Vastu Tips: ಅಡುಗೆಮನೆಯಲ್ಲಿ ಪೂಜೆ ಮಾಡಬಹುದೇ? ಇಲ್ಲಿದೆ ವಾಸ್ತು ತಜ್ಞರ ಸ್ಪಷ್ಟ ಉತ್ತರ
ಇಂದಿನ ನಗರ ಜೀವನದಲ್ಲಿ ಮನೆಗಳ ವಿಸ್ತಾರವು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಪೂಜಾ ಕೊಠಡಿ ಹೊಂದುವುದು ಎಲ್ಲರಿಗೂ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಹಲವರು ಅಡುಗೆಮನೆಯಲ್ಲಿ ಪೂಜೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಪೂಜೆಗೆ ಈಶಾನ್ಯದಲ್ಲಿ ಖಂಡಿತವಾಗಿಯೂ ಸ್ವಲ್ಪ ಜಾಗ ಇರಲೇಬೇಕು. ಅಡುಗೆಮನೆಯಲ್ಲಿ ಪೂಜೆ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯೇ? ತಪ್ಪೇ? ಈ ಕುರಿತು ತಜ್ಞರ ಅಭಿಪ್ರಾಯ ಏನು ಎಂಬುದನ್ನು ತಿಳಿದುಕೊಳ್ಳೋಣ.
ಅಡುಗೆಮನೆ ಮತ್ತು ಪೂಜಾ ಸ್ಥಳ
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆ ಅಗ್ನಿ ತತ್ತ್ವಕ್ಕೆ ಸಂಬಂಧಿಸಿದ್ದು ಸಾಮಾನ್ಯವಾಗಿ ಆಗ್ನೇಯ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ಪೂಜಾ ಸ್ಥಳ ಈಶಾನ್ಯ ದಿಕ್ಕಿನಲ್ಲಿ ಇರಬೇಕು ಎಂದು ಹೇಳಲಾಗುತ್ತದೆ. ಹೀಗಾಗಿ ಬೆಂಕಿ ಮತ್ತು ದೈವಿಕ ಶಕ್ತಿ ಒಂದೇ ಸ್ಥಳದಲ್ಲಿ ಇರುವುದರಿಂದ ಮನೆಯ ಸಕಾರಾತ್ಮಕ ಶಕ್ತಿಗೆ ಸಮಸ್ಯೆಗಳು ಉಂಟಾಗಬಹುದು ಎಂಬದು ತಜ್ಞರು ಅಭಿಪ್ರಾಯವಾಗಿದೆ.

ಅಡುಗೆಮನೆಯಲ್ಲಿ ಪೂಜೆ ಯಾಕೆ ಮಾಡಲು ಸೂಚಿಸುವುದಿಲ್ಲ?
ಅಡುಗೆಮನೆ ದಿನನಿತ್ಯದ ಕೆಲಸಗಳಿಂದ ಸದಾ ಚಟುವಟಿಕೆಯಲ್ಲಿರುತ್ತದೆ. ಅಲ್ಲಿ ವಿವಿಧ ಮತ್ತು ವಿಧವಿಧವಾದ ಅಡುಗೆಗಳನ್ನು ಮಾಡುತ್ತೇವೆ. ಪೂಜೆಗೆ ಅಗತ್ಯವಾದ ಶುದ್ಧತೆ, ಶಾಂತಿ ಮತ್ತು ನೆಮ್ಮದಿ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಇರುವುದಿಲ್ಲ. ಈ ಕಾರಣದಿಂದ ವಾಸ್ತು ಪ್ರಕಾರ ಅಡುಗೆಮನೆಯಲ್ಲಿ ಪೂಜೆ ಮಾಡುವುದನ್ನು ವಾಸ್ತು ತಜ್ಞರು ಹೆಚ್ಚಾಗಿ ಸೂಚಿಸುವುದಿಲ್ಲ.
ಅನಿವಾರ್ಯ ಸಂದರ್ಭಗಳಲ್ಲಿ ನಾವು ಏನು ಮಾಡಬೇಕು?
ಅಪಾರ್ಟ್‌ಮೆಂಟ್ ಅಥವಾ ಸಣ್ಣ ಮನೆಯಲ್ಲಿ ಪ್ರತ್ಯೇಕ ಪೂಜಾ ಸ್ಥಳ ಇಲ್ಲದಿದ್ದರೆ ಅಡುಗೆಮನೆಯಲ್ಲಿ ಪೂಜೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸುವುದು ಅತಿ ಮುಖ್ಯವಾಗಿರುತ್ತದೆ.
* ದೇವರ ಫೋಟೋ ಅಥವಾ ವಿಗ್ರಹಗಳನ್ನು ಈಶಾನ್ಯ ಮೂಲೆಯಲ್ಲಿ ಇರಿಸಬೇಕು.
* ದೇವರ ಜಗಲಿ ನೆಲಕ್ಕೆ ಅಂಟಿಕೊಂಡಿರಬಾರದು ಇದು ಕನಿಷ್ಠ ನಮ್ಮ ಮೊಣಕಾಲಿನ ಎತ್ತರಕ್ಕಿಂತ ಮೇಲಿರಬೇಕು.
* ಸಾಧ್ಯವಾದರೆ ದೇವರ ಸ್ಥಳಕ್ಕೆ ಸಣ್ಣ ಕಪಾಟು ಅಥವಾ ಬಾಗಿಲು ಇರಿಸಬೇಕು ಅಥವಾ ಪರದೆ ಹಾಕಬಹುದು.
* ಅಡುಗೆ ಮಾಡುವಾಗ ಅಥವಾ ಊಟ ಮಾಡುವಾಗ ದೇವರ ಸ್ಥಳವನ್ನು ಮುಚ್ಚಿಡುವುದು ಒಳ್ಳೆಯದು.
ಈ ತಪ್ಪುಗಳನ್ನು ಮಾಡಬಾರದು
* ದೇವರ ಫೋಟೋಗಳನ್ನು ಒಲೆಯ ಮೇಲ್ಭಾಗದಲ್ಲಿ ಅಥವಾ ಹತ್ತಿರ ಇಡಬಾರದು.
* ಸಿಂಕ್ ಅಥವಾ ನೀರಿನ ಸ್ಥಳದ ಪಕ್ಕದಲ್ಲೂ ಇರಿಸಬಾರದು.
* ಅಡುಗೆಮನೆಯ ಪೂಜಾ ಸ್ಥಳವನ್ನು ಸದಾ ಸ್ವಚ್ಛವಾಗಿಡಬೇಕು.
* ರಾತ್ರಿ ವೇಳೆ ಪಾತ್ರೆಗಳನ್ನು ತಪ್ಪದೆ ತೊಳೆಯಬೇಕು ಹಾಗೆ ಬಿಟ್ಟುಹೋಗುವ ತಪ್ಪನ್ನು ಮಾಡಬಾರದು.
* ಪೂಜೆ ಮಾಡುವಾಗ ಸ್ಥಳ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಬೇಕು.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯಲ್ಲಿ ಪೂಜೆ ಮಾಡುವುದನ್ನು ಸೂಚಿಸುವುದಿಲ್ಲ, ಆದರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಮೇಲ್ಕಂಡ ನಿಯಮಗಳನ್ನು ಪಾಲಿಸಿದರೆ ದೋಷಗಳನ್ನು ಕಡಿಮೆ ಮಾಡಬಹುದು. ಸಾಧ್ಯವಾದರೆ ಪ್ರತ್ಯೇಕವಾಗಿ ಪೂಜಾ ಸ್ಥಳವನ್ನು ವ್ಯವಸ್ಥೆ ಮಾಡುವುದು ಅತ್ಯುತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.












Click it and Unblock the Notifications