ಭಾರತದಲ್ಲಿ ಹುಟ್ಟಿದ ಹೆಚ್ಚಿನವರಿಗೆ ಒಂದಾ ಡಾಕ್ಟರ್ ಆಗಬೇಕು ಅಥವಾ ಯುಪಿಎಸ್‌ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಬಹುದೊಡ್ಡ ಕನಸಿರುತ್ತದೆ. ಈ ಎರಡು ವೃತ್ತಿಯೂ ಕೂಡ ಜನಸೇವೆ ಮಾಡುವುದರಿಂದ ಸಮಾಜದಲ್ಲಿ ಅತ್ಯಂತ ಗೌರವಯುತ ಸ್ಥಾನಮಾನಗಳಿದೆ. ಹಾಗಾಗಿಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಆದರೆ ಇಲ್ಲೊಬ್ಬರು ಈ ಎರಡೂ ಕನಸುಗಳನ್ನ ಅತಿ ಸಣ್ಣ ವಯಸ್ಸಿನಲ್ಲೇ ನನಸು ಮಾಡಿಕೊಂಡಿದ್ದರು. ನಂತರ ದೇಶದ ಪ್ರತಿಷ್ಠಿತ ಸರ್ಕಾರಿ ಹುದ್ದೆಯನ್ನು ಬಿಟ್ಟು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ ಯುವಕನ ಸಾಧನೆ ನಿಜಕ್ಕೂ ಬೆರಗು ಮೂಡಿಸುವಂತಿದೆ.
ಹೌದು, ಅವರೇ ರೋಮನ್ ಸೈನಿ. ಜೈಪುರದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಇಂದು ಭಾರತದ ಅತಿದೊಡ್ಡ 'ಎಡ್‌ಟೆಕ್ʼ ಕಂಪನಿಗಳಲ್ಲಿ ಒಂದಾದ 'ಅನ್ ಅಕಾಡೆಮಿ'ಯ ಸಹ-ಸಂಸ್ಥಾಪಕರಾಗಿದ್ದಾರೆ. ಇವರ ಈ ಸ್ಪೂರ್ತಿದಾಯಕ ಜರ್ನಿಯನ್ನು ವಿಕಾಸ್ ಎನ್ನುವವರು ತಮ್ಮ ಎಕ್ಸ್ ಖಾತೆ ಪೋಸ್ಟ್ ಮಾಡಿದ್ದು, ಇದು ಪ್ರತಿಯೊಬ್ಬರಿಗೂ ದೊಡ್ಡ ಕನಸುಗಳನ್ನು ಕಾಣಲು ಹಾಗೂ ಗುರಿ ಮುಟ್ಟಲು ದಾರಿ ಮಾಡಿಕೊಟ್ಟಿದೆ.
ರೋಮನ್ ಸೈನಿಯವರ ಶೈಕ್ಷಣಿಕ ಹಿನ್ನಲೆ ತುಂಬ ಕೂತುಹಲ ಮತ್ತು ಇತರರಿಗೆ ಆದರ್ಶವಾಗುವಂತಿದೆ. ಶಾಲಾ ದಿನಗಳಿಂದಲೇ ಓದಿನಲ್ಲಿ ಸದಾ ಮುಂದಿದ್ದ ಸೈನಿ, ಕೇವಲ ತಮ್ಮ 16ನೇ ವಯಸ್ಸಿಗೆ ದೇಶದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಒಂದಾದ 'AIIMS entrance' ಬರೆದು ಪಾಸ್ ಮಾಡುವ ಮೂಲಕ ಎಲ್ಲರಲ್ಲಿ ಬೆರಗು ಮೂಡಿಸಿದ್ದರು. ವೈದ್ಯಕೀಯ ಶಿಕ್ಷಣವನ್ನು ಅತ್ಯಂತ ಶ್ರದ್ಧೆಯಿಂದ ಮುಗಿಸಿ, ತಮ್ಮ 21ನೇ ವಯಸ್ಸಿಗೆ ಪದವಿ ಮುಗಿಸಿ ಡಾಕ್ಟರ್‌ರಾಗಿ ಹೊರಹೊಮ್ಮಿದರು. ಆದರೆ ಅವರ ಸಾಧನೆ ಕೇವಲ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ನಿಂತಿಲ್ಲ. ಸಮಾಜಕ್ಕೆ ಇನ್ನೂ ದೊಡ್ಡ ಮಟ್ಟದಲ್ಲಿ ಸೇವೆ ಸಲ್ಲಿಸಬೇಕು, ಆಡಳಿತಾತ್ಮಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎನ್ನುವ ಅವರ ಹಂಬಲ ಬಲವಾಗಿತ್ತು. ಡಾಕ್ಟರ್ ಆಗಿ ಕೆಲಸ ಆರಂಭಿಸುವ ಹೊತ್ತಿಗೆ ರೋಮನ್ ಸೈನಿ ಅವರಿಗೆ ನಾಗರಿಕ ಸೇವೆಗಳ ಕಡೆ ಒಲವು ಹೆಚ್ಚಾಯಿತು. ನಂತರ ಛಲ ಬಿಡದೆ ಯುಪಿಎಸ್‌ಸಿ ಪರೀಕ್ಷೆಗೆ ಹಗಲಿರುಳು ಕಷ್ಟ ಪಟ್ಟು ತಯಾರಿ ನಡೆಸಿದರು. ತಮ್ಮ 22ನೇ ವಯಸ್ಸಿನಲ್ಲಿಯೇ ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಒಳ್ಳೆಯ ರ‍್ಯಾಂಕ್‌ನೊಂದಿಗೆ ಪಾಸ್ ಮಾಡಿದರು. ಈ ಮೂಲಕ ಭಾರತದ ಅತ್ಯಂತ ಕಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಐಎಎಸ್ ಅಧಿಕಾರಿಯಾಗಿ ನೇಮಕಗೊಂಡ ನಂತರ ಮಧ್ಯಪ್ರದೇಶದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಯುವಕನೊಬ್ಬ ಇಷ್ಟು ಚಿಕ್ಕ ವಯಸ್ಸಿಗೆ ಉನ್ನತ ಐಎಎಸ್ ಹುದ್ದೆಗೇರಿದ್ದು ದೇಶಾದ್ಯಂತ ಅನೇಕ ಯುವಜನರಿಗೆ ಮಾದರಿಯಾಯಿತು. ಒಬ್ಬ ಯಶಸ್ವಿ ಐಎಎಸ್ ಅಧಿಕಾರಿಯಾಗಿ ತಮ್ಮ ವೃತ್ತಿಜೀವನ ಕಟ್ಟಿಕೊಂಡರು. ಹಾಗೆಯೇ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎನ್ನುವ ಬಹುದೊಡ್ಡ ಕನಸು ರೋಮನ್ ಸೈನಿ ಅವರನ್ನು ಸದಾ ಕಾಡುತ್ತಲೇ ಇತ್ತು. ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೂ ಕೈಗೆಟಕುವಂತಾಗಬೇಕು ಎಂಬ ಕಾರಣಕ್ಕಾಗಿ 2015 ರಲ್ಲಿ, ಕೇವಲ 24ನೇ ವಯಸ್ಸಿಗೆ ತಮ್ಮ ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದರು. ಸರ್ಕಾರಿ ಹುದ್ದೆಯ ಆಕರ್ಷಣೆ ಮತ್ತು ಭದ್ರತೆಯನ್ನು ಬದಿಗೊತ್ತಿ, ತಮ್ಮ ಸ್ನೇಹಿತರಾದ ಗೌರವ್ ಮುಂಜಾಲ್ ಮತ್ತು ಹೈಮೇಶ್ ಸಿಂಗ್ ಅವರೊಂದಿಗೆ ಸೇರಿ 'ಅನ್ ಅಕಾಡೆಮಿ'ಎಂಬ ಹೊಸ ಅಧ್ಯಾಯವನ್ನು ಆರಂಭಿಸಿದರು. ಆರಂಭದಲ್ಲಿ ಕೇವಲ ಒಂದು ಯೂಟ್ಯೂಬ್ ಚಾನಲ್ ಆಗಿ ಶುರುವಾದ ಅನ್ ಅಕಾಡೆಮಿ, ಇಂದು ಗುಣಮಟ್ಟದ ಶಿಕ್ಷಣ ಮತ್ತು ಅತ್ಯುತ್ತಮ ತರಬೇತಿಯನ್ನು ಒದಗಿಸುವ ಮೂಲಕ ಭಾರತದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ಜ್ಞಾನದ ದೇಗುಲವಾಗಿದೆ. ಕೇವಲ ಒಂದು ದಶಕದೊಳಗೆ 'ಅನ್ ಅಕಾಡೆಮಿ' ಬರೋಬ್ಬರಿ 26,000 ಕೋಟಿ ರೂಪಾಯಿ ಮೌಲ್ಯದ ಭಾರಿ ದೊಡ್ಡ ಸಾಮ್ರಾಜ್ಯವಾಗಿ ರೂಪುಗೊಂಡಿದೆ. ಒಬ್ಬ ವೈದ್ಯನಾಗಿ, ಐಎಎಸ್ ಅಧಿಕಾರಿಯಾಗಿ, ಹಾಗೂ ಯಶಸ್ವಿ ಉದ್ಯಮಿಯಾಗಿ ರೋಮನ್ ಸೈನಿ ಅವರ ಈ ಪಯಣ ಯುವಪೀಳಿಗೆಗೆ ನಿಜಕ್ಕೂ ಸ್ಫೂರ್ತಿ. ಸಾಮಾಜಿಕ ಜಾಲತಾಣಗಳಲ್ಲಿ ರೋಮನ್ ಸೈನಿ ಅವರ ಈ ಸಾಧನೆಯ ಕಥೆ ಪ್ರಸ್ತುತ ಭಾರಿ ವೈರಲ್ ಆಗುತ್ತಿದೆ. ದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ತಮ್ಮ ವೃತ್ತಿಜೀವನವನ್ನೇ ಬದಲಾಯಿಸಿಕೊಂಡ ರೋಮನ್ ಸೈನಿ ಅವರ ನಿರ್ಧಾರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಕೇವಲ 16ನೇ ವಯಸ್ಸಿಗೆ AIIMS entrance ಪಾಸ್ ಮಾಡಿದ ಸೈನಿ
ದೇಶದ ಅತ್ಯಂತ ಕಿರಿಯ IAS ಅಧಿಕಾರಿ
ಯೂಟ್ಯೂಬ್ ಚಾನಲ್‌ನಿಂದ ಶುರುವಾದ 'ಅನ್ ಅಕಾಡೆಮಿ'