ಕನ್ನಡದ ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಅಪಘಾತ, ಹಲ್ಲೆ ಆರೋಪ!
ಕನ್ನಡದ ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಕಿರುತೆರೆ ನಟಿ ಲಕ್ಷ್ಮೀ ಸಿದ್ದಯ್ಯ ಅಪಘಾತ ಮಾಡಿ ಮಾಧುರಿ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ.
ಈ ಘಟನೆ ಡಿಸೆಂಬರ್ 6ರಂದು ನಡೆದಿದೆ. ಮೂರು ತಿಂಗಳ ಹಿಂದೆ ಸೋದರಿ ಜೊತೆಗೆ ಮಾಧುರಿ ಎಂಬುವವರು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಐ20 ಕಾರನ್ನು ಚಲಾಯಿಸುತ್ತಿದ್ದ ಲಕ್ಷ್ಮಿ ಮಾಧುರಿ ಅವರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯರು ಇಬ್ಬರೂ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಬಳಿಕ ಯುವತಿಯರಿಗೂ ಲಕ್ಷ್ಮಿ ಕೆಟ್ಟದಾಗಿ ಬೈದಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಮಾಧುರಿ ತಾಯಿ ರತ್ನಮಾಲಾ, ' ಡಿಸೆಂಬರ್ 6ರಂದು ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ. ಲಕ್ಷ್ಮಿ ಅವರು ಈ ವೇಳೆ ಮದ್ಯಪಾನ ಮಾಡಿದ್ದರು. ನನ್ನ ಮಕ್ಕಳ ವಾಹನಕ್ಕೆ ಡಿಕ್ಕಿ ಹೊಡೆಯುವುದು ಮಾತ್ರವಲ್ಲದೆ ಕೆಟ್ಟದಾಗಿ ಬೈದಾಡಿದ್ದಾರೆ. ಈ ವೇಳೆ ಮಾಧುರಿ ವಿಡಿಯೋ ಮಾಡಲು ಮುಂದಾದಗಲೂ ಹಲ್ಲೆ ಮಾಡಿ ಮಗಳಿಗೆ ವಿಡಿಯೋ ಡಿಲಿಟ್ ಮಾಡಲು ಬಲವಂತ ಮಾಡಿದ್ದಾರೆ. ಬಳಿಕ ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ' ಎಂದು ಆರೋಪಿಸಿದ್ದಾರೆ.

'ನಾವು ಪೊಲೀಸ್ ಠಾಣೆಗೆ ಹೋಗಿದ್ದೆವು. ಆದರೆ ಎಫ್‌ಐಆರ್ ದಾಖಲಿಸಲಾಗಿಲ್ಲ. ಒಂದು ತಿಂಗಳ ನಂತರ ನಾವು ಓಡಾಡಿದ ಮೇಲೆ ಎಫ್‌ಐಆರ್ ದಾಖಲಾಗಿದೆ. ನಾನು ಕೂಡ ಕೇಳಿದ್ದಕ್ಕೆ ಲಕ್ಷ್ಮಿ ಅವರು ನನ್ನನ್ನು ಬೈದಾಡಿದರು. ಘಟನೆ ವೇಳೆ ಲಕ್ಷ್ಮಿ ಜೊತೆಗೆ ಆನಂದ್ ಕುಮಾರ್ ಎಂಬುವವರು ಇದ್ದರು' ಎಂದು ರತ್ನಮಾಲಾ ಆರೋಪಿಸಿದ್ದಾರೆ.












Click it and Unblock the Notifications