Darshan Thoogudeepa: ದರ್ಶನ್‌ಗೆ ಜಾಮೀನು: ಪೊಲೀಸರ ವಿಚಾರಣೆ, ತನಿಖೆ, ಶ್ರಮಕ್ಕೆ ಸಿಕ್ಕ ಪ್ರತಿಫಲ ಏನು?
ನಟ ದರ್ಶನ್‌ಗೆ ಜಾಮೀನು ಸಿಗಲ್ಲ, ಅವರ ಮೇಲಿರುವ ಆರೋಪ ಚಿಕ್ಕದಲ್ಲ, ಅವರ ವಿರುದ್ಧ ಸಿಕ್ಕ ಸಾಕ್ಷಿಗಳು ಗಂಭೀರವಾದ ಸಾಕ್ಷಿಗಳು, ಕಡಿಮೆ ಅಂದ್ರೂ ಅವರಿಗೆ 10 ವರ್ಷ ಜೈಲುವಾಸ ಫಿಕ್ಸ್ ಎಂದು ಹೇಳಲಾಗಿತ್ತು. ಆದರೀಗ ಇದೆಲ್ಲವೂ ಗಾಳಿಮಾತುಗಳಾಗಿ ಬದಲಾಗಿವೆ. ಯಾಕೆಂದರೆ ದರ್ಶನ್ ಜೈಲಿಗೆ ಹೋಗಿ ಕೇವಲ ಆರು ತಿಂಗಳಲ್ಲಿ ಪೂರ್ಣಾವಧಿ ಜಾಮೀನು ಪಡೆದು ರಾಜಾರೋಷವಾಗಿ ಹೊರಬಂದಿದ್ದಾರೆ. ಹಾಗಾದರೆ ದರ್ಶನ್ ವಿರುದ್ಧ ಇದ್ದ ಸಾಕ್ಷಿಗಳ ಕತೆ ಏನು? ಈ ಪ್ರಕರಣದಲ್ಲಿ ಸತತ ಆರು ತಿಂಗಳು ಶ್ರಮಪಟ್ಟ ಪೊಲೀಸ್ ತಂಡಕ್ಕೆ ಹಾಗೂ ಸಮಾಜಕ್ಕೆ ಹೋಗುವ ಸಂದೇಶವೇನು? ದರ್ಶನ್ ಹೊರಬರುವುದಾದರೆ ಇಷ್ಟೆಲ್ಲಾ ಬೇಕಿತ್ತಾ?
ಹೌದು.. ನಡೆಯಲು ಆಗದೆ ಕುಳಿತುಕೊಳ್ಳಲೂ ಆಗದ ಎ2 ಆರೋಪಿ ದರ್ಶನ್ ಈಗ ಖುಷಿ ಖುಷಿಯಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಂದು ವೇಳೆ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಆಗದೇ ಇದ್ದಿದ್ದರೆ ಅವರಿಗೆ ಪೂರ್ಣಾವಧಿ ಜಾಮೀನು ಸಿಗುತ್ತಿರಲಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರಿಗೆ ಪೂರ್ಣಾವಧಿ ಜಾಮೀನು ಮಂಜೂರು ಆಗಿದ್ದು ಫುಲ್ ಫ್ರೀ ಬರ್ಡ್ ಆಗಿದ್ದಾರೆ. ಅನಾರೋಗ್ಯ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿ-ಬಾಸ್ ಪೂರ್ಣಾವಧಿ ಜಾಮೀನು ಪಡೆಯುತ್ತಿದ್ದಂತೆ ಸರ್ಜರಿ ಮಾಡಿಸಿಕೊಳ್ಳದೇ ಸದ್ಯ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಹಾಗಾದರೆ ದರ್ಶನ್ ಹೊರಬಂದಿದ್ದು ಹೇಗೆ?
ಪ್ರಕರಣದ ಟೈಮ್‌ಲೈನ್:-
*ಜೂನ್ 8ರಂದು ರೇಣುಕಾಸ್ವಾಮಿ ಕೊಲೆ
*ಜೂನ್ 9ರಂದು ರೇಣುಕಾಸ್ವಾಮಿ ಶವ ಪತ್ತೆ
*ಜೂನ್ 11ರಂದು ನಟ ದರ್ಶನ್ ಬಂಧನ
ಪರಪ್ಪನ ಅಗ್ರಹಾರ ಐಷಾರಾಮಿ ಜೈಲುವಾಸ
ದರ್ಶನ್ ಬಂಧನದ ಬಳಿಕ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿ ದರ್ಶನ್‌ಗೆ ಯಾವುದೇ ಕೊರತೆಗಳು ಇಲ್ಲದೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಜೈಲಿನಲ್ಲಿರುವ ದರ್ಶನ್ ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಗ್ಲಾಸ್ ಹಿಡಿದುಕೊಂಡು ಇತರ ಕೈದಿಗಳೊಂದಿಗೆ ಚೇರ್ ಮೇಲೆ ಕುಳಿತ ಫೋಟೋವೊಂದು ವೈರಲ್ ಆಗಿತ್ತು. ಇದೊಂದು ಫೋಟೋ ದರ್ಶನ್ ಯಾವ ರೀತಿ ಜೈಲಿನಲ್ಲಿ ಜೀವನ ಕಳೆದರು ಅನ್ನೋದಕ್ಕೆ ಸಾಕ್ಷಿಯಾಗಿತ್ತು.
ಪರಪ್ಪರನ ಅಗ್ರಹಾರ ಜೈಲಿನಲ್ಲಿ ಎಲ್ಲಾ ಸೌಲಭ್ಯಗಳು ಇದ್ದ ಕಾರಣವೋ ಏನೋ ದರ್ಶನ್ ಟಿವಿ ಬೇಕು, ಚೇರ್ ಬೇಕು, ದಿಂಬು ಬೇಕು, ಉತ್ತಮ ಹಾಸಿಗೆ ಬೇಕು ಹೀಗೆ ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಯಾವಾಗ ಅವರ ಐಷಾರಾಮಿ ಜೈಲುವಾಸ ಫೋಟೋ ವೈರಲ್ ಆಗುತ್ತೋ ಆಗ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತೆ. ಇಲ್ಲಿ ಅಸಲಿ ಜೈಲುವಾಸ ದರ್ಶನ್‌ಗೆ ಅವರಿಗೆ ಶುರುವಾಗುತ್ತೆ. ಆಗ ಒಂದೊಂದೇ ವಸ್ತುಗಳಿಗೆ ದರ್ಶನ್ ಬೇಡಿಕೆ ಇಡುತ್ತಲೇ ಬರುತ್ತಾರೆ.
ಪರಪ್ಪನ ಅಗ್ರಹಾರದಲ್ಲಿ ಬಾರದ್ದು ಬಳ್ಳಾರಿ ಜೈಲಿನಲ್ಲಿ ಬಂತು
ಬಳ್ಳಾರಿ ಜೈಲಿನಲ್ಲಿ ಎಲ್ಲಾ ಕೈದಿಗಳಂತೆ ದರ್ಶನ್ ಅವರನ್ನು ನೋಡಿಕೊಳ್ಳಲು ಶುರು ಮಾಡಿದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಾರದ ಬೆನ್ನು ನೋವು ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಕಾಣಿಸಿಕೊಂಡಿದೆ. ಇದೊಂದು ವಿಚಾರ ದರ್ಶನ್ ಅವರಿಗೆ ಪೂರ್ಣಾವಧಿ ಜಾಮೀನು ಪಡೆಯಲು ಅಸ್ತ್ರವಾಗಿ ಹೋಯ್ತು.
ಬಳ್ಳಾರಿ ಜೈಲಿನಲ್ಲಿ ಇರುವಾಗ ದರ್ಶನ್ ಆರೋಗ್ಯ ಹೇಗಿತ್ತು ಅಂದರೆ ಮಾಧ್ಯಮದವರ ಕ್ಯಾಮರಾಕ್ಕೆ ಮಧ್ಯದ ಬೆರಳು ತೋರಿಸುವಷ್ಟು ಚೆನ್ನಾಗಿತ್ತು. ಯಾವಾಗ ಜೈಲುವಾಸ ಬಿಗಿಯಾಯ್ತೋ ದರ್ಶನ್ ನನಗೆ ಉತ್ತಮ ಹಾಸಿಗೆ ಕೊಡಿ, ದಿಂಬು ಕೊಡಿ, ಚೇರ್, ಟಿವಿ ಕೊಡಿ ಅಂತೆಲ್ಲಾ ಬೇಡಿಕೆ ಇಡ್ತಾ ಬಂದರು.
ಆರು ವಾರ ಮಧ್ಯಂತರ ಜಾಮೀನು
ಈ ನಡುವೆ ದರ್ಶನ್‌ಗೆ ಎಷ್ಟೇ ಪ್ರಯತ್ನಪಟ್ಟರೂ ಜಾಮೀನು ಸಿಗಲೇ ಇಲ್ಲ. ಬಳಿಕ ಶುರುವಾಗಿದ್ದೇ ಬೆನ್ನು ನೋವು. ದರ್ಶನ್ ಅವರಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡು ವೈದ್ಯರು ಸರ್ಜರಿ ಮಾಡಿಸಲೇಬೇಕು ಎಂದು ಸಲಹೆ ನೀಡಿದರು. ಕೋರ್ಟ್ ಇದಕ್ಕೆ ಒಪ್ಪಿಗೆ ಸೂಚನೆ ನೀಡಿತೇ ಹೊರತು ಜಾಮೀನು ನೀಡಲಿಲ್ಲ.
ಬಳ್ಳಾರಿ ಜೈಲಿನಿಂದಲೇ ಆಸ್ಪತ್ರೆಗೆ ಹೋಗಿ ಸರ್ಜರಿ ಮಾಡಿಸಿಕೊಳ್ಳಿ ಎನ್ನುವ ಸಲಹೆಯನ್ನು ಕೋರ್ಟ್ ನೀಡಿತ್ತು. ಆದರೆ ಇದಕ್ಕೆ ದರ್ಶನ್ ಒಪ್ಪಲೇ ಇಲ್ಲ. ಬೆಂಗಳೂರಿನಲ್ಲೇ ಸರ್ಜರಿ ಮಾಡಿಸಿಕೊಳ್ಳುವುದಾಗಿ ಪಟ್ಟು ಹಿಡಿದರು. ಇದಕ್ಕೆ ಕೋರ್ಟ್ ಕೂಡ ಒಪ್ಪಿಗೆ ನೀಡಿ ಆರು ವಾರಗಳ ಮಧ್ಯಂತರ ಜಾಮೀನು ನೀಡಿತು.
ದರ್ಶನ್‌ಗೆ ಹೊರಬರಲು ಆನೆ ಬಲ
ದರ್ಶನ್ ಅವರನ್ನು ಜೈಲಿನಿಂದ ಹೊರತರುವುದು ಅಷ್ಟೊಂದು ಸುಲಭ ಇರಲಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಈ ವಿಚಾರದಲ್ಲಿ ಸಾಕಷ್ಟು ಅಲೆದಾಡಿದ್ದರು. ಸಾಕಷ್ಟು ಪ್ರಯತ್ನ ಪಟ್ಟರು. ಕೊನೆಗೂ ವಿಜಯಲಕ್ಷ್ಮೀ ದರ್ಶನ್ ಅವರನ್ನು ಜೈಲಿನಿಂದ ಹೊರತರುವಲ್ಲಿ ಯಶಸ್ವಿಯಾದರು. ಇದಾದ ಬಳಿಕವೇ ದರ್ಶನ್‌ಗೆ ಆನೆ ಬಲ ಬಂದಂತಾಗಿದ್ದು. ಜೈಲಿನಿಂದ ಹೊರಬರಲು ಸಾಧ್ಯವಾಗಿದ್ದು.
ದರ್ಶನ್ ಜೈಲಿನಲ್ಲಿ ಇರುವಾಗ ಅವರಿಗೆ ಜಾಮೀನು ಸಿಗುವುದೇ ಕಷ್ಟ ಇತ್ತು. ಯಾಕೆಂದರೆ ಅವರ ವಿರುದ್ಧ ಇದ್ದ ಸಾಕ್ಷಿಗಳು ಬಲವಾಗಿದ್ದವು. ಅವರನ್ನು ಹೊರತರಲು ಪತ್ನಿ ಹಾಗೂ ಸಹೋದರ ಬಿಟ್ಟರೆ ಬೇರೆ ಯಾರೂ ಕೂಡ ಅವರ ಜೊತೆಗೆ ಇರುವಂತೆ ಕಾಣಿಸುತ್ತಿರಲಿಲ್ಲ. ಯಾವಾಗ ದರ್ಶನ್ ಹೊರಬಂದರೋ ಜಾಮೀನು ಪಡೆಯಲು ಆನೆ ಬಲ ಬಂದಿದೆ.
ಜೈಲಿನಲ್ಲಿ ಇರುವ ಬೇರೆ ಕೈದಿಗೆ ಅನಾರೋಗ್ಯವಾದರೆ ಜಾಮೀನು ಸಿಗುತ್ತಾ?
ಸರ್ಜರಿ ಹೆಸರಿನಲ್ಲಿ ಹೊರ ಬಂದ ದಾಸನಿಗೆ ಕೋರ್ಟ್ ಪೂರ್ಣಾವಧಿ ಜಾಮೀನು ನೀಡಿದೆ. ಫಿಸಿಯೋಥೆರಪಿಯಲ್ಲೇ ದರ್ಶನ್ ಮನೆಗೆ ವಾಪಾಸ್ ಆಗಿದ್ದಾರೆ. ಇದೆಲ್ಲಾ ಬೆಳವಣಿಗೆಗಳ ನಂತರ ಕೊನೆಯಲ್ಲಿ ನಮಗೆಲ್ಲಾ ಕಾಡುವ ಪ್ರಶ್ನೆ ಇದು- ಜೈಲಿನಲ್ಲಿ ಹಲವಾರು ಕೈದಿಗಳು ಇದ್ದಾರೆ ಅವರಿಗೆಲ್ಲಾ ದರ್ಶನ್ ಅವರಂತೆ ಆರೋಗ್ಯ ಸಮಸ್ಯೆಗೆ ಜಾಮೀನು ಸಿಗುವುದಾಗಿದ್ದರೆ ಅವರೂ ಕೂಡ ಹೊರಬರಬಹುದಾಗಿತ್ತು ಅಲ್ವಾ? ಪ್ರಾಮಾಣಿಕವಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸತತ ಆರು ತಿಂಗಳು ಕೆಲಸ ಮಾಡಿದ ಪೊಲೀಸ್ ತಂಡಗಳಿಗೆ ಇದರಿಂದ ಹೋಗುವ ಸಂದೇಶವೇನು? ಜನರಿಗೆ ಇದರಿಂದ ಹೋಗುವ ಸಂದೇಶವೇನು? ರೇಣುಕಾಸ್ವಾಮಿ ಕಳೆದುಕೊಂಡ ಕುಟುಂಬಸ್ಥರಿಗೆ ಅನ್ಯಾಯ ಮಾಡಿದಂತೆ ಅಲ್ವಾ? ದರ್ಶನ್ ಹೊರಬರುವುದಾದರೆ ಇಷ್ಟೆಲ್ಲಾ ವಿಚಾರಣೆ, ತಪಾಸಣೆ, ಪೊಲೀಸರ ಶ್ರಮ ಬೇಕಿತ್ತಾ? ಒಟ್ಟನಲ್ಲಿ ಏನೇ ಆಗಲಿ ನ್ಯಾಯಾಲಯದ ತೀರ್ಪನ್ನು ನಾವು ಒಪ್ಪಲೇಬೇಕು.












Click it and Unblock the Notifications