ಏ.4ರಂದು ಚಂದ್ರಗ್ರಹಣ : ಜ್ಯೋತಿಷಿಯ ಮಾರ್ಗದರ್ಶಿ

ಯುಗಾದಿ ಹಬ್ಬದಿಂದ ಮನ್ಮಥನಾಮ ಸಂವತ್ಸರದಲ್ಲಿ ಕಾಲಿಟ್ಟಿರುವ ನಮಗೆ ವರ್ಷದ ಮೊದಲ ಚಂದ್ರ ಗ್ರಹಣ ನೋಡುವ ಭಾಗ್ಯ ಎಪ್ರಿಲ್ 4ರ ಹನುಮ ಜಯಂತಿಯಂದು ಲಭಿಸುತ್ತದೆ. ಈ ವರ್ಷದಲ್ಲಿ ಇನ್ನೊಂದು ಚಂದ್ರ ಗ್ರಹಣವಿದ್ದು, ಅದು ಸೆಪ್ಟೆಂಬರ್ನಲ್ಲಿ ಅನಂತನ ಹುಣ್ಣಿಮೆಯ ದಿನದಂದು ಸಂಭವಿಸಲಿದೆ. ಆದರೆ, ಎರಡನೇ ಗ್ರಹಣವು ನಮ್ಮ ಕನ್ನಡ ನಾಡಿನಲ್ಲಿರುವವರಿಗೆ ಕಾಣುವುದಿಲ್ಲ.

ಈಗ ದವನದ ಹುಣ್ಣಿಮೆಯಂದು ಬರುವ ಗ್ರಹಣವನ್ನೇ ನಾವು ನೋಡಬಹುದು. ಏಕೆಂದರೆ, ಮತ್ತೆ ಚಂದ್ರಗ್ರಹಣ ನೋಡಲು ಸಿಗುವುದು ಮುಂದಿನ ವರ್ಷದ ಯುಗಾದಿಯ ಅಕ್ಕಪಕ್ಕದಲ್ಲಿಯೇ. ಆದರೆ, ಗ್ರಹಣದಿಂದ ಅಶುಭ ಫಲವಿದ್ದ ರಾಶಿ ಮತ್ತು ನಕ್ಷತ್ರದವರು, ಗರ್ಭಿಣಿಯರು, ಪುಟ್ಟ ಮಕ್ಕಳು, ವಯಸ್ಸಾದ ರೋಗಿಗಳು ಗ್ರಹಣ ನೋಡಬಾರದೆಂಬುದು ಮೊದಲಿನಿಂದ ನಡೆದುಕೊಂಡ ಬಂದ ಪದ್ಧತಿ.

ಇನ್ನು, ಈ ಗ್ರಹಣವು ಏ.4ರ ಶನಿವಾರದಂದು ಹಗಲಿನ 3-45ಕ್ಕೆ ಆರಂಭವಾಗಿ ಸಂಜೆಯ 7-15ರ ಹೊತ್ತಿಗೆ ಮುಕ್ತಾಯವಾಗುತ್ತದೆ. ಒಟ್ಟು ಗ್ರಹಣದ ಸಮಯವು ಮೂರು ಗಂಟೆಗೂ ಹೆಚ್ಚಿರುತ್ತದೆ. ಸಂಜೆಯ 5-30ರ ಹೊತ್ತಿಗೆ ಗ್ರಹಣದ ಮಧ್ಯಕಾಲೀನವಾಗಿರುತ್ತದೆ. ಈ ಸಮಯದಲ್ಲಿಯೇ ರಾಹುಗ್ರಸ್ಥ ಗ್ರಹಣವು ಚಂದ್ರನನ್ನು ಸಂಪೂರ್ಣ ಮರೆಮಾಚುತ್ತದೆ. ಹುಣ್ಣಿಮೆಯ ದಿನವಾಗಿದ್ದರೂ ಫಳಫಳ ಹೊಳೆಯದೆ ಚಂದ್ರನು ಮಂಕಾಗಿ ಕ್ರಮೇಣ ಕಪ್ಪಿಡುತ್ತಾನೆ. ನಂತರ ಗ್ರಹಣವು ಬಿಡಲಾರಂಭಿಸಿದ ಮೇಲೆ ಚಂದ್ರನಿಗೆ ಕವಿದ ಮಂಕು ಮರೆಯಾಗುತ್ತ ಸಂಜೆಯ 7-15ರ ಹೊತ್ತಿಗೆ ಮತ್ತೆ ಫಳಫಳನೇ ಹೊಳೆಯಲಾರಂಭಿಸುತ್ತಾನೆ. [ಸಣ್ಣಕಥೆ : ಗ್ರಹಣ]

Total Lunar Eclipse on 4th April

ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿಯು ಬಂದಾಗ ಚಂದ್ರಗ್ರಹಣವಾಗುವುದು ಎಂಬ ವೈಜ್ಞಾನಿಕ ವಿಷಯ ಎಲ್ಲರಿಗೂ ಗೊತ್ತಿದೆ. ಸೂರ್ಯನ ಕಿರಣಗಳನ್ನೇ ಚಂದ್ರನು ಪ್ರತಿಫಲಿಸಿ ಫಳಫಳ ಹೊಳೆಯುತ್ತಿರುತ್ತಾನೆ. ಹೀಗಿದ್ದಾಗ ಭೂಮಿ ಅಡ್ಡ ಬಂದರೆ ಸಹಜವಾಗಿ ಚಂದ್ರನಿಗೆ ಸೂರ್ಯ ಕಿರಣಗಳು ಬೀಳದೆ ಗ್ರಹಣಾವಸ್ಥೆ ತಲುಪುತ್ತಾನೆ.

ಎಲ್ಲರೂ ಗ್ರಹಣಗಳನ್ನು ನೋಡಬೇಕೆಂದು ಹಂಬಲಿಸುತ್ತಲೇ ಇರುತ್ತಾರೆ. ಆದರೆ, ನಾವು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಪದ್ಧತಿಗಳಂತೆ ಗ್ರಹಣಾಚರಣೆಗಳನ್ನು ನಮ್ಮ ಹಿರೀಕರು ಬರೆದಿಟ್ಟಿದ್ದಾರೆ. ಈ ತರಹ ಮಾಡುವುದು ಮೂಢನಂಬಿಕೆ ಎನ್ನುವವರು ಮನೆಯಲ್ಲಿ ಸೂತಕ, ಮುಟ್ಟಾದಾಗ ಹಾಗೂ ಮನೆಯಲ್ಲಿ ಯಾರಾದರೂ ಸತ್ತರೆ ಮಾಡುವ ಆಚರಣೆಗಳನ್ನೂ ಮಾಡುವ ಅವಶ್ಯಕತೆಯಿಲ್ಲ. ಏಕೆಂದರೆ, ಹಿಂದೂ ಧರ್ಮದಲ್ಲಿ ಹುಟ್ಟಿ ಪುಣ್ಯವಂತರಾಗಿರುವವರು ನಾವು. ನಮ್ಮ ಪದ್ಧತಿಗಳನ್ನೇ ಅಂಧಾಚರಣೆ ಎಂದರೆ ಅವರಂಥ ಅಂಧರಿಲ್ಲ ಎನ್ನಬಹುದು. [ದೇವರನ್ನೇ ಸಂಕಷ್ಟಕ್ಕೆ ಸಿಲುಕಿಸುವ ಗ್ರಹಣ]

ಗ್ರಹಣಗಳ ಕುರಿತಾದ ಪೌರಾಣಿಕೆ ಕಥೆ : ದೇವತೆಯರೊಂದಿಗೆ ಅಸುರರು ಯುದ್ಧಕ್ಕಿಳಿದಾಗ ಸಮುದ್ರ ಮಂಥನವಾದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಸಮುದ್ರ ಮಂಥನದ ಸಮಯದಲ್ಲಿ ಅಮೃತವು ಹುಟ್ಟಿತೆಂಬುದು ಪುರಾಣದಲ್ಲಿ ಉಲ್ಲೇಖವಿದೆ. ಅಮೃತ ಸೇವಿಸಿದವರು ಅಮರರಾಗುತ್ತಾರೆ ಎಂಬುದು ದೇವತೆಗಳಿಗೆ ಗೊತ್ತಿತ್ತು. ಆದರೆ ಈ ವಿಷಯ ಹೇಗೋ ಅಸುರರಿಗೆ ಗೊತ್ತಾಗಿ ಹೋಯಿತು. ಆಗ ಅವರು ಅಮೃತವನ್ನು ಪಡೆಯಬೇಕೆಂದು ಹಂಬಲಿಸತೊಡಗಿದರು.

ಧನ್ವಂತರಿ ದೇವತೆಯು ಅಮೃತದ ಗಿಂಡಿಯನ್ನು ಹಿಡಿದುಕೊಂಡು ಸಮುದ್ರದಿಂದ ಹೊರ ಬಂದಾಗ ಅಸುರರು ಅಮೃತಕ್ಕಾಗಿ ಕಾಡಿಸಲಾರಂಭಿಸಿದರು. ವಿಷ್ಣುವು ಕೂಡಲೇ ಸುಂದರ ಅಪ್ಸರೆಯ ವೇಷದಲ್ಲಿ ಅವತರಿಸಿ ಅಮೃತವಿದ್ದ ಗಿಂಡಿಯನ್ನು ತನ್ನ ಕೈವಶ ಮಾಡಿಕೊಂಡನು. ಹೀಗೆ ಮಾಡಲು ಕಾರಣವೆಂದರೆ, ಅಮೃತವನ್ನು ದೇವತೆಗಳಿಗೆ ಮತ್ತು ಸಾಮಾನ್ಯವಾದ ನೀರನ್ನು ಅಸುರರಿಗೆ ಕುಡಿಸಲು ಯೋಚಿಸಿದ್ದನು. ಎಲ್ಲ ದೇವತೆಗಳು ಅಮೃತವನ್ನು ಪಡೆದುಕೊಳ್ಳಲಾರಂಭಿಸಿದರು. ಅಸುರರೇನಾದರೂ ಅಮೃತವನ್ನು ಕುಡಿದಿದ್ದರೆ ಜಗತ್ತೇ ಸರ್ವನಾಶವಾಗುವ ಭಯ ವಿಷ್ಣುವಿಗೆ ಇತ್ತು.

ವಿಷ್ಣುವು ಅಸುರರಿಗೆ ಅಮೃತದ ಬದಲು ನೀರು ಕುಡಿಸುವದರ ಬಗ್ಗೆ ತಿಳಿದುಕೊಂಡ ಸ್ವರಭಾನು ಎಂಬ ಅಸುರನು ದೇವತೆಗಳ ವೇಷ ಧರಿಸಿದನು. ದೇವತೆಗಳ ಸಾಲಿನಲ್ಲಿ ಬಂದು ತಾನೂ ಕೂಡ ಅಮೃತವನ್ನು ಸೇವಿಸಿದನು. ಆದರೆ ಇದನ್ನು ಸೂರ್ಯ, ಚಂದ್ರರು ನೋಡಿದರು. ಕೂಡಲೇ ವಿಷ್ಣುವಿಗೆ ಆಗಿರುವ ಪ್ರಮಾದದ ಬಗ್ಗೆ ತಿಳಿಸಿದರು. ತಕ್ಷಣವೇ ವಿಷ್ಣುವು ತನ್ನಲ್ಲಿದ್ದ ಸುದರ್ಶನ ಚಕ್ರವನ್ನು ಸ್ವರಭಾನುವಿನೆಡೆ ಬಿಟ್ಟನು. ಕೂಡಲೇ ರುಂಡ-ಮುಂಡ ಬೇರ್ಪಟ್ಟ ಸ್ವರಭಾನು ನೆಲಕ್ಕೆ ಬಿದ್ದನು. ಆದರೆ ಅಮೃತವನ್ನು ಸೇವಿಸಿದ್ದರಿಂದ ಆತನು ಅಮರನಾಗಿದ್ದ ಕಾರಣ ಸಾಯಲಿಲ್ಲ. ಈತನ ರುಂಡವನ್ನೇ ರಾಹು ಮತ್ತು ಮುಂಡವನ್ನು ಕೇತು ಎಂದು ಕರೆಯಲಾಯಿತು.

ಸೂರ್ಯ ಮತ್ತು ಚಂದ್ರರಿಂದಲೇ ತನಗೀ ದುಃಸ್ಥಿತಿ ಬಂದಿತೆಂದು ಸಿಟ್ಟಿಗೆದ್ದ ರಾಹು-ಕೇತುಗಳು ಜಗತ್ತಿಗೇ ಜೀವಸೆಲೆಯಾಗಿರುವ ಸೂರ್ಯ ಮತ್ತು ಚಂದ್ರರನ್ನು ಗ್ರಹಣದ ಸ್ಥಿತಿಗೆ ತರುತ್ತಾರೆ ಎಂಬುದು ಪೌರಾಣಿಕೆ ಹಿನ್ನೆಲೆ. ಅದಕ್ಕೆಂದೇ ಗ್ರಹಣವಿದ್ದಾಗ ರಾಹುಗ್ರಸ್ತ, ಕೇತುಗ್ರಸ್ತ ಎನ್ನಲಾಗುತ್ತದೆ. ಇದಕ್ಕೆ ವೈಜ್ಞಾನಿಕ ಕಾರಣಗಳು ಮತ್ತು ಹಿನ್ನೆಲೆಗಳೂ ಸಾಕಷ್ಟಿವೆ. ಆದರೆ ವಿಜ್ಞಾನ ಹುಟ್ಟುವುದಕ್ಕೇ ಮೊದಲೇ ಅನಾದಿ ಕಾಲದಿಂದಲೂ ಗ್ರಹಣಾಚರಣೆ ಮಾಡಿಕೊಂಡು ಬರಲಾಗುತ್ತಿದೆ ಮತ್ತು ಅದನ್ನು ಹಿರೀಕರು ಬರೆದಿಟ್ಟಿದ್ದಾರೆ ಎಂದರೆ ನಮ್ಮ ಹಿಂದೂ ಧರ್ಮ ಎಷ್ಟು ಶ್ರೇಷ್ಠ ಎಂಬುದು ಗೊತ್ತಾಗುತ್ತದೆ.

Total Lunar Eclipse on 4th April

ಗ್ರಹಣಾಚರಣೆ ಎಂದರೇನು? : ಗ್ರಹಣದ ಮೊದಲು ಮತ್ತು ನಂತರ ಹತ್ತಿರದ ನದಿ, ಹೊಳೆ, ಹಳ್ಳ, ಸಮುದ್ರ ಸ್ನಾನ ಮಾಡಬಹುದು. ಅನುಕೂಲತೆಯಿಲ್ಲದವರು ಮನೆಯಲ್ಲಿಯೇ ತಣ್ಣೀರು ಸ್ನಾನ ಮಾಡಬಹುದು. ಗ್ರಹಣದ ನಂತರ ದೇವರನ್ನು ತೊಳೆದ ನೀರನ್ನು ಇಡೀ ಮನೆ ತುಂಬ ಸಿಂಪಡಿಸಬೇಕು.

ಗ್ರಹಣದ ಸಮಯದಲ್ಲಿ ಕೆಳಗಿನ ಮಂತ್ರ ಪಠಿಸಬಹುದು.

ಮಂತ್ರ : ಓಂ ಕ್ಷೀರಪುತ್ರಾಯ ವಿದ್ಮಹೇ ಅಮೃತ ತತ್ವಾಯ ಧೀಮಹೀ ತನ್ನೋ ಚಂದ್ರಃ ಪ್ರಚೋದಯಾತ್ ||

ಸ್ತೋತ್ರ : ದಧೀಶಂಖ ತುಷಾರಾಭಂ ಕ್ಷೀರೋ ಧರ್ನವ ಸಂಭಾವಂ |
ಮಾಮಿ ಶಶಿನಂ ಸೋಮಂ ಸಂಭೋರ್ಮಕುಟ ಭೂಷಣಂ ||

ಶಂಭೋಲಿಂಗನ ಮಹಾಮೃತ್ಯುಂಜಯ ಮಂತ್ರ, ಸ್ತೋತ್ರ ಮತ್ತು ವಿಷ್ಣು ಸಹಸ್ರನಾಮವನ್ನೂ ಕೂಡ ಪಠಿಸಬಹುದು. ಕನಿಷ್ಠ 108 ಬಾರಿಯಾದರೂ ಪಠಿಸಿದರೆ ಗ್ರಹಣದ ದುಷ್ಫಲದ ಪರಿಹಾರ ಸುಲಭ. ಮಲಗಿ ನಿದ್ದೆ ಮಾಡಬಾರದು. ದೋಷವಿರುವ ರಾಶಿಯವರು ಮತ್ತು ನಕ್ಷತ್ರದವರು ಗ್ರಹಣವನ್ನು ವೀಕ್ಷಿಸದಿರುವುದು ಒಳ್ಳೆಯದು.

ಗ್ರಹಣದಾರಂಭದ ಕನಿಷ್ಠ 9 ಗಂಟೆಗಳ ಮೊದಲು ಊಟ ಅಥವಾ ಉಪಹಾರ ಮುಗಿಸಿಕೊಳ್ಳಬಹುದು. ಹಾಗೂ ನೀರಿನಲ್ಲಿ ಗರಿಕೆಯನ್ನು ಅಥವಾ ತುಳಸಿಯ ಎಲೆಗಳನ್ನು ಹಾಕಿಡಬೇಕು. ಏಕೆಂದರೆ ಗ್ರಹಣ ಶುರುವಾಗುವ 9 ಗಂಟೆಗಳ ಮೊದಲೇ ಗ್ರಹಣದ ಫಲ ಆರಂಭವಾಗಿರುತ್ತದೆ. [ಚಂದ್ರ ಗ್ರಹಣದ ಪೋಸ್ಟ್‌ ಮಾರ್ಟಮ್]

ಏನೇನು ಮಾಡಬಾರದು? : ಇನ್ನು ಗ್ರಹಣದ ಸಮಯದಲ್ಲಿ ಮುಖ್ಯವಾದ ಮಾತುಕತೆಗಳನ್ನು ಮಾಡದಿರುವುದು ಒಳ್ಳೆಯದು. ಇದೇ ರೀತಿ ಅಡುಗೆ ಮಾಡುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಊಟ ಮತ್ತು ಉಪಹಾರ ಸೇವಿಸದಿರುವುದು ಕ್ಷೇಮಕರ. ಚಂದ್ರ ಗ್ರಹಣದ ಮೊದಲೇ ಮಾಡಿಟ್ಟ ಅಡುಗೆಯನ್ನು ಗ್ರಹಣ ಮುಕ್ತಾಯವಾದ ಕೂಡಲೇ ಸೇವಿಸುವುದು ತಪ್ಪು. ಆದ್ದರಿಂದ ಮೊದಲಿದ್ದ ಅಡುಗೆಯನ್ನು ಖಾಲಿ ಮಾಡಿಡುವುದೇ ಸೂಕ್ತ. ಗ್ರಹಣದ ನಂತರ ಮತ್ತೆ ಬಿಸಿಬಿಸಿಯಾಗಿ ಅಡುಗೆ ಮಾಡಿಕೊಂಡು ಊಟ ಮಾಡಬಹುದು.

ಇನ್ನೊಂದು ಮುಖ್ಯವಾದ ವಿಷಯವೆಂದರೆ ಸಂತಾನಾಸಕ್ತರು ಮತ್ತು ದಂಪತಿಗಳು ಗ್ರಹಣ ಸಮಯದಲ್ಲಿ ಮಿಲನಕ್ಕೆ ಮುಂದಾಗಬಾರದು. ಗರ್ಭಿಣಿಯರು ಮನೆಯಿಂದ ಹೊರಗಡೆ ಸುತ್ತಾಡದೇ ಮನೆಯಲ್ಲಿಯೇ ಚಂದ್ರನ ಮಂತ್ರ ಮತ್ತು ಸ್ತೋತ್ರ ಪಠಣ ಮಾಡುವುದು ಸೂಕ್ತ. ಈ ಸಮಯದಲ್ಲಿ ಅಡುಗೆ ಮಾಡುವ ದುಸ್ಸಾಹಸಕ್ಕಿಳಿಬಾರದು. ಏಕೆಂದರೆ ಮಗು ಹುಟ್ಟುವಾಗ ಸಮಸ್ಯೆಗಳು ಉದ್ಭವಿಸಬಹುದು ಎನ್ನಲಾಗುತ್ತದೆ.

ಗ್ರಹಣ ಬಿಟ್ಟ ಕೂಡಲೇ ತೀಕ್ಷ್ಣವಾದ ಕಿರಣಗಳು ದೇವಸ್ಥಾನದಲ್ಲಿರುವ ದೇವಮೂರ್ತಿಗಳಿಗೆ ಸ್ಪರ್ಶಿಸಿದರೆ ಅದರ ಪಾವಿತ್ರ್ಯತೆ ಹಾಳಾಗುತ್ತದೆ. ಅಸುರ ಶಕ್ತಿಯು ದೇವಾಲಯಗಳೊಳಗೆ ಪ್ರವೇಶ ಮಾಡಬಹುದು ಎಂಬ ಕಾರಣಕ್ಕೆ ದೇವಸ್ಥಾನಗಳನ್ನು ಗ್ರಹಣದ ಸಮಯದಲ್ಲಿ ಮುಚ್ಚಲಾಗುತ್ತದೆ.

ರೋಗಿಗಳು ಮತ್ತು ವೃದ್ಧರು ಮತ್ತು ಮಕ್ಕಳು ಅನಿವಾರ್ಯವಿದ್ದಲ್ಲಿ ಆಹಾರ ಸೇವಿಸುವುದು. ಇನ್ನು ಸೆಕೆಂಡ್ಗೇನೆ ಲಕ್ಷಗಟ್ಟಲೇ ಮಕ್ಕಳು ಹುಟ್ಟುವ ಈ ಜಗತ್ತಿನಲ್ಲಿ ಎಲ್ಲರೂ ಗ್ರಹಣಾಚರಣೆ ಮಾಡಲು ಸಾಧ್ಯವಿಲ್ಲ ಎನ್ನುವವರಿಗೆ ಅವರವರ ಕರ್ಮ ಎನ್ನಬೇಕಾಗುತ್ತದೆ ಅಷ್ಟೇ. ಇದಕ್ಕೆಂದೆ "ಗ್ರಹಣದಾಗ ಹುಟ್ಟಿದಂಗ ಕಂಡಾಪಟ್ಟಿ ಮಾತನಾಡ್ತಾನೆ ಮಾರಾಯ್ರೇ"ಎಂದು ಕೆಲವರೆನ್ನುವುದು.

ಗ್ರಹಣದ ದಿನ ಇಷ್ಟದ ಮತ್ತು ಸಿದ್ಧಿ ಮಾಡಿಕೊಳ್ಳಬೇಕಾದ ಮಂತ್ರ ಮತ್ತು ಸ್ತೋತ್ರಗಳನ್ನು ಸಹಸ್ರ ಸಂಖ್ಯೆಯಲ್ಲಿ ಪಠಿಸಿ ಸಿದ್ಧಿಸಿಕೊಳ್ಳಬಹುದು. [2015ರ ಸೂರ್ಯ ಮತ್ತು ಚಂದ್ರ ಗ್ರಹಣಗಳ ಪಟ್ಟಿ]

ಹಲ್ಲುಜ್ಜುವುದು ಮತ್ತು ತಲೆಗೆ ಎಣ್ಣೆ ಹಚ್ಚಿಕೊಳ್ಳುವುದು, ಹೇರ್ ಕಟಿಂಗ್ ಮಾಡಿಕೊಳ್ಳುವುದು, ತಲೆ ಬಾಚುಕೊಳ್ಳುವುದು ಕೂಡ ನಿಷಿದ್ಧವೆನ್ನಲಾಗುತ್ತದೆ. ಗರ್ಭಿಣಿಯರು ಬಟ್ಟೆ ಕೂಡ ಕತ್ತರಿಸುವ ಹಾಗಿಲ್ಲ. ಹಾಗೂ ಚಾಕುವನ್ನೇ ಬಳಸದಿರುವುದು ಒಳ್ಳೆಯದು. ಗರ್ಭಿಣಿಯರಿಗೆ ಒಬ್ಬರು ಸಹಾಯಕರಂತಿದ್ದು ಅವರಿಗೆ ಬೇಕಾದ ಅನುಕೂಲ ಮಾಡಿಕೊಟ್ಟರೆ ಒಳ್ಳೆಯದು.

ಕನ್ಯಾ ರಾಶಿ ಮತ್ತು ಹಸ್ತಾ ನಕ್ಷತ್ರದಲ್ಲಿ ಈ ಗ್ರಹಣವು ಜರುಗುತ್ತಿದೆ. ಕನ್ಯಾ, ಮಿಥುನ, ಕುಂಭ, ತುಲಾ ರಾಶಿಯವರಿಗೆ ಕೆಟ್ಟದ್ದಿದೆ. ವೃಷಭ, ಸಿಂಹ, ಮಕರ, ಮೀನದವರಿಗೆ ಶುಭಾಶುಭ ಎರಡೂ ಇವೆ. ಮೇಷ, ಕರ್ಕ, ವೃಶ್ಚಿಕ, ಧನಸ್ಸು ರಾಶಿಯವರಿಗೆ ಶುಭವಿದೆ. ಹಸ್ತಾ ನಕ್ಷತ್ರದಲ್ಲಿ ಜನಿಸಿದವರಿಗೆ ಸ್ವಲ್ಪ ಕೆಟ್ಟ ಪ್ರಭಾವ ಹೆಚ್ಚಿರುತ್ತದೆ.

ಗ್ರಹಣ ಕಾಣಿಸುವ ಪ್ರದೇಶಗಳು : ಭಾರತ, ದುಬೈ, ಕತಾರ್, ಒಮಾನ್, ಬಹರೇನ್, ಸೌದಿ ಅರೇಬಿಯಾ, ನೇಪಾಳ, ಶ್ರೀಲಂಕಾ, ಸಿಂಗಪೂರ್, ಮಲೇಶಿಯಾ, ಆಷ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅಮೆರಿಕ.

ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+