ವಿಯೆಟ್ನಾಂನಲ್ಲಿರುವ ಫುಕಾಕ್ ದ್ವೀಪದಲ್ಲಿ ಶನಿವಾರ ಮಧ್ಯಾಹ್ನ ಭಾರಿ ದುರಂತವೊಂದು ಸಂಭವಿಸಿದೆ. 32 ಭಾರತೀಯ ಪ್ರವಾಸಿಗರು ಮತ್ತು ಮೂವರು ಸಿಬ್ಬಂದಿ ಪ್ರಯಾಣಿಸುತ್ತಿದ್ದ ಸ್ಪೀಡ್ ಬೋಟ್ ಮಗುಚಿ ಬಿದ್ದು ಕನಿಷ್ಠ 15 ಭಾರತೀಯ ಪ್ರವಾಸಿಗರು ಮೃತಪಟ್ಟಿದ್ದಾರೆ. ಹವಾಮಾನ ವೈಪರೀತ್ಯ ಮತ್ತು ದೊಡ್ಡ ಅಲೆಗಳ ಹೊಡೆತಕ್ಕೆ ಸಿಲುಕಿ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫು ಕ್ವಾಕ್ ದ್ವೀಪದ ಬಳಿಯಿರುವ ಹೊನ್ ಮೇ ರುಟ್ ನ್ಗೊವಾಯ್‌ನಿಂದ ಆನ್ ಥೋಯಿ ಬಂದರಿಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ದೋಣಿಯಲ್ಲಿ ಒಟ್ಟು 32 ಭಾರತೀಯ ಪ್ರವಾಸಿಗರು ಇದ್ದಿದ್ದರು. ದಡದಿಂದ ಕೇವಲ 400 ಮೀಟರ್ ದೂರದಲ್ಲಿಯೇ ದೋಣಿ ಮಗುಚಿದೆ. ವಿಯೆಟ್ನಾಂನಲ್ಲಿರುವ ರಾಯಭಾರಿ ಕಛೇರಿ ಒನ್‌ಇಂಡಿಯಾಗೆ ತಿಳಿಸಿರುವಂತೆ, ಈವರೆಗೆ 15 ಮೃತದೇಹಗಳನ್ನು ಹೊರತೆಗೆಯಲಾಗಿದೆ. 21 ಮಂದಿಯನ್ನು ರಕ್ಷಿಸಲಾಗಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ನಡೆದ ತಕ್ಷಣ ಸಮೀಪದಲ್ಲಿದ್ದ ಬೇರೆ ಪ್ರವಾಸಿ ದೋಣಿಗಳಲ್ಲಿದ್ದವರು ರಕ್ಷಣೆಗೆ ಧಾವಿಸಿದ್ದಾರೆ. ನಂತರ ಗಡಿ ಭದ್ರತಾ ಪಡೆ, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗಳು ಜಂಟಿ ಕಾರ್ಯಾಚರಣೆ ಆರಂಭಿಸಿದವು. ದೋಣಿ ಸಂಪೂರ್ಣವಾಗಿ ತಲೆಕೆಳಗಾಗಿ ಬಿದ್ದಿದ್ದರಿಂದ ಹಲವು ಪ್ರಯಾಣಿಕರು ದೋಣಿಯೊಳಗೆ ಸಿಲುಕಿಕೊಂಡಿದ್ದರು. ಸಮುದ್ರದಲ್ಲಿ ಭಾರಿ ಗಾಳಿ ಮತ್ತು ದೊಡ್ಡ ಅಲೆಗಳು ಅಪ್ಪಳಿಸುತ್ತಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯುಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದುರಂತದಲ್ಲಿ ಭಾರತೀಯರು ಮೃತಪಟ್ಟಿರುವುದನ್ನು ತಿಳಿದು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ವಿಯೆಟ್ನಾಂನ ಫು ಕ್ವಾಕ್ ಬಳಿ ನಡೆದ ದೋಣಿ ಅಪಘಾತದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಾಂತ್ವನಗಳು. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ರಾಯಭಾರ ಕಚೇರಿಯ ಅಧಿಕಾರಿಗಳು ವಿಯೆಟ್ನಾಂ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿರುವ ಎಲ್ಲಾ ನೆರವು ನೀಡುತ್ತಿದ್ದಾರೆ" ಎಂದು ಪ್ರಧಾನಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕಾರ್ಯಪ್ರವೃತ್ತವಾಗಿದ್ದು, ಸಂತ್ರಸ್ತರ ಕುಟುಂಬಗಳಿಗೆ ತುರ್ತು ಮಾಹಿತಿ ಮತ್ತು ಅಗತ್ಯ ನೆರವು ನೀಡಲು ಹೋ ಚಿ ಮಿನ್ಹ್ ಸಿಟಿ ಮತ್ತು ಹನೋಯ್‌ನಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಹೋ ಚಿ ಮಿನ್ಹ್ ಸಿಟಿ ಸಹಾಯವಾಣಿ ಸಂಖ್ಯೆಗಳು: +84 36 281 7930, +84 91 552 37 14, ಮತ್ತು +84 33 452 0414. ಹನೋಯ್ ಕಂಟ್ರೋಲ್ ರೂಂ ಸಂಖ್ಯೆ: +84 91 308 9165. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸುವಂತೆ ರಾಯಭಾರ ಕಚೇರಿ ಮನವಿ ಮಾಡಿದೆ. "ಘಟನೆಯ ಬಗ್ಗೆ ಅಧಿಕೃತ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ" ಎಂದು ಎಂಬಸಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ
ಭಾರತೀಯ ರಾಯಭಾರಿ ಕಚೇರಿಯಿಂದ ಸಹಾಯವಾಣಿ ಸ್ಥಾಪನೆ