Darshan Thoogudeepa: ನಂಜನಗೂಡು ನಂಜುಡೇಶ್ವರನ ದರ್ಶನ ಪಡೆದ ಮೀನಾ ತೂಗುದೀಪ- ಕಾರಣ ಇದೇ..
ಮೈಸೂರು ಏಪ್ರಿಲ್ 3: ಬಂಧನದ ಭೀತಿಯನ್ನು ಹೊಂದಿದ್ದ ನಟ ದರ್ಶನ್‌ಗೆ ಕೊಂಚ ರಿಲೀಫ್ ಸಿಕ್ಕಿದೆ. ಕಳೆದ ದಿನ ದರ್ಶನ್‌ಗೆ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ನಡೆಸಲಾಯಿತು. ಈ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದ್ದು ಏಪ್ರಿಲ್ 22ರವರೆಗೆ ಕಾಟೇರಾ ಸೇಫ್ ಆಗಿದ್ದಾರೆ. ಕೊನೆಗೂ ತಾಯಿಯ ಪೂಜೆಯ ಫಲ ಸಿಕ್ಕಂತಾಗಿದೆ.
ಹೌದು ಕಳೆದ ದಿನ ದರ್ಶನ್ ತಾಯಿ ಮೀನಾ ತೂಗುದೀಪ ಅವರು ಮೈಸೂರಿನ ನಂಜನಗೂಡು ನಂಜುಡೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಒಂದೆಡೆ ಮಗ ಮತ್ತೆ ಬಂಧನದ ಭೀತಿಯನ್ನು ಅನುಭವಿಸುತ್ತಿದ್ದರೆ ಮತ್ತೊಂದೆಡೆ ತಾಯಿ ಮಗನ ಸಮಸ್ಯೆಗಳೆಲ್ಲವೂ ದೂರವಾಗಲೆಂದು ದೇವರ ದರ್ಶನ್ ಪಡೆದು ಪೂಜೆ ಸಲ್ಲಿಸಿದ್ದಾರೆ.

ದರ್ಶನ್‌ಗೆ ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ರಾಜ್ಯ ಗೃಹ ಇಲಾಖೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 22ಕ್ಕೆ ಮುಂದೂಡಿದೆ. ಆರೋಪಿಗಳ ಪರ ವಕೀಲರು ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಕೋರ್ಟ್ ಮುಂದೂಡಿದೆ.
ರಾಜ್ಯ ಪೊಲೀಸ್ ಇಲಾಖೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಜನ ಆರೋಪಿಗಳಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೀಗಾಗಿ ದರ್ಶನ್ ಜಾಮೀನು ಪಡೆದು ಹೊರಗಿದ್ದರೂ ಕೂಡ ನೆಮ್ಮದಿಯಾಗಿರುವುದು ಕಷ್ಟವಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದ ದರ್ಶನ್ ಅನಾರೋಗ್ಯ ಕಾರಣದಿಂದಾಗಿ ಜಾಮೀನು ಪಡೆದು ಜೈಲಿನಿಂದ ಹೊರಬಂದರು. ಇವರೊಂದಿಗೆ ಏಳು ಜನ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಹೈಕೋರ್ಟ್ ನೀಡಿದ ಜಾಮೀನು ಅರ್ಜಿಯನ್ನು ರದ್ದುಗೊಳಿಸುವಂತೆ ಕೋರಿ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್‌ಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದೆ.
ಇದರಿಂದಾಗಿ ದರ್ಶನ್‌ಗೆ ಜೈಲಿನಿಂದ ಹೊರಬಂದ ಬಳಿಕವೂ ಸಂಕಷ್ಟ ತಪ್ಪುತ್ತಿಲ್ಲ. ವಿಚಾರಣೆಗೆಂದು ಕರೆದಾಗಲೆಲ್ಲಾ ದರ್ಶನ್ ಕೋರ್ಟ್‌ಗೆ ಹಾಜರಾಗಬೇಕಿದೆ. ಎಲ್ಲವನ್ನು ಮರೆತು ಹೊಸ ಜೀವನ ರೂಪಿಸಿಕೊಳ್ಳಬೇಕು ಅನ್ನೋ ಹೊತ್ತಿಗೆ ಹೊಸ ಸಮಸ್ಯೆ ಉದ್ಬವಾಗುತ್ತಿದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಂದ ಮಗನನ್ನು ಪಾರು ಮಾಡುವಂತೆ ದರ್ಶನ್ ತಾಯಿ ಮೀನಾ ತೂಗುದೀಪ ನಂಜುಡೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೀನಾ ಅವರು, 'ಸರ್ವೇಜನ ಸುಖಿನೋಭವಂತು ಎಲ್ಲರ ಚೆನ್ನಾಗಿರಲೆಂದು ಪೂಜೆ ಮಾಡಿದೆ. ದರ್ಶನ್ ಆರೋಗ್ಯ ಚೆನ್ನಾಗಿದೆ. ಸಿನಿಮಾ ಶೂಟಿಂಗ್‌ನಲ್ಲೂ ಭಾಗಿಯಾಗುತ್ತಿದ್ದಾರೆ' ಎಂದು ಹೇಳಿದ್ದಾರೆ. ಪ್ರಸ್ತುತ ದರ್ಶನ್ ಡೆವಿಲ್ ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ.
ಶೂಟಿಂಗ್‌ಗಾಗಿ ದೇಶದೆಲ್ಲೆಡೆ ಪ್ರಯಾಣ ಮಾಡಲು ಕೋರ್ಟ್‌ನಿಂದ ಅನುಮತಿ ಕೂಡ ಪಡೆದುಕೊಂಡಿದ್ದಾರೆ. ಆದರೆ ದರ್ಶನ್ ಅವರಿಗೆ ಕಾನೂನು ಕುಣಿಕೆ ಮಾತ್ರ ಬೆಂಬಿಡದೆ ಕಾಡುತ್ತಿದೆ. ದರ್ಶನ್ ಯಾವುದೇ ಶೂಟಿಂಗ್ ಸ್ಥಳಕ್ಕೆ ಹೋದರೂ ಕೂಡ ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗಬೇಕಾದ ಅನುವಾರ್ಯತೆ ಇದೆ. ಹೀಗಾಗಿ ದರ್ಶನ್ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಜೈಲಿಗೆ ಹೋಗುವ ಆತಂಕ ಮಾತ್ರ ಅವರಿಂದ ದೂರವಾಗಿಲ್ಲ.












Click it and Unblock the Notifications