ಏಪ್ರಿಲ್ 16ರಿಂದ ಏಪ್ರಿಲ್ 22ರವರೆಗೆ ಹನ್ನೆರಡು ರಾಶಿಗಳ ಭವಿಷ್ಯ

Posted By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada

ಈ ಏಪ್ರಿಲ್ 16ರಿಂದ ಏಪ್ರಿಲ್ 22ರವರೆ ಗೆ ಜನ್ಮರಾಶಿಯನ್ನು ಆಧರಿಸಿದ ವಾರಭವಿಷ್ಯ ನೀಡಲಾಗಿದೆ. ಗೋಚಾರ ಫಲಕ್ಕೆ ಅನುಗುಣವಾಗಿ ಫಲಾನುಫಲ ತಿಳಿದುಕೊಳ್ಳಬಹುದು.

ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?

ಆಸ್ತಿಕರು ತಮ್ಮ ಜನ್ಮರಾಶಿಗೆ ದಿನ ಹೇಗಿದೆ ಎಂದು ತಿಳಿದು ದಿನಚರಿ ಆರಂಭಿಸುವ ವಾಡಿಕೆ ರೂಢಿಸಿಕೊಂಡಿರುತ್ತಾರೆ. ಏಕೆಂದರೆ, ನಿತ್ಯಭವಿಷ್ಯ ಮುಂದಿನ ಘಟನೆಗಳ ಮುನ್ಸೂಚನೆ ನೀಡುತ್ತವೆ. ಪ್ರತಿಯೊಬ್ಬರೂ ನಿತ್ಯ ಒಂದೊಂದು ತರಹ ದಿನ ಕಳೆಯಬೇಕಾಗುತ್ತದೆ. ಇಡೀ ವಾರ ಹೇಗಿರುತ್ತದೆ ಎಂದು ಸೂಚಿಸುವುದೇ ವಾರಭವಿಷ್ಯ.

ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ

ಚಂದ್ರನ ಚಲನೆ ಆಧಾರದಲ್ಲಿ ಹೇಗೆ ನಿತ್ಯಭವಿಷ್ಯವನ್ನು ಕಂಡುಹಿಡಿಯಬಹುದು. ಅದೇ ರೀತಿ ಇತರ ಗ್ರಹ ಹಾಗೂ ಆಯಾ ವಾರದ ಗ್ರಹ ಬದಲಾವಣೆ ಗಮನಿಸಿ, ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಈ ರೀತಿ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ.

ರಾಹುಕಾಲ, ಗುಳಿಕಕಾಲ, ಯಮಗಂಡಕಾಲ

ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು.

ಮೇಷ: ಆರೋಗ್ಯ್ ಹಾಗೂ ಮಾತಿನ ಬಗ್ಗೆ ಎಚ್ಚರ ಅಗತ್ಯ

ಮೇಷ: ಆರೋಗ್ಯ್ ಹಾಗೂ ಮಾತಿನ ಬಗ್ಗೆ ಎಚ್ಚರ ಅಗತ್ಯ

ಪುರುಷರು : ಅನಿರೀಕ್ಷಿತ ಅಡಚಣೆ ಸುಳಿವು ಕೊಡದೆ ಬರುವ ವಿಘ್ನ ಸ್ವಲ್ಪ ನಿಮ್ಮ ಮನಸ್ಸನ್ನು ಗೊಂದಲಮಯ ಮಾಡಬಹುದು. ಸಾಲ ಮರುಪಾವತಿ ಆಗದೇ ಚಿಂತೆ. ಹೊಸದಾದ ವಾಹನ ಖರೀದಿ ಮಾಡುವ ಆಸೆ ಅಥವಾ ಅನಿವಾರ್ಯತೆ ಬರುತ್ತದೆ. ಆದರೆ ತಕ್ಷಣ ಕಾರ್ಯರೂಪಕ್ಕೆ ತರುವುದು ಅಸಾಧ್ಯ ಅನಿಸುತ್ತದೆ. ವ್ಯಾಪಾರದಲ್ಲಿ ಸಂಪೂರ್ಣ ಅಲ್ಲದಿದ್ದರೂ ಸಹ ಹೆಚ್ಚಿನ ಭಾಗ ನಷ್ಟದಿಂದ ಕೂಡಿರುವಂತೆ ಕಾಣಿಸುತ್ತಿದೆ.

ಸ್ತ್ರೀಯರು : ಬಾಳ ಸಂಗಾತಿಯ ಸಹಾಯದಿಂದ ಅಥವಾ ಸ್ನೇಹಿತೆಯರ ಸಹಾಯದಿಂದ ಉದ್ಯೋಗದಲ್ಲಿ ಪ್ರಗತಿ ಅಥವಾ ನಿಮಗೆ ವಹಿಸಿದ ಕಾರ್ಯ ಸಾಧನೆ.

ವಿದ್ಯಾರ್ಥಿಗಳು : ನಿಮ್ಮ ಮೇಲೆ ಅತೀ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ ಅನಿಸುತ್ತದೆ ಸ್ವಾತ್ರಂತ್ರ್ಯ ಬೇಕು ಅನಿಸುತ್ತದೆ.

ಪರಿಹಾರ : ಪ್ರತೀ ದಿನ ಆದಿತ್ಯ ಹೃದಯ ಸ್ತೋತ್ರ ಪಠಣ ಮಾಡಿ.

ವೃಷಭ: ಸಂಬಂಧ ಇಲ್ಲದವರ ದುಃಖಕ್ಕೆ ಚಿಂತೆ

ವೃಷಭ: ಸಂಬಂಧ ಇಲ್ಲದವರ ದುಃಖಕ್ಕೆ ಚಿಂತೆ

ಪುರುಷರು : ನೆನಪಿಟ್ಟುಕೊಂಡು ನಿಮ್ಮ ತಂದೆಯೊಂದಿಗೆ ಜಗಳ ಅಥವಾ ಮನಸ್ತಾಪ ಆಗದಂತೆ ಎಚ್ಚರವಹಿಸಿ. ನೀವು ಈ ಮಾಡುವ ಖರ್ಚು ನಿಮ್ಮ ತಂದೆಯವರ ತಲೆ ತಿರುಗಿಸಬಹುದು. ಸುಸ್ತು, ಶಕ್ತಿಹೀನತೆ ನಿಮ್ಮನ್ನು ಸ್ವಲ್ಪ ಹಿನ್ನಡೆಸಬಹುದು. ಅವಿವಾಹಿತರಿಗೆ ವಿವಾಹದ ಮಾತುಕತೆ ಅಥವಾ ತಯಾರಿಗಳು ಶೀಘ್ರವಾಗಿ ನಡೆಯುತ್ತಾ ಇಲ್ಲ ಎಂಬ ಬೇಸರ ಕಾಡುತ್ತದೆ.

ಸ್ತ್ರೀಯರು : ಕೆಲ ನೆನಪಿನಲ್ಲಿ ಉಳಿಯುವಂಥ ಶುಭ ಘಟನೆಗಳು ನಡೆದು ಸಂತಸ ತರುವುದು. ಸ್ವತಂತ್ರರು ನಿಮ್ಮ ಕಾಲಿನ ಮೇಲೆ ನಿಲ್ಲಲು ಅಂದರೆ ನಿಮ್ಮ ಜೀವನದಲ್ಲಿ ಯಾರ ಮೇಲೂ ಅವಲಂಬಿತರಾಗದೇ ಇರಲು ಪ್ರಯತ್ನ ಪ್ರಾರಂಭಿಸಿ.

ವಿದ್ಯಾರ್ಥಿಗಳು : ನೀವು ಪ್ರಶ್ನೆಗಳನ್ನು ಹೆಚ್ಚು ಕೇಳುತ್ತೀರಿ. ಕಾರಣ ನಿಮಗೆ ಅನುಮಾನಗಳು ಈ ವಾರ ಹೆಚ್ಚು.

ಪರಿಹಾರ : ಸನಿಹದ ಶನೈಶ್ಚರ ದೇಗುಲದಲ್ಲಿ ಶನೈಶ್ಚರ ದೇವರಿಗೆ ಅಥವಾ ನವಗ್ರಹಗಳಲ್ಲಿ ಶನಿ ದೇವರಿಗೆ ಪರಿಶುದ್ಧವಾದ ಎಳ್ಳೆಣ್ಣೆನಲ್ಲಿ ಅಭಿಷೇಕ ಮಾಡಿಸಿ.

ಮಿಥುನ: ಸಾಲ ತೀರಿಸಿದ ತೃಪ್ತಿ ಸಿಗುತ್ತದೆ

ಮಿಥುನ: ಸಾಲ ತೀರಿಸಿದ ತೃಪ್ತಿ ಸಿಗುತ್ತದೆ

ಪುರುಷರು : ಚಿಕ್ಕ ಅಜಾಗರೂಕತೆ ಮಾಡಿಕೊಂಡರೂ ಸಹ ಈ ವಾರವನ್ನು ನೀವು ಸಂಪೂರ್ಣವಾಗಿ ವ್ಯರ್ಥ ಮಾಡುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೂ ಸಹ ಇದು ಉತ್ತಮ ವಾರ ಎಂದು ಕಂಡುಬರುತ್ತಿಲ್ಲ. ಅದರಲ್ಲಿಯೂ ಸಹ ನಗದಿನ ರೂಪದಲ್ಲಿ ಹಣವನ್ನು ಕೈಯಲ್ಲಿ ಇಟ್ಟುಕೊಂಡು ಮಾಡುವ ಯಾವುದೇ ವ್ಯಾಪಾರ ನಿಮಗೆ ನಷ್ಟ ಕರುಣಿಸಲಿದೆ ಎಚ್ಚರ!

ಸ್ತ್ರೀಯರು : ನಿಮ್ಮ ತಾಯಿಯೊಂದಿಗೆ ಅಥವಾ ತವರು ಮನೆಯವರೊಂದಿಗೆ ಜಗಳ ಮನಸ್ತಾಪ ಇದೆ. ಆ ಜಗಳಕ್ಕೆ ಕಾಣದವರ ಕೈವಾಡ ಕಾಣುತ್ತಿದೆ. ಆದುದರಿಂದ ನಿಮ್ಮ ಬಳಿ ಬಂದು ಚಾಡಿ ಹೇಳುವವರ ವಿಚಾರದಲ್ಲಿ ಎಚ್ಚರ ವಹಿಸಿ.

ವಿದ್ಯಾರ್ಥಿಗಳು : ನೀವಾಡುವ ಮಾತುಗಳ ವಿಚಾರದಲ್ಲಿ ಎಚ್ಚರ ಇರಲಿ! ಕೈಲಾಗದ ವಿಚಾರಗಳ ಬಗ್ಗೆ ಮಾಡಿಕೊಡುವುದಾಗಿ ಮಾತು ಕೊಡಲು ಹೋಗದಿರಿ.

ಪರಿಹಾರ : ನಿಮಗೆ ಸನಿಹದ ಮಹಾವಿಷ್ಣು ದೇಗುಲದಲ್ಲಿ ಸ್ವಾಮಿಗೆ ಹಾಲಿನಲ್ಲಿ ಪುರುಷಸೂಕ್ತ ಮಂತ್ರಗಳಿಂದ ಅಭಿಷೇಕ ಮಾಡಿಸಿ.

ಕರ್ಕಾಟಕ: ಸುಳ್ಳನ್ನು ನಂಬಿ ಅವಮಾನ ಎದುರಿಸುತ್ತೀರಿ

ಕರ್ಕಾಟಕ: ಸುಳ್ಳನ್ನು ನಂಬಿ ಅವಮಾನ ಎದುರಿಸುತ್ತೀರಿ

ಪುರುಷರು : ನೀವು ಆಗದು ಎಂದು ತಿಳಿದು ಕೈಬಿಟ್ಟಿದ್ದ ಕೆಲಸ ಪುನಃ ಪ್ರಾರಂಭ ಆಗಬಹುದು. ಕೆಲ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇನೆ ಎಂದು ಹೇಳಿದವರು ಕಣ್ಣಿಗೆ ಕಾಣೆದೇ ಮಾಯ ಆದವರು ಈಗ ಮತ್ತೆ ಸಿಗುತ್ತಾರೆ. ಕೆಲ ಮಟ್ಟಿಗೆ ನಿಮ್ಮ ಪರಿಸ್ಥಿತಿಗಳ ದುರುಪಯೋಗ ಸಹ ಆಗಬಹುದು. ಕೆಲ ವಿಚಾರಗಳಲ್ಲಿ ನೀವು ಬೇಕಾಗಬಹುದು. ಸ್ನೇಹಿತರ ಸಹಾಯ ನಿಮಗೆ ಅನಿವಾರ್ಯ ಆಗುತ್ತದೆ. ದುರಭ್ಯಾಸಗಳು ಇದ್ದವರಾದಲ್ಲಿ ಕಷ್ಟದ ಸಮಯ.

ಸ್ತ್ರೀಯರು : ವಾರದ ಆದಿಯಲ್ಲಿ ನಿಮ್ಮ ಮನಸ್ಸನ್ನು ನೋಯಿಸುತ್ತಾರೆ, ವಾರಾಂತ್ಯದಲ್ಲಿ ಸಂತೋಷ ಸಡಗರ ಲಭಿಸುತ್ತದೆ.

ವಿದ್ಯಾರ್ಥಿಗಳು : ಉತ್ತಮ ವ್ಯಕ್ತಿಗಳ ಪ್ರಭಾವ ನಿಮ್ಮ ಮೇಲೆ ಹೆಚ್ಚು ಇರುತ್ತದೆ. ಸಾಧನೆ ಮಾಡಲೇ ಬೇಕು ಎನ್ನುವ ಹುಮ್ಮಸ್ಸು ಚಿಮ್ಮುತ್ತದೆ.

ಪರಿಹಾರ : ತಪ್ಪದೇ ನಿಮಗೆ ಅನುಕೂಲ ಆದ ದಿನ ಅನ್ನ ದಾನ ಮಾಡಿ.

ಸಿಂಹ: ತೂಕದ ಮಾತುಗಳಿಂದ ನಿಮ್ಮ ಮೇಲಿನ ಗೌರವ ಹೆಚ್ಚು

ಸಿಂಹ: ತೂಕದ ಮಾತುಗಳಿಂದ ನಿಮ್ಮ ಮೇಲಿನ ಗೌರವ ಹೆಚ್ಚು

ಪುರುಷರು : ವಿದ್ಯಾ ಇಲಾಖೆಯಲ್ಲಿ ಉದ್ಯೋಗ ಮಾಡುವವರಿಗೆ ಅನಿರೀಕ್ಷಿತ ಖರ್ಚುಗಳು ಕಾಣಿಸುತ್ತಿದೆ. ಉಳಿದಂತೆ ಇತರರಿಗೆ ಖರ್ಚುಗಳು ಆದರೂ ಸಹ ಉತ್ತಮ ಕಾರ್ಯಗಳಿಗೆ ಆಗುತ್ತದೆ. ನಿಮ್ಮ ಹಿರಿಯ ಅಣ್ಣ ಅಥವಾ ಅವರ ಸಮಾನರಾದವರಿಂದ ನಿಮಗೆ ಸಹಾಯ ಲಭಿಸಲಿದೆ. ನ್ಯಾಯಾಲಯದ ದಾವೆಗಳಲ್ಲಿ ನಿಮ್ಮ ಜಯ ಕಾಣಿಸುತ್ತಿದೆ. ಉನ್ನತ ಉದ್ಯೋಗದಲ್ಲಿ ಇರುವವರು ಅವರ ಕೆಳಗೆ ಕೆಲಸ ಮಾಡುವವರ ಸಹಾಯ ಲಭಿಸಿ ಶೀಘ್ರವಾಗಿ ಕೆಲಸ ಕಾರ್ಯ ಮಾಡುತ್ತಾರೆ. ಸುಮ್ಮ ಸುಮ್ಮನೆ ನಿಮ್ಮನ್ನು ಹೊಗಳುವ ಜನರಿಂದ ದೂರಾಗಲು ಪ್ರಯತ್ನಿಸಿ.

ಸ್ತ್ರೀಯರು : ಹರಿತವಾದ ವಸ್ತುಗಳಿಂದ ದೂರವಿರಿ. ಉದಾಹರಣೆಗೆ ಅಡುಗೆ ಮಾಡುವಾಗ, ತರಕಾರಿ ಹೆಚ್ಚುವಾಗ ಇತ್ಯಾದಿ.

ವಿದ್ಯಾರ್ಥಿಗಳು : ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿ, ಅಧ್ಯಾಪಕರಿಂದ ಶ್ಲಾಘನೆ ಲಭಿಸುತ್ತದೆ.

ಪರಿಹಾರ : ಪ್ರತೀ ದಿನ ತಪ್ಪದೇ ವಿಷ್ಣು ಸಹಸ್ರನಾಮ ಪಠಿಸಿ ಅಥವಾ ಶ್ರವಣ ಮಾಡಿ.

ಕನ್ಯಾ: ಮಾತು ಹೆಚ್ಚಾಗಿ, ಮನಸ್ತಾಪಗಳು ಹೆಚ್ಚಾಗುವ ಸಾಧ್ಯತೆಗಳಿವೆ

ಕನ್ಯಾ: ಮಾತು ಹೆಚ್ಚಾಗಿ, ಮನಸ್ತಾಪಗಳು ಹೆಚ್ಚಾಗುವ ಸಾಧ್ಯತೆಗಳಿವೆ

ಪುರುಷರು : ನಿಮ್ಮ ಶಕ್ತಿ ಸಾಮರ್ಥ್ಯದ ಮೇಲೆ ನಿಮಗೆ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ನಿಮ್ಮ ಕೈಯಲ್ಲಿ ಸುಲಭವಾಗಿ ಮಾಡಬಹುದಾದ ಕೆಲಸಗಳನ್ನೂ ಸಹ ಅನುಮಾನಿಸಿ ಹೆದರಿ ಹಿಂಜರಿಯುತ್ತೀರಿ. ಕಬ್ಬಿಣದ ವ್ಯಾಪಾರಿಗಳಿಗೆ ಅತೀ ಉತ್ತಮ ವ್ಯಾಪಾರ ನಿರೀಕ್ಷಿಸಬಹುದು. ದೂರ ಪ್ರಯಾಣ ಅನಿರೀಕ್ಷಿತವಾಗಿ ಒದಗಿ ಬಂದಲ್ಲಿ ಆಶ್ಚರ್ಯ ಬೇಡ. ನಿಮ್ಮನ್ನು ಮೋಸ ಮಾಡಲು ಕೆಲವು ಗೋಮುಖ ವ್ಯಾಘ್ರಗಳು ಕಾಯುತ್ತಿದ್ದಾರೆ. ಆದರೆ ಹಿರಿಯರ ಸಮಯೋಚಿತ ಸಹಾಯ ನಿಮ್ಮನ್ನು ಕಾಪಾಡುತ್ತದೆ.

ಸ್ತ್ರೀಯರು : ಯಾರು ಸತ್ಯವಂತರು ಹಾಗು ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ತೀರ್ಮಾನಿಸಲಾರದೇ ಯಾರನ್ನೂ ನಂಬದೇ ನಿಮ್ಮ ಕೆಲಸ ನೀವೇ ಮಾಡಿಕೊಳ್ಳುವ ಪರಿಸ್ಥಿತಿ.

ವಿದ್ಯಾರ್ಥಿಗಳು : ನಿಮಗೆ ವಿಶೇಷ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಆದರೆ ಆ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಕಾದು ನೋಡಬೇಕಿದೆ.

ಪರಿಹಾರ : ಪ್ರತೀ ದಿನ ತಪ್ಪದೇ ರವಿ ಅಷ್ಟೋತ್ತರವನ್ನು ಪಠಿಸಿ.

ತುಲಾ: ಉದ್ಯೋಗಿಗಳಿಗೆ ಲಾಭದಾಯಕ ವಾರ

ತುಲಾ: ಉದ್ಯೋಗಿಗಳಿಗೆ ಲಾಭದಾಯಕ ವಾರ

ಪುರುಷರು : ವಾಮಚಾರ ಅನ್ನುವ ವಿಚಾರದಲ್ಲಿ ಬಹಳ ತಲೆಕೆಡೆಸಿಕೊಳ್ಳುತ್ತೀರಿ. ಅದನ್ನು ಯಾರು ಮಾಡುತ್ತಾರೆ ಎಲ್ಲಿ ಹೇಗೆ ಮಾಡುತ್ತಾರೆ ಇತ್ಯಾದಿ ಯೋಚಿಸುತ್ತಾ ಚಿಂತಿಸುತ್ತೀರಿ. ಸ್ನೇಹಿತರೊಂದಿಗೆ ಸೇರಿ ಹೊಸದೊಂದು ಕಾರ್ಯ ಪ್ರಾರಂಭಿಸುವ ಸಾಧ್ಯತೆಗಳಿವೆ. ನಿಮ್ಮ ಶಕ್ತಿಯ ಮೇಲೆ ನೀವು ಭರವಸೆ ಇಟ್ಟು ಶ್ರದ್ದೆಯಿಂದ ಕರ್ತವ್ಯ ಮಾಡಿ ಜಯ ನಿಮ್ಮದೆ. ಅನುಮಾನಗಳನ್ನು ಹಾಗೂ ಹೆದರಿಕೆ, ಅಂಜಿಕೆಗಳನ್ನು ದೂರವಿಡಿ. ಪ್ರೇಮಿಗಳಿಗೆ ಮಾತ್ರ ಅಶುಭ ಸಮಾಚಾರ ಕೇಳುವ ಯೋಗ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿಯ ಸನಿಹದಲ್ಲಿ ಇರುತ್ತೀರಿ.

ಸ್ತ್ರೀಯರು : ಗೃಹಿಣಿಯರಿಗೆ ಅವರ ಮಕ್ಕಳ ವಿಚಾರದಲ್ಲಿ ಜವಾಬ್ದಾರಿಗಳು ಹೆಚ್ಚುತ್ತವೆ, ಅನ್ಯರಿಗೆ ಉದ್ಯೋಗದಲ್ಲಿ ಒತ್ತಡ ಹೆಚ್ಚುತ್ತದೆ.

ವಿದ್ಯಾರ್ಥಿಗಳು : ಗಣಿತಶಾಸ್ತ್ರ ವಿದ್ಯಾರ್ಥಿಗಳಿಗೆ ಮಾತ್ರ ಸ್ವಲ್ಪ ಕಷ್ಟದ ಸಮಯ ಅಥವಾ ಗಣಿತ ವಿಷಯ ಸಮಸ್ಯೆ ಆಗಿ ರೂಪಗೊಳ್ಳುತ್ತದೆ.

ಪರಿಹಾರ : ಪ್ರತೀ ದಿನ ತಪ್ಪದೇ ವಿಷ್ಣು ಅಷ್ಟೋತ್ತರವನ್ನು ಪಠಿಸಿ.

ವೃಶ್ಚಿಕ: ವಾಹನ ಖರೀದಿಗೆ ಮನಸು ಮಾಡುತ್ತೀರಿ

ವೃಶ್ಚಿಕ: ವಾಹನ ಖರೀದಿಗೆ ಮನಸು ಮಾಡುತ್ತೀರಿ

ಪುರುಷರು : ಕಣ್ಣಿಗೆ ಕಂಡರೂ ಕೈಗೆ ಸಿಗದೇ ನಿಮ್ಮನ್ನು ಕೆಲ ವಿಚಾರಗಳು ಅಲೆದಾಡುವಂತೆ ಮಾಡುತ್ತದೆ. ಅನಿರೀಕ್ಷಿತ ತೀರ್ಥಕ್ಷೇತ್ರ ಭೇಟಿ ಮಾಡುವ ಸುಯೋಗ ಸಹ ಇದೆ. ಆದರೆ ನೀವು ಮನಸು ಮಾಡ ಬೇಕು. ಕೆಲ ಅತೀ ಮುಖ್ಯವಾದ ವಿಚಾರಗಳಲ್ಲಿ ಪರಿಸ್ಥಿತಿಗಳು ವಿಕೋಪಕ್ಕೆ ಹೋಗದಂತೆ ನೀವು ಅತೀ ಎಚ್ಚರ ವಹಿಸಬೇಕು. ಉದ್ಯೋಗ ಸ್ಥಳದಲ್ಲಿ ನಿಮಗೆ ಬಿಡುವಿಲ್ಲದ ಕೆಲಸ ವ್ಯಾಪಾರಿಗಳಿಗೆ ಸಾಲ ಕೊಡುವುದು ಅನಿವಾರ್ಯ ಆಗಿಬಿಡುತ್ತದೆ.

ಸ್ತ್ರೀಯರು : ನೀವು ಸಾಕಿ ಸಲುಹಿದವರು ಅಥವಾ ನಿಮ್ಮಿಂದ ಸಹಾಯ ಪಡೆದವರು ನಿಮ್ಮ ದಾಟಿ ನಿಮ್ಮ ಮರೆತು ಮುಂದೆ ಸಾಗಿರುವುದು ನಿಮ್ಮ ಗಮನಕ್ಕೆ ಬರಲಿದೆ.

ವಿದ್ಯಾರ್ಥಿಗಳು : ನೀವು ಓದಿ ಅರ್ಥೈಸಿಕೊಂಡು ಸಿದ್ದ ಆಗಬೇಕಾದ ವಿಷಯಗಳು ಅತೀ ದೊಡ್ಡದಾಗಿದೆ ಎಂದು ತಿಳಿಯುತ್ತದೆ.

ಪರಿಹಾರ : ಪ್ರತೀ ದಿನ ಶ್ರೀ ದತ್ತಾತ್ರೇಯ ವಜ್ರ ಕವಚ ಸ್ತೋತ್ರವನ್ನು ತಪ್ಪದೇ ಪಠಿಸಿ.

ಧನು: ಕೆಲಸಕ್ಕೆ ರಾಜಿನಾಮೆ ಕೊಟ್ಟರೆ ನಂತರ ಕಷ್ಟ

ಧನು: ಕೆಲಸಕ್ಕೆ ರಾಜಿನಾಮೆ ಕೊಟ್ಟರೆ ನಂತರ ಕಷ್ಟ

ಪುರುಷರು : ನಿಮ್ಮಲ್ಲಿ ಯಾವ ರಹಸ್ಯ ವಿಚಾರವೂ ನಿಲ್ಲುವುದಿಲ್ಲ ಈ ಕಾರಣದಿಂದಾಗಿ ನೀವು ಸ್ವಲ್ಪ ದೂಷಣೆಗೆ ಒಳಗಾಗುವ ಸಾಧ್ಯತೆಗಳಿವೆ. ನಿಮಗೆ ವಹಿಸಿಕೊಟ್ಟ ಕೆಲಸ ನೀವು ಸರಿಯಾಗಿಯೇ ಮಾಡಿದ್ದರೂ ಸಹ ನಿಮ್ಮ ಕಷ್ಟವನ್ನು ಗುರುತಿಸಲಾಗುವುದಿಲ್ಲ. ನಿಮ್ಮಿಂದ ಸಹಾಯ ಪಡೆದ ವ್ಯಕ್ತಿ ನಿಮಗೆ ಕನಿಷ್ಠ ಧನ್ಯವಾದ ಸಹ ಹೇಳದಿರುವುದು ನಿಮ್ಮನ್ನು ಚಿಂತೆಗೆ ಈಡು ಮಾಡುತ್ತದೆ. ದಿನಸಿ ವ್ಯಾಪಾರಿಗಳು ಬಿಟ್ಟು ಅನ್ಯ ವ್ಯಾಪಾರಿಗಳಿಗೆ ಲಾಭ ಇದೆ. ನಿಮ್ಮ ಖಾಸಗಿ ವಿಚಾರದಲ್ಲಿ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರು ಸುತ್ತುತ್ತಿದ್ದೀರಿ.

ಸ್ತ್ರೀಯರು : ಎಂಥವರಿಗೂ ಸಿಟ್ಟು ಬರುವಂತೆ ಮಾತನಾಡುತ್ತೀರಿ. ಆರ್ಥ ಆದ ವಿಚಾರವನ್ನೂ ಸಹ ಅರ್ಥ ಆಗಿಲ್ಲ ಎಂದು ಸಾಧಿಸುತ್ತೀರಿ. ಅನಿರೀಕ್ಷಿತವಾಗಿ ಅಲ್ಲದಿದ್ದರೂ ಸಹ ನಿರೀಕ್ಷಿತ ಧನಲಾಭ ಇದೆ.

ವಿದ್ಯಾರ್ಥಿಗಳು : ನಿಮಗೆ ಅವಶ್ಯ ಇರುವುದನ್ನು ಹೊರತುಪಡಿಸಿ ಉಳಿದೆಲ್ಲವನ್ನು ನಿಮಗೆ ನೀಡುತ್ತಿರುವ ಅದೃಷ್ಟದ ವಿಚಾರದಲ್ಲಿ ನಿಮಗೆ ಕೋಪ ಬರುತ್ತದೆ. ಆಲಸ್ಯ ತ್ಯಜಿಸಿ ಓದಿದರೆ ಯಾವ ವಿಷಯ ಸಹ ಕಠಿಣ ಅನಿಸುವುದಿಲ್ಲ.

ಪರಿಹಾರ : ಪ್ರತೀ ದಿನ ತಪ್ಪದೇ ಲಕ್ಷ್ಮಿ ನಾರಾಯಣ ಹೃದಯ ಪಠಿಸಿ ಅಥವಾ ಶ್ರವಣ ಮಾಡಿ.

 ಮಕರ: ದೃಢ ವಿಶ್ವಾಸ ಹೆಚ್ಚುತ್ತದೆ

ಮಕರ: ದೃಢ ವಿಶ್ವಾಸ ಹೆಚ್ಚುತ್ತದೆ

ಪುರುಷರು : ಪತ್ನಿಯೊಂದಿಗೆ ಚಿಕ್ಕದಾಗಿ ಭಿನ್ನಾಭಿಪ್ರಾಯ ಕಾಣಿಸುತ್ತಿದೆ. ಚರ್ಮ ವ್ಯಾಧಿಗಳು ಅಥವ ಶರೀರದಲ್ಲಿ ರಕ್ತ ಕಣಗಳ ಕೊರತೆ ಇತ್ಯಾದಿಗಳು ಇದ್ದಲ್ಲಿ ಆ ಸಮಸ್ಯೆ ವೃದ್ದಿಸುವ ಸಾಧ್ಯತೆಗಳಿವೆ. ಆಕಳಿಸುವ ವ್ಯಕ್ತಿಗೆ ಹಾಸಿಗೆ ಹಾಸಿಕೊಟ್ಟಂತೆ ಕೆಲವರಿಗೆ ನಿಮ್ಮಿಂದ ಸಹಾಯ ಸಿಗಲಿದೆ. ದೂರ ಪ್ರಯಾಣಗಳು ಬೇಡ. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ವರ್ಜಿಸಿ. ನಿಮ್ಮಿಂದ ಕೆಲವರಿಗೆ ಕೆಲ ವ್ಯವಸ್ಥೆಗಳನ್ನು ಮಾಡಿಕೊಡಬೇಕೆಂದು ಆದೇಶ, ನಿಮಗೆ ಅದರಿಂದ ಅಸಹಿಷ್ಣುತೆ.

ಸ್ತ್ರೀಯರು : ನೀವು ನಿಮ್ಮ ಆಪ್ತರನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು ಇದ್ದು, ತಾಳ್ಮೆ ಬೆಳೆಸಿಕೊಳ್ಳಿ. ಸೂಕ್ಷ್ಮ ವಿಚಾರಗಳನ್ನು ಹೇಗೆ ನಿಭಾಯಿಸಬೇಕೆಂಬ ವಿಚಾರದಲ್ಲಿ ಪಾಠ ಸಿಗಲಿದೆ.

ವಿದ್ಯಾರ್ಥಿಗಳು : ನಿಮ್ಮ ಅಧ್ಯಾಪಕರಿಂದ ಸ್ವಲ್ಪ ಬೈಗುಳ ಕೇಳಬೇಕಾಗಿ ಬರುವುದು ನೆನಪಿಡಿ. ನಿಮ್ಮ ಹೊಗಳುವವರೆಲ್ಲ ನಿಮ್ಮ ಎಳಿಗೆ ಬಯಸಲ್ಲ ನಿಮ್ಮ ತೆಗಳುವವರೆಲ್ಲ ನಿಮ್ಮ ಅವನತಿ ಕೋರಲ್ಲ.

ಪರಿಹಾರ : ವೃದ್ಧರಿಗೆ ಅಥವಾ ರಸ್ತೆಯಲ್ಲಿ ತಿರುಗುವ ಮಾನಸಿಕ ಅಸ್ವಸ್ಥರಿಗೆ ಅಥವಾ ದೀನರಿಗೆ ವಸ್ತ್ರ ದಾನ ಮಾಡಿ. ಆಗಲಿಲ್ಲ ಎಂದಾದಲ್ಲಿ ಅವರಿಗೆ ಅನ್ನದಾನ ಮಾಡಿ. ಸಾಧ್ಯ ಆದಲ್ಲಿ ಎರಡೂ ಮಾಡಿ.

ಕುಂಭ: ಮನೆಯಲ್ಲಿ ಶುಭಕಾರ್ಯಗಳು ನೆರವೇರುವ ಸಾಧ್ಯತೆ

ಕುಂಭ: ಮನೆಯಲ್ಲಿ ಶುಭಕಾರ್ಯಗಳು ನೆರವೇರುವ ಸಾಧ್ಯತೆ

ಪುರುಷರು : ಮಕ್ಕಳಿಗಾಗಿ ಖರ್ಚು ಹೆಚ್ಚು ಮಾಡುತ್ತೀರಿ. ಹಿರಿಯ ಹಾಗು ಗುರುಗಳ ಮಾರ್ಗದರ್ಶನದ ಅನಿವಾರ್ಯತೆ ಹಾಗೂ ಪ್ರಾಮುಖ್ಯತೆ ನಿಮ್ಮ ಅರಿವಿಗೆ ಬರುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕಬೇಕು ಎಂದನಿಸುತ್ತದೆ. ಆದರೆ ಯಾವುದೇ ಸ್ಥಿರ ಹಾಗು ದೀರ್ಘವಾದ ಸಮಯ ತನಕ ಒಂದೆ ವಿಧದ ಬುದ್ದಿ ಚಿಂತನೆಗಳು ಇರುವುದಿಲ್ಲ. ಸಿಮೆಂಟ್, ಕಬ್ಬಿಣ, ತೈಲ ಹಾಗೂ ವಸ್ತ್ರ ವ್ಯಾಪಾರಿಗಳಿಗೆ ನಷ್ಟ ಕಾಣಿಸುತ್ತಿದೆ. ಲಾಯರ್, ವಾರ್ತಾ ವಾಚಕರು ಅಧ್ಯಾಪಕರು ಹೀಗೆ ಮಾತು ಪ್ರಧಾನವಾದ ಉದ್ಯೋಗಿಗಳಿಗೆ ಉತ್ತಮವಿದೆ.

ಸ್ತ್ರೀಯರು : ಮಾಡುತ್ತಿರುವ ಉದ್ಯೋಗದಲ್ಲಿ ಒತ್ತಡ ಹಾಗು ಮೇಲಧಿಕಾರಿಗಳಿಂದ ಕಿರಿಕಿರಿ ಅನಿಸುತ್ತದೆ.

ವಿದ್ಯಾರ್ಥಿಗಳು : ವಿದ್ಯಾರ್ಜನೆ ಹೊರತಾಗಿ ಅನ್ಯ ವಿಷಯ ವಿಚಾರಗಳತ್ತ ಗಮನ ಹೆಚ್ಚು ಹೋಗುವ ಸಮಯ ಎಚ್ಚರವಹಿಸಿ

ಪರಿಹಾರ : ಪ್ರತೀ ದಿನ ತಪ್ಪದೇ ಗೋವಿಗೆ ಬಾಳೆ ಹಣ್ಣು ಅಥವಾ ಅಕ್ಕಿ ಬೆಲ್ಲ ತಿನ್ನಿಸಿ.

ಮೀನ: ಕಠಿಣ ಪರಿಶ್ರಮದ ನಂತರ ಹಣ ಬರಲಿದೆ

ಮೀನ: ಕಠಿಣ ಪರಿಶ್ರಮದ ನಂತರ ಹಣ ಬರಲಿದೆ

ಪುರುಷರು : ಬೇಸರ ಅಥವಾ ಸುಸ್ತು ಆಗುವುದೇ ಇಲ್ಲ. ಸೋಲು ನಿಮ್ಮನ್ನು ಕಂಗೆಡಿಸುವುದೇ ಇಲ್ಲ. ನಿರುದ್ಯೋಗಿಗಳಿಗೆ ಹೊಸದೊಂದು ಉದ್ಯೋಗ ಲಭಿಸುವ ಚಿಕ್ಕದೊಂದು ಅವಕಾಶ ಕಾಣಿಸುತ್ತಿದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಎನೂ ಕಾಣಿಸುತ್ತಿಲ್ಲ ಸಾಮಾನ್ಯವಾಗಿದೆ. ಹೋಟೆಲ್ ಉದ್ಯಮದವರಿಗೆ ಒತ್ತಡ ಹೆಚ್ಚಾಗಬಹುದು, ಆದಾಯ ಕಡಿಮೆ ಅನಿಸಬಹುದು. ಕುಟುಂಬದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಅಥವಾ ಶತ್ರುಗಳ ಪ್ರವೇಶ ಆಗಬಹುದು ಎಚ್ಚರ.

ಸ್ತ್ರೀಯರಿಗೆ : ನೀವು ಇತರರಿಗೆ ಅವರ ಅವಶ್ಯಕತೆಗಳಿಗೆ ಪ್ರಾಮುಖ್ಯತೆ ಕೊಡಬೇಕೆ ವಿನಹ ನಿಮ್ಮ ಕಷ್ಟವನ್ನು ಹಾಗೂ ಪರಿಸ್ಥಿತಿಯನ್ನು ಯಾರೂ ಸಹ ಅರ್ಥ ಮಾಡಿಕೊಳ್ಳುವುದಿಲ್ಲ.

ವಿದ್ಯಾರ್ಥಿಗಳು : ಅಧ್ಯಾಪಕರ ವಿಶ್ವಾಸವನ್ನು ಪಡೆಯಲು ಇನ್ನೂ ಹೆಚ್ಚಿನ ಪ್ರಯತ್ನ ಮಾಡಿ ಎಲ್ಲಿಯೂ ಸಹ ಅವರ ಕೋಪಕ್ಕೆ ತುತ್ತಾಗದಂತೆ ಎಚ್ಚರ ವಹಿಸಿ.

ಪರಿಹಾರ : ಪ್ರತೀ ದಿನ ತಪ್ಪದೆ ಗುರು ಗ್ರಹ ಅಷ್ಟೋತ್ತರ ಪಠಿಸಿ. ಸಾಧ್ಯ ಆದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ದೇಗುಲಕ್ಕೆ ಭೇಟಿ ಕೊಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Read your Weekly forecast on the horoscope provided by Oneindia Kannada. We provide online free weekly prediction including your personal, professional and love life.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ