Bigg Boss: ಕಾಸು ಬಂತು ಅಂತ ಹನುಮಂತನ ಲುಂಗಿ-ಅಂಗಿ ಚೇಂಜ್ ಆಗಿಲ್ಲ- ಬಿಗ್‌ಬಾಸ್ ವೀಕ್ಷಕರ ಮನದಾಳದ ಮಾತು
ಬಿಗ್‌ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತದಲ್ಲಿ ಇದೆ. ಈ ನಡುವೆ ಸೋಲು ಗೆಲುವಿನ ಲೆಕ್ಕಾಚಾರಗಳು ಜೋರಾಗಿ ನಡೆದಿವೆ. ಬಿಗ್‌ಬಾಸ್ ಮನೆಯಲ್ಲಿ ಈ ಬಾರಿ ಯಾರು ಗೆಲುವು ಸಾಧಿಸಬೇಕು ಎನ್ನುವ ಪ್ರಶ್ನೆಗೆ ವೀಕ್ಷಕರು ಕೆಲ ಸ್ಪರ್ಧಿಗಳ ಹೆಸರು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಆ ಸ್ಪರ್ಧಿಗಳು ಯಾಕೆ ಗೆಲ್ಲಬೇಕು ಅನ್ನೋದಕ್ಕೆ ಕಾರಣಗಳನ್ನು ನೀಡಿದ್ದಾರೆ. ಹಾಗಾದರೆ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಯಾರು ಗೆಲ್ಲಬೇಕು? ಇದಕ್ಕೆ ವೀಕ್ಷಕರಿಂದ ಬಂದ ಉತ್ತರ ಏನು? ಎಂದು ನೋಡೋಣ.
ಬಿಗ್‌ಬಾಸ್ ಮನೆಯಲ್ಲಿ ಹನುಮಂತ ತುಂಬಾ ಸರಳ ವ್ಯಕ್ತಿ. ಆತನ ಮುಗ್ದತೆ, ಆಟ, ಹಾಡುಗಾರಿಕೆಗೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಹನುಮಂತನ ಮಾತು, ಸ್ವಭಾವ, ಗುಣ, ಹಾಸ್ಯ ಎಲ್ಲವೂ ವೀಕ್ಷಕರ ಮನದಾಳದಲ್ಲಿ ಮನೆ ಮಾಡಿದೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತನೇ ಗೆಲ್ಲಬೇಕು ಎಂದು ಹಲವಾರು ಜನ ಅಭಿಪ್ರಾಯಪಟ್ಟಿದ್ದಾರೆ.

'ಕಾಸು ಬಂದ್ಮೇಲೆ ಹನುಮಂತನ ಲುಂಗಿ-ಅಂಗಿ ಚೇಂಜ್ ಆಗಿಲ್ಲ'
ಇದಕ್ಕೆ ಸೂಕ್ತ ಕಾರಣಗಳನ್ನು ನೀಡಿದ ಬಿಗ್‌ಬಾಸ್ ವೀಕ್ಷಕರು, 'ಕಾಸು ಬಂತು ಅಂತ ಹನುಮಂತನ ಲುಂಗಿ-ಅಂಗಿ ಚೇಂಜ್ ಆಗಿಲ್ಲ. ಆತ ಬಿಗ್‌ಬಾಸ್ ಮನೆಗೆ ಬರುವ ಮುನ್ನ ಹೇಗಿದ್ದನೋ ಈಗಲೂ ಹಾಗೇ ಇದ್ದಾನೆ. ಆತನಿಗೆ ಅಹಂಕಾರ ಇಲ್ಲ, ಧ್ವೇಷ-ಅಸೂಯೆ ಇಲ್ಲ. ತುಂಬಾ ತಾಳ್ಮೆಯಿಂದ ಇರುವ ಹುಡುಗ. ಹೀಗಾಗಿ ಆತ ಈ ಬಾರಿ ಗೆಲ್ಲಬೇಕು' ಎಂದಿದ್ದಾರೆ.
'ತ್ರಿವಿಕ್ರಮ್ ಉತ್ತಮ ಆಟಗಾರ'
ಹೀಗೆ ಒನ್‌ಇಂಡಿಯಾ ಕನ್ನಡ ವರದಿಗಾರರು ಸಾರ್ವಜನಿಕರಿಂದ ಪಡೆದ ಅಭಿಪ್ರಾಯದಲ್ಲಿ ಕೆಲವರು ತ್ರಿವಿಕ್ರಮ್‌ಗೆ ಓಟ್ ಮಾಡಿದ್ದಾರೆ. ತ್ರಿವಿಕ್ರಮ್ ತುಂಬಾ ಚೆನ್ನಾಗಿ ಆಟ ಆಡಿಕೊಂಡು ಬಂದಿದ್ದಾರೆ. ಮನೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಎಲ್ಲರೊಂದಿಗೆ ಚೆನ್ನಾಗಿರಲು ಬಯಸುತ್ತಾರೆ. ದ್ವೇಷ ಮಾಡುವುದಿಲ್ಲ. ಹೀಗಾಗಿ ಈ ಬಾರಿ ತ್ವಿವಿಕ್ರಮ್ ಗೆಲ್ಲಬೇಕು ಅನ್ನೋದು ಕೆಲ ಬಿಗ್‌ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ.
'ಉಗ್ರಂ ಮಂಜು ಕಠಿಣ ಸ್ಪರ್ಧಿ'
ಇನ್ನೂ ಕೆಲವರು ಉಗ್ರಂ ಮಂಜು ಅವರಿಗೆ ಓಟ್ ಮಾಡಿದ್ದಾರೆ. ಉಗ್ರಂ ಮಂಜು ಬಿಗ್‌ಬಾಸ್ ಮನೆಯಲ್ಲಿ ಕಠಿಣ ಸ್ಪರ್ಧಿ. ಅವರು ಆಟದ ವಿಚಾರದಲ್ಲಿ ಕೋಪ ತೋರಿಸಿರಬಹುದು, ಆದರೆ ನ್ಯಾಯಯುತವಾಗಿ ಆಡಲು ಪ್ರಯತ್ನಪಟ್ಟಿದ್ದಾರೆ. ಅವರೊಂದಿಗೆ ಇರುವ ಕೆಲ ಜನ ಅವರ ಆಟವನ್ನು ಕೆಡಿಸಲು ನೋಡಿದರು. ಮಂಜು ಒಬ್ಬ ಉತ್ತಮ ಆಟಗಾರ ಹೀಗಾಗಿ ಮಂಜು ಗೆಲ್ಲಬೇಕು ಎಂದು ಹೇಳಿದ್ದಾರೆ.

'ಮಾತು ಖಾರ, ಕ್ಷಮೆ ಕೇಳುವ ಗುಣ ಇದೆ- ರಜತ್ ಗೆಲ್ಲಬೇಕು'
ಇನ್ನೂ ಕೆಲವರು ರಜತ್ ಗೆಲ್ಲಬೇಕು ಎಂದಿದ್ದಾರೆ. 'ಬಿಗ್‌ಬಾಸ್ ಮನೆಯಲ್ಲಿ ಮೊಟ್ಟ ಮೊದಲ ಬಾರಿಗೆ ಒಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಇಷ್ಟೊಂದು ಕಠಿಣ ಪೈಪೋಟಿಯನ್ನು ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಹೀಗಾಗಿ ರಜತ್ ಆಟಗಾರಿಕೆ ಚೆನ್ನಾಗಿದೆ. ಆಟ ಅಂತ ಬಂದಾಗ ರಜತ್ ಹಿಂದೆ ಸರಿಯುವುದಿಲ್ಲ. ಅವರು ಟಾಸ್ಕ್‌ವೊಂದರಲ್ಲಿ ತಲೆ ಕೂದಲನ್ನೂ ತೆಗೆಸಿಕೊಂಡಿದ್ದರು. ಅವರ ಮಾತು ಖಾರವಾಗಿರಬಹುದು. ಆದರೆ ಅವರಿಗೆ ಕ್ಷಮೆ ಕೇಳುವ ಗುಣ ಇದೆ. ಗೆಲ್ಲುವ ಛಲ ಇದೆ' ಎಂದು ಬಿಗ್‌ಬಾಸ್ ನಿತ್ಯ ನೋಡುವ ನಿತ್ಯಾ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಬಿಗ್‌ಬಾಸ್ ನೋಡುವ ವೀಕ್ಷಕರು ಹನುಮಂತನಿಗೆ ಅತಿ ಹೆಚ್ಚು ಓಟ್ ಮಾಡಿದ್ದಾರೆ. ಹನುಮಂತನ ನಂತರದ ಸ್ಥಾನವನ್ನು ತ್ರಿವಿಕ್ರಮ್‌ಗೆ ನೀಡಿದರೆ ಅವರ ನಂತರದ ಸ್ಥಾನವನ್ನು ಮಂಜು ಹಾಗೂ ರಜತ್‌ಗೆ ಕೊಟ್ಟಿದ್ದಾರೆ. ಹೀಗಾಗಿ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಗೆಲುವು ಯಾರಿಗೆ ಎನ್ನುವ ಕುತೂಹಲ ಮೂಡಿದೆ. ಇದಕ್ಕಾಗಿ ಕೆಲ ದಿನಗಳವರೆಗೆ ನಾವು ಕಾಯಲೇಬೇಕು.












Click it and Unblock the Notifications