KS Chitra: ಲಾಲಿ ಲಾಲಿ ಶ್ರೀ ಚಕ್ರ ಧಾರಿಗೆ ಶಿರಬಾಗಿ ಲಾಲಿ... ಎನ್ನುವ ಹಾಡು ಸೇರಿದಂತೆ ಮಕ್ಕಳಿಗಾಗಿಯೇ ಸಾವಿರಾರು ಹಾಡುಗಳನ್ನು ಹಾಡಿರುವ ಗಾಯಕಿ ಕೆ.ಎಸ್ ಚಿತ್ರಾ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನೋವುಗಳನ್ನು ಅನುಭವಿಸಿದ್ದೇ ಹೆಚ್ಚು. ಅವರ ಜೀವಮಾನ ಸಾಧನೆ - ಮಗುವನ್ನು ಕಳೆದುಕೊಂಡು ಅನುಭವಿಸಿದ ನೋವು ಅಪಾರ. ಇಂದಿಗೂ ಕನ್ನಡ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಇವರು ಮಕ್ಕಳಿಗಾಗಿ ಹಾಡಿರುವ ನೂರಾರು ಹಾಡುಗಳನ್ನು ಕೇಳಿಯೇ ಲಕ್ಷಾಂತರ ಜನ ಮಕ್ಕಳು ಮಲಗುತ್ತಾರೆ. ಅದೆಷ್ಟೊ ಮಕ್ಕಳು ಇವರ ಲಾಲಿ ಹಾಡು ಕೇಳಿಯೇ ಸುಖ ನಿದ್ರೆ ಜಾರುತ್ತಾರೆ. ಆದರೆ, ಇವರಿಗೆ ತಮ್ಮ ಮಗುವನ್ನು ಮುದ್ದಾಡುವ ಸೌಭಾಗ್ಯ ಹೆಚ್ಚು ದಿನ ಉಳಿಯಲಿಲ್ಲ.
ಸಂಗೀತ ಕ್ಷೇತ್ರದಲ್ಲಿ ಕೆ.ಎಸ್ ಚಿತ್ರಾ ಅವರ ಸಾಧನೆ ಅಪಾರ. ಚಿತ್ರಾ ಅವರ ಹಲವು ಕನ್ನಡ ಹಾಡುಗಳು ಇಂದಿಗೂ ಟ್ರೆಂಡಿಂಗ್‌ನಲ್ಲಿಯೇ ಇವೆ. 4 ದಶಕಗಳಿಗೂ ಹೆಚ್ಚು ಕಾಲ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 62 ವರ್ಷ ವಯಸ್ಸಿನ ಅವರನ್ನು ದಕ್ಷಿಣ ಭಾರತದ ಸ್ಟಾರ್ ಗಾಯಕಿ ಎಂದೇ ಗುರುತಿಸಲಾಗಿದೆ. ಕೆ.ಎಸ್ ಚಿತ್ರಾ ಅವರು 25,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಕೆ.ಎಸ್ ಚಿತ್ರಾ ಅವರು ಜುಲೈ 27, 1963 ರಂದು ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಇವರು ಸಂಗೀತ ಹಿನ್ನೆಲೆ ಇರುವ ಕುಟುಂಬದಿಂದ ಬಂದವರು. ಅವರ ತಂದೆ ಸಂಗೀತಗಾರರಾಗಿದ್ದರಿಂದ ಬಾಲ್ಯದಿಂದಲೂ ಅವರು ಸಂಗೀತ ಕ್ಷೇತ್ರಕ್ಕೆ ಬರುವುದು ತುಂಬಾ ಸುಲಭವಾಯಿತು.
ಕೆಎಸ್ ಚಿತ್ರಾ ಅವರು ಚಿಕ್ಕ ವಯಸ್ಸಿನಿಂದಲೇ ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದರು. ಶಾಸ್ತ್ರೀಯ ಸಂಗೀತದ ಬಗ್ಗೆ ತಮ್ಮ ತಂದೆಯಿಂದ ಅಪಾರ ವಿಷಯಗಳನ್ನು ಕಲಿತರು. 1980ರ ದಶಕದಲ್ಲಿ ಚಿತ್ರಾ ಅವರು ತಮ್ಮ ದೊಡ್ಡ ಬ್ರೇಕ್ ಪಡೆಯುವವರೆಗೂ ಕೆಲಸ ಹಾಗೂ ಸಂಗೀತ ಕ್ಷೇತ್ರದಲಿ ಅಭ್ಯಾಸ ಮುಂದುವರಿಸಿದರು. ಪ್ರಸಿದ್ಧ ಸಂಗೀತ ನಿರ್ದೇಶಕ ಎಂ. ಜಿ. ರಾಧಾಕೃಷ್ಣನ್ ಅವರು ಚಿತ್ರಾ ಅವರನ್ನು ಸಿನಿಮಾ ಗಾಯಕಿಯಾಗಿ ಪರಿಚಯಿಸಿದರು. ಇದಾದ ನಂತರ ಆಗಿದ್ದೆಲ್ಲವೂ ಇತಿಹಾಸ. ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅವರು ಹಾಡು ಹಾಡಿದ್ದಾರೆ. ಇನ್ನು ಕೆಎಸ್ ಚಿತ್ರಾ ಅವರು 12 ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಯಾಗಿ 6 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 2005ರಲ್ಲಿ ಪದ್ಮಶ್ರೀ ಹಾಗೂ 2021ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಗರಿಮೆ ಇವರದ್ದು. ಮೊದಲೇ ಹೇಳಿದಂತೆ ಲಕ್ಷಾಂತರ ಮಕ್ಕಳಿಗೆ ಕೆ ಎಸ್ ಚಿತ್ರಾ ಅವರ ಹಾಡುಗಳು ಅಚ್ಚುಮೆಚ್ಚು ಆದರೆ ಅವರ ಮುದ್ದಾದ ಮಗುವಿಗೆ ಹಾಡು ಹೇಳಿ ಸಂತೋಷಪಡುವ ಚಿತ್ರಾ ಅವರು ಕನಸು ತುಂಬಾ ದಿನ ಉಳಿಯಲಿಲ್ಲ. ಹಲವು ವರ್ಷಗಳ ಕಾಯುವಿಕೆಯ ನಂತರ ಚಿತ್ರಾ ಅವರಿಗೆ 2002ರಲ್ಲಿ ಹೆಣ್ಣು ಮಗು ಜನಿಸಿತ್ತು. ಚಿತ್ರಾ ಅವರ ನಂದನ ಎನ್ನುವ ಹೆಣ್ಣು ಮಗುವಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಡೌನ್ ಸಿಂಡ್ರೋಮ್ ಸಮಸ್ಯೆ ಹೊಂದಿರುವ ವಿಶೇಷ ಮಗುವಾಗಿದ್ದಳು. ಕೆ.ಎಸ್. ಚಿತ್ರಾ ಮತ್ತು ಅವರ ಪತಿ ವಿಜಯ್ ಶಂಕರ್ ಅವಳನ್ನು ತಮ್ಮ ಮೊದಲ ಮಗುವಾಗಿ ಸ್ವಾಗತಿಸಿದರು. ಆದರೆ 2011 ರಲ್ಲಿ, ನಂದನ ಎಂಟನೇ ವಯಸ್ಸಿನಲ್ಲಿ ನಿಧನರಾದರು. ದುಬೈನಲ್ಲಿರುವ ತಮ್ಮ ಮನೆಯ ಈಜುಕೊಳದಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿದರು. ಚಿತ್ರಾ ಸಂಗೀತ ಕಾರ್ಯಕ್ರಮಕ್ಕಾಗಿ ಯುಎಇಯಲ್ಲಿದ್ದಾಗ ಈ ದುರಂತ ಸಂಭವಿಸಿತ್ತು.ಕೆ.ಎಸ್ ಚಿತ್ರಾ ಸಾಧನೆ
ಪುಟ್ಟ ಮಗು ನಂದನಳನ್ನು ಕಳೆದುಕೊಂಡ ದಾರುಣ ಕಥೆ