ಭದ್ರಾ ಡ್ಯಾಂನಲ್ಲಿ ನೀರಿನ ಕೊರತೆ; ಅರೆ ನೀರಾವರಿ ಬೆಳೆಗೆ ಮಾತ್ರ ನೀರು

ಶಿವಮೊಗ್ಗ, ಆಗಸ್ಟ್ 23: ಈ ಬಾರಿಯ ನೈಋತ್ಯ ಮುಂಗಾರು ವಿಫಲವಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಡ್ಯಾಂಗಳು ಭರ್ತಿಯಾಗಿಲ್ಲ. ಆದ್ದರಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಿದೆ. ಕರ್ನಾಟಕದ ಭದ್ರಾ ಡ್ಯಾಂನಲ್ಲಿ ನೀರಿನ ಕೊರತೆ ಉಂಟಾಗಿದೆ.

ಭದ್ರಾ ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳಿಗೆ ಮತ್ತು 2023-24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅರೆ ನೀರಾವರಿ ಬೆಳೆಗಳಿಗೆ ಮಾತ್ರ ನೀರನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.

bhadra-dam-water-level

ಭದ್ರಾ ಜಲಾಯಶದ ಒಟ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ 71.54 ಟಿಎಂಸಿ ಅಡಿ. ಆದರೆ ಆಗಸ್ಟ್ 23ರ ಮಾಹಿತಿಯಂತೆ ಕೇವಲ 48.76 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಆದ್ದರಿಂದ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಗೊಂಡಿದ್ದಾರೆ.

ರೈತರಿಗೆ ಸಲಹೆಗಳು; ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸಿ, ಬೇಸಿಗೆ ಬೆಳೆಗೆ ನೀರು ಉಳಿಸುವ ಸಲುವಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬಿದ್ದಾಗ ಮಳೆಯ ಪ್ರಮಾಣಕ್ಕನುಗುಣವಾಗಿ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚು ನೀರುಣಿಸುವ ಭತ್ತದ ಬೆಳೆಯನ್ನು ಹೊರತುಪಡಿಸಿ ಅರೆ ನೀರಾವರಿ ಬೆಳೆಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಲಾಗಿದೆ.

ದಾವಣಗೆರೆ ಶಾಖಾ ನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ಭತ್ತ, ಕಬ್ಬು 4000 ಹೆಕ್ಟೇರ್, ತೋಟಗಾರಿಕೆ 888 ಹೆಕ್ಟೇರ್, ಅರೆ ನೀರಾವರಿ 40,735 ಹೆಕ್ಟೇರ್ ಒಳಗೊಂಡಂತೆ ಒಟ್ಟು 45,623 ಹೆಕ್ಟೇರ್ ಮಾದರಿ ಬೆಳೆ ಬೆಳೆಯಲು ಹಾಗೂ ಈ ಬೆಳೆಗಳನ್ನು ಬೆಳೆಯದೆ ಇನ್ನಿತರೆ ಬೆಳೆಗಳನ್ನು ಬೆಳೆದರೆ ಜಲ ಸಂಪನ್ಮೂಲ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ ಎಂದು ತಿಳಿಸಲಾಗಿದೆ.

ಬೆಳೆ ಪದ್ಧತಿಯನ್ನು ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಪಂಪ್ ಮಾಡಿ ಅನಧಿಕೃತವಾಗಿ ನೀರನ್ನು ಬಳಸಿಕೊಂಡು ನೀರಾವರಿ ಬೆಳೆಗಳನ್ನು ಬೆಳೆದು ನಿಯಮ ಉಲ್ಲಂಘನೆ ಮಾಡಿದಲ್ಲಿ ಪರಿಶೀಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.

ಈಗಾಗಲೇ ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿನ ಮುಂಗಾರು ಬೆಳೆಗಳಿಗೆ ಆಗಸ್ಟ್ 10 ರಿಂದ ಎಡದಂಡೆ ಮತ್ತು ಬಲದಂಡೆ ನಾಲೆ, ಆನವೇರಿ ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ, ಮಲೆಬೆನ್ನೂರು ಶಾಖಾನಾಲೆ, ಹರಿಹರ ಶಾಖಾ ನಾಲೆ ಮತ್ತು ಗೋದಿ ನಾಲೆಗಳಿಗೆ ನೀರು ಹರಿಸಲಾಗುತ್ತದೆ.

ಆದ್ದರಿಂದ ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ಮತ್ತು ದೈನಂದಿನ ಚಟುವಟಿಕೆ ಮಾಡುವುದನ್ನು ನಿಷೇಧಿಸಲಾಗಿದೆ.

ರೈತರಿಗೆ ಸೂಚನೆಗಳು

* ಪ್ರಸಕ್ತ ಸಾಲಿನಲ್ಲಿ ಭದ್ರಾ ಜಲಾಶಯದ ನೀರಿನ ಸಂಗ್ರಹಣೆ ಹಾಗೂ ನೀರಿನ ಒಳಹರಿವನ್ನು ಆಧರಿಸಿ ನಾಲೆಗಳಲ್ಲಿ ನೀರನ್ನು ಹರಿಸಲಾಗುವುದು. ಕಾರ್ಯಪಾಲಕ ಇಂಜಿನಿಯರ್‌ರವರು ನಿರ್ಧರಿಸುವ ಆಂತರಿಕ ಸರದಿಯನ್ವಯ ಹರಿಸಲಾಗುವ ನೀರನ್ನು ಉಪಯೋಗಿಸಿಕೊಂಡು ಪ್ರಕಟಿತ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯನ್ನು ಬೆಳೆಯಬೇಕು. ನೀರಿನ ಕೊರತೆಯಿಂದ ಬೆಳೆ ನಷ್ಟವುಂಟಾದಲ್ಲಿ ಇಲಾಖೆಯು ಜವಾಬ್ದಾರಿಯಾಗುವುದಿಲ್ಲ.

* ಚೌಗು ಪ್ರದೇಶದಲ್ಲಿ ಆಂತರಿಕ ಸರದಿಯಂತೆ ನೀರು ಬಿಟ್ಟಾಗ್ಯೂ ಉಳಿದ ಸಮಯದಲ್ಲಿ ಬರುವ ಚೌಗು ಹಾಗೂ ಬಸಿ ನೀರಿನಿಂದ ಬೆಳೆಯನ್ನು ಬೆಳೆಯುವುದಾದರೆ, ಅಂತಹ ಕ್ಷೇತ್ರಗಳನ್ನು ಮಾತ್ರ ನೀರಾವರಿ ಕಾಯ್ದೆ ಮೇರೆಗೆ ಉಲ್ಲಂಘನೆ ಎಂದು ಪರಿಗಣಿಸುವುದಿಲ್ಲ ಹಾಗೂ ಇಂತಹ ಯಾವುದೇ ಪ್ರಕರಣವನ್ನು ನಿರ್ಧರಿಸುವಲ್ಲಿ ನೀರಾವರಿ ಅಧಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ.

* ನಿಗದಿಪಡಿಸಿದ ಕ್ಷೇತ್ರಗಳಲ್ಲಿ ಸೂಚಿತ ಬೆಳೆಗಳನ್ನು ಬೆಳೆದರೆ ಮಾತ್ರ ಪೂರ್ಣ ಪ್ರಮಾಣದಲ್ಲಿ 1,07,104 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಬಹುದು. ಒಂದು ವೇಳೆ ಪ್ರಕಟಿತ ಬೆಳೆಗಳಿಗೆ ಬದಲಾಗಿ ಹೆಚ್ಚು ನೀರು ಬೇಡುವ ಭತ್ತ ಹಾಗು ಕಬ್ಬು ಬೆಳೆದರೆ ಪ್ರಕಟಿತ ಬೆಳೆಗಳಿಗೆ ಮತ್ತು ಪ್ರಕಟಿತ ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ರೈತರು ಅಧಿಸೂಚಿತ ಬೆಳೆಗಳನ್ನು ನಿಗದಿತ ವಿಸ್ತೀರ್ಣಕ್ಕೆ ಮಾತ್ರ ಬೆಳೆದು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.

* ಭದ್ರಾ ಜಲಾಶಯದ ಮುಖ್ಯ ನಾಲೆ ಮತ್ತು ಶಾಖಾ ನಾಲೆಗಳಲ್ಲಿ ಅಧಿಸೂಚನೆಯಂತೆ ವಿತರಣಾ ನಾಲೆಗಳಲ್ಲಿ ಆಂತರಿಕ ಸರದಿಯ ಮೇರೆಗೆ ಜಲಾಶಯದಲ್ಲಿ ನೀರಿನ ಲಭ್ಯತೆಯನುಗುಣವಾಗಿ ನಿರ್ವಹಣೆಯನ್ನು ಮಾಡಲಾಗುವುದು.

* ಭದ್ರಾ ಕಾಲುವೆಯಲ್ಲಿ ಹರಿಯಬಿಡುವ ನೀರಿನಲ್ಲಿ ಕುಡಿಯುವ ನೀರಿನ ಅವಲಂಬಿತ ನಗರಗಳ ಹಾಗೂ ಪಟ್ಟಣಗಳ ನೀರಿನ ಬೇಡಿಕೆಯೂ ಸಹ ಸೇರಿಕೊಂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+