ ಚೇಂಬರ್ ಯಾವುದೇ ಕಾರಣಕ್ಕೂ ಮಧ್ಯಪ್ರವೇಶ ಮಾಡುವುದಿಲ್ಲ. ಯುವಕನಿಗೆ ಆಗಿರುವ ಅನ್ಯಾಯವನ್ನು ನಾವು ಖಂಡಿಸುತ್ತೇವೆ ಎಂದರು.
ಬ್ಯಾನ್ ಮಾಡುವ ಬಗ್ಗೆ ಹೇಳಿದ್ದೇನು?
ದರ್ಶನ್ ಅವರನ್ನು ಸಿನಿಮಾ ರಂಗದಿಂದ ಬ್ಯಾನ್ ಮಾಡುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, ಇನ್ನೂ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪೊಲೀಸರು ವರದಿ ಕೊಟ್ಟ ಬಳಿಕ ಈ ಬಗ್ಗೆ ತೀರ್ಮಾನ ಮಾಡುತ್ತೇವೆ.
ಒಂದು ವೇಳೆ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಇರುವುದು ಸಾಬೀತಾದರೆ ಬ್ಯಾನ್ ಮಾಡುವ ಬಗ್ಗೆ ಗಂಭೀರ ಯೋಚನೆ ಮಾಡುತ್ತೇವೆ. ಅವರನ್ನು ಪೊಲೀಸರು ಬಂಧಿಸಿ ಎರಡು ದಿನ ಆಗಿದೆ, ನಾಲ್ಕೈದು ದಿನಗಳಲ್ಲಿ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ನೀಡಲಿದ್ದು, ಬಳಿಕ ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಪ್ರಮುಖರ ಸಭೆ ನಡೆಸಿ ಬ್ಯಾನ್ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ಗಂಡ-ಹೆಂಡತಿ ಮಧ್ಯೆ ಸಂಧಾನ ಮಾಡಿದ್ದೆವು?
2011ರಲ್ಲಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಜಗಳ ಆಗಿದ್ದಾಗ ನಾವೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹರಿಸಿದ್ದೆವು. ಆದರೆ ಇದು ಕೊಲೆ ಪ್ರಕರಣವಾಗಿದ್ದು, ನಾವ್ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರವೇ ಎಲ್ಲಾ ನಡೆಯಲಿದೆ ಎಂದರು.
ದರ್ಶನ್ ಮೇಲೆ ಈಗಾಗಲೇ ಹಲವು ನಿರ್ಮಾಪಕರು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದಾರೆ. ಅವರ ಸಿನಿಮಾವೊಂದು ಈಗಾಗಲೇ ಅರ್ಧಕ್ಕಿಂತ ಹೆಚ್ಚು ಚಿತ್ರೀಕರಣನ ಆಗಿದೆ. ಮೂರರಿಂದ ಐದು ತಿಂಗಳವರೆಗೆ ದರ್ಶನ್ ಹೊರಬರುವುದು ಅನುಮಾನವಾಗಿದೆ. ಆ ನಿರ್ಮಾಪಕರನ್ನು ಕರೆಸಿ ಮಾತನಾಡುತ್ತೇವೆ ಎಂದರು.












Click it and Unblock the Notifications