Artificial Intelligence: ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದಲ್ಲೂ ಎಐ ಸದ್ದು..
Artificial Intelligence: ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಎಐ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ನಡುವೆಯೇ ಇದೀಗ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಕಮಾಂಡ್ ಕಂಟ್ರೋಲ್ ಸೆಂಟರ್ ಅನ್ನು ಉದ್ಘಾಟನೆ ಮಾಡಿದರು. ಹಾಗಾದ್ರೆ ಉದ್ದೇಶ ಹಾಗೂ ಕಾರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ 2024ರಲ್ಲಿ ಸಂಭವಿಸಿದ ದುರಂತದಲ್ಲಿ ಆರು ಜನ ಸಾವನ್ನಪ್ಪಿ, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಘಟನೆ ನಡೆದ 9 ತಿಂಗಳ ನಂತರ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ದೇಶದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಕಮಾಂಡ್ ಕಂಟ್ರೋಲ್ ಸೆಂಟರ್ ಉದ್ಘಾಟಿಸಿದರು. ಈ ಯೋಜನೆಯು ಭಕ್ತರ ಗುಂಪನ್ನು ನಿರ್ವಹಿಸಲು ಟಿಟಿಡಿ ರೂಪಿಸಿದೆ.

ಈ ಕೇಂದ್ರವನ್ನು ತಿರುಮಲದ ವೈಕುಂಠಂ 1 ಕಾಂಪ್ಲೆಕ್ಸ್‌ನಲ್ಲಿ ಸ್ಥಾಪನೆ ಮಾಡಲಾಗಿದೆ. ದೇವಸ್ಥಾನದಾದ್ಯಂತ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ದೊಡ್ಡ ಪರದೆಯ ಮೂಲಕ ಭಕ್ತರ ಚಲನೆ ಮತ್ತು ಸಾಲುಗಳನ್ನು ನೈಜ ಸಮಯದಲ್ಲಿ ಗಮನಿಸಲಾಗುತ್ತದೆ. 25ಕ್ಕೂ ಹೆಚ್ಚು ತಾಂತ್ರಿಕ ಸಿಬ್ಬಂದಿ ಈ ಕ್ಯಾಮೆರಾಗಳನ್ನು ನಿರ್ವಹಿಸುತ್ತಾರೆ. ತಿರುಮಲದ ಪ್ರಮುಖ ಪ್ರವೇಶ ದ್ವಾರವಾದ ಅಲಿಪಿರಿಯಿಂದಲೇ ಭಕ್ತರ ಒತ್ತಡವನ್ನು ಗಮನಿಸಲು ಕ್ಯಾಮೆರಾಗಳನ್ನು ಸ್ಥಾಪನೆ ಮಾಡಲಾಗಿದೆ.
ಇಲ್ಲಿನ ಎಐ ಕ್ಯಾಮೆರಾಗಳಲ್ಲಿ ಕೇವಲ ವಿಡಿಯೋ ರೆಕಾರ್ಡ್ ಅಷ್ಟೇ ಅಲ್ಲದೆ, ಸಾಲಿನಲ್ಲಿ ಜನರ ಸಂಖ್ಯೆಯನ್ನು ಎಣಿಕೆ ಮಾಡುವುದು, ಗುಂಪಿನ ಚಲನೆಯನ್ನು ಗಮನಿಸುವುದು ಮತ್ತು ದರ್ಶನದ ಕಾಯುವ ಸಮಯವನ್ನು ಅಂದಾಜಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡುತ್ತವೆ. 3ಡಿ ನಕ್ಷೆಗಳ ಮೂಲಕ ನೈಜ ಸಮಯದ ದೃಶ್ಯವನ್ನು ಒದಗಿಸುವ ಈ ವ್ಯವಸ್ಥೆಯು ಜನರ ಗುಂಪು ತುಂಬಿದ ಕಾರಿಡಾರ್‌ಗಳನ್ನು ಗುರುತಿಸಿ, ಪರಿಹಾರ ಒದಗಿಸಲಿದೆ. ಕಳವು ಅನುಮಾನಾಸ್ಪದ ಚಟುವಟಿಕೆಗಳನ್ನು ಪತ್ತೆಹಚ್ಚುವುದರ ಜೊತೆಗೆ, ಕಳೆದುಹೋದ ಮಕ್ಕಳು ಅಥವಾ ವೃದ್ಧರನ್ನು ಮುಖ ಗುರುತಿಸುವ ಮೂಲಕ ಹುಡುಕಲು ಸಹಾಯ ಮಾಡುತ್ತದೆ.
ಎಐ ವ್ಯವಸ್ಥೆ ಭಕ್ತರ ಮುಖದ ಭಾವನೆ ಮತ್ತು ದೇಹದ ಚಲನೆಯನ್ನು ಗಮನಿಸಿ ಒಬ್ಬ ವ್ಯಕ್ತಿಯು ಒತ್ತಡದಲ್ಲಿ, ಅನಾರೋಗ್ಯದಲ್ಲಿ ಇದ್ದರೆ ಅಥವಾ ಅಸ್ವಸ್ಥರಾಗಿದ್ದರೆ ತಕ್ಷಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ. ಕ್ಯಾಮೆರಾಗಳು ಮತ್ತು ಟಿಕೆಟ್ ದಾಖಲೆಗಳಿಂದ ದತ್ತಾಂಶವನ್ನು ಸಂಗ್ರಹಿಸಿ, ಗರಿಷ್ಠ ಭಕ್ತರ ಒತ್ತಡದ ಸಮಯವನ್ನು ಗಮನಿಸಲಿದೆ. ಇದರಿಂದ ಟಿಟಿಡಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದು ಅಥವಾ ಹೆಚ್ಚುವರಿ ಸಾಲು ತೆರೆಯುವುದನ್ನು ಯೋಜಿಸಬಹುದು. ಬೆಂಕಿ ಅಥವಾ ವೈದ್ಯಕೀಯ ತುರ್ತು ಸಂದರ್ಭದಲ್ಲಿ, ಸುರಕ್ಷಿತ ಮತ್ತು ತ್ವರಿತ ನಿರ್ಗಮನ ಮಾರ್ಗಗಳಿಗೆ ಅನುವು ಮಾಡಿಕೊಡಲಿದೆ.
ಈ ಎಐ ಕೇಂದ್ರವನ್ನು ಜನರು ದೇವಾಲಯದ ಭದ್ರತೆಗೆ ಆಧುನಿಕ ಕೊಡುಗೆ ಎಂದು ಶ್ಲಾಘಿಸಿದ್ದಾರೆ. ಇನ್ನು ಈ ಮಹತ್ವದ ಯೋಜನೆ ಇತರ ದೇವಾಲಯಗಳಿಗೂ ಮಾದರಿ ಆಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಆಧುನಿಕ ಜಗತ್ತಿನಲ್ಲಿ ಎಐ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರಿಂ ಎಷ್ಟು ಅನುಕೂಲಗಳಿವೆಯೋ, ಅಷ್ಟೇ ದುರುಪಯೋಗವನ್ನು ಕೆಲವರು ಮಾಡಿಕೊಳ್ಳುತ್ತಿದ್ದಾರೆ. ದುರುಪಯೋಗ ಮಾಡಿಕೊಳ್ಳುವವರಿಗೆ ಪೊಲೀಸರು ಬಿಸಿ ಮುಟ್ಟಿಸುವ ಕೆಲಸವನ್ನು ಸಹ ಮಾಡುತ್ತಿದ್ದಾರೆ.












Click it and Unblock the Notifications