Actor Darshan: ದರ್ಶನ್ ಸ್ನೇಹಿತ ವಾಪಸ್ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ದರ್ಶನ್ ಸ್ನೇಹಿತ ಪ್ರದೋಶ್‌ಗೆ ರಿಲೀಫ್ ಸಿಕ್ಕಿದೆ. ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ಶಿಫ್ಟ್ ಆಗಿದ್ದ ಪ್ರದೋಶ್ ಮತ್ತೆ ಬೆಳಗಾವಿ ಹಿಂಡಲಗಾ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ವಾಪಸ್ ಆಗಿದ್ದಾರೆ. ಪ್ರದೋಶ್‌ನನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡುವಂತೆ ಹೈಕೋರ್ಟ್ ಆದೇಶ ಕೊಟ್ಟ ಬೆನ್ನಲ್ಲೇ ಇಂದು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಆಗಸ್ಟ್ 28 ರಂದು ನಟ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಪ್ರದೋಶ್‌ರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕಳಿಸಿದ್ದರೆ, ನಟ ದರ್ಶನ್‌ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿತ್ತು.

ಬರೋಬ್ಬರಿ 44 ದಿನಗಳ ಬಳಿಕ ಪ್ರದೋಶ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಮತ್ತು ಉಳಿದ ಆರೋಪಿಗಳಿಗೆ ನಿಯಮ ಉಲ್ಲಂಘಿಸಿ ಐಷಾರಾಮಿ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಬಳಿಕ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಈಗ ಬಿಗಿ ಭದ್ರತೆಯಲ್ಲಿ ಪ್ರದೋಶ್‌ರನ್ನು ವಾಪಸ್ ಬೆಂಗಳೂರಿಗೆ ಕರೆ ತರಲಾಗಿದೆ.
ದರ್ಶನ್‌ಗೆ ಜಾಮೀನು ಸಿಗುತ್ತಾ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುನ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಗುರುವಾರ ಕೂಡ ನಡೆಯುತ್ತಿದ್ದು, ವಾದ-ಪ್ರತಿವಾದಗಳನ್ನು ನ್ಯಾಯಾಲಯ ಆಲಿಸುತ್ತಿದೆ. ದರ್ಶನ್ ಪರ ವಕೀಲರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ, ಪೊಲೀಸರು ಸಾಕ್ಷಿಗಳನ್ನು ಹುಟ್ಟುಹಾಕಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಇರುವುದಕ್ಕೂ ಒಂದು ಸಾಕ್ಷಿಗಳು ಹೇಳಿರುವುದಕ್ಕೂ ತಾಳೆಯುತ್ತಿಲ್ಲ, ಎಂದು ತನಿಖೆಯಲ್ಲಿನ ಹಲವು ಲೋಪದೋಷಗಳನ್ನು ಪಟ್ಟಿ ಮಾಡಿರುವ ವಕೀಲ ಸಿ.ವಿ. ನಾಗೇಶ್, ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಪ್ರಸ್ತಾಪಿಸಿ ದರ್ಶನ್‌ಗೆ ಜಾಮೀನು ಕೊಡುವಂತೆ ಮನವಿ ಮಾಡಿದ್ದಾರೆ.
ಎಸ್‌ಪಿಪಿ ಪ್ರಸನ್ನ ಕುಮಾರ್ ಆರೋಪಿಗಳಿಗೆ ಜಾಮೀನು ಕೊಡುವುದಕ್ಕೆ ಆಕ್ಷೇಪ ಸಲ್ಲಿಸಿ ತಮ್ಮ ವಾದವನ್ನು ಕೂಡ ಮಂಡಿಸಿದ್ದಾರೆ. ಪೊಲೀಸರು ಸರಿಯಾಗಿ ತನಿಖೆ ಮಾಡಿದ್ದಾರೆ, ಆರೋಪಿಗಳು ಪ್ರಭಾವಿಗಳಾಗಿರುವ ಕಾರಣ, ಜಾಮೀನು ಕೊಟ್ಟರೆ ಹೊರಗಡೆ ಬಂದ ಬಳಿಕ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್‌ಗೆ ಆರೋಗ್ಯ ಸಮಸ್ಯೆ
ಒಂದು ಕಡೆ ಜಾಮೀನು ಪಡೆಯಲು ದರ್ಶನ್ ಪರ ವಕೀಲರು ಬಲವಾಗಿ ವಾದ ಮಂಡಿಸುತ್ತಿದ್ದರೆ. ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬೆನ್ನು ನೋವು ದಿನೇ ದಿನೇ ಹೆಚ್ಚಾಗುತ್ತಿದ್ದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ನಿರಾಕರಿಸಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತೇನೆ ಎಂದು ಆಸ್ಪತ್ರೆ ವೈದ್ಯರಿಗೆ ಹೇಳಿದ್ದಾರೆ.
ದರ್ಶನ್ ಆದಷ್ಟು ಬೇಗ ಹೊರಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ದಸರಾ ಹಬ್ಬಕ್ಕೆ ಅವರು ಹೊರಬರುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳು ಈಗ ದೀಪಾವಳಿಗಾದರೂ ಹೊರ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications