Actor Darshan: ಪವಿತ್ರಾಗೌಡ ಚಪ್ಪಲಿ ಮೇಲೂ ರಕ್ತದ ಕಲೆ; ದರ್ಶನ್ & ಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರಾಗೌಡ, ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ಜೈಲಿನಲ್ಲೇ ಸ್ವಾತಂತ್ರ್ಯ ದಿನಾಚರಣೆ ಮಾಡಿದೆ!, ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಜಾಮೀನು ಪಡೆಯಬಹುದು ಎಂದು ಕನಸು ಕಾಣುತ್ತಿದ್ದ ದರ್ಶನ್ ಮತ್ತು ಗ್ಯಾಂಗ್‌ಗೆ ಪೊಲೀಸರು ಒಂದರ ಹಿಂದೊಂದು ಶಾಕ್ ಕೊಡುತ್ತಲೇ ಇದ್ದಾರೆ. ರೇಣುಕಾಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಧರಿಸಿದ್ದ ಪ್ಯಾಂಟ್ ಮತ್ತು ಟೀ ಶರ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿದ್ದು ಪೊಲೀಸರ ತನಿಖೆಗೆ ಹೆಚ್ಚಿನ ಬಲ ತಂದಿದೆ.
ಇದೀಗ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಧರಿಸಿದ್ದ ಚಪ್ಪಲಿ ಮೇಲೆ ಕೂಡ ರಕ್ತದ ಕಲೆ ಪತ್ತೆಯಾಗಿದ್ದು ಅದು ರೇಣುಕಾಸ್ವಾಮಿಯ ರಕ್ತದ ಮಾದರಿ ಜೊತೆ ತಾಳೆಯಾಗಿದೆ ಎಂದು ವರದಿಯಾಗಿದೆ. ಪೊಲೀಸರು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಇದು ಬಲವಾದ ಸಾಕ್ಷಿಯಾಗಿದ್ದು, ಕೇಸು ಮತ್ತಷ್ಟು ಬಲವಾದಂತಾಗಿದೆ.

ಆಗಸ್ಟ್ 14ರಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಬೆನ್ನಲ್ಲೇ ದರ್ಶನ್ ಮತ್ತು ಉಳಿದ ಆರೋಪಿಗಳನ್ನು ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಎಲ್ಲಾ ಆರೋಪಿಗಳ ಬಂಧನವನ್ನು ಆಗಸ್ಟ್ 28ರವರೆಗೆ ವಿಸ್ತರಣೆ ಮಾಡಲಾಗಿದೆ.
ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ
ಪೊಲೀಸರು 90 ದಿನಗಳ ಒಳಗಾಗಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಬೇಕಿದೆ. ಪ್ರಕರಣದಲ್ಲಿ 17 ಜನ ಆರೋಪಿಗಳು ಇರುವ ಕಾರಣ ಪೊಲೀಸರು ಎಲ್ಲಾ ಆರೋಪಿಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಿ, ಸಾಕ್ಷಿಗಳನ್ನು ಕಲೆಹಾಕುತ್ತಿದ್ದಾರೆ. ಸಾಕ್ಷಿಗಳು ತಾಳೆ ಆಗುವಂತೆ ನೋಡಿಕೊಳ್ಳದಿದ್ದ ಆರೋಪಿಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇರುವ ಕಾರಣ ಪೊಲೀಸರು ಎಚ್ಚರಿಕೆಯಿಂದ ಚಾರ್ಜ್‌ಶೀಟ್ ಸಿದ್ಧಪಡಿಸುತ್ತಿದ್ದಾರೆ.
ಸೆಪ್ಟೆಂಬರ್ 2ನೇ ವಾರದಲ್ಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಆರೋಪಿಗಳ ಮೊಬೈಲ್ ರಿಟ್ರೈವ್‌ಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈಗಾಗಲೇ ಹಲವು ಮಹತ್ವದ ಸಾಕ್ಷಿಗಳು ಪೊಲೀಸರ ಕೈಸೇರಿವೆ. ಇನ್ನೂ ಹಲವು ವರದಿಗಳು ಬರಬೇಕಿದ್ದು, ಅದಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ.
ಆರೋಪಿಗಳು ಪ್ರಭಾವಿಗಳಾಗಿದ್ದು ಜಾಮೀನು ನೀಡಿದರೆ ರೇಣುಕಾಸ್ವಾಮಿ ಕುಟುಂಬಕ್ಕೆ ಬೆದರಿಕೆ ಒಡ್ಡುವ ಸಾಧ್ಯತೆ ಇದೆ. ಸಾಕ್ಷಿಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಎಸ್‌ಐಟಿ ಪರ ವಕೀಲರು ವಾದಿಸಿದ್ದಾರೆ. ಎಲ್ಲಾ ಸಾಕ್ಷಿಗಳು ಇದೀಗ ದರ್ಶನ್ ಮತ್ತು ಪವಿತ್ರಾ ವಿರುದ್ಧವಾಗಿಯೇ ಇರುವ ಕಾರಣ, ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗುತ್ತಿದೆ.












Click it and Unblock the Notifications