• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಳೆಗಾಲದ ಲೇಖನದಲ್ಲಿ ಮನಸಾರೆ ತೋಯಿರಿ...

By ಸ ರಘುನಾಥ
|

ಮಳೆ ಅಂದರೆ ನಿರೀಕ್ಷೆ, ಸಂಭ್ರಮ, ಆತಂಕ, ಸಮೃದ್ಧಿಯ ಕನಸು, ಹಸಿರು ಹಾಡಿನ ಪಲ್ಲವಿ. ಮಳೆಯಾಟದ ಮೋಜು, ಮೀನಾಟ, ನೀರುಹಕ್ಕಿಗಳ ತೇಲುಮುಳುಗಾಟ, ರಮ್ಯ ರಮಣೀಯ ನೋಟ, ಕಮಾನು ಕಾಮನಬಿಲ್ಲು, ಬೇಸಾಯದ ಬಾಳಗೀತೆ, ಕವಿ ಎದೆಯಲ್ಲಿ ಭಾವಗೀತೆಯ ಹುಟ್ಟು, ಧರೆಹಾಸ, ನದಿವಿಲಾಸ ಜೀವನದ ಉಲ್ಲಾಸ .... ಮಳೆಮಣ್ಣ ಸಮ್ಮಿಲನ ಪರಿಮಳ ಚೇತನ ಗಾನ.

ಮಳೆ ಬಂದರೆ, ಬರುವ ರೀತಿಗೆ ಎಷ್ಟೊಂದು ಹೆಸರು! ತುಂತುರು, ಹನಿಮಳೆ, ತಲೆಮೇಲಿನ ಹನಿ, ನೆನೆಮಳೆ, ಜೋರುಮಳೆ, ಗಟ್ಟಿಮಳೆ, ಬಿರುಮಳೆ, ಜಡಿಮಳೆ, ಹುಚ್ಚುಮಳೆ, ಕುಂಭವೃಷ್ಟಿ, ಆಲಿಕಲ್ಲುಮಳೆ ... ಹದ, ಬಟ್ಟೆತಡಿ, ಕಂಬಳಿತಡಿ, ಸೆಂಟಿಮೀಟರ್, ಅಂಗುಲ ಪ್ರಮಾಣಗಳು. ಕೆಸರು, ಕೋಡಿ, ನೆರೆ, ಜಲಪ್ರಳಯ ಮುಂತಾದವು ಪರಿಣಾಮಗಳು.

ನೆನಪಿನ ಬುತ್ತಿ ಬಿಚ್ಚಿಡುವ ಕೊಡಗಿನ ಸುಂದರ ಮಳೆ

ಎಷ್ಟು ಮಳೆ, ನೀರೆಷ್ಟು, ಏನು ಬೆಳೆ, ಕುಡಿಯಲೆಷ್ಟು, ಇತರೆ ಬಳಕೆಗೆಷ್ಟು, ನೀರು, ನೀರಿನ ಹಂಚಿಕೆಯ ತಗಾದೆಗಳು ಇತ್ಯಾದಿ ಲೆಕ್ಕಾಚಾರಗಳು. ಮಳೆಯಿಂದಲೇ ಇಷ್ಟೆಲ್ಲ.

ಮಳೆಯಷ್ಟೇ ಮಳೆ ತರುವ ಮೋಡಗಳು ಕಾವ್ಯ, ಕತೆ, ಹಾಡು, ಪದ್ಯಗಳ ಹುಟ್ಟಿಗೆ ಕಾರಣ. ಕಾವ್ಯಗಳಲ್ಲಿ ವರ್ಣನೆಗೆ ಪಾತ್ರ. ಕಾಳಿದಾಸನ ಮೇಘ ಸಂದೇಶದಲ್ಲಿ ಮೋಡ ಸುದ್ದಿವಾಹಕ. ಬಿಳಿಮೋಡ, ಕರಿಮೋಡ, ನಾರುಮೋಡ, ತುಂಡುಮೋಡ, ಕಿರಿಮೋಡ, ಹಿರಿಮೋಡ, ಮಳೆಮೋಡ. ಬಗೆಬಗೆ.

ಮಳೆಯ ನಿಯಂತ್ರಕ ಗಾಳಿ

ಮಳೆಯ ನಿಯಂತ್ರಕ ಗಾಳಿ

ಮಳೆಯೆಂದರೆ ಗುಡುಗು, ಸಿಡಿಲು, ಮಿಂಚು, ಕೋಲ್ಮಿಂಚು. ಗಾಳಿ ಮಳೆಯ ಆಪ್ತಮಿತ್ರ. ಎರಡೂ ಕೂಡಿಬಂದುದು ಮಳೆಗಾಳಿ. ಗಾಳಿ ಮಳೆಯ ಹಂಚಿಕೆದಾರ. ಮಳೆ ಬರುವಾಗ(ಬೀಳುವಾಗ) ಗಾಳಿ ನವಿರಾಗಿ ಬೀಸಿದರೆ ಮಳೆ ‘ನಿಂತು' ಸುರಿಯುತ್ತೆ. ನೆಲ ಚೆನ್ನಾಗಿ ನೆನೆಯುತ್ತೆ. ಗಾಳಿ ಜೋರಾದರೆ ಹನಿ ಚೆಲ್ಲಾಡುತ್ತದೆ. ಗಾಳಿ ಸುತ್ತು ಹಾಕಿದರೆ ಹನಿ ಹುಚ್ಚು ಹಿಡಿದಂತೆ ಅಲೆಯುತ್ತದೆ, ತೊನೆಯುತ್ತದೆ. ಮೋಡ ಚದುರುತ್ತದೆ. ಮಳೆಗೆ ಚಲಿಸುವ ಕಾಲು ಬರುವುದು ಗಾಳಿಯಿಂದಲೇ. ಗಾಳಿ ಮಳೆಯ ನಿಯಂತ್ರಕ.

ಆವುಟಗಾಳೆತ್ತೊಂಡು ಮೋಡುಗುಳೆಲ್ಲ ಸದುರೋದುವು

ಆವುಟಗಾಳೆತ್ತೊಂಡು ಮೋಡುಗುಳೆಲ್ಲ ಸದುರೋದುವು

ಕರಿ ಮುಗಿಲು ಕವಿದಾಗ ಜನ ಜೋರುಗಾಳಿಯನ್ನು ಬಯಸುವುದಿಲ್ಲ. ಮೋಡ ಚದುರುವ ಭಯ ಹುಟ್ಟುತ್ತದೆ. ಮಳೆ ಸುರಿವಾಗಲೂ ಅಷ್ಟೆ. ಇಂತಹ ಸಮಯದಲ್ಲಿ ಗಾಳಿ ಜನರ ಪಾಲಿನ ಹಗೆ. ಅದೇ ನವಿರಾಗಿ, ಹದವಾಗಿ ಬೀಸಿದರೆ ಗೆಳೆಯ. ಜನರ ಪಾಲಿಗೆ ಗಾಳಿ ‘ಹಗೆಮಿತ್ರ.' ಇಂಥ ಗಾಳಿ ಕೋಲಾರ ಕನ್ನಡದಲ್ಲಿ ‘ಆವುಟಗಾಳಿ.' ಸಾಮಾನ್ಯ ಕನ್ನಡದಲ್ಲಿ ‘ಆರ್ಭಟದ ಗಾಳಿ.' ‘ಆವುಟಗಾಳೆತ್ತೊಂಡು ಮೋಡುಗುಳೆಲ್ಲ ಸದುರೋದುವು' ‘ಗಾಳಿಯ ಆರ್ಭಟಕ್ಕೆ ಮೋಡಗಳು ಚದುರಿದವು' ಅನ್ನುವುದು ಸಮನುಡಿ.

ಮಳೆಯ ಲಕ್ಷಣದೊಂದಿಗೆ ಬದುಕಿನ ಧ್ವನಿಯೂ ಇದೆ

ಮಳೆಯ ಲಕ್ಷಣದೊಂದಿಗೆ ಬದುಕಿನ ಧ್ವನಿಯೂ ಇದೆ

ನಮ್ಮ ಜನಪದರು ಮಳೆಮಳೆಗೂ ಗಾದೆ ಕಟ್ಟಿದರು. ಈ ಗಾದೆಗಳಲ್ಲಿ ಮಳೆಯ ಲಕ್ಷಣದೊಂದಿಗೆ ಬದುಕಿನ ಧ್ವನಿಯೂ ಇದೆ. ಕೋಲಾರ ಸೀಮೆಯ ಕೆಲವು ‘ಮಳೆಗಾದೆ'ಗಳು ಇಲ್ಲಿನ ನುಡಿಯಲ್ಲೇ ಇವೆ. ಇಲ್ಲಿ ಚಾಲ್ತಿಯಲ್ಲಿರುವ ತೆಲುಗು ಗಾದೆಗಳನ್ನು ಅನುವಾದಿಸಿಕೊಂಡಿದೆ. ಹೀಗೆಯೇ ಅಥವಾ ಬೇರೊಂದು ರೂಪದಲ್ಲಿ ಬೇರೆಡೆಯೂ ಇದ್ದಾವು.

ಮಳೆ ಬೆಳೆಗೆ ಸಿಂಗಾರ

ಮಳೆ ಬೆಳೆಗೆ ಸಿಂಗಾರ

‘ಮಳೆ ಬೆಳೆಗೆ ಸಿಂಗಾರ' ಅನ್ನುವ ಗಾದೆ ಮಳೆಗಾದೆಗಳ ಮುನ್ನುಡಿಯಾಗಿದೆ. ‘ಬರಿಣಿ ಬಂದ್ರ ದರಿಣಿ ಬೆಳೀತದ.'(ಭರಣೀ ಬಂದರೆ ಧರಣಿ ತಣಿಯುತ್ತೆ). ಅಸಲೆ ಮಳಿಕ ಅಂಗಾಲೂ ತ್ಯಾಮಾಗ್ದಂತೆ.' (ಆಶ್ಲೇಷಾ ಮಳೆಗೆ ಅಂಗಾಲೂ ನೆನೆಯೊಲ್ಲವಂತೆ). ಮಗೆ, (ಮಖಾ) ಉಬ್ಬಿ (ಪುಬ್ಬಾ) ಹಿಂದಾದ್ರೆ ಬರ ಬರೋದೆ. ಅತ್ತೆ(ಹಸ್ತಾ) ಮಳಿಕ ಆರ್ಕಾಯಿ, ಸಿತ್ತೆಮಳಿಕ ಮೂರ್ಕಾಯಿ,(ಅತ್ತೆ ಮಳಿಕ ಆರುಪಾಲು, ಸಿತ್ತೆ ಮಳಿಕ ಮೂರ್ಪಾಲು). ‘ಸಿತ್ತಿಮಳೆ ಸಿತ್ತ ಬಂದಂಗೆ' (ಚಿತ್ತೆಮಳೆ ಚಿತ್ತ ಬಂದಹಾಗೆ).

ಆರಿದ್ರೆ ಆದ್ರೆ ದಾರಿದ್ರ ಇರೊಲ್ಲ

ಆರಿದ್ರೆ ಆದ್ರೆ ದಾರಿದ್ರ ಇರೊಲ್ಲ

‘ಅತ್ತಿಮಳೀನ ನೋಡಿ ಎತ್ತಲೇ ಗೋಣ' (ತೆಲುಗು: ಅತ್ತಾನ ಸೂಸಿ ಎತ್ರಾ ಗಂಪ). ‘ಉಬ್ಬಿ (ಪುಬ್ಬಾ) ಮಳೆ ಉಬ್ಬುಬ್ಬಿಕಂಡು ಒಯ್ತಾದ.' ‘ಅನುರಾದೆನಾಗ ಬೇಡಿದಾಸು(ಬೇಡಿದಷ್ಟು) ಬೆಳೆ.' ‘ಆರಿದ್ರೆ ಆದ್ರೆ ದಾರಿದ್ರ(ದಾರಿದ್ರ್ಯ) ಇರೊಲ್ಲ.' ‘ಆರಿದ್ರೇಲಿ ಆರು ಸೇರು ಬಿತ್ತಿದ್ರೆ ಆರು ಕೊಳಗ ಕಾಳಂತೆ.' ‘ಆರು ಮಳೆಗೆ ಸಮ ಆರಿದ್ರೆ ಮಳೆ.' ‘ಅಸಲೆ(ಆಶ್ಲೇಷೆ)ಯಲ್ಲಿ ಅಡಿಕೊಂದು ಹನಿ ಬಿದ್ರೂ ಕೋರಿಕೊಂಡಾಸು (ಬೇಡಿಕೊಂಡಷ್ಟು) ನೆಲ್ಲು.'

ಮೀಸೆ ಮೊಳೆವಾಗ ಹುಟ್ಟಿದ ಮಗ ಕೈಗೆ ಬಂದಂತೆ

ಮೀಸೆ ಮೊಳೆವಾಗ ಹುಟ್ಟಿದ ಮಗ ಕೈಗೆ ಬಂದಂತೆ

‘ಅಸಿಲೆ ಸುರುದ್ರೆ ಮುದೆತ್ತೂ ಗುಟುರು ಹಾಕ್ತಾದಂತೆ.' (ತೆಲುಗು ಗಾದೆ : ಅಸಿಲಾನ ಪಡಿತೆ ಮುಸಿಲೆದ್ದೂ ರಂಕೇಸ್ತುಂಡಂಟ). ‘ಚಿತ್ತೆ ಹನಿ, ಸ್ವಾತಿ ಮಳೆ.' ‘ಉಬ್ಬೆಯಾಗ ಬಿತ್ತೋದು ಬೂದಿನಾಗ ಸೆಲ್ಲಿದಂಗೆ.' (ಪುಬ್ಬಾದಲ್ಲಿ ಬಿತ್ತುವುದು ಬೂದಿಯಲ್ಲಿ ಚೆಲ್ಲಿದಂತೆ). ಮೂಲ ಮುಳುಗಿಸುತ್ತೆ, ಜೇಸ್ಟ(ಜ್ಯೇಷ್ಠಾ) ತೇಲಿಸುತ್ತೆ.' ‘ಮೃಗಶಿರೇಲಿ ನಾಟೋ ಪೈರು, ಮೀಸೆ ಮೊಳೆವಾಗ ಹುಟ್ಟಿದ ಮಗ ಕೈಗೆ ಬಂದಂತೆ.' ‘ಕಡಗೋಟೋನು ಮಗುನಲ್ಲ, ಕಡಿ ಮಳಿ ಮಳೆಲ್ಲ' (ಕಡೇ ಮಗ ಮಗನಲ್ಲ, ಕಡೇ ಮಳೆ ಮಳೆ ಅಲ್ಲ.).

ರಾತ್ರಿ ವೇಳೆ ಬರುವ ಮಳೆಗಳು ಬಹಳ ಹೊತ್ತು ಸುರಿಯುತ್ತವೆ

ರಾತ್ರಿ ವೇಳೆ ಬರುವ ಮಳೆಗಳು ಬಹಳ ಹೊತ್ತು ಸುರಿಯುತ್ತವೆ

ಇಳಿಹೊತ್ತಿನಲ್ಲಿ, ಸಂಜೆ, ರಾತ್ರಿ ವೇಳೆ ಬರುವ ಮಳೆಗಳು ಬಹಳ ಹೊತ್ತು ಸುರಿಯುತ್ತವೆ ಎನ್ನುತ್ತಾರೆ. ಅದಕ್ಕೆ ‘ವತಾರೆ ಬರೂ ಮಳೆ, ವತೀನೆ ಬರೂ ನೆಂಟ್ರು ಶಾನೊತ್ಲು ನಿಲ್ಲಾಕಿಲ್ಲ' (ಬೆಳಗಿನ ಹೊತ್ತು ಬರುವ ಮಳೆ, ನೆಂಟರು ಹೆಚ್ಚು ಹೊತ್ತು ಉಳಿಯುವುದಿಲ್ಲ) ಎಂಬ ಗಾದೆಯೂ ಇದೆ.

ಕೆರೆ ತುಂಬಿದರೆ ನಂಗ್ಲಿ, ಇಲ್ದಿದ್ರೆ ಎಂಗಿಲಿ

ಕೆರೆ ತುಂಬಿದರೆ ನಂಗ್ಲಿ, ಇಲ್ದಿದ್ರೆ ಎಂಗಿಲಿ

ಕೆರೆಗಳು ತುಂಬಿದರೇನೇ ಬದುಕು. ಇಲ್ಲವೆಂದರೆ ಬೇಡಿಕೊಳ್ಳುವ ಸ್ಥಿತಿ ಒದಗುತ್ತದೆ ಎಂದು ಸಾರುವ ಗಾದೆ ಹೀಗಿದೆ: ‘ಕೆರೆ ತುಂಬಿದರೆ ನಂಗ್ಲಿ, ಇಲ್ದಿದ್ರೆ ಎಂಗಿಲಿ' (ಕರೆ ತುಂಬಿದರೆ ನಂಗಲಿ, ಇಲ್ಲದಿದ್ದರೆ ಎಂಜಲು). ನಂಗಲಿಯ ಕೆರೆ ತುಂಬಾ ದೊಡ್ಡದು. ಇದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿದೆ.

ಮಳೆ ಗಂಡೂ ಹೌದು, ಹೆಣ್ಣೂ ಹೌದು

ಮಳೆ ಗಂಡೂ ಹೌದು, ಹೆಣ್ಣೂ ಹೌದು

ಮುಂಗಾರು ಮಳೆಗಳನ್ನು ದೊಡ್ಡ ಮಳೆಗಳೆಂದು, ಹಿಂಗಾರು ಮಳೆಗಳನ್ನು ಚಿಕ್ಕ ಮಳೆಗಳೆಂದು ಹೇಳುತ್ತಾರೆ. ಮಳೆಹನಿಗಳನ್ನು ಮಳೆ ಗುಬ್ಬಿಗ್ಳು ಎಂದು ಹೇಳಿದರೆ ತೆಲುಗಿನಲ್ಲಿ ಇದನ್ನೇ ವಾನಗುವ್ವಲು ಎಂದು ಜಾನಪದರು ಕಲ್ಪಸಿರುವುದು ಅದ್ಭುತವಾಗಿದೆ. ಇವರಲ್ಲಿ ಮಳೆ ಗಂಡೂ ಹೌದು, ಹೆಣ್ಣೂ ಹೌದು.

ಇದು ರಾತ್ರಿ ಹೊತ್ತಿನ ಕ್ರಿಯೆಯಾದ್ದರಿಂದ ಗಂಡು ಮಕ್ಕಳಿರ್ತಾರೆ

ಇದು ರಾತ್ರಿ ಹೊತ್ತಿನ ಕ್ರಿಯೆಯಾದ್ದರಿಂದ ಗಂಡು ಮಕ್ಕಳಿರ್ತಾರೆ

ಮಳೆರಾಯನೆಂದಾಗ ಮಳೆ ಗಂಡುರೂಪಿ, ಮಳೆ ದೇವಿಯೆಂದಾಗ ಹೆಣ್ಣುರೂಪಿ. ಆದರೆ ಹೊತ್ತು ಮೆರವಣಿಗೆಯಲ್ಲಿ ಮನೆಮನೆಗೆ ಸಾಗುವುದು ಮಳೆರಾಯನನ್ನೇ. ಇದು ರಾತ್ರಿ ಹೊತ್ತಿನ ಕ್ರಿಯೆಯಾದ್ದರಿಂದ, ಮುಖ್ಯವಾಗಿ ಗಂಡುಮಕ್ಕಳು, ಯುವಕರು ಭಾಗವಹಿಸುತ್ತಾರೆ. ಹಾಗಾಗಿ ಹೆಣ್ಣುಮಕ್ಕಳು ಭಾಗವಹಿಸುವುದಿಲ್ಲ.

ನೀರು ಸುರಿಯುವುದು ಹೆಚ್ಚಾಗಿ ಹೆಂಗಸರೆ

ನೀರು ಸುರಿಯುವುದು ಹೆಚ್ಚಾಗಿ ಹೆಂಗಸರೆ

ಆದರೂ ಮಳೆರಾಯನನ್ನು ಹೊತ್ತು ಮನೆಯಂಗಳಕ್ಕೆ ಬಂದಾಗ ಅವನ ಮೇಲೆ ನೀರು ಸುರಿಯುವುದು ಹೆಚ್ಚಾಗಿ ಹೆಂಗಸರೆ. ಹಾಗಾಗಿ ಈ ಕಾರ್ಯದಲ್ಲಿ ಇಬ್ಬರೂ ಭಾಗವಹಿಸಿದಂತಾಗುತ್ತದೆ. ನೀರು ಸುರಿಯುವಾಗ ಹೊತ್ತವನ್ನು ಗಿರಗಿರ ತಿರುಗುತ್ತಾನೆ. ನೀರು ಮಳೆಹನಿಯಂತೆ ಚೆಲ್ಲಾಡುತ್ತದೆ. ಹಾಗೆಯೇ ಮಳೆಯೂ ಸುರಿಯಲೆಂಬ ಆಶಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
This article all about rain. How rain described by folklore's. How zodiac stars plays vital role in rain, Oneindia Kannada columnist Sa Raghunatha explains beauty of rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more