ಹೆಸರು ಬ್ಯಾಂಕ್ ಜನಾರ್ದನ್ ಆದರೂ ಬ್ಯಾಂಕ್‌ನಲ್ಲಿ ಹಣವೇ ಇರಲಿಲ್ಲ: ಅಯ್ಯೋ ದುರ್ವಿದಿಯೇ..
ಕನ್ನಡದ ಹೆಸರಾಂತ ಹಿರಿಯ ನಟ ಬ್ಯಾಂಕ್ ಜನಾರ್ದನ್ ಇಂದು ಅನಾರೋಗ್ಯದಿಂದಾಗಿ ನಿಧನರಾದರು. ಕೆಲ ತಿಂಗಳುಗಳಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಜನಾರ್ದನ್ ಅವರು ಆಗಾಗ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು. ಕನ್ನಡದಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇಂತಹ ಅದ್ಭುತ ಕಲಾವಿದ ಅಗಲಿಕೆಗೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಅಷ್ಟಕ್ಕೂ ಬ್ಯಾಂಕ್ ಜನಾರ್ದನ್ ಅವರಿಗೆ ಈ ಬ್ಯಾಂಕ್ ಅನ್ನೋ ಹೆಸರು ಯಾಕೆ ಬಂತು? ಹೆಸರು ಬ್ಯಾಂಕ್ ಜನಾರ್ದನ್ ಆದರೆ ಅವರ ಬ್ಯಾಂಕ್‌ನಲ್ಲಿ ತುಂಬಾ ಹಣ ಇತ್ತಾ? ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಹೌದು ಬ್ಯಾಂಕ್ ಜನಾರ್ದನ್ ಎಂದು ಕರೆಯಲು ಒಂದು ಪ್ರಮುಖ ಕಾರಣ ಇದೆ. ಜನಾರ್ದನ್ ಅವರು ಬಡ ಕುಟುಂಬದಿಂದ ಬಂದವರು. ಹೀಗಾಗಿ ಅವರು ಸಿನಿಮಾದಿಂದ ಬರುವ ಹಣದ ಮೇಲೆ ಅವಲಂಭಿತರಾಗಿರಲಿಲ್ಲ. ಸಿನಿಮಾದೊಂದಿಗೆ ಮತ್ತೊಂದು ಕೆಲಸವನ್ನೂ ಮಾಡುತ್ತಿದ್ದರು.

ಸಿನಿಮಾದ ಜೊತೆಗೆ ಜನಾರ್ದನ್ ನಿತ್ಯ ಬ್ಯಾಂಕ್ ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ಅವರನ್ನು ಕರೆಯುವಾಗ ಸಹಜವಾಗಿ ಬ್ಯಾಂಕ್ ಜನಾರ್ದನ್ ಎಂದು ಸಿನಿಮಾ ರಂಗದಲ್ಲಿ ಎಲ್ಲರೂ ಕರೆಯಲು ಆರಂಭಿಸಿದರು. ಜೊತೆಗೆ ಈ ಹೆಸರು ಭಿನ್ನವಾಗಿರುತ್ತದೆ ಎನ್ನುವ ಕಾರಣಕ್ಕೆ ಆಗಿನ ಪಿಆರ್ಓ ಆಗಿದ್ದ ನಾಗೇಂದ್ರ ಅವರು ಜನಾರ್ದನ್ ಅವರಿಗೆ ಬ್ಯಾಂಕ್ ಹೆಸರು ಸೇರಿಸಿಕೊಳ್ಳಲು ಹೇಳಿದ್ದರಂತೆ. ಅವರ ಸಲಹೆ ಮೇರೆಗೆ ಜನಾರ್ದನ್ ಅವರು ತಮ್ಮ ಹೆಸರನ್ನು ಬ್ಯಾಂಕ್ ಜನಾರ್ದನ್ ಎಂದು ಬದಲಿಸಿಕೊಂಡಿದ್ದರಂತೆ.
ಈ ಹಿಂದೆ ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದ ಬ್ಯಾಂಕ್ ಜನಾರ್ದನ್ ಅವರು ಅವರಿಗಿರುವ ಸಂಭಾವನೆ ಬಗ್ಗೆ ಹೇಳಿಕೊಂಡಿದ್ದರು. ಅವರು ಪಾತ್ರ ನಿರ್ವಹಿಸುವ ಕಾಲದಲ್ಲಿ ಅವರಿಗೆ ಹೇಳಿಕೊಳ್ಳುವ ಮಟ್ಟಿಗೆ ಸಂಭಾವನೆ ಇರಲಿಲ್ಲ. ದೊಡ್ಡ ಕಲಾವಿದ ಹೆಸರಿದೆ ಆದರೆ ಸಂಭಾವನೆ ಅದಕ್ಕೆ ತಕ್ಕಂತೆ ಇರಲಿಲ್ಲ.
ಅದೆಷ್ಟೋ ನಿರ್ದೇಶಕರು ನಿರ್ಮಾಪಕರು ಪರಿಚಯದ ಆಧಾರದ ಮೇಲೇಯೇ ಬ್ಯಾಂಕ್ ಜನಾರ್ದನ್ ಅವರು ಪಾತ್ರ ನಿರ್ವಹಿಸಿ ಬರುತ್ತಿದ್ದರಂತೆ. ಬಳಿಕ ಅವರ ಬಳಿ ಜನಾರ್ದನ್ ಅವರು ಹಣ ಕೂಡ ಕೇಳುತ್ತಿರಲಿಲ್ಲವಂತೆ. ಎಷ್ಟೋ ದೊಡ್ಡ ದೊಡ್ಡ ಹಿರಿಯ ಕಲಾವಿದರೊಂದಿಗೆ ನಟಿಸುವಾಗಲೂ ಅದೆಷ್ಟೋ ಸಿನಿಮಾಗಳ ಸಂಭಾವನೆಯನ್ನು ಜನಾರ್ದನ್ ಅವರು ಪಡೆದೇ ಇಲ್ಲ ಎಂದು ಹೇಳಿಕೊಂಡಿದ್ದರು.
ಈಗ ಇರುವಷ್ಟು ಸಂಭಾವನೆ ಮೊದಲು ಇರಲಿಲ್ಲ. ಆಗ ನಟರಿಗೆ ಒಂದು ಲಕ್ಷ ಸಂಭಾವನೆ ಇತ್ತು. ಹೀಗಿರುವಾಗ ನಮಗೆ ಎಷ್ಟು ಇತ್ತು ಅನ್ನೋದನ್ನು ಯೋಚನೆ ಮಾಡಿ ಎಂದು ಜನಾರ್ದನ್ ಹೇಳಿದ್ದರು. ನಾನು ಅಷ್ಟು ದುಡಿದರೂ ಕೂಡ ಕೊರೊನಾ ಸಂದರ್ಭದಲ್ಲಿ ನನ್ನ ಬ್ಯಾಂಕ್ ಬಾಲೆನ್ಸ್ ಜೀರೋ ಇತ್ತು. ಕಾರಣ ಇವತ್ತು ಇರುವಷ್ಟು ಸಂಭಾವನೆ ಆಗ ಇರಲಿಲ್ಲ ಎಂದು ಜನಾರ್ದನ್ ಒಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಕೊರೊನಾ ಸಂದರ್ಭದಲ್ಲಿ ಅವರಿಗೆ ಇಂತಹ ಸಂದರ್ಭ ಎದುರಾಗಿತ್ತು ಅಂದರೆ ಇನ್ನೂ ಈಗ ಅವರಿಗೆ ನಟನೆ ಮಾಡುವ ಶಕ್ತಿ ಇರಲಿಲ್ಲ. ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇಂಥಹ ಪರಿಸ್ಥಿತಿಯಲ್ಲಿ ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು ಅನ್ನೋದನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ.












Click it and Unblock the Notifications